ಅಥವಾ

ಒಟ್ಟು 50 ಕಡೆಗಳಲ್ಲಿ , 23 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ, ಕೊರಳಲ್ಲಿ ಕಟ್ಟಿಕೊಳ್ಳಲೇಕೆ ? ನೋಡುವ ಕಣ್ಣು ಮುಚ್ಚಿದ ಮತ್ತೆ, ತನಗೆ ಎಡೆಯಾಟವುಂಟೆ ? ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ, ಚಿತ್ತದಲ್ಲಿ ಹಿಂಗದಿರಬೇಕು. ಉರಿಲಿಂಗತಂದೆಯ ಸಿರಿಯ ಭಾಷೆ.
--------------
ಉರಿಲಿಂಗದೇವ
ಗುರುಲಿಂಗವೆ ಪರುಷವಾಗಿ, ಶಿಷ್ಯನೆ ಕಬ್ಬುನವಾಗಿ ಬೆರಸಿ ನಡೆದೆನೆಂಬ ನರಕನಾಯಿಗಳು, ಕುಲವನರಸುವಿರಿ, ಮತ್ತೆ ಹೊಲೆಯನರಸುವಿರಿ. ಹೊಲೆಯನರಸುವಿರಿ ಸೂತಕವಳಿಯದೆ, ಪಾತಕ ಹಿಂಗದೆ. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಮುಕ್ತಿಯನರಸುವಿರಿ.
--------------
ಸಂಗಮೇಶ್ವರದ ಅಪ್ಪಣ್ಣ
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
--------------
ಅಲ್ಲಮಪ್ರಭುದೇವರು
ಗುರುಪೂಜೆ ಮಾಡುವಾತ ಶಿಷ್ಯನಲ್ಲ. ಲಿಂಗಪೂಜೆ ಮಾಡುವಾತ ಶರಣನಲ್ಲ. ಜಂಗಮಪೂಜೆ ಮಾಡುವಾತ ಭಕ್ತನಲ್ಲ. ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಕೊಂಬುವಾತ ಪ್ರಸಾದಿಯಲ್ಲ. ಇಂತೀ ಚತುರ್ವಿಧದ ಹಂಗು ಹಿಂಗದೆ ಭವಹಿಂಗದು ಮುಕ್ತಿದೋರದು. ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ ಪಾದೋದಕ ಪ್ರಸಾದವ ಕೊಳ್ಳದವರಿಗೆ ಭವಹಿಂಗದು ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಮ್ಮನ ಮೊಮ್ಮಗಳ ಗಂಡ ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ, ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ ತಂದೆ - ತಾಯಿಯ ಕೊಂದು ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸರ್ವಕಳಾ ಚಿತ್ರ ವಿಚಿತ್ರವೆಂಬ ಮೋಹನ ಚಿಚ್ಫಕ್ತಿಯು ವೇದೋಪನಿಷತ್ತು ಶಾಸ್ತ್ರ ಆಗಮ ಪುರಾಣ ಶಬ್ದ ಜ್ಯೋತಿಷ ವ್ಯಾಕರಣ ಯೋಗಾಭ್ಯಾಸ ವೀಣಾಭರಣ[ತ?] ಛಂದಸ್ಸು ನಾಟಕಾಲಂಕಾರ ಇಂತೀ ಪರೀಕ್ಷೆಯು ನೋಡುವ ಅಯ್ಯಗಳ ಎಲ್ಲ ತನ್ನ ಜವನಿಕೆಯೊಳಗೆ ಕೆಡಹಿಕೊಂಡಿತ್ತು. ಧ್ಯಾನ ಮೌನದಿಂದ ಕಂಡೆಹೆನೆಂಬವರ ಅಜ್ಞಾನಕೆ ಒಡಲುಮಾಡಿತ್ತು. ತತ್ವದವ ನೋಡೆಹೆನೆಂಬವರ ಮೆಚ್ಚಿಸಿ ಮರುಳುಮಾಡಿತ್ತು. ಅಂಗವೆಲ್ಲವನರಿದೆನೆಂಬವರ ಹಿಂಗದೆ ತನ್ನ ಅಂಗದ ಬಲೆಯೊಳಗೆ ಕೆಡಹಿತ್ತು. ಲಿಂಗಮೋಹಿಗಳೆಂಬವರ ತನ್ನ ಸಂಗದ ಅನಂಗನ ಅಂತರಂಗಕ್ಕೆ ಒಳಗುಮಾಡಿತ್ತು. ವೇದವೇದ್ಯವೆಂಬರೆಲ್ಲರನು ಏಕಾಂತದೊಳಗೆ ತಳಹೊ[ವ?]ಳಗೊಳಿಸಿತ್ತು. ಕಣ್ಣ ಮುಚ್ಚಿ ಜಪ ಧ್ಯಾನ ಶೀಲ ಮೌನ ನೇಮ ನಿತ್ಯವ ಹಿಡಿವ ವ್ರತಿಗಳ ನಾನಾ ಭವದಲ್ಲಿ ಬರಿಸಿತ್ತು. ವಾಗದ್ವೈತವ ನುಡಿವ ಅರುಹಿರಿಯರೆಂಬವರ ಜಾಗ್ರದಲ್ಲಿ ಆಕ್ರಮಿಸಿಕೊಂಡಿತ್ತು. ಸ್ವಪ್ನದಲ್ಲಿ ಮೂಅರ್sತರ ಮಾಡಿತ್ತು. ಸುಷುಪ್ತಿಯಲ್ಲಿ ಕಂಡೆನೆಂಬವರ ವ್ಯಾಪ್ತಿಯೆಂಬ ಬೇಳುವೆಗೊಳಗುಮಾಡಿತ್ತು. ಇಂತೀ ತ್ರಿವಿಧದೊಳ ಹೊರಗಿನ ಭೇದವನರಿಯದ ಪ್ರಪಂಚುದೇಹಿಗಳಿಗೆ ವಿರಕ್ತಿ ಇನ್ನೆಲ್ಲಿಯದು ? ಘಟಿಸದು ಕಾ[ಣಾ]. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ನಿರ್ಧರವಾದಲ್ಲಿ ನಿವಾಸವಾಗಿಪ್ಪನು.
--------------
ಬಾಚಿಕಾಯಕದ ಬಸವಣ್ಣ
ಭವಿಯ ಸಂಪರ್ಕವನರಿಯದ ಕಾಯ, ಪರಸ್ತ್ರೀಯ ಸಂಗಕ್ಕೆಳಸದ ಮನ, ಅನ್ಯಧನಮೋಹವನರಿಯದ ಪ್ರಾಣ, ಪರದೈವವನರಿಯದ ಭಾವ, ಅನ್ಯಹಿಂಸೆಯನರಿಯದ ಆತ್ಮಸಯವಾದ ನಿಲುವಿಗೆ ಭಕ್ತಿಬೆರಸಿಪ್ಪುದು. ಅಂಗಲಿಂಗವ ಹಿಂಗದೆ ಮರೆದು ಸಂಗಸುಯಿಧಾನಿ ಗುರುನಿರಂಜನ ಚನ್ನಬಸವಲಿಂಗವಿಡಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಲಿಂಗಾಂಗಸಮರಸಾನುಭಾವವ ಬಲ್ಲೆನೆಂದು ನುಡಿದು ಕೊಂಬ ಖುಲ್ಲ ಕುಚೇಷಿ*ಗಳ ವಾಕ್ಪಟುವ ನೋಡಾ! ಕಾಯಸಂಗವರಿದಬಳಿಕ ಕರ್ಮಕ್ರಿಯಾವೇಷಧಾರಿಯಾಗಿ ಡಂಭಕನಡೆಯುಂಟೆ? ಮನಸಂಗವನರಿದಬಳಿಕ ಸೂತಕ ಪಾತಕ ಸಂಕಲ್ಪ ಸಂಶಯವೆಂಬ ಸಂಸ್ಕøತಿಯೊಳೊಡವೆರೆಯಲುಂಟೆ? ಪ್ರಾಣಸಂಗವನರಿದಬಳಿಕ ವಾಯುಪ್ರಕೃತಿಯ ವರ್ತಕವುಂಟೆ? ಭಾವಸಂಗವನರಿದಬಳಿಕ ಮಾಯಾಮೋಹ ವಿಷಯ ಭ್ರಾಂತಿನಸುಳುಹುಂಟೆ? ಕಾಯ ಮನ ಪ್ರಾಣ ಭಾವ ಕಳೆ ಹಿಂಗದೆ ಸಂಗಭಾವಿಯೆಂದರೆ ಹಿಂಗುವದು ಗುರುನಿರಂಜನ ಚನ್ನಬಸವಲಿಂಗಾನುಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಡೂ ಕಾಣದೆ, ಕೂಡಿಯೂ ಕೂಡದೆ, ಹೆರೆಹಿಂಗಿಯೂ ಹಿಂಗದೆ, ಲಿಂಗಸಂಗವೆಂಬುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಪ್ರಸಾದ ಪ್ರಸಾದವೆನುತಿಪ್ಪಿರಿ. ಪ್ರಸಾದವೆಂತಿಪ್ಪುದು ? ಪ್ರಸಾದಿಯೆಂತಿಪ್ಪ ? ಪ್ರಸಾದಗ್ರಾಹಕ ಎಂತಿರಬೇಕು ? ಎಂದರಿಯದೆ ಪ್ರಸಾದವೆಂದು ಇಕ್ಕಿಹೆವೆಂಬರು, ಕೊಂಡೆಹೆವೆಂಬರು. ಕೊಂಡು ನಗೆಗೆಡೆಯಾಗುತಿಪ್ಪರಯ್ಯಾ. ಪ್ರಸಾದ ಪರಾಪರವಾದುದು, ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ. ಕರ್ಮಣಾ ಮನಸಾ ವಾಚಾ ಗುರುಭಕ್ತಿವಿಚಕ್ಷಣಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಎಂದು ದೀಕ್ಷಾಮೂರ್ತಿ ಪರಶಿವಗುರುಲಿಂಗಕ್ಕೆ ತನುಮನಧನವನರ್ಪಿಸುವುದು. ಪೂಜಾಕಾರಮೂರ್ತಿ ಪರಮಗುರುಮಹಾಲಿಂಗಕ್ಕೆ ತನುಮನಧನವರ್ಪಿಸಿ, ಶಿಕ್ಷಾಮೂರ್ತಿ ಪರಮಗುರುಜಂಗಮಲಿಂಗಕ್ಕೆ ತನು ಮನ ಧನವನರ್ಪಿಸಿ, ಪ್ರಸನ್ನಪ್ರಸಾದವ ಪಡೆದು ಭೋಗಿಸಿ, ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ, ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ ಆ ಪ್ರಸಾದಿಯೇ ಪ್ರಸಾದಗ್ರಾಹಕ. ಆ ಪ್ರಸಾದಿಯೇ ಗುರುವೆಂದು, ಆ ಪ್ರಸಾದಿಯೇ ಲಿಂಗವೆಂದು ಆ ಪ್ರಸಾದಿಯೇ ಜಂಗಮವೆಂದು ತನುಮನಧನದಲ್ಲಿ ವಂಚನೆ ಇಲ್ಲದೆ ಕೇವಲ ವಿಶ್ವಾಸದಿಂದ ನಂಬಿ ಪ್ರಸಾದವ ಗ್ರಹಿಸುವುದು. ಇದು ಕಾರಣ, ಪ್ರಸಾದಗ್ರಾಹಕನ ಪರಿಯೆಂಬ ಭಾವ ಹಿಂಗದೆ ಇಕ್ಕುವ ಪರಿಯ ನೋಡಾ. ಇದು ಕಾರಣ. ಮಹಾನುಭಾವರ ಸಂಗದಿಂದ ಅರಿಯಬಹುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ ಭೇದವ ಎಲ್ಲ ಗಣಂಗಳು ಕೇಳಿ. ಮಲತ್ರಯಂಗಳ ಹರಿದು, ಕರ್ಮೇಂದ್ರಿಯಂಗಳ ಜ್ಞಾನೇಂದ್ರಿಯ ಮಾಡಿ, ಕಾಯ ಜೀವ ಪ್ರಾಣ ಈ ತ್ರಿವಿಧವರತು ಭೇದವನರುಹಿಸಿದ. ಉರಸ್ಥಲದ ಪರಂಜ್ಯೋತಿಲಿಂಗವ ಎನ್ನ ಕರಸ್ಥಲಕ್ಕೆ ಕೊಟ್ಟರು. ಆ ಗುರು ಕೊಟ್ಟ ಲಿಂಗವೆಂಬ ದರ್ಪಣವ ನೋಡಿ, ಎನ್ನ ಮನೆವೆಂಬ ಸರ್ಪ ಆ ದರ್ಪಣದಲ್ಲಿ ಲೀಯವಾಯಿತ್ತು. ಇದು ಕಾರಣ, ಎನ್ನ ರೂಪೆಲ್ಲ ಉರಿಯುಂಡ ಕರ್ಪುರದಂತಾಯಿತ್ತು, ಆಲಿ ನುಂಗಿದ ನೋಟದಂತಾಯಿತ್ತು. ಪುಷ್ಪ ನುಂಗಿದ ಪರಿಮಳದಂತೆ ಬಯಲು ನುಂಗಿದ ಬ್ರಹ್ಮಾಂಡದಂತೆ, ಅಂಗಲಿಂಗ ಸಂಗಸಂಯೋಗವಾದ ಭೇದ. ಇದ ಹಿಂಗದೆ ಶರಣ ಸಂಗವ ಮಾಡಿದವರಂಘ್ರಿಯಲ್ಲಿ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದನು ಕಂಗಳ ಪಟಲ ಹರಿದ ಲಿಂಗೈಕ್ಯರೇ ಬಲ್ಲರು.
--------------
ಹಡಪದ ಅಪ್ಪಣ್ಣ
ಲಿಂಗವೇ ತಾನಾಗಿ, ತಾನೇ ಲಿಂಗವಾಗಿ, ಹಿಂಗದೆ ಪ್ರಣಮಪಂಚಾಕ್ಷರಿಯ ಜಪಿಸಿ, ಮಂಗಳ ಪ್ರಭೆಯಲ್ಲಿ ಕೂಡಿ, ನಿಃಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->