ಅಥವಾ

ಒಟ್ಟು 171 ಕಡೆಗಳಲ್ಲಿ , 1 ವಚನಕಾರರು , 171 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರಾಳದಿಂದ ಸಹಜವಾಯಿತ್ತು. ಸಹಜದಿಂದ ಸೃಷ್ಟಿಯಾಯಿತ್ತು. ಸೃಷ್ಟಿಯಿಂದ ಸಂಸಾರವಾಯಿತ್ತು. ಸಂಸಾರದಿಂದ ಅಜಾÕನವಾಯಿತ್ತು. ಆಜಾÕನದಿಂದ ಬಳಲುವ ಜೀವರ, ಬಳಲಿಕೆಯ ತೊಲಗಿಸಲು ಜಾÕನವಾಯಿತ್ತು. ಜಾÕನದಿಂದಲಾಯಿತ್ತು ಗುರುಕರುಣ. ಗುರುಕರುಣದಿಂದಲಾಯಿತ್ತು ಸುಮನ. ಸುಮನದಿಂದಲಾಯಿತ್ತು ಶಿವಧ್ಯಾನ. ಶಿವಧ್ಯಾನದಿಂದಲಾಯಿತ್ತು ನಿರ್ದೇಹ ನಿರ್ದೇಹದಿಂದಲಾಯಿತ್ತು ಸಾಯುಜ್ಯ. ಸಾಯುಜ್ಯದಿಂದಲಾಯಿತ್ತು ಸರ್ವಶೂನ್ಯ. ಆ ಸರ್ವಶೂನ್ಯದಲ್ಲೊಡಗೂಡಿ ನಿಂದಾತಂಗೆ, ಮರಳಿ ಜನ್ಮ ಉಂಟೆ ಹೇಳಾ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ, ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು, ಬಳಲುವಣ್ಣಗಳ ಬಾಯ ಟೊಣೆದು, ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು. ಇವರಲ್ಲಿ ಬನ್ನಬಟ್ಟು ಬಳಲುವ ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ. ಮನಕ್ಕೆ ಮನರೂಪಾಗಿ ಮನಕ್ಕೆ ನೆನಹಿನ ಶಕ್ತಿಯನಿತ್ತು ಮನಕ್ಕಾಧಾರವಾದೆ. ಪ್ರಾಣಕ್ಕೆ ಪ್ರಾಣರೂಪಾಗಿ. ಪ್ರಾಣಕ್ಕಾಧಾರವಾದೆ. ಎನ್ನಂಗೆ ಮನ ಪ್ರಾಣದಲ್ಲಿ ನೀವೆ ನಿಂದು, ಸರ್ವಕರಣಂಗಳ ನಿಮ್ಮವ ಮಾಡಿಕೊಂಡ ಕಾರಣ ಎನ್ನ ಪ್ರಾಣ ನಿಮ್ಮಲ್ಲಿ ಆಡಗಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ಜಡೆಯೆಡೆಯಲ್ಲಿ ಗಂಗೆಯನೇಕೆ ಧರಿಸಿದೆ? ಕೆಲದಲ್ಲಿ ಚಂದ್ರಕಲೆಯನೇಕೆ ಸೂಡಿದೆ? ತ್ರಿಶೂಲ ಡಮರುಗವನೇಕೆ ಹಿಡಿದೆ? ವೃಷಭವಾಹನವೇಕೆ ಹೇಳಾ? ಉಮೆಯ ತೊಡೆಯ ಮೇಲೇಕೇರಿಸಿದೆ? ನಡು ನೊಸಲಲ್ಲಿ ಕಿಡಿಗಣ್ಣನೇಕೆ ತಾಳಿದೆ? ವರದಾಭಯ ಹಸ್ತದಿಂದ ಮೃಡನೆಂಬ ಹೆಸರು ಬಂದಿತೆಂದು, ನಿನ್ನ ಬೆಡಗಿನ ಲೀಲೆಯ ಕಂಡು, ಭಕ್ತಿ ಕಂಪಿತನೆಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತುದಿ ಮೊದಲಾಯಿತ್ತು. ಮೊದಲೇ ತುದಿಯಾಯಿತ್ತು. ತುದಿ ಮೊದಲೆಂಬವೆರಡಿಲ್ಲದೆ ಹೋಯಿತ್ತು. ಮುನ್ನೆಂತಿದ್ದುದಂತೆ ಆಯಿತ್ತು. ಸಹಜದ ನಿಲವು ಉದಯಸಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ? ಕತ್ತಲೆಯೆತ್ತ ಬೆಳಗೆತ್ತ? ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ ಇದೇನು ಗಾರುಡಿಗತನ ನಿನಗೆ?. ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ ಅದು ಹಿತವಹುದೆ? ನಿನ್ನ ನಿಜಸುಖದ ಸವಿಗಲಿಸಿ, ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?. ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ. ಎನ್ನ ನೀನರಿದು ಸಲಹು, ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆಶೆಯೆಂಬ ಶೃಂಖಲೆಯಿಂದ ಬಂಧವಡೆದವರು ಆರಾದರೂ ಆಗಲಿ ತೊಳಲಿ ಬಳಲುತ್ತಿಹರು ನೋಡಾ. ಆಶೆಯೆಂಬ ಶೃಂಖಲವ ಮುರಿದ ನಿರಾಶಕರು ಆವ ಧಾವತಿಯಿಂದಲೂ ಬಳಲದೆ ಸುಖವಿಹರು ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಆಶೆಯುಳ್ಳಾತನೆ ಮಾಯೆಯುಳ್ಳವನು. ನಿರಾಶೆಯುಳ್ಳವನೆ ನಿಮ್ಮವನು.
--------------
ಸ್ವತಂತ್ರ ಸಿದ್ಧಲಿಂಗ
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ ವಿವರಿಸಿ ತಿಳಿದು ನೋಡೆ, ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ ಶಿವ ಕಲಾ ರೂಪ ಚೈತನ್ಯ. ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ; ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ ತಾನಿದಿರೆಂಬುದ ಮರೆದು ಬ್ಥಿನ್ನವಿಲ್ಲದೆ ಶಿವಸುಖದೊಳಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ. ಹುಲ್ಲ ಮೇವ ಎರಳೆಯ ಕೋಡು ಮುರಿದು ಅಡವಿಯಲ್ಲಿ ಬಿಟ್ಟುದ ಕಂಡೆ. ಬಲ್ಲಿದ ಬಲೆಗಾರನ ಬಲೆಯ ನೇಣು ಹರಿದು, ಬಲೆಯ ಬಿಟ್ಟುಹೋದುದ ಕಂಡೆ. ಅಟ್ಟೆಯ ಬಿಟ್ಟು ತಲೆ ಆಕಾಶವನಡರಿತ್ತ ಕಂಡೆ. ದೂರ ದಾರಿ ಸಾರೆಯಾದುದ ಕಂಡೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ, ಹುಟ್ಟು ಮುರಿದು ಬಟ್ಟಬಯಲಾದುದ ಕಂಡೆ.
--------------
ಸ್ವತಂತ್ರ ಸಿದ್ಧಲಿಂಗ
ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ. ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ. ಸಕಲವೆಲ್ಲಕ್ಕೆ ಮೂಲಿಗರಾದಿರಲ್ಲ. ನಿಮ್ಮ ನಿಜವ ನೀವೇ ಅರಿವುತ್ತಿರ್ದಿರಲ್ಲ. ನಿಮ್ಮ ಮಹಿಮೆಯ ನೀವೇ ಬಲ್ಲಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಪಕ್ವ ಫಲದಲ್ಲಿಹ ಸ್ವಾದುವಿನಂತೆ, ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ, ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ, ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು, ನಿಮ್ಮಿಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->