ಅಥವಾ

ಒಟ್ಟು 170 ಕಡೆಗಳಲ್ಲಿ , 46 ವಚನಕಾರರು , 136 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ ಆಚೆಯಲ್ಲಿ ಇದ್ದವರಿಗೇನು? ಹುಸಿ ಕೊಲೆ ಕಳವು ಹಾದರ ಇಂತಿವನೆಸಗಿ ಮಾಡುವ ಪಾಪಿಯ ಎದುರಿಗೆ ಹೇಳಿ ಹೇಸದೆ ಬಿಡಲೇತಕ್ಕೆ? ಇಂತೀ ರಸಿಕವನರಿದವಂಗೆ ಎಸಕವಿಲ್ಲದ ಮಾತು, ಶಶಿಧರನ ಶರಣಂಗೆ ಹಸುಳೆಯ ತೆರನಂತೆ, ನಸುಮಾಸದ ಪಿಕದಂತೆ, ಶಬರನ ಸಂದಣಿಯಂತೆ, ಉಲುಹಡಗಾ ಕಲಹಪ್ರಿಯ ಕಂಜಳಧರ ರಾಮನಾಥಾ.
--------------
ಗುಪ್ತ ಮಂಚಣ್ಣ
ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ, ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ ನಿಂದಕ ದುರ್ಜನ ಭವಿಸಂಗ ಉಳ್ಳವರ ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ, ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು. ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ. ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು. ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ.
--------------
ಅಕ್ಕಮ್ಮ
ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು. ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು. ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ. ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ ಇಂತುಂಟೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು, ಅದು ಹುಸಿ, ನಿಲ್ಲು. ಇಹದಲ್ಲಿ ದುಃಖಿ, ಪರದಲ್ಲಿ ಪ್ರಕೃತಿಯೆಂದೆ. ಇಂತೀ ಇಹಪರವೆಂಬೆರಡು. ಲಕ್ಷ್ಮಿಯ ಮನೆಯ ತೊತ್ತಿನ ತೊತ್ತಾದವರಿಗೆ ಇನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,
--------------
ಅಕ್ಕಮಹಾದೇವಿ
ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಸನಕ ಸನಂದಾದಿ ಮುನಿಜನಂಗಳೆಲ್ಲರೂ, ಭಸ್ಮಾಂಗಿಗಳೆಲ್ಲರೂ_ ಇವರು ಸತ್ಯರೆಂಬುದು ಹುಸಿ, ನಿತ್ಯರೆಂಬುದು ಹುಸಿ, ಸತ್ತರೆಂಬುದು ದಿಟ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ. ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು. ಇದು ಕಾರಣ, ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ. 46
--------------
ಬಸವಣ್ಣ
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!
--------------
ಗಜೇಶ ಮಸಣಯ್ಯ
ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ ಅಬದ್ಧ ಮೂಢಮನುಜರನೇನೆಂಬೆನಯ್ಯಾ! ಗುರುಪ್ರಸಾದಿಯಾದಡೆ, ಕಾಯಗುಣವಳಿದು ಪರಸ್ತ್ರೀಸಂಗ ಪರದ್ರವ್ಯ ಅಪಹರಣ ಅಭಕ್ಷಭಕ್ಷಣ ಹಿಂಸಾದಿಗಳನಳಿದುಳಿದಿರಬೇಕು. ಲಿಂಗಪ್ರಸಾದಿಯಾದಡೆ ಹುಸಿ ನಿಷ್ಠುರಾದಿ ವಾಕ್‍ದೋಷಂಗಲನಳಿದಿರಬೇಕು. ಜಂಗಮಪ್ರಸಾದಿಯಾದಡೆ ಆಸೆ ಆಮಿಷ ದುರ್ಮೋಹಾದಿಗಳನಳಿದಿರಬೇಕು. ಇಂತಲ್ಲದೆ ಕರಣತ್ರಯವಳಿಯದೆ ಕರ್ಮತ್ರಯವನುಂಬ ಕಾಳಕೂಳರಿಗೆ ತ್ರಿವಿಧಪ್ರಸಾದವೆಲ್ಲಿ ಹದಯ್ಯಾ? ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಪ್ರಸಾದಿಗಳಿಗಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಸಿ ಕಳವು ಡಂಬಕದ ಸುಳುಹನಳಿದುಳಿದ ಜ್ಞಾನಕಲಾತ್ಮನ ಕಂಡ ಚೌಪೀಠವಾಸನು, ತ್ರಿವಿಧಾನುಗ್ರಹವ ಮಾಡಿ ಕಾಯ ಪ್ರಾಣಾತ್ಮ ಸನ್ನಿಹಿತನಾಗಿ ತಾನೆಂಬ ಭಾವ ತಪ್ಪುವಂತೆಮಾಡಿ ಸಲಹಿದನೆನ್ನ ನಿರಂಜನ ಚನ್ನಬಸವಲಿಂಗವೆಂಬ ಗುರುನಾಥಂಗೆ ಶರಣು ಶರಣು ಶರಣೆನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆಲ ಜೀವದ ಒಲವು ತಲೆಯ ಕಡಿದು ಬೇರೆ ಮಾಡಿದಲ್ಲಿ ಆಡುತ್ತದೆ ಅಂಗ; ಮತ್ತೆ ನರಜೀವದ ಒಲವು ರುಜೆಯಡಸಿ ಪ್ರಾಣ ಬಿಟ್ಟಾಗ ಅಡಿ ಕರವಾದದ ಪರಿಯ ನೋಡಾ! ಘಟ ಜೀವವೊಂದೆಂಬರು ಅಸು ಬೇರಾಗಿದೆ. ಇದರ ಹುಸಿ ಕವಲ ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮನ ಅರೋಚಕವಾದಲ್ಲಿ, ಲವಣ ವಾರಿ ಪರಿಪಾಕ ಮುಂತಾದ ರಸದ್ರವ್ಯವನೊಲ್ಲದೆಯಿಪ್ಪುದು ವ್ರತವೆ ? ಅಲ್ಲ, ಅದು ಸೌಕರಿಯವಲ್ಲದೆ. ಅದೆಂತೆಂದಡೆ: ಪರದ್ರವ್ಯ ಪರಸತಿ ಹುಸಿ ಕೊಲೆ ಕಳವು ಅತಿಕಾಂಕ್ಷೆಯಂ ಬಿಟ್ಟು, ಬಂದುದ ನಿಂದಂತೆ ಕಂಡು, ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ, ಅರುವತ್ತನಾಲ್ಕು ವ್ರತ, ಅಯಿವತ್ತಾರು ಶೀಲ, ಮೂವತ್ತೆರಡು ನೇಮ ಸಂದಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಗುರು ಚರ ಕರ್ತರು ತಾವಾದ ಮೇಲೆ ಭಕ್ತನಾಚಾರದಲ್ಲಿರಬೇಕು. ಮೃಷ್ಟಾನ್ನಕಿಚ್ಫೈಸದೆ ದೂರಸ್ಥರಾಗಿ, ಗಣಕ ಪಾರದ್ವಾರ ಹುಸಿ ಕೊಲೆ ಕಳವು ಹಿಂಸೆಗೊಡಂಬಡದೆ, ಮತ್ತೆ ಕಿಸುಕುಳದ ಗಂಟ ಕೆಲಕೊತ್ತಿಸಿ, ತಾ ಹರಚರವಾದ ಪರಮಲಿಂಗಾಂಗಿಗೆ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗೈಕ್ಯ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->