ಅಥವಾ

ಒಟ್ಟು 84 ಕಡೆಗಳಲ್ಲಿ , 19 ವಚನಕಾರರು , 64 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀಮೆಯ ಮೀರಿದ ಸಂಬಂಧನೆ, ಸಂಬಂಧದಲ್ಲಿ ಸಮನಿಸದ ಸಂಯೋಗನೆ, ಎನ್ನ ಸಲಹುವ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದಕ್ಕೆ ಅರ್ಹನ ಮಾಡಿದೆ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಬಸವನಾಗಿ ಬಂದು ನಿನ್ನವರಿಗೆ ಯೋಗ್ಯನ ಮಾಡಿ, ಭವವ ತಪ್ಪಿಸಿದೆ.
--------------
ಸಿದ್ಧರಾಮೇಶ್ವರ
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ ಹೇಮಗಿರಿಯ ಸಂಚ ತಪ್ಪದು ನೋಡಾ ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ಅಂತಿರಲಯ್ಯಾ ಪ್ರಭುವೆ.
--------------
ಚನ್ನಬಸವಣ್ಣ
ಐನಾಯೆಂಬ ಅಕ್ಷರದ ಭೇದವನರಿತಡೆ ಅಪ್ಪುದರಿದೊಂದೂ ಇಲ್ಲ. ಸೀಮೆಯ ಮೀರಿದ ಸಂಬಂಧ ಸಂಬಂಧವ ಮೀರಿದ ಸೀಮೆ, ಅನುಮತದ ಮೀರಿದ ಆದ್ಥಿಕ್ಯ ಅಕ್ಷರವೆರಡರ ಅದ್ಥಿಕಾರ ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗ.
--------------
ಸಿದ್ಧರಾಮೇಶ್ವರ
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ.
--------------
ಅಲ್ಲಮಪ್ರಭುದೇವರು
ಬಣ್ಣವಿಲ್ಲದ ಪಕ್ಷಿ ಕಣ್ಣಿನ ಕೊನೆಯಲ್ಲಿ ಸಣ್ಣಗೂಡನಿಕ್ಕಿ ಸುಳಿವುದ ಕಂಡೆ. ಬಣ್ಣ ಮೂವತ್ತಾರ ನುಂಗಿತ್ತ ಕಂಡೆ. ಬಯಲ ಸೀಮೆಯ ವಾಸವಾಗಿರ್ಪ ಪಕ್ಷಿ ಹೆಣ್ಣೋ ಗಂಡೋ ಎಂದು ಕುರುಹವಿಡಿವ ಅಣ್ಣಗಳನಾರನೂ ಕಾಣೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸೀಮೆಯ ಮೀರಿದ ಸಿರಿವಂತನೆ, ಪದವ ಮೀರಿದ ಬಹುರೂಪನೆ, ಆನಂದ ಆನಂದವಾದ ನಿತ್ಯ ಸಾನಂದನೆ, ಸುಗುಣದಲ್ಲಿ ಬೆಳಗುತಿಹ ನಿತ್ಯ ಸಾನಂದನೆಲೆ ಅಯ್ಯಾ, ನಿನ್ನಾನಂದವನಾರು ಬಲ್ಲರು? ನೀನು ಲಿಂಗತ್ರಯದೊಳಗೆ, ಎರಡೈದು ಪಾದೋದಕದ, ಐದಾರು ಕೂಡಿದ ಪ್ರಸಾದದಲ್ಲಿ, ನಿತ್ಯಸುಖಿಯೆಂಬುದ ಸತ್ಯಶುಚಿಯೆಂಬುದ ನಿನ್ನವರೆ ಬಲ್ಲರು. ಜಡವಿಡಿದು ನುಡಿವ ಅಜ್ಞಾನಿ ಹೊರಸುಗಳು ಬಲ್ಲರೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪಂಚತತ್ವದ ಮೇಲೆ ನಿತ್ಯಪರತತ್ವವ ಕಂಡು ನಿರ್ಲೇಪಕನಾದ ಶರಣನು ಕಾಲನ ಬಾಧೆಗಳ ನೀಗಿ, ಸೀಮೆಯ ದಾಂಟಿ, ನಿಸ್ಸೀಮನಾಗಿರ್ದು, ಕೇವಲ ಸ್ವಯಂಜ್ಯೋತಿಯಲ್ಲಿ ಕೂಡಿ ತಾನು ತಾನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಸನನ್ಯಕ್ಕೆ ಸಂಗಮಾಡನು ತತ್ವ ಯೆಂಬ ಮಠಕವನು ತಾನಪ್ರಮಾಣ ಮಂಗಳಾತ್ಮನ ತೆರಹು ಹಿಂದಿಹ ಸೀಮೆಯ ತಂದರುಪಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿರಿ; ಲಿಂಗವಾಗಿ ಬಂದೆನ್ನ ಮನದ ಮನವ ಕಳೆದಿರಿ; ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿರಿ. ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ. ಇನ್ನೆನಗತಿಶಯವೇನೂ ಇಲ್ಲ.
--------------
ಸಿದ್ಧರಾಮೇಶ್ವರ
ಅರುವತ್ತಾರಕ್ಷರವ ಕುರುಹುಗೆಟ್ಟ ಸೀಮೆಯ ತೆರಹಿಗೆ ಬಂದವರಿನ್ನಾರೊ. ಮೇಲೆ ಬ್ರಹ್ಮಾಂಡವನು ಧರಿಸಿ ಇಲ್ಲದಂತೆಯಿಪ್ಪವರಾರೊ. ಆನಂದದಾಯ ಅಪರ ಶೂನ್ಯನಾದೆ. ಅಯ್ಯ, ಕಪಿಲಸಿದ್ಧಮಲಿಲ್ಲಿಕಾರ್ಜುನ ಅಯ್ಯ.
--------------
ಸಿದ್ಧರಾಮೇಶ್ವರ
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ, ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ, ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು, ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು, ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ || ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಸೀಮೆಯುಳ್ಳನ್ನಬರ ತಾನು ತನ್ನಂಗವಾಗಿರಬೇಕು, ಅನ್ಯಂಗವಾಗದೆ. ಅನ್ಯಂಗ ಅನ್ಯಂಗವೆ? ಗುರುಕರುಣಂದ ತನ್ನಂಗ ಅನ್ಯಂಗವಾದಡೆ ಸೀಮೆಯ ಸಂಬಂಧಿ ತಾನಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಅಚ್ಚ ಶರಣನು.
--------------
ಸಿದ್ಧರಾಮೇಶ್ವರ
ಸಮನಿಸದಯ್ಯ ಭಕ್ತಿ, ಸೀಮೆಯ ಮೀರಿದ ಸಂಬಂಧಿಗಲ್ಲದೆ. ಸಮನಿಸದಯ್ಯ ಐಕ್ಯವು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನಿನ್ನ ಭಕ್ತಿ ನಿಧಾನ ಎಲ್ಲರಿಗೆ ಸುಲಭವೆ?
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->