ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ, ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ, ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ, ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ, ಮೊಣಕಾಲು ಈಳಿಗ, ಕಣಕಾಲು ಸಮಗಾರ, ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ! ಇಂತೀ ಹದಿನೆಂಟುಜಾತಿ ತನ್ನಲಿ ಉಂಟು. ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ.
--------------
ಸೊಡ್ಡಳ ಬಾಚರಸ
ಶಿವಶಿವಾ, ಬೇಡಿಕೊಳ್ಳರೆ, ಅಮೃತಮಥನದಲ್ಲಿ ದೈನ್ಯವ ಮಾಡಿದವರನುಳುಹಿದ ದೇವನ ? ಶಿವಶಿವಾ, ಬೇಡಿಕೊಳ್ಳರೆ, ದಕ್ಷಾಧ್ವರದಲ್ಲಿ ದೈನ್ಯವ ಮಾಡಿದವನುಳುಹಿದ ದೇವನ ? ಶಿವಶಿವಾ, ಬೇಡಿಕೊಳ್ಳರೆ, ಅಜಹರಿ ಅವತಾರಂಗಳ ಸಂಹಾರ ಮಾಡಿದ ದೇವನ? ಶಿವಶಿವಾ, ಬೇಡಿಕೊಳ್ಳರೆ, ಅಖಿಳಬ್ರಹ್ಮಾಂಡಂಗಳ ಹೆತ್ತ ತಂದೆ, ನಮ್ಮ ಮಹಾದಾನಿ ಸೊಡ್ಡಳದೇವನ ?
--------------
ಸೊಡ್ಡಳ ಬಾಚರಸ
ಶ್ರುತಿತತಿಗಳ ಶಿರದ ಮೇಲೆ ಒಪ್ಪುತಿಪ್ಪ ಅತ್ಯತಿಷ*ದ್ದಶಾಂಗುಲನ ಕಂಡೆನಯ್ಯಾ. ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾದ ತ್ರಿಣಯನ ಮೂರ್ತಿಯ ಕಂಡೆನಯ್ಯಾ. ವಾಙ್ಮನಕ್ಕಗೋಚರವಾದ ನಿರವಯ ಬ್ರಹ್ಮವ ಕಂಡೆನಯ್ಯಾ. ನಿತ್ಯನೇಕೋರುದ್ರನದ್ವಿತೀಯನ ಕಂಡೆನಯ್ಯಾ. ಎನ್ನ ಕರಸ್ಥಲದೊಳಗೆ ಮಹಾದಾನಿ ಸೊಡ್ಡಳನ ಕಂಡೆನಯ್ಯಾ.
--------------
ಸೊಡ್ಡಳ ಬಾಚರಸ
ಶಿವಯೆಂದೋದದವನ ಓದು, ಗಿಳಿಯೋದು. ಶಿವ ನಿಮ್ಮನಾರಾಧಿಸದವನ ಮನೆ, ಕೆಮ್ಮನೆ. ಶಿವ ನಿಮ್ಮ ನೋಡದವನ ಕಣ್ಣು, ಹೀಲಿಯ ಕಣ್ಣು. ಶಿವ ನಿಮ್ಮ ಹಾಡದವನ ಬಾಯಿ, ಕನ್ನಡದ ಬಾಯಿ. ಶಿವ ನಿಮ್ಮ ಹೊಗಳದವನ ಬಾಯ ನಾಲಗೆ, ಬಚ್ಚಲ ತಂಪಿನ ಜವುಗಿನಲ್ಲಿ ಹುಟ್ಟಿದ ಜಿಗುಳಿಯಯ್ಯಾ. ಶಿವ ನಿಮಗೆರಗದ ಕರ್ಮಿ, ಶೂಲದ ಹೆಣ. ಶಿವ ನಿಮ್ಮ ನೆನೆಯದವನ ದೇಹ, ಸಂದೇಹ. ಶಿವ ನಿಮ್ಮ ಭಕ್ತನಲ್ಲದವನ ಸಿರಿಯು, ವಿದ್ಯೆ ಬುದ್ಧಿ ಕುಲ ಧನ ಶಬ್ದದ ಮೇಲಣ ತೊಡಿಗೆ. ಅಂತವನೇತಕ್ಕೆ ಬಾತೆ ? ಇದು ಕಾರಣ, ಭವಘೋರಕ್ಕಾರದೆ ಶರಣುಹೊಕ್ಕೆನಯ್ಯಾ. ಸೊಡ್ಡಳಾ, ಇನ್ನು ಭವಬಂಧನ ನಮಗಿಲ್ಲವಯ್ಯಾ.
--------------
ಸೊಡ್ಡಳ ಬಾಚರಸ
ಶರೀರವೆಂಬ ಹಸಿಯ ಮಣ್ಣು, ಅದು ಹಿರಿಯತನಕ್ಕಿಕ್ಕಿದ ದುರ್ಗಧೂಳಿ, ಗೊಂಟಿ ಪೋಪುದು ಮಾಣ್ಬುದೆ ? ಜವನ ದಾಳಿ ಒಪ್ಪುದಯ್ಯಾ. ಹರನ ವಿಶ್ವಾಸ ತಪ್ಪಲೊಡನೆ, ನರನ ವಿಧಿಯ ನಾನೆಂಬೆ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಶಿವನ ಮಹಿಮೆಯ ಘನವನೇನೆಂಬೆನಯ್ಯ! ಉನ್ನತವಾದ ಮಹಾಗಂಗೆಯ ಜಟಾಗ್ರದಲ್ಲಿ ಧರಿಸಿದನು. ಚರಣಕಮಲದ ಹೆಬ್ಬೆರಳಿಂದೌಂಕಲು, ರಾವಣಾಸುರನು ಮೂರ್ಛಿತನಾಗಿ ಬಿದ್ದನು. ಒಂದು ಬಾಣದಿಂದ ತ್ರಿಪುರವನು ಉರುಹಿದನು. ನೊಸಲಕಣ್ಣ ಅಗ್ನಿಯಿಂದ ಮನ್ಮಥನ ದಹಿಸಿದನು. ತ್ರಿಶೂಲದಿಂದ ಅಂಧಕಾಸುರನ ಇರಿದು ಕೊಂದನು. ಅದೆಂತೆಂದಡೆ : ಜಲೌಘಕಲ್ಲೋಲತರಂಗತುಂಗಗಂಗಾವೃತಾ ಯೇನ ಜಟಾಗ್ರಭಾಗೇ ಪಾದಾಂಬುಜಾಂಗುಷ*ನಿಪೀಡನೇನ ಪಾತ ಲಂಕಾಧಿಪತಿರ್ವಿಸಂಜ್ಞಾಃ | ಏಕೇನ ದಗ್ಧಂ ತ್ರಿಪುರಂ ರೇಣಕಾಯೋ ಲಲಾಟಾಗ್ನಿಹುತಾಶನೇನ | ಭಿನ್ನೋದಕಃ ಶೂಲವರೇಣ ಏನಕಸ್ತೋ ನ ಸಾರ್ಥಂ ಕುರುತೇ ವಿರೋಧಂ | ಇಂತೆಂದುದಾಗಿ, ಶಿವನೊಡನೆ ವೈರವ ಮಾಡುವವರಾರುಂಟು ? ಭಾಪು, ಭಾಪು ನಿನಗೆ ಸರಿಯುಂಟೆ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ