ಅಥವಾ

ಒಟ್ಟು 393 ಕಡೆಗಳಲ್ಲಿ , 4 ವಚನಕಾರರು , 391 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು. ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು, ಅದ್ಥಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ ಕುರುಹಳಿದು ತೆರಹುಗೊಡದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.
--------------
ಆದಯ್ಯ
ಲಿಂಗೋದಕ ಪಾದೋದಕ ಪ್ರಸಾದೋದಕವಾದ ತ್ರಿವಿಧೋದಕದಲ್ಲಿ ಲಿಂಗೋದಕದಿಂದ ಸಂಚಿತಕರ್ಮವಿಲ್ಲ. ಪಾದೋದಕದಿಂದ ಪ್ರಾರಬ್ಧಕರ್ಮವಿಲ್ಲ. ಪ್ರಸಾದೋದಕದಿಂದ ಆಗಾಮಿಕರ್ಮವಿಲ್ಲ. ಇಂತೀ ತ್ರಿವಿಧೋದಕದಿಂದ ಬ್ರಹ್ಮಹತ್ಯ ಭ್ರೂಣಹತ್ಯ ಪಾಪಪಂಕಪ್ರಕ್ಷಾಲನವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ? ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ? ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ, ಕಂಡು ಬಲ್ಲವರು ನೀವು ಹೇಳಿರೆ. ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ. ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ. ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
--------------
ಆದಯ್ಯ
ಕಾಮಂಗೆ ಕೈತಲೆಗೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ? ಕಾಲಂಗೆ ಕಾಯವನೊಪ್ಪಿಸಿಕೊಟ್ಟ ಕಾಮುಕರಿಗೆಲ್ಲಿಯದೊ, ಕೈಲಾಸದ ಬಟ್ಟೆ? ಕರ್ಮಕಪಟದ ಕಮ್ಮರಿಯೊಳು ಸಿಲುಕಿ ಕಳವಳಿಸುತಿರ್ಪ ಕರ್ಮಕಾಂಡಿಗಳಿಗೆಲ್ಲಿಯದೊ, ಸ್ವರ್ಗಾಪವರ್ಗ? ಸೌರಾಷ್ಟ್ರ ಸೋಮೇಶ್ವ[ರ] ಲಿಂಗದ ನಿಜವನರಿಯದ ಕುಜನರಿಗೆಲ್ಲಿಯದೊ ನಿತ್ಯಾನಂದ ನಿಜಸುಖ?
--------------
ಆದಯ್ಯ
ಹುಸಿಯಿಂದ ಶಿವನ ಮುಕುಟವ ಕಂಡೆನೆಂದು ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ. ಮುಳ್ಳಿನಲ್ಲಿ ತೊನಚಿಯನಿದು ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ. ಸೋಮಸುತನ ಮಗ ಶೂದ್ರಕವೀರಂಗೆ ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು. ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ ಅನಂಗಮುದ್ರೆಯಾಯಿತ್ತು. ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ. ಇಂತಿವರನಂತರು ಕೆಟ್ಟರು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು.
--------------
ಆದಯ್ಯ
ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ, ಧೂಪದೀಪಾರತಿ ನೇಮವಲ್ಲ, ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ. ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.
--------------
ಆದಯ್ಯ
ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ. ಗುರುಲಿಂಗ ನಾಸ್ತಿಯಾದಲ್ಲದೆ ಮಾಹೇಶ್ವರನಲ್ಲ. ಶಿವಲಿಂಗ ನಾಸ್ತಿಯಾದಲ್ಲದೆ ಪ್ರಸಾದಿಯಲ್ಲ. ಜಂಗಮಲಿಂಗ ನಾಸ್ತಿಯಾದಲ್ಲದೆ ಪ್ರಾಣಲಿಂಗಿಯಲ್ಲ. ಪ್ರಸಾದಲಿಂಗ ನಾಸ್ತಿಯಾದಲ್ಲದೆ ಶರಣನಲ್ಲ, ಇಂತೀ ಷಡಂಗಗಳು ಕೆಟ್ಟಲ್ಲದೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯನಲ್ಲ.
--------------
ಆದಯ್ಯ
ಮಹಿಯೆಂಬ ಕುಟ್ಟಿಮದ ದಿಗ್ಭಿತ್ತಿಯ ಮೇಲೆ ಮುಚ್ಚಿದ ಅಂಡಕಟಾಹ ? ಅಜನ ತತ್ತಿಯೊಳಗಣ ಪಶುಜೀವರೆಲ್ಲಾ ನೆರೆದು ಕರ್ಮವೆಂಬುದೊಂದೆ ಬಟ್ಟಲೊಳಗೆ ಮೋಹ ಮದ ರಾಗ ವಿಷಾದ ತಾಪ ಶಾಪ ವೈಚಿಂತ್ಯವೆಂಬ ಏಳು ಮಲಂಗಳನೊಂದಾಗಿ ಕಲಸಿ ತಿನ್ನುತ್ತ ಮೂರು ಮಲಂಗಳ ಬೇರೆ ಬೇರೆ ಅರಿಯುತ್ತ ವಿಷಯವೆಂಬ ರಸವ ಕುಡಿದು ಅಜ್ಞಾನವೆಂಬುದೊಂದೆ ಹಾಸಿಕೆಯಲ್ಲಿ ಮಲಗಿ ಮೂರ್ಛೆ ತಿಳಿಯದಿಪ್ಪುದ ಕಂಡು ನಾಚಿತ್ತಯ್ಯಾ ಎನ್ನ ಮನ. ನಿಮ್ಮ ಅಂತರಂಗವೆಂಬ ಚಿದಂಬರದಲ್ಲಿ ನಿಃಶೂನ್ಯವಾಗಿರಿಸೆನ್ನ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ. ಇದಕ್ಕೆ ಶ್ರುತಿ: ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್ ಇಂತೆಂದುದಾಗಿ, ಅಷ್ಟಮೂರ್ತಿಗಳು ನಷ್ಟವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ ಮಿಟ್ಟಿಯ ಭಂಡರನೇನೆಂಬೆನಯ್ಯಾ.
--------------
ಆದಯ್ಯ
ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ, ಅತಕ್ರ್ಯನು ಅಖಿಲಾತೀತನು ಚರಾಚರಕ್ಕೆ ಸಿಲುಕುವನಲ್ಲ. ಅತ್ಯತಿಷ್ಠದ್ದಶಾಂಗುಲನು, ಅಹಂಕಾರವೈದದ ಅನುಪಮನು. ಸ್ಥಾವರಜಂಗಮವಲ್ಲದ ಭರಿತನು. ಸರ್ವಜ್ಞ ಸರ್ವಕರ್ತೃ ಸೌರಾಷ್ಟ್ರ ಸೋಮೇಶ್ವರನಲ್ಲಿ ಅವಿರಳನಾದ ಶರಣ.
--------------
ಆದಯ್ಯ
ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
--------------
ಆದಯ್ಯ
ಅಯ್ಯಾ, ತನುವಿದ್ದಂತೆ ಮರಣ ಶೋಕ ಭಯಂಗಳೆಂತುತ್ತಾರವಹವೆಂದರಿಯೆನಯ್ಯಾ. ಅಯ್ಯಾ, ಮನವಿದ್ದಂತೆ ಮಲ, ಮದ, ಮಾಯೆ, ಕರ್ಮಂಗಳೆಂತು ಹರಿವವೆಂದರಿಯೆನಯ್ಯಾ. ಅಯ್ಯಾ, ನಿಮ್ಮ ನೋಡುವ ಜ್ಞಾನಕಂಗಳಿಗೆ ವಿವೇಕಾಂಜನಸಿದ್ಧಿ ಎಂತಹುದೆಂದರಿಯೆನಯ್ಯಾ. ಅಯ್ಯಾ, ನಿಮ್ಮನರುಹಿ ಎನ್ನ ಮರಹಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಇನ್ನಷ್ಟು ... -->