ಅಥವಾ

ಒಟ್ಟು 558 ಕಡೆಗಳಲ್ಲಿ , 55 ವಚನಕಾರರು , 464 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಇಷ್ಟಲಿಂಗವೆ ಪ್ರಾಣಲಿಂಗವೆಂಬ ಮಿಟ್ಟಿಯ ಭಂಡರು ನೀವು ಕೇಳಿರೆ. ಇಷ್ಟಲಿಂಗವನೂ ಕಾಯವನೂ ಮೆಟ್ಟಿ ಹೂಳುವಲ್ಲಿ, ಬಿಟ್ಟು ಹೋಹ ಪ್ರಾಣಕ್ಕೆ ಇನ್ನಾವುದು ಲಿಂಗ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂದ್ಥಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸುದತಿ ಪುತ್ರ ಮಿತ್ರ ಮಾತೃಪಿತೃರು ಹಿತರು ನಿತ್ಯರೆಂದು ಹದೆದು ಕುದಿದು ಕೋಟಲೆಗೊಂಬನ್ನಕ್ಕರ ಗುರುವೆಂದೇನಯ್ಯ. ಸುರಚಾಪದಂತೆ ತೋರಿ ಕೆಡುವ ಹೆಣ್ಣು ಹೊನ್ನು ಮಣ್ಣ ನಚ್ಚಿ ಮದಡನಾಗಿಪ್ಪನ್ನಕ್ಕರ ಲಿಂಗವೆಂದೇನಯ್ಯ. ಈ ಕಷ್ಟ ಸಂಸೃತಿಯ ಕೂಪತಾಪದೊಳಗೆ ಬಿದ್ದುರುಳುವ ನಾಮನಷ್ಟರಿಗೆ ಜಂಗಮಲಿಂಗವೆಂದೇನಯ್ಯ. ಈ ದುಷ್ಟದುರ್ಮಲತ್ರಯದ ಅಂಧಕಾರ ಘೋರತರವಿಕಾರ ಸರ್ಪದಷ್ಟರಾದ ದುಷ್ಟರಿಗೆ ಶಿವಸತ್ವಥವೆಂದೇನು ಹೇಳಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. ಭಕ್ತನ ಮಾಹೇಶ್ವರ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂದಿಗೆ ನಿಮಿಷಕ್ಕೆ ಬರ್ದುಂಕದೆ ಹೋಗೆಯ ಅನಂತಕಾಲ ಬರ್ದುಂಕುಗೆಯ; ಬರ್ದುಂಕಿದಡೆ ಮನ ವಿಚ್ಛಂದವಾಗದೊಂದೆಯಂದದ್ಲಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು ಪರಿಯುಂಟೆ ಹೇಳಾ ? ಒಮ್ಮೆ ಅಹಂಕಾರ ಒಮ್ಮೆ ಕಿಂಕಿಲವೆ ? ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ ಗುಹೇಶ್ವರನಿಪ್ಪನಲ್ಲದೆ, ಪ್ರಪಂಚಿನೊಳಗಿಲ್ಲ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ ವಾಸನೆಯ ಲತೆಗಳೊಳ್ಬೆಳೆದ ಅತಿಶಯಾನಂದರೂಪವನರಿಯಲಾರಳವಲ್ಲ ನೋಡಾ. ಭೂಚರರರಿಯರು ಖೇಚರರರಿಯರು ಪೆರ್ಚಲದಾಶ್ರಯವಗೊಂಡಾಯಸವನುಂಬ ಅರೆಮರುಳರಂತಿರಲಿ ಧರೆಯೊಳಿಪ್ಪ ನರರೆತ್ತ ಬಲ್ಲರು ಹೇಳಾ ! ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->