ಅಥವಾ

ಒಟ್ಟು 143 ಕಡೆಗಳಲ್ಲಿ , 4 ವಚನಕಾರರು , 142 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ ಬಿಟ್ಟವಂಗಲ್ಲದೆ ಸತ್ಯವ ಸಾದ್ಥಿಸಬಾರದು. ಆರ ಬಿಟ್ಟವಂಗಲ್ಲದೆ ಆದರಿಸಬಾರದು. ಎಂಟ ಬಿಟ್ಟವಂಗಲ್ಲದೆ ಸಾಕಾರದ ಕಂಟಕವನರಿಯಬಾರದು. ರಣದಲ್ಲಿ ಓಡಿ ಮನೆಯಲ್ಲಿ ಬಂಟತನವನಾಡುವನಂತೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ರೋಗಿಗೆ ಹಾಲು ಸಿಹಿಯಪ್ಪುದೆ? ಗೂಗೆಗೆ ರವಿ ಲೇಸಪ್ಪುದೆ? ಚೋರಗೆ ಬೆಳಗು ಗುಣವಪ್ಪುದೆ? ಭವಸಾಗರದ ಸಮಯದಲ್ಲಿದ್ದವರು ನಿರ್ಭಾವನ ಭಾವವನೆತ್ತ ಬಲ್ಲರು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ ಅಪ್ಯಾಯನವಡಗದು, ಸಂದೇಹ ಹಿಂಗದು ಇದೇನೊ ಇದೇನೋ! ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ ಇದೇನೊ ಇದೇನೋ! ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಅತ್ತಲರಿವರು ಸುತ್ತ ಮೋಹಿಗಳು ; ಅತ್ತಲನುಪಮದನುವನವರರಿವರೆ ? ಇತ್ತಲರಿವರು ವಿಷಮವಿರಹಿತ ವಿಮಲಾಂಗ ಸಂಗಸುಖಿಗಳ; ಇತ್ತಲನುಭೇದ ವಿಸರ್ಜನವನಿವರರಿವರೆ ? ಇದು ಕಾರಣ, ಅತ್ತಿಲ್ಲದಿರ್ದನಿತ್ತಲನುದಿನ ಚಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು ಭಾವಿಸಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸದ್ವಾಸನ ಧರ್ಮಚರಿತೆಯ ವರ್ಮವನುಳಿದು ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ. ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ. ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹೇಂದ್ರ ಜಾಲವು ಮರೀಚಿಕಾ ಜಲವು. ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹಾನಾದ ಸುನಾದ, ಸುನಾದಕ್ಕೆ ಕೈಗೈದು ಆ ಸುನಾದವು ಮಹಾನಾದದೊಡನೆ ಮಥನಿಸಿ ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ ಅಡಗುವ ಭೇದವ ಬಲ್ಲೆನಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
--------------
ಘಟ್ಟಿವಾಳಯ್ಯ
ಆಯತವಿಲ್ಲದ ಮಠದಲ್ಲಿ ಅಗ್ನಿಯಿಲ್ಲದೆ ಬೋನವ ಮಾಡಿ ಭಾವವಿಲ್ಲದೆ ಶಿವಕಾರ್ಯಂಗಳು ಭೋಜನವಿಲ್ಲದೆ ಅರಿಸಿ ಕೊಟ್ಟಡೆ ಆಪ್ಯಾಯನವಾರಿಗೂ ಅಡಸದಿರ್ದುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆನು.
--------------
ಘಟ್ಟಿವಾಳಯ್ಯ
ಅಬ್ದಿಯ ಘೋಷವೆದ್ದು ನಿರ್ಭರ ನಿರ್ವೇಗದಿಂದ ಅಬ್ಬರಿಸಿ ಬರುವಾಗ ಅದನೊಬ್ಬರು ಹಿಡಿದ [ರುಂಟೆ]? ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ ತಾಕು ತಡೆಯುಂಟೆ? ಮಹಾದ್ಭುತವಾದ ಅಗ್ನಿಯ ಮುಂದೆ ಸಾರವರತ ತೃಣಕಾಷ್ಟವಿ [ದ್ದುದುಂ]ಟೆ? ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಜಂಗಮವಾಗಿ ಹುಟ್ಟಿದ ಮತ್ತೆ ಹಿಂದಣ ಹಜ್ಜೆಯ ಮೆಟ್ಟಲುಂಟೆ? ಜಂಗಮವೆಂಬ ಮಾತಿಂಗೊಳಗಾದಲ್ಲಿ ಮೂರು ಮಲತ್ರಯವ ಹಿಂಗಿರಬೇಕು. ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು; ಅದು ನಿಜದ ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ.
--------------
ಘಟ್ಟಿವಾಳಯ್ಯ
ಕಂಡು ಕಂಡು ಕಾಣಲುಂಟೆ ಅಯ್ಯಾ. ಕೇಳಿ ಕಂಡಿಹೆನೆಂದಡೆ ಮನಸ್ಸು ನಾಚಿತ್ತು. ನಾಚಿದ ಮನಸ್ಸಿಗೆ, ನೋಡಿದ ನೋಟಕ್ಕೆ ಭಾವ ಬತ್ತಲೆಯಾಗದನ್ನಕ್ಕ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಆ ಉದಯದಲ್ಲಿ ನಿಚ್ಚ ನಿಚ್ಚ ಹುಟ್ಟಿದ ಪ್ರಾಣಿ ಅಸ್ತಮಾನದಲ್ಲಿ ನಿಚ್ಚ ನಿಚ್ಚ ಮರಣವಾಯಿತ್ತಲ್ಲಾ! ಇದರಂತುವನರಿಯದೆ ಅಜ್ಞಾನಿಗಳಾಗಿ ಹೋದರಲ್ಲಾ! ಎಲ್ಲರು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಬಸವ ಮಾಡಿಹನೆಂದು ಬಾಯಲ್ಲಿ ಬಸಿವ ಲೊಳೆಯನರಿಯದೆ ಎಸಕದಿಂದ ಮಾಡುವ ಹುಸಿಭಕ್ತಿಯನರಿಯದ ಈ ಕಿಸಿವಾಯರಿಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು. ಮೇರು ಮಂದಿರದ ಮೇಲೆ ಮನೆಯ ಮಾಡಿದರಾರೋ? ತಿದಿಯ ಹರಿವೆ, ಮನೆಯ ಸುಡುವೆ, ನಿಲುವೆ ಹೊಸ ಪರಿಯರಿಯಾ! ಎನ್ನ ಪರಿಯ ಹಿಂದೆ ಕೇಳಿದ್ದು ಮನೆಯೊಳಗಣ ಬೂದಿಯ ಭಸ್ಮವಾಗಿ ಧರಿಸಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಇನ್ನಷ್ಟು ... -->