ಅಥವಾ

ಒಟ್ಟು 8 ಕಡೆಗಳಲ್ಲಿ , 7 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಪರಾತ್ಪರ ಸತ್ಯ ಸದಾಚಾರ ಗುರುಲಿಂಗಜಂಗಮದ ಶ್ರೀಚರಣವನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ, ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ ಕೊಟ್ಟು ಕೊಂಬುವಂತಹದೆ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚರಣೆಯ ನಿಲುಗಡೆ ನೋಡಾ. ಆಮೇಲೆ ಒಪ್ಪತ್ತು ಸಂಬಂಧವಿಟ್ಟು ಆಚರಿಸುವ ನಿಲುಕಡೆ ಎಂತೆಂದಡೆ: ಅಯ್ಯಾ, ನಿನ್ನ ಷಟ್‍ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವನ ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ ಷೋಡಶವರ್ಣವಾಗಿ ನೆಲೆಸಿಪ್ಪರು ನೋಡಾ. ಇಂತು ಷೋಡಶಕಳಾಸ್ವರೂಪವಾದ ಚಿದ್ಘನ ಮಹಾಲಿಂಗದೇವನ ನಿರಂಜನ ಜಂಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪೂಜೆಗಳ ಮಾಡಿ ಜಂಗಮಚರಣಸೋಂಕಿನಿಂ ಬಂದ ಗುರುಪಾದೋದಕವಾದಡೂ ಸರಿಯೆ, ಅದು ದೊರೆಯದಿದ್ದಡೆ, ಲಿಂಗಾಣತಿಯಿಂ ಬಂದೊದಗಿದ ಪರಿಣಾಮೋದಕವಾದಡೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂ ರಚಿಸಿ ಆ ಉದಕದೊಳಗೆ ಹಸ್ತೋದಕ ಮಂತ್ರೋದಕ ಭಸ್ಮೋದಕವ ಮಾಡಿ, ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ, ಶುದ್ಧಾದಿಯಾದ ಪೂರ್ಣಭಕ್ತಿಯಿಂದ ಮಹಾಚಿದ್ಘನತೀರ್ಥವೆಂದು ಭಾವಿಸಿ ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ, ಮೂರು ವೇಳೆ ಪ್ರದಕ್ಷಿಣವ ಮಾಡಿ, ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟವಿಧಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ ಅಷ್ಟವಿಧೋದಕವಾಗುವುದಯ್ಯಾ. ಆ ಇಷ್ಟಮಹಾಲಿಂಗ ಜಂಗಮವೆತ್ತಿ ಅಷ್ಟಾದಶಮಂತ್ರ ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ. ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ ಮುಕ್ತಾಯವ ಮಾಡಿದಲ್ಲಿಗೆ ದಶವಿಧೋದಕವೆನಿಸುವುದಯ್ಯಾ. ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪ ಪಾದತೀರ್ಥ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ. ಸಹಜಲಿಂಗಭಕ್ತರಾದಡೆ ಮುಖ ಮಜ್ಜನವ ಮಾಡಿಸಿ ತಾ ಧರಿಸುವ ವಿಭೂತಿಧಾರಣವ ಮಾಡಿಸಿ ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ ಎಡೆಮಾಡಿಸಿಕೊಂಬುವುದಯ್ಯಾ. ಆಮೇಲೆ ತಾನು ಸ್ಥಲವಾದಡೆ ಸಂಬಂಧಪಟ್ಟು, ಪರಸ್ಥಲವಾದಡೆ ಚಿದ್ಘನ ಇಷ್ಟಮಹಾಲಿಂಗ ಜಂಗಮವ ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದಪ್ರಣವದೊಳಗೆ ಗೋಳಕಪ್ರಣವ ಅಖಂಡಗೋಳಕಪ್ರಣವ ಅಖಂಡ ಮಹಾಗೋಳಕಪ್ರಣವ, ಜ್ಯೋತಿಪ್ರಣವ ಧ್ಯಾನದಿಂದ ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ, ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ, ಪದಾರ್ಥದ ಪೂರ್ವಾಶ್ರಯವ ಕಳೆದು ಶುದ್ಧಪ್ರಸಾದವೆಂದು ಭಾವಿಸಿ, ಆ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟಾದಶ ಮಂತ್ರಸ್ಮರಣೆಯಿಂದ ಮೂರುವೇಳೆ ರೂಪ ಸಮರ್ಪಿಸಿ, ಎರಡು ವೇಳೆ ರೂಪ ತೋರಿ, ಚಿರಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು ಆರನೆಯ ವೇಳೆಗೆ ಭೋಜ್ಯಗಟ್ಟಿ ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಷಡ್ವಿಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಉದಯಕಾಲ ಮಧ್ಯಾಹ್ನಕಾಲ ಅಸ್ತಮಯಕಾಲದಲ್ಲಿ, ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವಾತನೆ ಸದ್ಭಕ್ತನು. ಇಂತೀ ತ್ರಿಕಾಲದಲ್ಲಿ ಲಿಂಗಾರ್ಚನೆಯ ಮಾಡುವಲ್ಲಿ, ಹಿಂದಣ ಕ್ರೀಯಿಂದ ಮಾಡಬೇಕು. ಅಂತಲ್ಲದೆ ಸುಮ್ಮನೆ ಲಿಂಗಾರ್ಚನೆಯ ಮಾಡುವಾತ, ಭಕ್ತನಲ್ಲ, ಮಾಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ ಐಕ್ಯನಲ್ಲ. ಅವನು ಶ್ರೀಗುರುವಿನಾಜ್ಞೆಯ ಮೀರಿದವನು, ಪಂಚಮಹಾಪಾತಕನು, ಲಿಂಗಚೋರಕನು. ಇದನರಿದು ತ್ರಿಸಂಧ್ಯಾಕಾಲದಲ್ಲಿ ತನ್ನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಹಿಂದಣ ಕ್ರೀವಿಡಿದು ಮಾಡುವ ಸದ್ಭಕ್ತಂಗೆ ನಮೋ ನಮೋ ಎನುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ. ಲಿಂಗಕ್ಕೆ ಜಂಗಮ ವಿಶೇಷವೆಂದು, ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು, ಪ್ರಸಾದದಿಂದ ಸಮರ್ಪಣವ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಲಿಂಗ ಪ್ರಾಣ ಜಂಗಮವೆಂದು ಮಾಡಿ, ಮತ್ತಾ ಜಂಗಮ ಮನೆಗೆ ಬಂದಡೆ ಸಂದೇಹವ ಮಾಡಲೇಕೆ? ತನ್ನ ಪ್ರಾಣ ಲಿಂಗವೆಂದರಿದು, ಲಿಂಗದ ಪ್ರಾಣ ಜಂಗಮವೆಂದರಿದು, ಉಭಯಪ್ರಾಣ ತತ್ಪ್ರಾಣವಾದ ಮತ್ತೆ, ಭಕ್ತಿಗೆ ಅವಿಶ್ವಾಸವಾಗಲೇಕೆ ? ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು, ಮಣ್ಣ ಬೇಡಿದಡೆ ಬದ್ಧನೆಂದು, ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ, ಭಕ್ತಿಯ ವಾಸಿಗೆ ಹೋರಲೇಕೆ ? ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ. ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು, ಅದೆಂತೆಂದಡೆ: ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ ಮರಳಿ ತಾನು ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಂ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು, ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು, ಅದರ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಲಿಂಗವ ನಿರೀಕ್ಷಿಸಿ, ವಾಮಹಸ್ತದಲ್ಲಿ ನಿರಂಜನ ಪ್ರಣವವ ಲಿಖಿಸಿ ಪೂಜೆಯ ಮಾಡಿ, ಆಮೇಲೆ ಜಂಗಮದ ಪಾದವ ಹಿಡಿದು ಪೂಜೆಯ ಮಾಡಿ ಆ ಪೂಜೆಯನಿಳುಹಿ, ಅದೇ ಉದಕದ ಪಾತ್ರೆಯಲ್ಲಿ ಶಿಕ್ಷಾಪಾದೋದಕವ ಮಾಡಿ, ಪಾದದ್ರವವ ತೆಗೆದು ಐದಂಗುಲಿಗಳಲ್ಲಿ ಪಂಚಾಕ್ಷರವ ಲೇಖನವ ಮಾಡಿ, ಮಧ್ಯದಲ್ಲಿ ಮೂಲಪ್ರಣವವ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜೆಯ ಮಾಡಬೇಕು. ಶಿವಧರ್ಮೋತ್ತರೇ: ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಂ ಶಿವರಹಸ್ಯೇ : ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಎಂದುದಾಗಿ ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು. ಅದೆಂತೆಂದಡೆ: ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ, ಜಂಗಮವಾದ ಕಾರಣ, ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ ಲಿಂಗಪ್ರಸಾದವ ಪಾದಕ್ಕೆ ತೋರಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ ಚೈತನ್ಯಸ್ವರೂಪವಾದ ಕಾರಣ, ಆ ಜಂಗಮವೆ ಮುಖ್ಯಸ್ವರೂಪು. ಇಂತಪ್ಪ ಜಂಗಮಪಾದವೆ ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು. ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು ಶ್ರುತಿಗಳು ಪೊಗಳುತಿರ್ದ ಕಾರಣ, ಇಂತಪ್ಪ ಚರಮೂರ್ತಿಯ ಪಾದವನು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚಿಸಿದಂತಹುದೆ ಲಿಂಗಪೂಜೆ. ಆಮೇಲೆ ಆ ಮೂರ್ತಿಯ ಉಭಯಪಾದಗಳ ಹಿಮ್ಮಡ ಸೋಂಕುವಂತೆ ಹಸ್ತವ ಮಡಗಿ ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ, ಆ ಶಿಕ್ಷಾಪಾದೋದಕವನು ಬಲದಂಗುಷ* ಮೇಲೆ ಷಡಕ್ಷರಮಂತ್ರವ ಆರುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ*ದ ಮೇಲೆ ಪಂಚಾಕ್ಷರೀಮಂತ್ರವ ಐದುವೇಳೆ ಸ್ಮರಿಸುತ್ತ ನೀಡಿ, ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ, ಮಧ್ಯದಲ್ಲಿ `ಓಂ ಬಸವಾಯ ನಮಃ ಎಂದು ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ, ಅಲ್ಲಿ ಭಾವಲಿಂಗವೆಂದು ಭಾವಿಸಿ, ನೀಡಿದ ಉದಕವೆ ಬಟ್ಟಲಲಿ ನಿಂದು ಮಹತ್ಪಾದವೆಂದೆನಿಸುವುದು, ಈ ಮಹತ್ಪಾದದಲ್ಲಿ ದ್ರವವ ತೆಗೆದು ಮತ್ತೆ ಪೂಜಿಸಬೇಕಾದಡೆ, ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು. ಅದೇನು ಕಾರಣವೆಂದಡೆ; ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ, ಏಕಕುಸುಮವನೆ ಧರಿಸಿ ಪೂಜೆಯಮಾಡಿ ನಮಸ್ಕರಿಸುವುದೆ ಜಂಗಮಪೂಜೆ. ಆ ಪೂಜೆಯ ತೆಗೆದ ಶಿಷ್ಯನು `ಶರಣಾರ್ಥಿ ಸ್ವಾಮಿ ಎಂದು ಬಟ್ಟಲವನೆತ್ತಿಕೊಟ್ಟಲ್ಲಿ, ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ, ಮೂಲಮಂತ್ರದಿಂದ ಮೂರುವೇಳೆ ಪ್ರದಕ್ಷಿಣವ ಮಾಡಿ ನಮಸ್ಕರಿಸಿ, ಲಿಂಗದ ಮಸ್ತಕದ ಮೇಲೆ ಮೂರುವೇಳೆ ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ, ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ. ತಾವು ಲಿಂಗವನೆತ್ತಿ ಸಲಿಸಿದುದೆ ಲಿಂಗಪಾದೋದಕವೆನಿಸುವುದು; ಅದೇ ಶಿಕ್ಷಾಪಾದೋದಕ. ಬಟ್ಟಲನೆತ್ತಿ ಸಲ್ಲಿಸಿದಲ್ಲಿ ಜಂಗಮಪಾದೋದಕವೆನಿಸುವುದು; ಅದೇ ಜ್ಞಾನಪಾದೋದಕ. ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ `ಶರಣಾರ್ಥಿ ಎಂದು ಶಿಷ್ಯೋತ್ತಮನು ಎದ್ದು, ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ ಅಂಗುಷ*ಯುಗಲಂ ಪ್ರೋಕ್ತಂ ಪ್ರಣಾಮೋ[s]ಷ್ಟಾಂಗಮುಚ್ಯತೇ ಎಂದು ಭೃತ್ಯೋಪಚಾರಗಳಿಂದ ಪ್ರಣತಿಂಗೈದು ಅಪ್ಪಣೆಯ ಪಡೆದುಕೊಂಡು ಬಂದು, ಆ ಜಂಗಮದ ಮರ್ಯಾದೆಯಲ್ಲಿಯೆ ತಾನು ಸ್ವೀಕರಿಸುವುದು. ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು ಸಮರಸಭಾವದಿಂದ ಸೇವನೆ ಮಾಡಿದಲ್ಲಿ, ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ, ಗುರುವೆ ಶಿಷ್ಯ, ಶಿಷ್ಯನೆ ಗುರು. ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ: ಆ ಶಿಷ್ಯನು ಪಡೆದುಕೊಂಡ ಪಾದೋದಕವ ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ ಗುರುವೆ ಶಿಷ್ಯನಾಗಿಪ್ಪನು. ಆ ಗುರು ಸೇವನೆಯ ಮಾಡಿ ಉಳಿದ ಉದಕವ ಶಿಷ್ಯ ಭಕ್ತಿಭಾವದಿಂದ ಸೇವನೆ ಮಾಡಿದಲ್ಲಿಗೆ ತಚ್ಛಿಷ್ಯನಾದಹನು. ಈ ಮರ್ಮವ ತಿಳಿದು ಗುರುಶಿಷ್ಯರೀರ್ವರು ಸಲಿಸಿದ ಬಳಿಕ ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು. ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು; ಇದೇ ಆಚರಣೆ. ಇದನರಿಯದಾಚರಿಸುವವರಿಗೆ ನಿಮ್ಮ ನಿಲವರಿಯಬಾರದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಯ್ಯ ಶ್ರೀಗುರುದೇವನು ಪ್ರಮಥಗಣಾರಾಧ್ಯ ಭಕ್ತಮಹೇಶ್ವರರರೊಡಗೂಡಿ ಪಂಚಾಭಿಷೇಕ ಮೊದಲಾಗಿ ಪಾದೋದಕವೆ ಕಡೆಯಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರದಿಂದ ಇಷ್ಟಲಿಂಗದೇವಂಗೆ ಸಪ್ತವಿಧಾರ್ಚನೆಯಮಾಡಿ, ತಮ್ಮ ಕುಮಾರಮೂರ್ತಿಯೆಂದು ಮಹಾಸಂತೋಷದಿಂದ ತೊಡೆಯ ಮೇಲೆ ಮುಹೂರ್ತ ಮಾಡಿಸಿಕೊಂಡು, ಆಮೇಲೆ ಪ್ರಾಣಲಿಂಗಸ್ವರೂಪವಾದ ಉಭಯ ಹಸ್ತವನ್ನು ಸಪ್ತವಿಧಾರ್ಚನೆಯ ಮಾಡಿ, ದಶಾಂಗುಲಮಧ್ಯದಲ್ಲಿ ದ್ವಾದಮೂಲಪ್ರಣಮವ ಲಿಖಿಸಿ, ಕುಮಾರಠಾವ ಮಾಡಿ, ಆಮೇಲೆ ಭಾವಲಿಂಸ್ವರೂಪ ಗೋಳಕಸ್ಥಾನವಾದ ಮಸ್ತಕವನ್ನು ಸಪ್ತವಿಧಾರ್ಚನೆಯ ಮಾಡಿ, ದ್ವಾದಶ ಮಹಾಪ್ರಣವ ಲಿಖಿಸಿ, ಸರ್ವಾಂಗದಲ್ಲಿ ಕ್ರಿಯಾಪಾದೋದಕಸ್ವರೂಪವಾದ ಚಿದ್ಭಸಿತವ ಮಹಾಮಂತ್ರಸ್ಮರಣೆಯಿಂದ ಸ್ನಾನ-ಧೂಳನ-ಧಾರಣವ ಮಾಡಿ, ಲಲಾಟದಲ್ಲಿ ಅನಾದಿಪರಶಿವಲಿಖಿತವ ಲಿಖಿಸಿ, ಸರ್ವಾಚಾರಸಂಪನ್ನನಾಗೆಂದು ಆಶೀರ್ವಚನವ ನೀಡುವಂಥಾದೆ ವಿಭೂತಿಪಟ್ಟದೀಕ್ಷೆ ! ಇಂತುಟೆಂದು ಶ್ರೀಗುರುನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕಳ್ಳಬುದ್ಧಿಯೆಡೆಗೊಂಡು ಕರ್ಮಗೇಡಿಯಾಗಿ ಹೋಗಬೇಡವೆಂದು ಷೋಡಶೋಪಚಾರದಿಂದ ಶ್ರೀಗುರು ಭಕ್ತಿಯ ತೋರಿ, ಸತ್ಯ ಸದಾಚಾರ ಧರ್ಮ ನೆಲೆಗೊಳ್ಳಬೇಕೆಂದು, ಸಾಹಿತ್ಯ ಸಂಬಂಧವ ಕೊಟ್ಟು, ಶ್ರೀಗುರು ಉಪದೇಶವ ಹೇಳಿದ ಮಾರ್ಗದಿ ನಡೆಯಲೊಲ್ಲದೆ, ನಾಯಿಜಾತಿಗಳು ಕೀಳುಜಾತಿಗಳು ದೈವದ ಜಾತ್ರೆಗೆ ಹೋಗಿ, ಬೆನ್ನಸಿಡಿಯನೇರಿಸಿಕೊಂಡು, ಅಂಗ ಲಿಂಗಕ್ಕೆರವಾಗಿ, ತಾಳಿ ತಗಡಿ ಮಾಡಿ, ಮನೆದೈವವೆಂದು ಕೊರಳಿಗೆ ಕಟ್ಟಿಕೊಂಡು ಮರಳಿ ಉಣಲಿಕ್ಕಿಲ್ಲದಿರ್ದಡೆ, ಮಾರಿಕೊಂಡು ತಿಂಬ ಕೀಳುಜಾತಿಗೆ ಏಳೇಳುಜನ್ಮದಲ್ಲಿ ಕಾಗೆ ಬಾಯಲಿ ತಿಂಬ ನರಕ ತಪ್ಪದೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇಂತಪ್ಪ ಭಿನ್ನ ಗುರುವಿನ ಕೈಯಿಂದ ಪಡಕೊಂಡ ಲಿಂಗವ ಮರಳಿ ಜ್ಞಾನಗುರುವಿನ ಕೈಯಲ್ಲಿ ಕೊಟ್ಟು ಲಿಂಗವ ಪಡಿಯಲುಬೇಕು. ಇದಕ್ಕೆ ಸಂಶಯ ಮಾಡುವಿರಿ;ಸಂಶಯ ಮಾಡಲಾಗದು. ಅದು ಅಜ್ಞಾನದೊಳಗು. ಅದೆಂತೆಂದೊಡೆ, ಇದಕ್ಕೆ ದೃಷ್ಟಾಂತ : ಲೌಕಿಕದಲ್ಲಿ ಪಂಚಾಳಕುಲದಲ್ಲಿ ಒಬ್ಬ ಪತ್ತಾರನಿಗೆ ಒಂದು ಸನಗು ಮಾಡಿಕೊಡೆಂದು ಕೊಟ್ಟರೆ, ಅವರು ಮಾಡಿಕೊಟ್ಟ ಸನಗು ತಮಗೆ ಪರಿಣಾಮ ತಟ್ಟಿದಡೆ ಇಟ್ಟುಕೊಂಬುವರು. ಪರಿಣಾಮವಿಲ್ಲದಾದರೆ ಮರಳಿ ಮತ್ತೊಬ್ಬ ಜಾಣಪತ್ತಾರನ ಕೈಯಿಂದ ಮಾಡಿಸಿ ಇಟ್ಟುಕೊಂಬುವರು. ಮತ್ತಂ, ಒಬ್ಬ ಬಡಿಗನಿಂದ ಆವುದಾನೊಂದು ಗಳೆಯ ಹಾಸಿಕೊಂಡೊಯಿದು ಹೋಗಿ ಭೂಮಿಯಲ್ಲಿ ಹೂಡಿ ಹೊಡೆದರೆ ನೀಟವಾಗಿ ನಡೆದರೆ ಹೂಡುವರು. ನೀಟವಾಗಿ ನಡೆಯದಿದ್ದರೆ ಮರಳಿ ಮತ್ತೊಬ್ಬ ಬಡಗಿಯನ ಕರದೊಯ್ದು ನೀಟವಾಗಿ ಗಳೆಯ ಹಾಯಿಸಿ ಹೂಡುವುರಲ್ಲದೆ ಹಾಗೇ ಹೊಡೆಯರು. ಒಬ್ಬ ಸಿಂಪಿಗನಲ್ಲಿ ಆವುದಾನೊಂದು ಉಡಿಗೆತೊಡಿಗೆ ಹೊಲಿಸಿಕೊಂಡು ಉಟ್ಟುತೊಟ್ಟರೆ ತಮ್ಮಂಗಕ್ಕೆ ಹಿತವಪ್ಪಿದರೆ ಇಟ್ಟುಕೊಂಬುವರು. ಇಲ್ಲವಾದರೆ ಮರಳಿ ಮತ್ತೊಬ್ಬ ಜಾಣ ಸಿಂಪಿಗನಲ್ಲಿ ಹೊಲಿಸಿಕೊಂಡು ತೊಡುವರಲ್ಲದೆ, ಹಾಗೇ ತೊಡರು. ಇಂತೀ ತ್ರಿವಿಧವು ಮೊದಲೇ ಇದ್ದ ಹಾಗೆ ಆಚರಿಸಿದಡೆ, ಅವರಂಗಕ್ಕೆ ದಣುವಲ್ಲದೆ ಹಿತಕರವಾಗಿ ತೋರದೆಂಬ ಹಾಗೆ, ಅಂತಪ್ಪ ಭಿನ್ನಭಾವದ ಶೈವಗುರುವಿನ ಉಪದೇಶವ ವಿಸರ್ಜಿಸಿ, ಅಭಿನ್ನಭಾವವೆಂಬ ಸ್ವಾನುಭಾವಜ್ಞಾನಗುರುಮುಖದಿಂ ತಾರಕಮಂತ್ರೋಪದೇಶವ ಪಡೆದು, ಲಿಂಗಧಾರಣವಾದಡೆಯು ವೀರಶೈವರ ಅಚ್ಚು, ಪುರಾತನರ ಮಚ್ಚು, ಸರ್ವಗಣಂಗಳಿಗೆ ಸಮ್ಮತ. ಇಂತಪ್ಪ ವಿಚಾರವನರಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಕೊಟ್ಟು ಪೂಜಿಸು ಎಂದು ಹೇಳುವ ಗುರುವು, ಆ ಕಲ್ಲಲಿಂಗವ ಕೈಯಲ್ಲಿ ಪಿಡಿದು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜಿಸುವ ಶಿಷ್ಯನು, ಬಳಿಗುರುಡನ ಕೈ ಬಳಿಗುರುಡ ಪಿಡಿದು, ಕಾಣದೆ ಡೊಂಗುರವ ಬಿದ್ದಂತೆ ಗುರುಶಿಷ್ಯರೆಂಬುಭಯರು ಯಮಗೊಂಡದಲ್ಲಿ ಬೀಳುವರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->