ಅಥವಾ

ಒಟ್ಟು 119 ಕಡೆಗಳಲ್ಲಿ , 12 ವಚನಕಾರರು , 114 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು, ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇಧಿಸಬಾರದು ?) ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜಾÕನ. ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಸಜ್ಜನಸನ್ನಹಿತವಾದ ಭಕ್ತಿ, ಹೊತ್ತಿಗೊಂದು ಪರಿಯುಂಟೆ ಹೇಳಾ ? ಒಮ್ಮೆ ಅಹಂಕಾರ ಒಮ್ಮೆ ಕಿಂಕಿಲವೆ ? ಮನಕ್ಕೆ ಮನ ಸಾಕ್ಷಿಯಾಗಿ ಮಾಡುವ ಭಕ್ತನಲ್ಲಿ ಗುಹೇಶ್ವರನಿಪ್ಪನಲ್ಲದೆ, ಪ್ರಪಂಚಿನೊಳಗಿಲ್ಲ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗ ಜಂಗಮ, ಜಂಗಮ ಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ ! ಪ್ರಸಾದ ಕಾಯ, ಕಾಯ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ ! ಲಿಂಗ ಪ್ರಾಣ, ಪ್ರಾಣ ಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಥಾಪ್ಯವ ಮಾಡಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾಸ್ಥಲದಲ್ಲಿ ಲಯವ ಮಾಡಿ, ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕುಮಿಕ್ಕ ಶೇಷವನಿಕ್ಕಿ ಆಗು ಮಾಡಿ ನಿನ್ನಂತರಂಗದಲ್ಲಿ ಅವ್ವೆ ನಾಗಾಯಿಯ ಇಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕರಗಿ ಕೊರಗಿತ್ತಯ್ಯಾ, ಸಂಗನಬಸವಣ್ಣಾ ! ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನಬಸವಣ್ಣಾ !
--------------
ಚನ್ನಬಸವಣ್ಣ
ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ ಲಿಂಗದ್ರೋಹ. ಧನವರ್ಪಿತವೆಂದಡೆ ಜಂಗಮದ್ರೋಹ_ ಇಂತೀ ತನುಮನಧನಗಳೆಂಬ ಅನಿತ್ಯವನು ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ. ಒಡೆಯರಿಗೆ ಉಂಡೆಯ ಮುರಿದಿಕ್ಕಿ ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ? ನಮ್ಮ ಗುಹೇಶ್ವರಲಿಂಗಕ್ಕೆ, ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ನಿಜ ಬಲ್ಲವಂಗೆ ಜಲವೂ ಸರಿ, ನೆಲವೂ ಸರಿ. ಅರಿದು ನುಡಿವಂಗೆ ಜಗವೂ ಸರಿ, ಸಮಯವೂ ಸರಿ. ಎಮಗಾಮಿಥ್ಯವಿಲ್ಲ, ಸಂಗನಬಸವಣ್ಣಾ, ಗುಹೇಶ್ವರಲಿಂಗವು ಪರಿಪೂರ್ಣವಾದ ಕಾರಣ.
--------------
ಅಲ್ಲಮಪ್ರಭುದೇವರು
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ! ಅರಿದು ಮರೆದು ನೆನೆದಡೆ ನೆಲೆಗೊಳ್ಳದು. ಅರಿವರಾರಯ್ಯ ಆಗಮ್ಯಲಿಂಗವನು ? ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ? ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ? ಗುಹೇಶ್ವರಲಿಂಗದ ನಿಲವ ತೋರಬಾರದು_ಕೇಳಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ದೇವ ದೇವ ಮಹಾಪ್ರಸಾದ: ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ. ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ. ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ ? `ಚಕಿತಮಬ್ಥಿದತ್ತೇ ಶ್ರುತಿರಪಿ' ಎನಲು, ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ ? ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ, ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಗೆ ಬಾರರು, ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ, ಸಂಗನಬಸವಣ್ಣಾ .
--------------
ಸಂಗಮೇಶ್ವರದ ಅಪ್ಪಣ್ಣ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗಜಂಗಮ ಜಂಗಮಲಿಂಗದ ಮುಖವ ನೀವಲ್ಲದೆ ಇನ್ನು ಬಲ್ಲವರಾರಯ್ಯಾ ? ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದಲ್ಲಿ ಪರವಾದಿ ಬಿಜ್ಜಳನು ಒರೆದು ನೊಡಲೆಂದಟ್ಟಿದಡೆ ಹಗರಣಿಗರ ಜಂಗಮಮುಖದಲ್ಲಿ ಲಿಂಗವ ಮಾಡಿದವರಾರು ಹೇಳಾ ನೀವಲ್ಲದೆ ? ಮರದ ಮಾನಿಸನ ಕರೆದು `ಓ' ಎನಿಸಿ ನುಡಸಿ ಉಡಿಸಿ ಉಣಿಸಿ ಜಂಗಮಲಿಂಗಪ್ರಾಣಿ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ ಈ ಕಲ್ಯಾಣದಲ್ಲಿ ನೀವಲ್ಲದೆ ? ಜಂಗಮಮುಖಲಿಂಗವನರಿಯೆನೆಂದು ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದಡೆ ನಾನು ಸೈರಿಸಬಲ್ಲೆನೆ ? ನೀನು ಜಂಗಮಮುಖಲಿಂಗಸಂಬಂಧಿ ಎಂಬುದ ಕೇಳಿ ಆದಿಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ ನಿನ್ನನರಿಸಿಕೊಂಡು ಬರುತ್ತಲೈದಾನೆ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ಸಂಗನಬಸವಣ್ಣಾ, ನೀನೇ ಜಂಗಮಪ್ರಾಣಿಯೆಂದು ನಾನು ನಂಬಿದೆನು.
--------------
ಚನ್ನಬಸವಣ್ಣ
ಮನದೊಡೆಯ ಮನೆಗೆ ಬಹಡೆ, ಮನ ಮನದಲಚ್ಚೊತ್ತಿದಂತಿರ್ಪುದು ನೋಡಯ್ಯಾ. ಮನಕ್ಕೆ ಮನೋಹರ, ಚಿತ್ತಕ್ಕೆ ಮನೋಹರವಾಗಿರ್ಪುದಯ್ಯಾ. ಮಹಾದಾನಿ ಸೊಡ್ಡಳನ ಬರವಿಂಗೆ, ಶುಭಸೂಚನೆ ಮೆಯಿದೋರುತ್ತಿದೆ. ಪ್ರಭುದೇವರ ಬರವನೀಗಳೆ ತೋರುವೆನಯ್ಯಾ ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ; ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು ! ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ತೆರಹಿಲ್ಲದ ಘನವು ಮನದೊಳಗೆ ನಿಂದು ನೆಲೆಗೊಂಡ ಬಳಿಕ, ಆ ಘನವ ತೆರೆಯ ಮರೆಯಲಡಗಿಸಿಹೆನೆಂದಡೆ ಅಡಗುವುದೆ ? ಹೇಮಗಿರಿಯ ಕದ್ದು ಭೂಮಿಯಲಡಗಿಸಿಹೆನೆಂದಡೆ ಆ ಕಳವು ಸಿಕ್ಕದೆ ಮಾಣ್ಬುದೆ ? ಕೂಡಲಚೆನ್ನಸಂಗನ ಶರಣ ಪ್ರಭುವಿನಲ್ಲಿ ಬೆರಸಿದ ಸುಖವ ಮರೆಸಿಹೆನೆಂದಡೆ ನಿನ್ನಳವೆ ಹೇಳಾ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಇನ್ನಷ್ಟು ... -->