ಅಥವಾ

ಒಟ್ಟು 203 ಕಡೆಗಳಲ್ಲಿ , 56 ವಚನಕಾರರು , 187 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸತ್ವಹೀನವಾದ ಮತ್ತೆ ಕಾಲೆರಡು ಕೋಲೊಂದಾಯಿತ್ತು. ಕೃತ್ಯದ ಹೊತ್ತು ಹೋದ ಮತ್ತೆ ವ್ಯಾಕುಲದ ಚಿತ್ತವದ ಲಕ್ಷರ, ಬಹುವ್ಯಾಪಾರ ಮೊತ್ತದ ಘಟ, ಪ್ರಕೃತಿ ಆಶ್ರಯಕ್ಕೆ ಬಂಧನ ಪ್ರಾಪ್ತಿ, ಅಡಗುವ ಕರಂಡ. ಇದರಂದವ ತಿಳಿದು, ಹಿಂಜಾವಕೆ ಮುನ್ನವೆ ಶಿವಲಿಂಗದರ್ಶನವಾಗಿ ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲದೆ
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ರಣವ ನಿಶ್ಚೆ ೈಸಿದ ಭಟಂಗೆ ಮನೆಯ ಮೋಹವುಂಟೆ? ಅರ್ಥ ಪ್ರಾಣ ಅಪಮಾನ ಈ ಮೂರ ಕರ್ತರಿಗೆಂದಿತ್ತು ಮತ್ತೆ ಹೊತ್ತು ಹೋರುವಂಗೆ ಸದ್ಭಕ್ತಿಯುಂಟೆ? ಅದು ಚಂದೇಶ್ವರಲಿಂಗವ ಮುಟ್ಟದ ಮಾಟ.
--------------
ನುಲಿಯ ಚಂದಯ್ಯ
ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ ಸಧರ್ಮಿಗಳ ಕಂಡು, ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ ಸುಳುಹು ಸೂಕ್ಷ್ಮಗೆಟ್ಟು, ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು. ಮತ್ತೆ ಅವರಂಗಚರಿತೆಯನರಿಯದಿರ್ದನು ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ನಿಜಮಾರ್ಗ ನಿಜಮಾರ್ಗ ನಿಲುವಿನೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ ಮೋಕ್ಷವಾಯಿತು. ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ ಬೇಂಟೆಯನಾಡುವ ಸಮಯದಲ್ಲಿ ಒಂದು ರುದ್ರಾಕ್ಷಿಯ ಕಂಡು ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು, ಆ ಶುನಿಗಳು ಹೋಗಿ ಹಂದಿಯ ಹಿಡಿಯಲು ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು. ವೇಶ್ಯಾಂಗನೆಯು ತನ್ನ ವಿನೋದಕ್ಕೆ ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು ರುದ್ರಾಕ್ಷಿಯ ಧರಿಸುತ್ತಿರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರಕ್ಕಸಿ ಮಗುವ ಹೆತ್ತು, ಕರುಳ ನೇಣ ಮಾಡಿ, ಹೆಣೆದ ತೊಟ್ಟಿಲ ಕಟ್ಟಿ, ರಕ್ತದ ಪಾಲನೆರೆದು, ಮತ್ತ ಜೀವವ, ಜಗವನೊತ್ತಿ ತಿಂಬವನೆ, ರಕ್ಕಸಿಯ ಹೊತ್ತು ಹೋಗದವನೆಯೆಂದು ತೊಟ್ಟಿಲ ಹಿಡಿದು ತೂಗೆ, ಬಾಯ ಮುಚ್ಚಿ ಕಣ್ಣಿನಲ್ಲಿ ಅಳುತ್ತಿದ್ದಿತ್ತು, ಬಂಕೇಶ್ವರಲಿಂಗವ ನೋಡಿಹೆನೆಂದು.
--------------
ಸುಂಕದ ಬಂಕಣ್ಣ
ಆತ್ಮ ತೇಜಕ್ಕೆ ಬೀಗಿ ಬೆರೆದು, ಶಾಸ್ತ್ರದ ಸಂತೋಷಕ್ಕೆ ಸಾಧ್ಯವಾದಿಹಿತೆಂದು, ವಚನದ ರಚನೆಗೆ ರಚಿಸಿದೆನೆಂದು, ತರ್ಕಕ್ಕೆ ಹೊತ್ತು ಹೋರುವನ್ನಕ್ಕರ ಗುರುವೆಂತಾದಿರೊ? ಘಟದ ಮಧ್ಯದಲ್ಲಿ ಪೂಜಿಸಿಕೊಂಬವನಾರೆಂದು ಅರಿಯದೆ, ಫಲವ ಹೊತ್ತಿರ್ಪ ಮರನಂತೆ, ಕ್ಷೀರವ ಹೊತ್ತಿರ್ಪ ಕೆಚ್ಚಲಂತೆ, ನಿನ್ನ ನೀನೆ ತಿಳಿದು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅಯ್ಯಾ, ತನ್ನ ತಾನರಿಯದೆ, ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ, ಕಾಮವ ತೊರೆಯದೆ, ಹೇಮವ ಜರೆಯದೆ, ನಾವು ಹರ ಗುರು ಚರ ಷಟ್‍ಸ್ಥಲದ ವಿರಕ್ತರೆಂದು ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು, ಶಂಖ ಗಿಳಿಲು ದಂಡಾಗ್ರವ ಹೊತ್ತು, ಕೂಳಿಗಾಗಿ ನಾನಾ ದೇಶವ ತಿರುಗಿ, ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಇನ್ನಷ್ಟು ... -->