ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ: ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ, ಅಧಿದೈವ ಬ್ರಹ್ಮನು. ಸ್ವಾಧಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು, ಅದು ಕಪ್ಪುವರ್ಣ ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ, ವಿಷ್ಣು ಅಧಿದೈವ. ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು, ಅದು ಕೆಂಪುವರ್ಣ ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ, ರುದ್ರನಧಿದೈವ. ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು, ಅದು ನೀಲವರ್ಣ, ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅಧಿದೈವ. ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು, ಅದು ಸ್ಪಟಿಕವರ್ಣ ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಷೋಡಶಾಕ್ಷರ, ಅದಕ್ಕೆ ಸದಾಶಿವ ಅಧಿದೈವ. ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು. ಅದು ಮಾಣಿಕ್ಯವರ್ಣ, ಅದಕ್ಕೆ ಅಕ್ಷರ `ಹಕ್ಷ ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅಧಿದೈವ. ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು. ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ ಬೆಳಗುತ್ತಿಹುದು. ಅಲ್ಲಿಗೆ ಅಧಿದೈವ ಶ್ರೀಗುರು ಮೂರ್ತಿಯೇ ಕರ್ತನು. ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.
--------------
ಚನ್ನಬಸವಣ್ಣ
ಚೌದಳ ಷಡುದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ, ಒಳಹೊರಗಣ ಸ್ಥಳಕುಳವನರಿದು, ಬೆಳಗುವ ಬೆಳಗ, ಹೊಳೆವ ಪ್ರಭೆ ಪ್ರಜ್ವಲಿಸಿ ಕಳವಳವಳಿದು, ಕಾಯದ ಕದಳಿಯ ಗೆಲಿದು, ಕರಗಿ ಒಂದಾದ ಶರಣನೆ ಹರನು, ಒಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಅಯ್ಯ ಉಭಯ ಭಿನ್ನವರ್ತನಾಗುಣಂಗಳ ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ ಜಳ್ಳುಮಾಡಿ ತೂರಿ, ತನ್ನನಾದಿಸನ್ಮಾರ್ಗವ ತಿಳಿದು, ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು, ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ ಸ್ವಾನುಭಾವದೃಕ್ಕಿನಿಂ ಕಂಡು, ಆ ಮಹದರಿವೆ ಗುರುವಾಗಿ, ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ, ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ, ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಸಂಗನ ಬಸವಣ್ಣನ ಅಷ್ಟದಳ, ಚೌದಳ, ಷಡ್ದಳ, ದಶದಳ, ದ್ವಾದಶದಳ, ಷೋಡಶದಳ, ದ್ವಿದಳ, ಶತದಳ, ಸಹಸ್ರದಳ, ಲಕ್ಷದಳ, ಕೋಟಿದಳಂಗಳಿಂದ ಸರ್ವಾಂಗದಿ ಶೋಭಿಸುವ ಅನಂತದಂಗಳದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು] ನೋಡ ! ಚೆನ್ನಬಸವಣ್ಣ
--------------
ಅಲ್ಲಮಪ್ರಭುದೇವರು
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು_ವ, ಶ, ಷ, ಸ, ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ದಾಕ್ಷಾಯಣಿ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು_ಬ, ಭ, ಮ, ಯ, ರ, ಲ, ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅಧಿದೇವತೆ ಬಹ್ಮನು. ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_ ಡ, ಢ, ಣ, ತ, ಥ, ದ, ಧ, ನ, ಪ, ಫ, ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅಧಿದೇವತೆ ವಿಷ್ಣು. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು_ ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,Àಠ, ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರನು. ಕÀಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು_ ಅ, ಆ, ಇ, ಈ, ಉ, ಊ, ಋ, Iೂ, , , ಏ, ಐ, ಓ, ಔ, ಅಂ, ಅಃ, ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು. ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು_ ಹಂ, ಕ್ಷಂ, ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು. ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ, ಅಲ್ಲಿ ಅಮೃತವಿಹುದು ಅಲ್ಲಿ `ಓಂ' ಕಾರಸ್ವರೂಪವಾಗಿ ಗುಹೇಶ್ವರಲಿಂಗವು ಸದಾಸನ್ನಹಿತನು.
--------------
ಅಲ್ಲಮಪ್ರಭುದೇವರು
ಅಯ್ಯಾ, ಷೋಡಶದಳ ಕಮಲದ ಮಧ್ಯದಲ್ಲಿ ನೆಲಸಿರ್ಪ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಪರಶಿವಲಿಂಗದೇವಂಗೆ ಕ್ರಿಯಾಶಕ್ತಿಸ್ವರೂಪವಾದ ಚಿತ್‍ಪೃಥ್ವಿಹೃದಯಮಧ್ಯದಲ್ಲಿ ನೆಲಸಿರ್ಪ ಪರಿಣಾಮಜಲವ ಚಿದ್ಭಾಂಡದೊಳಗೆ ಪರಿಣಾಮಪಾವಡದಿಂದ ಶೋಧಿಸಿ, ಗುರು ಚರ ಪರ ಸ್ವರೂಪವಾದ ಜಂಗಮಮೂರ್ತಿಗಳ ಮೊಳಕಾಲ ಪರಿಯಂತರ ಪ್ರಕ್ಷಾಲನವ ಮಾಡಿ, ಉಳಿದುದಕದಿಂದ ಉಭಯಪಾದಕಮಲವನು ಅಡಿಪಾದವ ಮೂರು ವೇಳೆ, ಅಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದಂತಹ ಗುರುಪಾದೋದಕವ ಭಾಂಡಭಾಜನದಲ್ಲಿ ತುಂಬಿ, ಕರಕಮಲದಲ್ಲಿ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಇಷ್ಟಮಹಾಲಿಂಗದೇವನ ಮೂರ್ತವ ಮಾಡಿಸಿಕೊಂಡು ಪಂಚರಸಯುಕ್ತವಾದ ಆವುದಾದಡೆಯೂ ಒಂದು ಕಾಷ*ದಿಂದ ಹಸ್ತಪಾದಮುಖಂಗಳಲ್ಲಿ ಸ್ಥಾಪಿಸಿರುವ ಐವತ್ತೆರಡು ನಖದಂತ ಪಂಕ್ತಿಗಳ ತೀಡಿ, ನೇತ್ರ ಮೊದಲಾದ ಲಿಂಗದವಯವಂಗ? ಪ್ರಕ್ಷಾಲಿಸಿ, ಕಟಿಸ್ನಾನ ಕಂಸ್ನಾನ ಮಂಡೆಸ್ನಾನ ಮೊದಲಾದ ತ್ರಿವಿಧಲಿಂಗಸ್ನಾನವ ಮಾಡಿ, ಪಾವುಗೊರಡ ಮೆಟ್ಟಿ, ಪಾವಡವಾಗಲಿ, ಪರ್ಣಾಸನವಾಗಲಿ ದರ್ಭೆ ಬೆತ್ತ ಮೊದಲಾದಸನದಲ್ಲಿ ಮೂರ್ತವ ಮಾಡಿ ಗುರುಪಾದೋದಕದೊಳಗೆ ಭಸ್ಮ ಗಂಧ ಪುಷ್ಪ ಮಂತ್ರವ ಸ್ಥಾಪಿಸಿ, ಪಂಚಾಮೃತವೆಂದು ಭಾವಿಸಿ ಅನಾದಿ ನಿಷ್ಕಲಂಕ ಜ್ಯೋತಿರ್ಮಯ ಇಷ್ಟಮಹಾಲಿಂಗದೇವಂಗೆ ಲೀಲಾಮಜ್ಜನವ ಮಾಡಿಸಿ, ಕ್ರಿಯಾಚಾರದಲ್ಲಿ ದಹಿಸಿದ ವಿಭೂತಿಯಲ್ಲಿ ಗುರುಪಾದೋದಕ ಲಿಂಗಪಾದೋದಕ ಮಂತ್ರಸಂಬಂಧವಾದ ಚಿದ್ಭಸಿತವ ಸ್ನಾನ ಧೂಲನ ಧಾರಣಂಗಳ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳೊಳಗೆ ಲಿಂಗಾಣತಿಯಿಂದ ಬಂದುದ ಸಮರ್ಪಿಸಿ, ಕ್ರಿಯಾಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ ಜ್ಞಾನಗುರುಲಿಂಗಜಂಗಮದ ತೀರ್ಥಪ್ರಸಾದವಾದಡೆಯೂ ಸರಿಯೆ, ಆ ಕ್ರಿಯಾಜ್ಞಾನಗುರುಲಿಂಗಜಂಗಮದ ಮಹಾತೀರ್ಥವ ಆ ಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಆಮೇಲೆ ತಳಿಗೆಬಟ್ಟಲಲ್ಲಿ ಕಡುಬು ಕಜ್ಜಾಯ ಹೋಳಿಗೆ ಹುಗ್ಗಿ ಗುಗ್ಗರಿ ಬೆಳಸೆ ಅಂಬಲಿ ತುಂಬೆಸೊಪ್ಪು ಮೊದಲಾದ ಶಾಕಪಾಕಾದಿಗಳ, ಕ್ಷೀರ ದಧಿ ನವನೀತ ತಕ್ರ ಘೃತ ಕಬ್ಬಿನ ಹಾಲು ಎಳೆ ಅಗ್ಗಿಣಿ ಪನ್ನೀರು ಮೊದಲಾದ ಸಮಸ್ತದ್ರವ್ಯಂಗಳ ಭಾಜನದಲ್ಲಿ ಸ್ಥಾಪಿಸಿ ಹಸ್ತಸ್ಪರ್ಶನವ ಮಾಡಿ, ಆ ಕ್ರಿಯಾಜ್ಞಾನ ಗುರುಲಿಂಗಜಂಗಮ ಪ್ರಸಾದವಾದಡೆಯೂ ಸರಿಯೆ, ಮತ್ತಾ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ತಾನಾ ಪರಿಣಾಮ ಪಾದೋದಕ ಪ್ರಸಾದದಲ್ಲಿ ಸಂತೃಪ್ತನಾದಾತನೆ ನಿಮ್ಮ ಅಚ್ಚಶರಣನಲ್ಲದೆ ಉಳಿದ ನಾಹಂ ಭ್ರಮೆಯಿಂದ ತೊಳಲುವ ಬಡಜೀವಿಗಳೆತ್ತ ಬಲ್ಲರಯ್ಯಾ ನಿಮ್ಮ ನಿಜಾಚರಣೆಯ ವಿಚಾರದ ಪರಿಣಾಮವ, ಕೂಡಲಚೆನ್ನಸಂಗದೇವಾ ?
--------------
ಚನ್ನಬಸವಣ್ಣ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ ಚತುರ್ದಳ ಚತುಕ್ಷರ, ಷಡುದಳ ಷಡಕ್ಷರ, ದಶದಳ ದಶಾಕ್ಷರ, ದ್ವಾದಳದಳ ದ್ವಾದಶಾಕ್ಷರ, ಷೋಡಶದಳ ಷೋಡಶಾಕ್ಷರ, ದ್ವಿದಳ ದ್ವ ್ಯಯಾಕ್ಷರವೆಂಬ, ಚಕ್ರ ದಳ, ಅಕ್ಷರಂಗಳೆಲ್ಲವು ಬಯಲಾದವು ನೋಡಾ. ಪೀತ ಹರಿತ ಮಾಂಜಿಷ* ಶ್ವೇತ ಕಪೋತವರ್ಣಮುಖ್ಯವಾದ ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಾಧಿದೇವತೆಗಳು ಬಯಲಾದರು ನೋಡಾ. ಅದೆಂತಡೆಂದಡೆ: ಬ್ರಹ್ಮ ವಿಷ್ಣುವಿನಲ್ಲಡಗಿ, ವಿಷ್ಣು ರುದ್ರನಲ್ಲಡಗಿ, ರುದ್ರ ಈಶ್ವರನಲ್ಲಡಗಿ, ಈಶ್ವರ ಸದಾಶಿವನಲ್ಲಡಗಿ, ಸದಾಶಿವ ಚಿತ್ತಿನಲ್ಲಡಗಿ, ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ, ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->