ಅಥವಾ

ಒಟ್ಟು 71 ಕಡೆಗಳಲ್ಲಿ , 19 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದವನೋದುವ ಅಣ್ಣಗಳು ನೀವು ಕೇಳಿರೊ ! ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ; ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ_ ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮಾತ ಹೇಳುವ ಹಿರಿಯರೆಲ್ಲರೂ ನೀತಿಗೊಡಲಾದರು. ನಿರ್ಜಾತನ ಮರೆದು, ಭ್ರಾಂತಿಗೆ ಸಿಕ್ಕಿದ ಮತ್ತೆ ಇನ್ನೇತರ ಮಾತು ? ಸೂತ್ರದ ಬೊಂಬೆಯ ನೂಕುವ ಪಾಶದಂತೆ, ಇವರೇತರ ಹಿರಿಯರು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ತತ್ವವ ನುಡಿವ ಹಿರಿಯರೆಲ್ಲರು. ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ, ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ, ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು, ಹಲುಬುತ್ತಿಪ್ಪರು ನೋಡಾ ! ಕತ್ತೆಗೆ ಕರ್ಪೂರವ ಹೇರಿದಂತೆ, ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚರ್ತುವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಈ ಸಕಲದೊಳಗೆ ಒಂದು ಸಯವಿಲ್ಲದೆ ನಾವು ಹಿರಿಯರು ನಾವು ಲಿಂಗವಂತರೆಂಬರು. ಇದಿರ ಕೈಯಲ್ಲಿ ಎನಿಸಿಕೊಳ್ಳುತ್ತಿಹರು ಮನ ನಾಚದೆ. ಇಂಥ ಮೂಗುನಾಚಿಗಳ ಮೆಚ್ಚುವನೆ ಮಹಾಲಿಂಗ ಗಜೇಶ್ವರನಲ್ಲಿ ಎನ್ನ ಹೆತ್ತ ತಂದೆ ಪೂರ್ವಾಚಾರ್ಯ ಸಂಗನಬಸವಣ
--------------
ಗಜೇಶ ಮಸಣಯ್ಯ
ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ ಪುರಾಣ, ಪುರಾತರ ವಚನದ ಬಹುಪಠಕರು, ಅನ್ನದಾನ, (ಹೊನ್ನದಾನ), ವಸ್ತ್ರದಾನವನೀವನ ಬಾಗಿಲ ಮುಂದೆ ಮಣ್ಣಪುತ್ಥಳಿಯಂತಿಹರು ನಿತ್ಯನೇಮದ ಹಿರಿಯರು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ಎಂಬ ಶ್ರುತಿ ದಿಟವಾಯಿತ್ತು. ಆ ಎಲ್ಲಾ ಅರಿವು?್ಳವರು ಲಕ್ಷ್ಮಿಯ ದ್ವಾರಪಾಲಕರಾದರು. ಅರಿವಿಂಗೆ ಇದು ವಿಧಿಯೆ ? ಕೂಡಲ ಚೆನ್ನಸಂಗಯ್ಯಾ ನೀ ಮಾಡಿದ ಮರಹು !
--------------
ಚನ್ನಬಸವಣ್ಣ
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ, ಹಿರಿಯರು ನರಮಾಂಸವ ಭುಂಜಿಸುವರೆ ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು, ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ. 230
--------------
ಬಸವಣ್ಣ
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ, ಲಿಂಗದ ಅನುಭಾವದ ಮಾತೇಕೊ ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯವು ಬಹುಮುಖಿಗಳಿಗೆ ತೋರದು, ತೋರದು.
--------------
ಅಲ್ಲಮಪ್ರಭುದೇವರು
ಹುಟ್ಟಿದ ನೆಲೆಯ ತೃಷೆ ಬಿಡದವರಿಗೆ, ಉದಕಲಿಂಗದ ಅನುಭಾವವೇಕೊ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯ, ತೋರದು ತೋರದು ಬಹುಮುಖಿಗಳಿಗೆ.
--------------
ಅಲ್ಲಮಪ್ರಭುದೇವರು
ಅತಿರಥ ಸಮರಥರೆನಿಪ ಹಿರಿಯರು, ಮತಿಗೆಟ್ಟು ಮರುಳಾದರಲ್ಲಾ ! ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶ್ರೀಗುರುಪ್ರಸನ್ನ ಪಂಚಾಕ್ಷರಿಯ ನಾಮವ ನೆನೆದು ಪಂಚಭೂತದ ಕಾಯವನಳಿದು, ಪಂಚಭೂತದಲ್ಲಿ ಪಂಚಾಕ್ಷರಿಯ ತುಂಬಿ, ಆ ಪಂಚಾಕ್ಷರಿಯ ಬೆಸನವ ನೆಲೆಗೊಂಬುವುದೆ ಪಂಚಾಂಗ. ಪಂಚಾಂಗದಲ್ಲಿ ಸಂಚರಿಸುವ ವಂಚನೆಯ ಇಂದ್ರಿಯವ ಲಿಂಗದ ಸಂಚಿನಲ್ಲಿ ಇರಿಸುವುದೆ ಪಂಚಾಂಗ. ಇಂತೀ ಭೇದವ ಭೇದಿಸಿ ತಿಳಿಯಲರಿಯದೆ ಅನಂತ ಹಿರಿಯರು ಕೆಟ್ಟರು ನೋಡಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಸಹಭಾಜನ ಸಹಭೋಜನವೆಂದೆಂಬರು. ಭಾಜನವಾವುದು ಭೋಜನವಾವುದು ಎಂದರಿಯರು. ಭಾಜನವೆ ಅಂಗ, ಭೋಜನವೆ ಲಿಂಗ ! ಭಾಜನಸಹಿತ ಭೋಜನಮಾಡುವ ಹಿರಿಯರು, ಭಾಜನವನಿರಿಸಿ ಹೋದಡೆ ಅದೆ ಭಂಗ_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಂಗದ ಕಳೆ ಲಿಂಗದಲ್ಲಿ ಲೀಯವಾಗದು. ಲಿಂಗದ ಕಳೆ ಅಂಗದಲ್ಲಿ ಲೀಯವಾಗದು. ಮಾತಿನಮಾಲೆಯ ಬೊಮ್ಮವೇತರದೊ ? ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು. ಪ್ರಾಣ ಜಂಗಮವಾದಡೆ ಅರಿದಿರಬೇಕು. ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ. ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು, ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ, ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಇನ್ನಷ್ಟು ... -->