ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತೀ ಅಷ್ಟಾವರಣವ ಸದ್ಗುರುಮುಖದಿಂ ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು, ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ- ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ. ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ ಚಿದ್ಘನಲಿಂಗ-ಚಿತ್ಪ್ರಾಣಲಿಂಗವ ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ ಸಾಕಾರ-ನಿರಾಕಾರವಾದ ಷೋಡಶಾವರಣವ ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ ಕಂಗಳಾಲಯದ ಜ್ಯೋತಿರ್ಲಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ ಆದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ ಸದ್ಗುರುಮುಖದಿಂ ಸಂಬಂದ್ಥಿಸಿಕೊಂಡು ಆ ಲಿಂಗಾಂಗದ ಮಧ್ಯದಲ್ಲಿ ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ, ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗಮಧ್ಯದಲ್ಲಿ ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ ಪರಿಪೂರ್ಣಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ, ಆ ಲಿಂಗಾಂಗದ ಮಧ್ಯದಲ್ಲಿ ಅರುವತ್ತುನಾಲ್ಕು ತೆರದಾವರಣವ ಸಂಬಂದ್ಥಿಸಿಕೊಂಡು ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು, ಆ ಕಮಲಮಧ್ಯದಲ್ಲಿ ನೆಲಸಿರ್ಪ ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ, ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ, ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ, ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ, ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ, ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ, ಪರತತ್ವ ಜ್ಯೋತಿರ್ಮಯಲಿಂಗದೊಳಗೆ ಉರಿಯುಂಡ ಕರ್ಪುರದಂತೆ ಸಮರಸವಾದರು ನೋಡ. ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು, ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ. ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಂಗಕ್ಕೆ ಭೋಗವ ಕೊಟ್ಟವರ ನೋಡಿದೆನಲ್ಲದೆ, ಲಿಂಗಕ್ಕೆ ಕೊಟ್ಟವರ ನೋಡಲಿಲ್ಲ, ಲಿಂಗಕ್ಕೆ ಷೋಡಶೋಪಚಾರಂಗಳ ಕೊಟ್ಟವರ ನೋಡಿದೆನಲ್ಲದೆ,ಮನವ ಕೊಟ್ಟವರ ನೋಡಲಿಲ್ಲ, ಮನವ ಕೊಟ್ಟವರ ನೋಡಿದೆನಲ್ಲದೆ, ಮನ ಲಿಂಗವಾದವರ ನೋಡಲಿಲ್ಲ, ಕಪಿಲಸಿದ್ಧಮಲ್ಲಯ್ಯಾ
--------------
ಸಿದ್ಧರಾಮೇಶ್ವರ
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ, ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ, ಚತುರ್ವಿಧಫಲಪದಪುರುಷಾರ್ಥವ ಪಡೆದು, ಆ ಪರಿಭವಕ್ಕೆ ಬರಲೊಲ್ಲದೆ, ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಅದೆಂತೆಂದೆಡೆ; ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ, ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ ಅದೆಂತೆಂದೆಡೆ; ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ ಮತ್ತಂ, ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ, ಆ ಲಿಂಗವೆ ಅಂಗ, ಅಂಗವೆ ಲಿಂಗ, ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.
--------------
ಬಸವಣ್ಣ
ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ : ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡುವದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿಯೇ ಧ್ಯಾನಿಸುವದು ಪ್ರಾಣಲಿಂಗದ ಪೂಜೆ. ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ. ಅಜ್ಞಾನವೆಂಬ ನಿರ್ಮಾಲ್ಯವಂ ಕಳದು ಸೋಹಂ ಭಾವದಲ್ಲಿ ಪೂಜಿಸುತಿರ್ಪುದೆ ಪ್ರಾಣಲಿಂಗಪೂಜೆ ನೋಡಾ. ಇದಕ್ಕೆ ಈಶ್ವರೋýವಾಚ : ``ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ | ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ || ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ | ತೈಜೇದ್ಯಜ್ಞಾನನಿರ್ಮಾಲ್ಯಂ ಸೋýಹಂಭಾವೇನ ಪೂಜಯೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
[ಎ]ನ್ನಿಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವೆನು. ಅವಾವುವಯ್ಯಾ ಎಂದಡೆ; ಜಲಗಂಧಾಕ್ಷತಂ ಚೈವ ಪುಷ್ಪಂ ಚ ಧೂಪದೀಪಯೋ ನೈವೇದ್ಯಂ ಚೈವ ತಾಂಬೂಲಂ ಯಥೇಚ್ಛಾಷ್ಟವಿಧಾರ್ಚನಂ ಇನ್ನು ಷೋಡಶೋಪಚಾರಗಳು; ಸುಖತಲ್ಪಂ ಸುವಸ್ತ್ರಂ ಚ ಆಭರಣಾನುಲೇಪನಂ ಛತ್ರಚಾಮರವ್ಯಜನಂ ದರ್ಪಣಂ ನಾದವಾದ್ಯಯೋ ನೃತ್ಯಂ ಗೀತಂ ತಥಾ ಸ್ತೋತ್ರಂ ಪುಷ್ಪಾಂಜಲೀ ಪ್ರಣಾಮಕಂ ಪ್ರದಕ್ಷಿಣಂ ಚ ಮೇ ಯಕ್ತಂ ಷೋಡಶಂ ಚೋಪಚಾರಕಂ ಈ ಕ್ರಮವಿಡಿದು ಇಷ್ಟಲಿಂಗಾರ್ಚನೆಯ ಮಾಡಿ ನಿಮ್ಮಲ್ಲಿ ಕೂಡುವೆನು, ಕೂಡಲಸಂಗಮದೇವಾ.
--------------
ಬಸವಣ್ಣ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಹರ ಶಿವಶಿವ ಜಯಜಯ ನಮೋ ನಮೋ ತ್ರಾಹಿ ತ್ರಾಹಿ ಕರುಣಾಕರ ಅಭಯಕರ ಸುಧಾಕರ ಚಿದಾಕರ ಮತ್ಪ್ರಾಣನಾಥ ಸರ್ವಾಧಾರ ಸರ್ವಚೈತನ್ಯಮೂರ್ತಿ ಶ್ರೀಗುರುಲಿಂಗಜಂಗಮವೆ, ನಿಮ್ಮ ಘನಪಾದಪೂಜೆಯ ಮಾಡುವುದಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿಯೆಂದು ಕೃಪಾನಂದವ ಬೆಸಗೊಂಡು, ಸಮ್ಮುಖದ ಗರ್ದುಗೆಯಲ್ಲಿ ಮೂರ್ತವಮಾಡಿ, ನಿಜಾನಂದದಿಂದ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮಲಿಂಗಮೂರ್ತಿಯ ಷಟ್ಕøತಿ ನವಕೃತಿಗಳಲ್ಲಿ ಅನಾದಿಜ್ಯೋತಿರ್ಮಯ ಮಹಾಪ್ರಣಮಲಿಂಗಂಗಳ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ಧ್ಯಾನವಿಟ್ಟು, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರಗಳ ಗಣಸಮೂಹವನೊಡಗೂಡಿ, ಘನಮನೋಲ್ಲಾಸದಿಂದ ಸಮಾಪ್ತವ ಮಾಡಿ ನಮಸ್ಕರಿಸಿ, ಇದೆ ನಿಃಕಳಂಕ ಸದ್ರೂಪ ಘನಗುರುಮೂರ್ತಿ ಇಷ್ಟಲಿಂಗಾರ್ಚನ ಎಂದು ಭಾವಭರಿತವಾಗಿ, ಎಲೆಗಳೆದ ವೃಕ್ಷದಂತೆ ಕರಣಂಗಳುಲುವಿಲ್ಲದೆ ನಿಂದ ನಿಜೋತ್ತಮರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ :ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷೆ*ಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದು ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ. ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು, ಅದ್ವೈತದಿಂದ ಉದರವ ಹೊರೆದಡೆ, ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ.
--------------
ಸಕಳೇಶ ಮಾದರಸ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಹಂಗು ಹರಿಯಿಲ್ಲದೆ ಮಾಡುವೆನು. ನಾ ಮಾಡುವ ಕ್ರೀಗಳೆಲ್ಲವು ನೀವೆಯಾದ ಕಾರಣ ಗುಹೇಶ್ವರಾ ನಿಮ್ಮಲ್ಲಿ ತದ್ಗತವಾಗಿದ್ದೆನು.
--------------
ಅಲ್ಲಮಪ್ರಭುದೇವರು
ಓದಿದರೇನುಳ ಕೇಳಿದರೆನುಳ ಆಸೆ ಅಳಿಯದು ರೋಷ ಬಿಡದು, ಮಜ್ಜನಕ್ಕೆ ನೀಡಿ ಫಲವೇನು ? (ವಚನಾರಂಭದ ನುಡಿಯ ಕಲಿತವರೆಲ್ಲ ಅನುಭಾವಿಗಳಪ್ಪರೆ ? ಅಷ್ಟಾಷಷ್ಟಿ ತೀರ್ಥಂಗ? ಮೆಟ್ಟಿದವರೆಲ್ಲ ತೀರ್ಥವಾಸಿಗಳಪ್ಪರೆ ? ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿದವರೆಲ್ಲ ಲಿಂಗಾರ್ಚಕರಪ್ಪರೆಳ ಅಲ್ಲ.) ಲಾಂಛನವ ಹೊತ್ತು ಕಾಂಚನಕ್ಕೆ ಕೈಯ ನೀಡುವ ಜಗಭಂಡರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ ಮಿಟ್ಟೆಯಭಂಡರ ಕಂಡು, ನಾಚಿತ್ತೆನ್ನ ಮನ. ಉಪಚಾರವೇಕೊ ಶಿವಲಿಂಗದ ಕೂಡೆ ಶ್ವಪಚರಿಗಲ್ಲದೆ ? ಸಕಳೇಶ್ವರಯ್ಯಾ, ಇಂತಪ್ಪ ಮಾದಿಗ ವಿದ್ಯಾಭ್ಯಾಸದವರನೊಲಿಯಬಲ್ಲನೆ ?
--------------
ಸಕಳೇಶ ಮಾದರಸ
ಕನ್ಯಾಸ್ತ್ರೀಯಳ ಕುಚವ ಪಿಡಿದು, ಚುಂಬನವ ಮಾಡಿ ಭೋಗಿಸಬಲ್ಲರೆ ಪರಮಾನಂದಜಂಗಮವೆಂಬೆ. ಇಲ್ಲಾದರೆ ವೇಷಧಾರಿ ಜಾತಿಕಾರ ಸೂಳೆಮಕ್ಕಳೆಂಬೆ. ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಕೆಡಿಸಿ ಧೂಪವ ಸುಟ್ಟು, ಪತ್ರಿ ಪುಷ್ಪವ ತಿಂದು, ಜ್ಯೋತಿಯ ನುಂಗಿ, ಸತ್ತ ಕರವ ತಿಂದು, ನೀರು ಕುಡಿಯಬಲ್ಲರೆ ಪರಮಚಿದ್ಘನಲಿಂಗವೆಂಬೆ. ಇಲ್ಲಾದರೆ ತಕ್ಕಡಿಯ ಕಾಣಿಕಲ್ಲು ಕಂಡು ತೂಗುವ ಸೇರುಗಲ್ಲೆಂಬೆ. ಮಾದಿಗರ ಮನೆಯ ಪದ್ಮಜಾತಿನಿಯೆಂಬ ಕನ್ಯೆಕುಮಾರಿಯ ಕಳಸ ಕುಚವ ಪಿಡಿದು ಮುದ್ದುಕೊಟ್ಟು ಕಂಡವ ತಿಂದು ಹೆಂಡವ ಕುಡಿದು ಭೋಗಿಸಿ ಸಂಗಸುಖದೊಳಗಿರಬಲ್ಲರೆ ಪರಮಸದ್ರೂಪವಾದಾಚಾರ್ಯನೆಂಬೆ. ಇಲ್ಲವಾದರೆ ಮೂಕಾರ್ತಿಮೂಳೆಯ ಮಕ್ಕಳೆಂಬೆ. ಹದ್ದು ಗೂಗಿ ಕಪ್ಪಿ ಇರಿವಿ ಮೊದಲಾದ ಈ ನಾಲ್ಕು ತಿಂದು ಈಚಲಸೆರೆಯ ಕುಡಿದು, ಮದವೇರಿದ ಮದಗಜದ ಹಾಗಿರಬಲ್ಲರೆ, ಪಾದೋದಕ ಪ್ರಸಾದಿಗಳೆಂಬೆ. ಇಲ್ಲಾದರೆ ಕುಟಿಲ ಕುಹಕ ವೇಷಧಾರಿ ಡೊಂಬತಿಯ ಮಕ್ಕಳೆಂಬೆ. ಇಂತೀ ಪಂಚಬ್ರಹ್ಮತತ್ವದ ಭೇದವ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರು. ಮತ್ತಂ, ಅಂತಪ್ಪ ಪ್ರಮಥಗಣಂಗಳ ಪ್ರಸಾದದಿಂದುದ್ಭವಿಸಿದ ಚಿದಾತ್ಮರುಗಳಾದ ಜ್ಞಾನಕಲಾತ್ಮರು ಬಲ್ಲರಲ್ಲದೆ, ಮಿಕ್ಕಿನ ಜಡಮತಿ ವೇಷಧಾರಿಗಳಾದ ಕುರಿಮನುಜರೆತ್ತ ಬಲ್ಲರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->