ಅಥವಾ

ಒಟ್ಟು 72 ಕಡೆಗಳಲ್ಲಿ , 21 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯಕ್ಕೆ ತನುವೆಂಬ ಹಸ್ತದಲ್ಲಿ ಇಷ್ಟಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ ಪ್ರಾಣಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ ಭಾವಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ, ಭಾವ ಮುಟ್ಟದ ಮುನ್ನ, ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ. ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ ಶರಣನೆಂಬೆ. ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ, ಹೂವಕೊಯಿದು ಧರಿಸಬಲ್ಲರೆ ಶರಣನೆಂಬೆ. ಈ ಭೇದವ ತಿಳಿಯಬಲ್ಲರೆ ಶಿವಜ್ಞಾನಿಶರಣ ಲಿಂಗಾಂಗಸಂಬಂದ್ಥಿ. ಇಂತೀ ನಿರ್ಣಯವ ತಿಳಿಯದೆ ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ, ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕರ್ಮೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕಿ ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಬ್ಥಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇಷ್ಟಲಿಂಗದ ಪೂಜೆಯಾವುದು, ಪ್ರಾಣಲಿಂಗದ ಪೂಜೆಯಾವುದು, ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು, ಅದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಇವು ಮೂರು ಲಿಂಗದ ಅರ್ಚನೆ. ಮೂರು ಲಿಂಗದ ಉಪಚಾರ. ಶಿವಾರ್ಥಿಗಳಾದ ವೀರಶೈವರುಗಳು ಮಾಡುವ ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನು ಶರಣನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣ ಭೇದವೆಂತೆಂದಡೆ : ಆಕಾಶವೆ ಅಂಗವಾದ ಶರಣನ ಸುಜ್ಞಾನವೆಂಬ ಹಸ್ತದಲ್ಲಿ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಪಾತ್ರದಲ್ಲಿ ಹುಟ್ಟಿದ ಸುನಾದಾಳಾಪನೆಯ ಶಬ್ದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಶಬ್ದಮಧ್ಯದಲ್ಲಿರ್ಪ ಅರ್ಥವೇ ಜೀವನು, ತಮೋರೂಪಮಾಗಿಹನು. ಜ್ಞಾನಮಧ್ಯದಲ್ಲಿರ್ಪ ಅರ್ಥವೇ ಪರಮನು, ಸತ್ವರೂಪಮಾಗಿಹನು. ಜ್ಞಾನಶರೀರದಲ್ಲಿರ್ಪ ಪರಮಾರ್ಥಭಾವವೆಂಬ ಹಸ್ತದಲ್ಲಿ ಬುದ್ಧಿಯೆಂಬ ತ್ರಿಗುಣಾತ್ಮಕಮಪ್ಪ ಮುನ್ಮೊನೆಯಲಗಂ ಪಿಡಿದು, ಆ ಶಬ್ದಶರೀರಂ ಭೇದಿಸಿ, ತನ್ಮಧ್ಯದಲ್ಲಿರ್ಪ ಅರ್ಥವನ್ನು ಆ ಜ್ಞಾನವು ಗ್ರಹಿಸಿದಲ್ಲಿ, ಜ್ಞಾನಾರ್ಥದೊಳಗೆ ಬೆರೆದು, ಎರಡೂ ಒಂದಾಗಿ, ಆ ಅರ್ಥವೇ ಸತ್ಯವಾಗಿ ಆನಂದಮಯಮಪ್ಪುದು. ಜ್ಞಾನವು ಗ್ರಹಿಸದೇ ಬಿಟ್ಟರೆ ಶಬ್ಧಾರ್ಥವೇ ದುರರ್ಥವಾಗಿ, ಸೃಷ್ಟಿಸ್ಥತಿಸಂಹಾತಂಗಳಲ್ಲಿ ಕೋಟಲೆಗೊಳ್ಳುತ್ತಿರ್ಪುದೇ ಜೀವನು, ಅದೇ ಪರಮನು. ತತ್ಪರಿಗ್ರಹವೇ ಐಕ್ಯಮಾದಲ್ಲಿ ಎರಡೂ ಒಂದೇ ಆಗಿರ್ಪುದೇ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನು ಮಹೇಶ್ವರನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣವೆಂತೆಂದಡೆ : ಅಪ್ಪುವೆ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಲ್ಲಿ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ಓಗರಾದುರು ಚಿದ್ರವ್ಯವ ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಮ್ಮ ಪುತ್ರರಂಗದ ಮೇಲೆ, ತಮ್ಮ ಶ್ರೀಗುರುವಿನ ಹಸ್ತದಲ್ಲಿ, ಲಿಂಗಸಾಹಿತ್ಯವ ಮಾಡಿದ ಬಳಿಕ, ಆ ಗುರುವಿನ ಪುತ್ರರಲ್ಲದೆ, ತಮ್ಮ ಪುತ್ರರಲ್ಲ. ತಾವವರೂ ಗುರುವಿನ ಸೊಮ್ಮೆಂದರಿದು, ಮತ್ತೆ ತಮ್ಮ ಪುತ್ರಿಯರೆಂದು ಮಾರಿಕೊಂಡುಂಡು, ನಾನು ಭಕ್ತ, ನಾನು ಮಹೇಶ್ವರನೆಂಬ ಶಿವಾಚಾರ ಭ್ರಷ್ಟರುಗಳ ವೀರಸೊಡ್ಡಳ ಮೆಚ್ಚುವನೆ, ಚನ್ನಬಸವಣ್ಣಾ ?
--------------
ಸೊಡ್ಡಳ ಬಾಚರಸ
ಅಂತರಂಗದ ಸುಳುವಿನ ಭೇದವ ಚಿತ್ತವೆಂಬ ಹಸ್ತದಲ್ಲಿ ಹಿಡಿದು, ಈಡಾಪಿಂಗಳನಾಳದಲ್ಲಿ ಸುಷಮ್ನಸ್ವರವ ಬಲಿದು ಶಾಂತಿಸಜ್ಜನಿತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ : ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ ಆಚಾರಲಿಂಗ ನ್ಯಾಸವಾಗಿಹುದು. ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ ಗುರುಲಿಂಗ ನ್ಯಾಸವಾಗಿಹುದು. ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ ಚರಲಿಂಗ ನ್ಯಾಸವಾಗಿಹುದು. ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ | ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ || ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಕಾಯವೆಂಬ ಸಿಂಹಾಸನದಲ್ಲಿ, ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ, ನಾ ನೀನೆಂಬ ಭೇದವಳಿದು, ಮಹಾದಾನಿ ಸೊಡ್ಡಳನಲ್ಲಿ ಲಿಂಗೈಕ್ಯವಾಯಿತ್ತು.
--------------
ಸೊಡ್ಡಳ ಬಾಚರಸ
ಎನ್ನ ಕಾಯವೆಂಬ ಸಿಂಹಾಸನದಲ್ಲಿ ಪ್ರಾಣವೆಂಬ ಲಿಂಗವ ಮೂರ್ತಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಚ್ಚಿ ಪೂಜಿಸುತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ, ಬಯಲ ಬೆರಸಿ, ನಾ ನೀನೆಂಬ ಭೇದವಳಿದು, ಮಹಾದಾನಿ ಗುಹೇಶ್ವರನ ನೋಡಲಾಗಿ ನಿಜಲಿಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಶ್ರೀಗುರು ಶಿವಗಣಂಗಳ ಮಧ್ಯದಲ್ಲಿ ಎನಗೆ ಉಪದೇಶಿಸುವಲ್ಲಿ ಪರಮೇಶ್ವರನ ಪಂಚಮುಖವನೆ ಪಂಚಕಳಶವಾಗಿ ಮೂರ್ತಿಗೊಳಿಸಿ, ಗಣಂಗಳು ಸಾಕ್ಷಿಯಾಗಿ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟು `ಈ ಲಿಂಗವೆ ಗಂಡ, ನೀನೇ ಹೆಂಡತಿ'ಯೆಂದು ಹೇಳಿ, ಲಲಾಟದಲ್ಲಿ ವಿಭೂತಿಯ ಪಟ್ಟವ ಕಟ್ಟಿ ಹಸ್ತದಲ್ಲಿ ಕಂಕಣವ ಕಟ್ಟಿ, ಪಾದೋದಕ ಪ್ರಸಾದವನಿತ್ತು ಎಂದೆಂದಿಗೂ ಸತಿಪತಿಭಾವ ತಪ್ಪದಿರಲಿಯೆಂದು ನಿರೂಪಿಸಿದದನಯ್ಯ ಶ್ರೀಗುರು. ಆ ನಿರೂಪವ ಮಹಾಪ್ರಸಾದವೆಂದು ಕೈಕೊಂಡೆನಯ್ಯ. ಇದು ಕಾರಣ, ಎನ್ನ ಪತಿಯಲ್ಲದೆ ಅನ್ಯವನರಿಯೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮ ಸಮರ್ಪಣವ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ | ಹೃನ್ಮುಖೀ ಅರ್ಪಿತಂಚೈವ ಪದಾರ್ಥಂ ತೃಪ್ತಿಭೋಕ್ತವಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->