ಅಥವಾ

ಒಟ್ಟು 83 ಕಡೆಗಳಲ್ಲಿ , 30 ವಚನಕಾರರು , 76 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ. ನವಿಲಿನ ಕಣ್ಣಿನಂತೆ ಕಣ್ಣುಳ್ಳರೆ ಭಕ್ತನೆಂಬೆ. ಬೆಕ್ಕಿನ ಹೃದಯದಂತೆ ಹೃದಯವುಳ್ಳರೆ ಭಕ್ತನೆಂಬೆ. ಕಾಕನ ಪಿಕನ ಸ್ನೇಹವ ಹಿಂದಿಟ್ಟು, ಸೂರ್ಯಂಗೆ ಕಮಲದ ರೂಪವ ಮುಂದಿಟ್ಟು ಮಾಟವರಿದು ಮಾಡುವಾತನಲ್ಲದೆ ಭಕ್ತನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು ! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ_ನಿರಾಳವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ. ನಾನು ಭಕ್ತಳೆಂಬ ನಾಚಿಕೆಯ ನೋಡಾ. ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ ; ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ
--------------
ಅಕ್ಕಮಹಾದೇವಿ
ಪಂಚಮುಖದ ಸರ್ಪನ ತಲೆಯ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯದ ಪ್ರಭೆಯಲ್ಲಿ ನಾನು ನೀನೆಂಬುದ ಮರೆದು ಸ್ವಾನುಭಾವ ಸಿದ್ಧಾಂತವನಳವಟ್ಟು ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ. ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು. ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು. ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು. ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ, ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ಇಪ್ಪತ್ತೈದು ನೆಲೆಯ ಮೇಲೆ ಸುಪ್ಪಾಣಿಯ ಕಂಡೆನಯ್ಯ. ಆ ಸುಪ್ಪಾಣಿಯ ಸಂಗದಿಂದ ಕೂಗುವ ಕಪ್ಪೆಯ ಕಂಡೆನಯ್ಯ. ಆ ಕೂಗುವ ಕಪ್ಪೆ ಸರ್ಪನ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ. ಕರ್ತುವೆ ಕೂಡಲಸಂಗದೇವಾ ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ. 11
--------------
ಬಸವಣ್ಣ
ಕಾಲಿಲ್ಲದ ಪುರುಷನು ಕೈಯಿಲ್ಲದ ನಾರಿಯ ಸಂಗವ ಮಾಡುತಿರ್ಪನು ನೋಡಾ. ಆ ಕಾಲಿಲ್ಲದ ಪುರುಷನ, ಕೈಯಿಲ್ಲದ ನಾರಿಯ, ಅವರಿಬ್ಬರನು ಕಪ್ಪೆ ನುಂಗಿ ಕೂಗುತಿದೆ ನೋಡಾ. ಆ ಕೂಗಿನ ಶಬ್ದವ ಕೇಳಿ, ತ್ರಿಲೋಕದಿಂದ ಎದ್ದ ಸರ್ಪನ ಇರುವೆ ನುಂಗಿತ್ತು ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಪ್ಪೆ ಸತ್ತು ಸರ್ಪನ ನುಂಗಿತ್ತು ನೋಡಾ. ಮೊಲ ಸತ್ತು ಬಲೆಯ ಮೀರಿತ್ತು ನೋಡಾ. ಮತ್ತೊಡೆದು ಜಲವ ನುಂಗಿತ್ತು ನೋಡಾ. ಜೀವ ಸತ್ತು ಕಾಯ ನುಂಗಿತ್ತು ನೋಡಾ. ಉದಕ ಒಡೆದು ಏರಿ ತುಂಬಿತ್ತು, ರೆಕ್ಕೆ ಮುರಿದು ಪಕ್ಷಿ ಹಾರಿತ್ತು. ಹಾರುವ ಪಕ್ಷಿಯ ಮೀರಿ ನಿಂದಿತ್ತು ಬಯಲು. ನುಂಗಿದ ಬಯಲವ, ಹಿಂಗಿದ ಪಕ್ಷಿಯ ಕಂಗಳು ನುಂಗಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ಹುತ್ತದ ಬಾಯಲ್ಲಿ ಲೆಕ್ಕವಿಲ್ಲದ ಹುಳು ಹುಟ್ಟಿ, ಹುತ್ತ ಕತ್ತಿತ್ತು ನೋಡಾ. ಸರ್ಪನ ವಿಷದ ಹೊಗೆಯಿಂದ ಹುತ್ತವುರಿದು, ಹುಳು ಸಾಯದು ನೋಡಾ. ಇಂತೀ ಪುತ್ಥಳಿಯ ಹೊತ್ತು ನಷ್ಟವ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಬ್ಬ ಸತಿಯಳು ಪಂಚಮುಖದ ಸರ್ಪನ ಸಾಕುವುದ ಕಂಡನಯ್ಯ. ಮೇಲಿಂದ ಒಬ್ಬ ಗಾರುಡಿಗನು ನಾಗಸ್ವರವನೂದಲು ಆ ಸರ್ಪ ನಾಗಸ್ವರದ ನಾದವ ಕೇಳಿ ಆ ಗಾರುಡಿಗನ ನುಂಗಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->