ಅಥವಾ

ಒಟ್ಟು 182 ಕಡೆಗಳಲ್ಲಿ , 31 ವಚನಕಾರರು , 137 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗಸಂಬಂದ್ಥಿಯಾದ ಮಹಾತ್ಮನು ಅರಿಷಡ್ವರ್ಗಂಗಳರಿಯ, ಕ್ಷುತ್ತು ಪಿಪಾಸು ಶೋಕ ಮೋಹ ಜರೆ ಮರಣ ಗುಣತ್ರಯದೊಳೊಂದಿ ನಿಲ್ಲ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚದಶ ಮಾಯಾಪಟಲ ಹರಿದು ಮರೆದು ಮಹಾಘನ ಬೆಳಗಿನ ಸುಖವ ಸುಗ್ಗಿಯೊಳಿರ್ದು ಪ್ರಾಣಲಿಂಗವನರ್ಚಿಸುತ್ತಿಹನು ಭಕ್ತಿತ್ರಯಗೂಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ. ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ. ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ. ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ. ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು, ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚರ ಸ್ಥಾವರವಾದುದುಂಟೆ? ಮಹಾಸಮುದ್ರಕ್ಕೆ ಕೆರೆಯೇರಿಯುಂಟೆ? ಸುಖವ ಮಚ್ಚಿ ಅಖಿಳರೊಳಗಿದ್ದು ಸಕಲ ವಿರಹಿತರಾದ ಪರಿಯಿನ್ನೆಂತೊ? ಅದು ವಿಕಳರ ಮಾತು, ಮೂರಕ್ಷರಕ್ಕೆ ದೂರ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮೂರುಠಾವಿನ ಬೆಂಕಿ ಮುಂದುವರಿದುರಿವ ಅರಣ್ಯದೊಳಗೊಬ್ಬ ಸೂಳೆ ಆರಾರ ಉಳ್ಳವರನೊತ್ತೆಯ ಕೊಳ್ಳುತ್ತ ತನ್ನ ಸುಖವ ತೋರುತ್ತ ನಗಿಸುತ್ತ, ದುಃಖವನುಣಿಸುತ್ತಲಳಿಸುತ್ತ ಬಗೆ ಬಗೆ ಬಣ್ಣತೆಯ ತೊಡಿಸಿ, ಕುಣಿಸುವ ಕುವರಿಯ ಕಾಲದೊಡರಿನೊಳಿರ್ದು ಹಿರಿಯರೆನಿಸಿಕೊಂಬ ಕುರಿಮಾನವರ ನೋಡಿ ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಆಲಸ್ಯ(ಆಲಯಳ)ವಿಲ್ಲದೆ ಲಿಂಗಲೀಯ ಮಾಡುತ್ತಿದ್ದವು ತವತವಗೆ ಪ್ರಾಣಾದಿಗಳು. ತಾಗಿದ ಸುಖ ಲೇಸು ಲಿಂಗಕ್ಕೆಂಬವಯ್ಯಾ, ಲಿಂಗಭೋಗೋಪಭೋಗದಲ್ಲಿ ತವತವಗೆ ಪ್ರಾಣಾದಿಗಳು. ಕಲಸದೆ ಬೆರಸದೆ ವಿವರಿಸಿ ಕಳೆದು, ಸವಿಯ ಸಂಪುಟದ ಸುಖವ ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಕಾಯ ಲಿಂಗದರುಶನವನರಿದಲ್ಲಿ, ಮನವನರಿದು ತನುವೊಪ್ಪುವಂತೆ, ತನು ಸೋಂಕಿದ ಸುಖವ, ಆತ್ಮನರಿದು ಅರ್ಪಿಸುವಂತೆ, ಜಾಹೆಯಲ್ಲಿ ಮರೆದೊರಗಿರಲಾಗಿ, ತನುವ ತಟ್ಟಿದಡೆ, ಆತ್ಮನೆಚ್ಚರುವಂತೆ ಇಪ್ಪುದು, ಇಷ್ಟಪ್ರಾಣಸಂಬಂಧಯೋಗ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ನಸುಗಾಯವಡೆದವನಂತೆ ನೋವುಣ್ಣದೆ, ಸತ್ಕಿ ್ರೀವಂತನಂತೆ ಸಂದೇಹವಿಲ್ಲದೆ, ಖಳನಿಚ್ಚಟನಂತೆ ಆತ್ಮಕ್ಕೆ ಸಂದು ಸಂಶಯವಿಲ್ಲದೆ, ನೆರೆ ಅರಿದವನಂತೆ ಮರವೆಯ ಕುರುಹಿಗೆ ಬಾರೆದ, ಲಿಂಗದಲ್ಲಿ ಕರಿಗೊಂಡವನಂತೆ ಕೊಟ್ಟಿಹೆ ಕೊಂಡೆಹೆನೆಂಬ ಸೂತಕವಿಲ್ಲದೆ, ಬೊಮ್ಮವನರಿದವನಂತೆ ಅವರಿವರಲ್ಲಿ ಸುಮ್ಮಾನದ ಸುಖವ ನುಡಿಯದೆ, ಘಟಕರ್ಮ ಯೋಗಿಯಂತೆ ಆ ದೇಹ ಇಂದ್ರಿಯಂಗಳಿಲ್ಲದೆ, ಲಿಂಗಸಂಗಿಯಂತೆ ಬಾವಸರ್ವರ ಸಂಗ ಮಾಡದೆ ಇಂತೀ ಸರ್ವಗುಣಸಂಪನ್ನ ನವಬ್ರಹ್ಮಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 52 ||
--------------
ದಾಸೋಹದ ಸಂಗಣ್ಣ
ಇದು ಎನಗೆ ಆಶ್ಚರ್ಯ; ಹೇಳವ್ವಾ ! ಕಾಯವಿಲ್ಲದ ಸುಖವ ಜೀವವಿಲ್ಲದ ಭವವ ! ಆಠಾವ ಹೇಳಾ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಘನವ ಕಂಡೆ, ಅನುವ ಕಂಡೆ, ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ. ಅರಿವರಿದು ಮರಹ ಮರೆದೆ. ಕುರುಹಿನ ಮೋಹ ಮೊರೆಗೆಡದೆ ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.
--------------
ಅಕ್ಕಮಹಾದೇವಿ
ನೋಟದ ಸುಖ ಉಳ್ಳನ್ನಬರ ಬೆರಸಲೆಲ್ಲಿಯದೊ? ಬೆರಸುವ ಭರ ಉಳ್ಳನ್ನಬರ ತವಕ ಹಿಂಗದು. ನಿಮ್ಮ ನೋಡಿ ಕೂಡಿ ಸೈವರಗಾದ ಸುಖವ, ಏನೆಂದುಪಮಿಸುವೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀ ನಾನೆಂಬ ಭಾವವಾರಿಂದಾಯಿತ್ತು ಹೇಳಾ? ನೀನೆಂಬುದು ಅಜ್ಞಾನ, ನಾನೆಂಬುದು ಮಾಯಾಧೀನ. ನೀನೆನ್ನದೆ ನಾನೆನ್ನದೆ ಇಪ್ಪ ಸುಖವ ಭಿನ್ನವಿಲ್ಲದೆ ಅರಿಯಬಲ್ಲಡೆ; ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->