ಅಥವಾ

ಒಟ್ಟು 172 ಕಡೆಗಳಲ್ಲಿ , 53 ವಚನಕಾರರು , 165 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ ಶ್ರುತಿ ವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ ಮೂರುಮಲದ ಭೇದವನರಿತು ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ. ಇದು ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು, ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು, ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು, ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ. ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು ಅನಂತ ಹಿರಿಯರ ನುಂಗುವದ ಕಂಡು, ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೊಣ ರಣವ ಹೊಕ್ಕು, ಶ್ರೋಣಿತವ ಭುಂಜಿಸುವಾಗ, ಕೇಣಸರದ ಭಟರೆಲ್ಲರೂ ನೊಣದ ರಾವಡಿಗಂಜಿ ಹೇಳದೆ ಹೋದರು. ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಕಾಶಿಯಲ್ಲಿಪ್ಪ ಈಶನನರಿಯದ ಮೂವರ ಕೊರಳು ಕೈಗಳು ಮುರಿದು ಬಿದ್ದವು. ಕೈಲಾಸದಲ್ಲಿಪ್ಪ ಈಶನನರಿಯದ ಮೂವರ ದೇಹ ಕಾಲು ಕೈಗಳು ಮುರಿದುಬಿದ್ದವು. ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ ದೇಹ ಕರುಳು ತೊಗಲುಗಳು ಉದುರಿಬಿದ್ದವು. ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು. ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ, ಕೆಟ್ಟುಹೋದರು.
--------------
ಸೊಡ್ಡಳ ಬಾಚರಸ
ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು, ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು, ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ. ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು ಲಿಂಗಕ್ಕಭಿಷೇಕಂಗೆಯ್ಯುತಿಪ್ಪರು ನೋಡಾ. ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು ಗಳಹುತಿಪ್ಪರು ನೋಡಾ. ಇಂತೀ ಮರುಳರಾಟವ ಕಂಡು, ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಬರಿಹುಂಡನ ಗಡಿವಾಡದಲ್ಲಿರಿಸಿದಂತೆ, ಒಡೆಯರಿಲ್ಲದ ಮನೆಯ ತುಡುಗುಣಿ ಹೊಕ್ಕು, ಗಡಬಡಿಯ ಮಾಡಿದಂತೆ, ಅಂಗಕ್ಕೆ ಕುರುಹಿಲ್ಲದೆ, ಮನಕ್ಕರಿವಿಲ್ಲದೆ ತ್ರಿಭಂಗಿಯಲ್ಲಿ ನೊಂದವಂಗೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಿಲ್ಲಾ ಎಂದೆ.
--------------
ಶಿವಲೆಂಕ ಮಂಚಣ್ಣ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು, ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
--------------
ಆಯ್ದಕ್ಕಿ ಮಾರಯ್ಯ
ತನು ನಿರ್ವಾಣವೊ, ಮನ ನಿರ್ವಾಣವೊ, ಭಾವ ನಿರ್ವಾಣವೊ ? ತ್ರಿವಿಧ ತನಗಿಲ್ಲದ ನಿರ್ವಾಣವೊ ? ಇದ ನಾ ನುಡಿಯಲಂಜುವೆ. ತೊಟ್ಟ ಘಟಧರ್ಮಕ್ಕೆ ಬೇಡೂದೆ, ಲೆಕ್ಕವಿಲ್ಲದೆ ಆಸೆ ಮನದೊಳಗೆ ಹೊಕ್ಕು ತಿರುಗಾಡುತ್ತ ? ಇಂತೀ ಚಿಕ್ಕಮಕ್ಕಳಿಗೆಲ್ಲಿಯದೊ ನಿರ್ವಾಣ, ಘಟ್ಟಿವಾಳಂಗಲ್ಲದೆ ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ. ಲಿಂಗವೆಂಬೆನೆ, ಸಂಸಾರಕ್ಕೆ ಅಂಗವ ಕೊಟ್ಟ. ಜಂಗಮವೆಂಬೆನೆ, ಕಂಡಕಂಡವರ ಅಂಗಳವ ಹೊಕ್ಕು, ಬಂಧನಕ್ಕೊಳಗಾದ. ಎನಗಿದರಂದವಾವುದೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->