ಅಥವಾ

ಒಟ್ಟು 102 ಕಡೆಗಳಲ್ಲಿ , 41 ವಚನಕಾರರು , 99 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಕಾಲದಗಂಡ, ಕರ್ಮದಗಂಡ, ವಿದ್ಥಿಯಗಂಡ, ವಿಶಸನದಗಂಡ, ಇಹದಗಂಡ, ಪರದಗಂಡ, ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ ? ಸಂದೇಹಿಯಗಂಡ, ಸಂದೇಹ ನಿರ್ಲೇಪಕ್ಕೆ ಶರಣೈಕ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹಿಂದಣಜನ್ಮದ ಸಂಸಾರವ ಮರೆದು, ಮುಂದಣ ಭವಬಂಧನಂಗಳ ಜರಿದು, ಸಂದೇಹ ಸಂಕಲ್ಪಗಳ ಹರಿದು, ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ, ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ, ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ, ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ, ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ, ಗಮನ ಸುಮನ ಸಮತೆ ನೇಮ ಸಂತೋಷವ್ರತ. ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು? ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ, ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ, ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ. ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು.
--------------
ಶಿವಲೆಂಕ ಮಂಚಣ್ಣ
ನಿತ್ಯ ಚಿಲುಮೆಯ ಕೃತ್ಯಂಗಳಾದಲ್ಲಿ ತೃಣ ಕಾಷ್ಠ ವಿದಳ ಮೊದಲಾದ ಸಂಗ್ರಹಂಗಳಲ್ಲಿ ಸಂದೇಹ ಮಾತ್ರವಿಲ್ಲದೆ ಮನ ನಂಬುವನ್ನಬರ ಸೋದಿಸಬೇಕು. ಅದು ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗಕ್ಕರ್ಪಿತ.
--------------
ಅಕ್ಕಮ್ಮ
ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ? ಸಂಚಿತ ಪ್ರಾರಬ್ಧ ಆಗಾಮಿಯ ಅದ್ವೈತ ಸಾಹಿತ್ಯವಾದ ಬಳಿಕ ಸಂದೇಹ ಭ್ರಾಂತಿಯೆಲ್ಲಿಯದೊ? ಉಂಟು ಇಲ್ಲವೆಂಬ ಪ್ರಸಾದ ಸಾಹಿತ್ಯವಾದ ಬಳಿಕ ಭೋಗ ಉಪಭೋಗಂಗಳೆಲ್ಲಿಯವೋ? ಅಷ್ಟಭೋಗಂಗಳು ಸೌರಾಷ್ಟ್ರ ಸೋಮೇಶ್ವರ ಸಾಹಿತ್ಯವಾದ ಬಳಿಕ ಮಲ-ಮಾಯಾ-ಕರ್ಮ-ತಿರೋಧಾನವೆಂಬ ಚತುರ್ವಿಧಪಾಶಂಗಳೆಲ್ಲಿಯವೊ?
--------------
ಆದಯ್ಯ
ಕಾಳು ದೇಹದೊಳಗೊಂದು ಕೀಳು ಜೀವ ಹುಟ್ಟಿತ್ತಾಗಿ ಅಪ್ಯಾಯನವಡಗದು, ಸಂದೇಹ ಹಿಂಗದು ಇದೇನೊ ಇದೇನೋ! ಹಂದೆಗಳ ಮುಂದೆ ಬಂದು ಕಾಡುತಲಿದ್ದುದೆ ಇದೇನೊ ಇದೇನೋ! ಕಾಲಾಳು ಮೇಲಾಳುಗಳು ಬೇಳುವೆಗೊಳಗಾದರು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಉದಯ ತತ್ಕಾಲವೆ ಅಸ್ತಮಯ, ಅಸ್ತಮಯ ತತ್ಕಾಲವೆ ಉದಯ. ಮಧುವೆ ವಿಷ, ವಿಷವೆ ಮಧು. ಸದರಿವೆರಡಕ್ಕೆ ಮನಸ್ಸಿನ ಸಂದೇಹ ಮಾತ್ರ. ಅದು ಕಾರಣ ಮಧುರ ಸಮುದ್ರ, ಲವಣ ಸಮುದ್ರ, ಕ್ಷೀರ ಸಮುದ್ರ, ದದ್ಥಿ ಸಮುದ್ರ ಚತುರಂಗದೊಳಿರ್ದ ಸಪ್ತಸಮುದ್ರಕ್ಕೆ ಏಕೋಮೂಲ್ಯ ಬ್ಥಿನ್ನ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ, ಐದು ವರ್ಣದ ಸಂಚಿಗ ಇವರೊಳಗಾದ ನಾನಾ ವರ್ಣದ ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ, ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ, ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು, ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು, ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
--------------
ವೀರ ಗೊಲ್ಲಾಳ/ಕಾಟಕೋಟ
ಮಗು ಸತ್ತು ಕೊರಳು ಕುಗ್ಗದು, ಅಂಗುಳಾರದು, ಬಾಯ ಬರೆ ಹಿಂಗದು. ಇನ್ನಾವ ನೇಣ ಹಾಕುವೆ ಕೊರಳಿಗೆ ? ಒಂದು ನೇಣಿನಲ್ಲಿ ಸಂದೇಹ ಬಿಡದು. ಎರಡು ನೇಣಿನಲ್ಲಿ ಹಿಂಗಿ ಹೋಗದು. ಮೂರು ನೇಣಿನಲ್ಲಿ ಮುಗಿತಾಯವಾಗದು. ಹಲವು ನೇಣಿನಲ್ಲಿ ಕಟ್ಟುವಡೆದ ಕೂಸು, ಅದಕ್ಕೆ ಒಲವರವೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ ನಾನಯ್ಯಾ. ನಡೆವಡೆ ಶಕ್ತಿಯಿಲ್ಲ ನುಡಿವಡೆ ಜಿಹ್ವೆಯಿಲ್ಲ. ಇದಿರಲೊಬ್ಬರ ಉಪಚಾರ ಸೇರದು ನೋಡಾ ಎಮಗೆ. ಬಂದ ಬರವನರಿದು ನಿಂದ ನಿಲವನರಿದು ಕೂಡಬಲ್ಲ ಶರಣಂಗೆ, ಬೇರೊಂದು ಏಕಾಂತವೆಂಬ ಸಂದೇಹ ಉಂಟೆ ? ತೆರಹಿಲ್ಲದ ಘನವನೊಳಕೊಂಡ ಬಳಿಕ ಬರಲೆಡೆಯುಂಟೆ ನಮ್ಮ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಅಂಗದಲ್ಲಿ ಸೋಂಕಿದ ಸುಳುಹ ಮನವರಿದು, ಅಲ್ಲ ಅಹುದೆಂದು ಸಂದೇಹ ಬಿಟ್ಟಲ್ಲಿ ಅರ್ಪಿತವಲ್ಲದೆ, ಬಂದುದ ಬಂದಂತೆ, ಕಂಡುದ ಕಂಡಂತೆ, ದೃಕ್ಕಿಂಗೊಳಗಾದುದೆಲ್ಲವು ಲಿಂಗಾರ್ಪಿತವುಂಟೆ ? ಅರ್ಪಿಸಬಲ್ಲಡೆ ಅಲ್ಲ ಅಹುದೆಂಬುದ ಮುನ್ನವೆ ಅರಿದು, ಆ ಮನ ಲಿಂಗದೊಳಗಡಗಿ, ಅಂಬಿನ ಕಣೆಯಂತೆ ಮನ ಲಿಂಗದ ಅನು. ಈಶಾನ್ಯಮೂರ್ತಿ ಮಲ್ಲಿಕಾರ್ಜುನದ ಘನ
--------------
ಶಿವಲೆಂಕ ಮಂಚಣ್ಣ
ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ. ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು ಹರಹಿಕೊಂಡಿದ್ದೆನಯ್ಯಾ ದಾಸೋಹವನು. ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು, ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ, ಹಿಂದಣ ಸಂದೇಹ ಸೂತಕ ಹಿಂಗಿತ್ತು. ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ, ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ.
--------------
ಬಸವಣ್ಣ
ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ? ಉಂಬುದೆ ಅಗ್ನಿ? ಉಡುವುದೆ ಪೃಥ್ವಿ? ನೀನೆಂದು ಉಂಡೆ? ನಾನೆಂದು ಕಂಡೆ? ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತೆನೆಂಬ ಅಂಜಿಕೆ ನಿನಗೆ ಬೇಡ, ಅಂಜದಿರು,_ ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ.
--------------
ಅಲ್ಲಮಪ್ರಭುದೇವರು
ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ ? ಪರುಷಪಾಷಾಣಕ್ಕೆ ಕೀಳು ಮೇಲಲ್ಲದೆ ಕಡೆಯಾಣಿಗುಂಟೆ ಒರೆಗಲ್ಲು ? `ಉಂಟು' `ಇಲ್ಲ' ಎಂಬ ಸಂದೇಹ ನಿಂದಲ್ಲಿ ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->