ಅಥವಾ

ಒಟ್ಟು 27 ಕಡೆಗಳಲ್ಲಿ , 11 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಪ್ರಸಾದಿಗಳೆಂಬರು ಬಲ್ಲರೆ ನೀವು ಹೇಳರೋ! ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ಸದ್ಭಕ್ತರು ತಮ್ಮ ಲಿಂಗಕ್ಕೆ ಗುರುಮಂತ್ರೋಪದೇಶದಿಂದ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಕಲ ಪದಾರ್ಥವೆಲ್ಲವ ಪ್ರಮಾಣಿನಲ್ಲಿ ಭರಿತವಾಗಿ ಗಡಣಿಸಿ, ತನು ಕರಗಿ ಮನ ಕರಗಿ ನಿರ್ವಾಹ ನಿಷ್ಪತ್ತಿಯಲಿ ಗಟ್ಟಿಗೊಂಡು ತಟ್ಟುವ ಮುಟ್ಟುವ ಭೇದದಲ್ಲಿಯೇ ಚಿತ್ತವಾಗಿ ಲಿಂಗಾರ್ಪಿತವ ಮಾಡೂದು ಆ ಪ್ರಸಾದವ ತನ್ನ ಪಂಚೇಂದ್ರಿಯ ಸಪ್ತಧಾತು ತೃಪ್ತವಾಗಿ ಭೋಗಿಸೂದು. ಲಿಂಗಪ್ರಸಾದ ಗ್ರಾಹಕನ ಪರಿಯಿದು, ಕೊಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ ? ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ ಲಿಂಗಾರ್ಚಕರಪ್ಪರೆ, ಅಯ್ಯಾ ? ವೇಷವ ಹೊತ್ತು ಗ್ರಾಸಕ್ಕೆ ತಿರುಗುವ ಈ ವೇಷ ದುರಾಚಾರಿಗಳ ಮೆಚ್ಚುವನೆ ಕೂಡಲಸಂಗಮದೇವ ?
--------------
ಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವ ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ. ಹಂಗು ಹರಿಯಿಲ್ಲದ ಕಾರಣ, ಕೂಡಲಸಂಗಮದೇವ ನಿಷ್ಫಲದಾಯಕನಾಗಿ ಆನು ಮಾಡಿ ಶುದ್ಧನಯ್ಯಾ.
--------------
ಬಸವಣ್ಣ
ಗುರುಪ್ರಸಾದವೆಂಬಿರಿ, ಲಿಂಗಪ್ರಸಾದವೆಂಬಿರಿ, ಅಚ್ಚಪ್ರಸಾದವೆಂಬಿರಿ, ಭರಿತಬೋನವೆಂಬಿರಿ. ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು ಅರಿವವರು ನೀವು ಕೇಳಿರೆ; ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು ಆ ಶ್ರೀಗುರುಲಿಂಗಕ್ಕೆ ತನುಕ್ರೀಯಿಂದ ಪಾದಾರ್ಚನೆಯ ಮಾಡಿ ಪಾದತೀರ್ಥಮಂ ಕೊಂಡು, ಷಡುಸಮ್ಮಾರ್ಜನೆಯ ಮಾಡಿ ರಂಗವಾಲಿಯನಿಕ್ಕಿ, ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ ಪುರುಷಾಹಾರ ಪ್ರಮಾಣಿನಿಂದ ನೀಡಿ, ತೆರಹು ಮರಹಿಲ್ಲದೆ ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ ಹಸ್ತಮಜ್ಜನಕ್ಕೆರೆದು, ಒಕ್ಕುಮಿಕ್ಕುದ ಕೊಂಡುಂಬುದು ಗುರುಪ್ರಸಾದ. ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ, ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ. ಇನ್ನು ಲಿಂಗಪ್ರಸಾದವನರಿವ ಪರಿ; ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ, ತಟ್ಟುವ ಮುಟ್ಟುವ ಮರ್ಮವನರಿತು, ಸಂಕಲ್ಪ ವಿಕಲ್ಪವಿಲ್ಲದೆ ಭಾವಶುದ್ಧನಾಗಿ, ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋರಿ, ಸೀತಾ?ಮಂ ಕೊಟ್ಟು, ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ, ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ. ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು. ಕೊಡದೆ ಛಲಗ್ರಾಹಕತನದಲ್ಲಿ ಕೊಂಡು ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ. ಅವನ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ, ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು. ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ, ಹಿಂದಣ ಕ್ರೀಯಿಂದ ಮಾಡಬೇಕು. ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ, ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ. ಅವನು ಶ್ರೀಗುರುವಿನಾಜ್ಞೆಯ ಮೀರಿದವನು, ಪಂಚಮಹಾಪಾತಕನು, ಲಿಂಗಚೋರಕನು. ಇದನರಿದು ತ್ರಿಸಂಧ್ಯಾಕಾಲದಲ್ಲಿ ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಲಾಗದು, ಮಾಡಿದರು ಮಾಡಿರಿ ಬೇಡಿ ಮಾಡಲಾಗದು. ಬೇಡಿ ಮಾಡಿದ ಭಕ್ತಿ ಈಡಾಗಲರಿಯದು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು, ಆ ಜಂಗಮದ ಪ್ರಸಾದವನೆ ಲಿಂಗಕ್ಕರ್ಪಿಸುವ ಅವಿವೇಕಿಗಳು ನೀವು ಕೇಳಿರೆ ! ಅಟ್ಟೋಗರವನಟ್ಟೆನೆಂಬ, ಕಾಷ*ವ ಸುಟ್ಟ ಬೂದಿಯ ಮರಳಿ ಸುಟ್ಟೆಹೆನೆಂಬ ಭ್ರಮಿತರು ನೀವು ಕೇಳಿರೆ ! ಪದಾರ್ಥ ಪ್ರಸಾದವಾದುದು ಇಷ್ಟಲಿಂಗ ಮುಖದಿಂದ. ಆ ಇಷ್ಟಲಿಂಗವ ಸೋಂಕಿ ಬಂದ ಆದಿಪ್ರಸಾದವೆ ಪ್ರಾಣಲಿಂಗಕ್ಕೆ ಅಂತ್ಯಪ್ರಸಾದ. ಆ ಪ್ರಾಣಲಿಂಗಮುಖದಿಂದಲೊದಗಿದ ಅಂತ್ಯಪ್ರಸಾದವೆ ಭಾವಲಿಂಗಕ್ಕೆ ತೃಪ್ತಿಮುಖದಲ್ಲಿ ಸೇವ್ಯ ಪ್ರಸಾದ. ಇಂತೀ ಆದಿಪ್ರಸಾದ, ಅಂತ್ಯಪ್ರಸಾದ, ಸೇವ್ಯಪ್ರಸಾದ ಗ್ರಾಹಕವೆಂಬ ಜಂಗಮ ಇಷ್ಟಲಿಂಗವಿಡಿದು ಗುರು, ಇಷ್ಟಲಿಂಗವಿಡಿದು ಭಕ್ತ, ಇಷ್ಟಲಿಂಗವಿಡಿದು ಜಂಗಮ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಪ್ರಸನ್ನ ಪ್ರಸಾದವ ಪಡೆದು, ಅಷ್ಟಭೋಗವ ಭೋಗಿಸುವಾತನೆ ಗುರು. ಇಂತೀ ಆದಿಕುಳ ಮಹಾನಂದ ಪ್ರಸಾದದ ನಿಜಾನುಭಾವಿಯೆ ಜಂಗಮ. ಇಂತೀ ಗುರು ಲಿಂಗ ಜಂಗಮದಲ್ಲಿ ಭಕ್ತಿ ನೆಲೆಗೊಂಡ ನಿರುಪಾಧಿಕನೆ ಭಕ್ತ. ಆ ಭಕ್ತನು ಲಿಂಗಮುಖದಲ್ಲಿ ಸಿದ್ಧಪ್ರಸಾದವ ಪಡೆದು ಭೋಗಿಸೂದು. ಸ್ವಚ್ಛಂದ ಲಲಿತ ಭೈರವಿಯಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾತ್ ಜಂಗಮಾದಿಷು | ಜಂಗಮಸ್ಯ ಪ್ರಸಾದಂ ಚ ನ ದದ್ಯಾ ಲಿಂಗಮೂರ್ತಿಷು | ಜಂಗನಸ್ಯ ಪ್ರಸಾದಂ ಚ ಸ್ವೇಷ್ಟಲಿಂಗೇನ ಚಾರ್ಪಯೇೀತ್ | ಪ್ರಮಾದಾದರ್ಪಯೇದ್ದೇವಿ ಪ್ರಸಾದೋ ನಿಷ್ಫಲೋ ಭವೇತ್ || ಇಂತೆಂದುದಾಗಿ, ಅಂದಾದಿಯಿಂದಾದಿಯಾಗಿ ಎಂದೆಂದೂ ಇದೇ ಪ್ರಸಾದದಾದಿಕುಳ. ಈ ಆದಿಕುಳದರಿವುವಿಡಿದು ಪ್ರಸಾದವಿಡಿವ ಮಹಾಪ್ರಸಾದ ಸಾಧ್ಯಗ್ರಾಹಕರಿಗೆ ನಮೋ ನಮೋ ಎಂಬೆ. ಉಳಿದ ಉದ್ದೇಶಿಗಳೆನಿಸುವ ಭ್ರಾಂತರಹ ಜಾತ್ಯಂಧಕರಿಗೆ ನಾನಂಜುವೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅರ್ಥಪ್ರಾಣಾಭಿಮಾನವ ಕೊಟ್ಟು ಕರ್ತೃ-ಭೃತ್ಯನ ಮಾತಿಗೆ ಮನೆಯ ಬಾಗಿಲಿಗೆ ಹೋಗಿ, `ನನಗೆ ಮಾಡಿ ನೀಡು' ಎಂದು ಉಪಾಧಿಕೆಯ ನುಡಿದರೆ ಅವನ ಕರ್ತೃತನ ಅದೇ ಹಾಳು. ಅದೇನು ಕಾರಣ ಎಂದರೆ ಕರ್ತನಿದ್ದೆಡೆಗೆ ಭೃತ್ಯ ತಾನೆ ಬಂದು, ದೀರ್ಘದಂಡ ನಮಸ್ಕಾರ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬಲ್ಲಾತನೆ ಭೃತ್ಯ, ಪರಿಣಾಮಿಸಬಲ್ಲಾತನೆ ಕರ್ತ ಕೂಡಲಚೆನ್ನಸಂಗಮದೇವರಲ್ಲಿ ಮೀರಿದ ಸಯಸ್ಥಲವಪೂರ್ವ
--------------
ಚನ್ನಬಸವಣ್ಣ
ಅವಸರ ಮಾದ ಬಳಿಕ ಅಂಗಭೋಗಂಗಳನೆಲ್ಲವ ಮರೆಯಬೇಕು. ಅದ ಮೀರಿದ ಘನವು ಅಗಮ್ಯವಾಯಿತ್ತು. ಅದನರಿಯಬಾರದು ಅಂತಿರಲಿ- ನಾನು ನೀನೆಂಬ ಭ್ರಾಂತುಳ್ಳನ್ನಕ್ಕ, ಅಷ್ಟವಿಧಾರ್ಚನೆ, ಷೋಡಶೋಪಚಾರವ ಮಾಡಬೇಕು, ಕೂಡಲಚೆನ್ನಸಂಗಯ್ಯಾ ಇದ ಮಾಡದಿದ್ದಡೆ ನಾಯಕನರಕ
--------------
ಚನ್ನಬಸವಣ್ಣ
ಪೃಥ್ವಿಯ ಮೇಲಣ ಕಣಿಯ ತಂದು, ಪೂಜಾವಿಧಾನಕ್ಕೊಳಗಾದ ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು. ಮೂವರಿಗೆ ಹುಟ್ಟಿದಾತನೆಂದು ಪೂಜಿಸುವಿರೊ ? ಭೂಮಿಗೆ ಹುಟ್ಟಿ ಶಿಲೆಯಾಯಿತ್ತು ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು. ಗುರುಮುಟ್ಟಿ ಲಿಂಗವಾಯಿತ್ತು. ಇದು ಬಿದ್ದಿತ್ತೆಂದು ಸಮಾಧಿಯ ಹೊಕ್ಕೆವೆಂಬರು ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ವ್ರತವು. ಕಟ್ಟುವ ಠಾವನು ಮುಟ್ಟುವ ಭೇದವನು ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಸರಿವಿಡಿಯೆ ಗುರುವಿಡಿಯೆ. ಗುರುವಿಡಿದು ಲಿಂಗವಿಡಿಯೆ. ಪರಿವಿಡಿಯೆ ಈ ಲೋಕದ ಬಳಕೆವಿಡಿಯೆ. ಇಲ್ಲವೆಯ ತಂದೆನು ಬಲ್ಲವರು ಬನ್ನಿ ಭೋ! ಶರಣಸತಿ ಲಿಂಗಪತಿಯೆಂಬುದ ಕೇಳಿ ಉಂಟಾದುದ ಇಲ್ಲೆನಬಂದೆ. ಇಲ್ಲದುದ ಉಂಟೆನಬಂದೆ. ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಕರ್ಮಿಗಳಿಗೆ ನೆಟ್ಟನೆ ಗುರುವಿಲ್ಲೆನಬಂದೆ. ಮುಟ್ಟಲರಿಯರು ಪ್ರಾಣಲಿಂಗವ. ಅಟ್ಟಿ ಹತ್ತುವರೀ ಲೋಕದ ಬಳಕೆಯ ಇಷ್ಟಲಿಂಗದ ಹಂಗು ಹರಿಯದ ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆನ ಬಂದೆ.
--------------
ಘಟ್ಟಿವಾಳಯ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರವ ಲಿಂಗಕ್ಕೆ ಮಾಡಿ, ಜಂಗಮಕ್ಕೆ ಮಾಡದವರ ಕಂಡರೆ ಭಕ್ತರೆಂತೆಂಬೆ ? ಇಂದ್ರಿಯಂಗಳ ಬೆಂಬಳಿಯಲ್ಲಿ ಹೋಗಿ, ನಿಮ್ಮ ಚರಿತ್ರವ ನೆನೆಯದವರ ಕಂಡರೆ ಶರಣರೆಂತೆಂಬೆ ? ಅನಿಮಿಷದೃಷ್ಟಿಯಲ್ಲಿ ನೋಡುವರ ಅನಿಮಿಷರೆಂದೆಂಬೆನೆ ? ನೀವೆ ತಾನಾಗಿ ಮೈದೋರದವರ ಕಂಡರೆ, ಎನ್ನ ವಿಸ್ತಾರವೆಂಬೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ; ಲಿಂಗಬಿದ್ದಡೆ ಸಮಾಧಿಯ ಹೊಕ್ಕಹೆವೆಂಬರು. ಗುರುವಿಂದ ಲಿಂಗವಾಯಿತ್ತೆ ? ಲಿಂಗದಿಂದ ಗುರುವಾದನೊ ? ಅದೆಂತೆಂದಡೆ: ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು, ಗುರುವಿನ ಹಸ್ತದಿಂದ ಲಿಂಗವಾಯಿತ್ತು. ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ ಜಗವೆಲ್ಲ ಭಂಡಾಯಿತ್ತು ನೋಡಿರೊ ! ಅಣ್ಣಾ, ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ ? ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು. ಹೀಗಲ್ಲದೆ ಶಸ್ತ್ರಸಮಾಧಿ ದುರ್ಮರಣವ ಮಾಡಿಕೊಂಡಿಹೆನೆಂಬ ಪಂಚಮಹಾಪಾತಕಂಗೆ ನಾಯಕನರಕ. ಲಿಂಗವು ಬೀಳಬಹುದೆ ? ಭೂಮಿಯು ಆನ ಬಲ್ಲುದೆ ? ಸದ್ಗುರುನಾಥನಿಲ್ಲವೆ ? ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ: ಈರೇಳು ಭುವನ, ಹದಿನಾಲ್ಕುಲೋಕದೊಡೆಯ ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ ಮಿಕ್ಕಿನ ಮಾತಿನ ಜ್ಞಾನಿಗಳೆತ್ತ ಬಲ್ಲರು ?
--------------
ಚನ್ನಬಸವಣ್ಣ
ಇನ್ನಷ್ಟು ... -->