ಅಥವಾ

ಒಟ್ಟು 9 ಕಡೆಗಳಲ್ಲಿ , 4 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ನಿಯೆ ಅಂಗವಾದ ಪ್ರಸಾದಿಯಲ್ಲಿ ಪ್ರಾಣಲಿಂಗ ಶರಣ ಐಕ್ಯ ಭಕ್ತ ಮಾಹೇಶ್ವರನಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಪ್ರಸಾದಿಯಲ್ಲಿ ಶಿವಲಿಂಗ ಸಂಬಂಧವಾಗಿ ಆ ಶಿವಲಿಂಗದಲ್ಲಿಯೆ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಶಿವಲಿಂಗವೆ ಸರ್ವಾಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಪ್ರಸಾದಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತ ಮಾಹೇಶ್ವರ ಪ್ರಸಾದಿಯೆಂದು ಈ ಮೂರು ಕ್ರಿಯಾಂಗವಯ್ಯ. ಪ್ರಾಣಲಿಂಗಿ ಶರಣ ಐಕ್ಯವೆಂದು ಈ ಮೂರು ಜ್ಞಾನಾಂಗವಯ್ಯ. ಆಚಾರಲಿಂಗ ಗುರುಲಿಂಗ ಶಿವಲಿಂಗವೆಂದು ಈ ಮೂರು ಕ್ರಿಯಾಲಿಂಗವಯ್ಯ. ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಈ ಮೂರು ಜ್ಞಾನಲಿಂಗವಯ್ಯ. ಇವಕ್ಕೆ ಅಂಗ ಲಿಂಗ ಸಂಗ ಸಂಯೋಗನಿರ್ದೇಶವ ಹೇಳಿಹೆನು. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಆ ಆರು ಕ್ರಿಯಾಂಗವು. ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದು ಲಿಂಗವಾರು ತೆರನಾಗಿಪ್ಪುದಯ್ಯ. ಇನ್ನು ಸಂಗವಾರು ತೆರನದೆಂತೆಂದಡೆ: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಭಾವವೆಂದು ಸಂಗವಾರು ತೆರನಾಗಿಪ್ಪುದಯ್ಯ. ಘ್ರಾಣದಲ್ಲಿ ಆಚಾರಲಿಂಗ, ಜಿಹ್ವೆಯಲ್ಲಿ ಗುರುಲಿಂಗ; ನೇತ್ರದಲ್ಲಿ ಶಿವಲಿಂಗ; ತ್ವಕ್ಕಿನಲ್ಲಿ ಜಂಗಮಲಿಂಗ; ಶ್ರೋತ್ರದಲ್ಲಿ ಪ್ರಸಾದಲಿಂಗ; ಭಾವದಲ್ಲಿ ಮಹಾಲಿಂಗ ಸಂಬಂಧ. ಇಂತೀ ಷಂಡಗವು ಷಡ್ವಿಧಲಿಂಗದಲ್ಲಿ ಸಮರಸ ಸಂಯೋಗವಾದಲ್ಲಿ ಅಂಗ ಲಿಂಗ ಸಂಬಂಧವೆನಿಸಿಕೊಂಡಿತಯ್ಯ. ಇನ್ನು ಪ್ರಾಣಾಂಗವಾರು ತೆರನದೆಂತೆಂದಡೆ: ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಶುದ್ಧಾತ್ಮ ಆ ಆರು ಪ್ರಾಣಾಂಗಗಳು. ಇಂತೀ ಪ್ರಾಣಾಂಗಂಗಳಲ್ಲಿಯೂ ಹಿಂದೆ ಹೇಳಿದ ಷಡ್ವಿಧಲಿಂಗವು ಮಾರ್ಗ ಕ್ರೀಯನೆಯ್ದಿ ಮೀರಿದ ಕ್ರಿಯಾಸ್ಥಲದಲ್ಲಿ ಬಂದು ನಿಂದು ಜ್ಞಾನಗಮ್ಯವಾಗಿ ಸಂಗದನುವನರಿದು ಪ್ರಾಣಾಂಗವಾರೂ ಲಿಂಗಸಂಬಂಧವಾದವಯ್ಯ. ಹಿಂದೆ ಹೇಳಿದ ಕ್ರಿಯಾಂಗವಾರು ಮುಂದೆ ಹೇಳುವ ಸುಚಿತ್ತಾದಿ ಭಾವಾಂತ್ಯವಹ ಜ್ಞಾನಾಂಗವಾರು. ಈ ಉಭಯಾಂಗವು ಲಿಂಗಸಂಗದಿಂದ ಲಿಂಗಕ್ಕೆ ಅಂಗಕ್ಕೆ ಆಶ್ರಯಸ್ಥಾನನಾಗಿ ನಿಂದ ನಿರುಪಮ ಮಹಿಮ ಶರಣ ತಾನೆ ಅಂಗಲಿಂಗ ಪ್ರಾಣಲಿಂಗ ಸಂಬಂಧಿಯೆನಿಸಿಕೊಂಬನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾಶವೇ ಅಂಗವಾದ ಶರಣನಲ್ಲಿಯೆ ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಶರಣಂಗೆ ಪ್ರಸಾದಲಿಂಗವೆ ಸ್ವಾಯತವಾಗಿ ಆ ಪ್ರಸಾದಿಲಿಂಗದಲ್ಲಿಯೆ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಪ್ರಸಾದಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಶರಣನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು ಸರ್ವಾಂಗವೆಲ್ಲ ಲಿಂಗಮಯವಾದುದು ನೋಡಾ ! ಅದು ಎಂತೆಂದರೆ : ಇಷ್ಟಲಿಂಗದಿಂದ ಪ್ರಾಣಲಿಂಗ, ಪ್ರಾಣಲಿಂಗದಿಂದ ಭಾವಲಿಂಗತ್ರಯಗಳಾದವು. ಒಂದೊಂದು ಲಿಂಗದಲ್ಲಿ ಎರಡು ಲಿಂಗ ಹುಟ್ಟಿದವು : [ಇಷ್ಟಲಿಂಗದಿಂದ ಆಚಾರಲಿಂಗ ಗುರುಲಿಂಗ ಹುಟ್ಟಿದವು. ಪ್ರಾಣಲಿಂಗದಿಂದ ಶಿವಲಿಂಗ ಜಂಗಮಲಿಂಗ ಹುಟ್ಟಿದವು. ಭಾವಲಿಂಗದಿಂದ ಪ್ರಸಾದಲಿಂಗ ಮಹಾಲಿಂಗವೆಂಬೆರಡು ಲಿಂಗ ಹುಟ್ಟಿದವು.] ಇಂತೀ ಷಡ್ವಿಧಲಿಂಗದಲ್ಲಿ ಷಡ್ವಿಧಸಂಬಂಧ : ಘ್ರಾಣದಲ್ಲಿ ಆಚಾರಲಿಂಗ ಸಂಬಂಧ. ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ. ನೇತ್ರದಲ್ಲಿ ಶಿವಲಿಂಗ ಸಂಬಂಧ. ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ. ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ. ಹೃದಯದಲ್ಲಿ ಮಹಾಲಿಂಗ ಸಂಬಂಧ. ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರುಶನ, ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಪರಿಣಾಮ. ಒಂದೊಂದು ಲಿಂಗದಲ್ಲಿ ಆರುಲಿಂಗವಾದವು : ಆಚಾರಲಿಂಗದಲ್ಲಿ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಗುರುಲಿಂಗದಲ್ಲಿ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಶಿವಲಿಂಗWದಲ್ಲಿಘೆ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಪ್ರಸಾದಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಇಂತಿವೆಲ್ಲ ಕೂಡಲ್ಕೆ ಮೂವತ್ತಾರು ಲಿಂಗ. ಆ ಮೂವತ್ತಾರು ಲಿಂಗದಲ್ಲಿ ಒಂದೊಂದು ಲಿಂಗದಲ್ಲಿ ಆರುಲಿಂಗ ಕೂಡಲ್ಕೆ ಇನ್ನೂರ ಹದಿನಾರು ಲಿಂಗವಾದವು. ಅಂಗಪ್ರಭೆಯಲ್ಲಿ ಲಿಂಗಪ್ರಭೆಯಾಗಿ, ಲಿಂಗಪ್ರಭೆಯಲ್ಲಿ ಅಂಗಪ್ರಭೆಯಾಗಿ, ಅಂಗಲಿಂಗಸಂಬಂಧಿಯಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕರ್ಮಸಾದಾಖ್ಯಸ್ವರೂಪವಾದ ಆಚಾರಲಿಂಗದಲ್ಲಿ ನಕಾರಮಂತ್ರಸ್ವರೂಪವಾದ ಘ್ರಾಣೇಂದ್ರಿಯ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಕರ್ತೃಸಾದಾಖ್ಯಸ್ವರೂಪವಾದ ಗುರುಲಿಂಗದಲ್ಲಿ ಮಕಾರಮಂತ್ರಸ್ವರೂಪವಾದ ಜಿಹ್ವೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮೂರ್ತಿಸಾದಾಖ್ಯಸ್ವರೂಪವಾದ ಶಿವಲಿಂಗದಲ್ಲಿ ಶಿಕಾರಮಂತ್ರಸ್ವರೂಪವಾದ ನೇತ್ರೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಅಮೂರ್ತಿಸಾದಾಖ್ಯಸ್ವರೂಪವಾದ ಜಂಗಮಲಿಂಗದಲ್ಲಿ ವಕಾರಮಂತ್ರಸ್ವರೂಪವಾದ ತ್ವಗಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಶಿವಸಾದಾಖ್ಯಸ್ವರೂಪವಾದ ಪ್ರಸಾದಲಿಂಗದಲ್ಲಿ ಯಕಾರಮಂತ್ರಸ್ವರೂಪವಾದ ಶ್ರವಣೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮಹಾಸಾದಾಖ್ಯಸ್ವರೂಪವಾದ ಮಹಾಲಿಂಗದಲ್ಲಿ ಓಂಕಾರಮಂತ್ರಸ್ವರೂಪವಾದ ಹೃದಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಇಂತೀ ಷಡ್ವಿಧಲಿಂಗದಲ್ಲಿ ಷಡಿಂದ್ರಿಯಂಗಳ ಸಂಯೋಗಮಾಡಿ, ಆ ಷಡ್ವಿಧ ಲಿಂಗಂಗಳೊಂದಾದ ಮಹಾಘನವೆ ತಾನಾಗಿ ಸುಳಿಯಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಾಯುವೇ ಅಂಗವಾದ ಪ್ರಾಣಲಿಂಗಿಯಲ್ಲಿಯೆ ಶರಣ ಐಕ್ಯ ಭಕ್ತ ಮಹೇಶ್ವರ ಪ್ರಸಾದಿಯಪ್ಪ ಅಂಗಪಂಚಕವು ಗರ್ಭೀಕೃತವಾಗಿ ಆ ಪ್ರಾಣಲಿಂಗಿಗೆ ಜಂಗಮಲಿಂಗ ಸ್ವಾಯತವಾಗಿ ಆ ಜಂಗಮಲಿಂಗದಲ್ಲಿಯೇ ಪ್ರಸಾದಲಿಂಗ ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ ಜಂಗಮಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಪ್ರಾಣಲಿಂಗಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತ್ಮನೇ ಅಂಗವಾದ ಐಕ್ಯನಲ್ಲಿ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನಪ್ಪ ಅಂಗಪಂಚಕವು ಗರ್ಭೀಕೃತವಾಗಿ, ಆ ಐಕ್ಯಂಗೆ ಮಹಾಲಿಂಗ ಸಂಬಂಧವಾಗಿ ಆ ಮಹಾಲಿಂಗದಲ್ಲಿಯೇ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ, ಮಹಾಲಿಂಗವೇ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲರೆ ಐಕ್ಯನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಿ ಜ್ಞಾನ ವೈರಾಗ್ಯ ತಪ್ಪದೆ ಷಟ್‍ಸ್ಥಲಮಾರ್ಗದಿರವು ತಪ್ಪದೆ ಜ್ಞಾನ ಕ್ರೀಗಳಲ್ಲಿ ಪ್ರೇಮ ತಪ್ಪದೆ ಶರಣಸತಿ ಲಿಂಗಪತಿಯಾದ ಭಾವ ತಪ್ಪದೆ ಇಷ್ಟ ಪ್ರಾಣ ಭಾವಲಿಂಗಗದ ಪೂಜೆ ತಪ್ಪದೆ ಷಡ್ವಿಧಲಿಂಗದಲ್ಲಿ ಅರ್ಪಿತಾವಧಾನ ತಪ್ಪದೆ ತೀರ್ಥಪ್ರಸಾದದಲ್ಲಿ ಒಯ್ಯಾರ ತಪ್ಪದೆ ಮಂತ್ರಗಳಂ ಒಡವರೆದು ಲಿಂಗಸಂಧಾನ ತಪ್ಪದೆ ಹಿಡಿದ ವ್ರತಂಗಳಲ್ಲಿ ನಿಷೆ* ತಪ್ಪದೆ ನಡೆದಂತೆ ನುಡಿದು ನುಡಿದಂತೆ ನಡೆವ ಭಾವ ತಪ್ಪದೆ ದ್ವೆ ೈತಾದ್ವೆ ೈತವ ನೂಂಕಿ ಬರಿಯ ವೈರಾಗ್ಯವನೊಪ್ಪುಗೊಳ್ಳದೆ ನಿಜವಿರಕ್ತಿಯ ಹೊಲಬುದಪ್ಪದೆ ಪಂಚೈವರೊಂದಾಗಿ ಸದ್ಯೋನ್ಮುಕ್ತಿಗೆ ಮನವನಿಟ್ಟು ಅರ್ತಿಯಿಂದಾಚರಿಸುವರಯ್ಯ ನಿಮ್ಮ ಶರಣರು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪ್ರಥಮದಲ್ಲಿ ಭಕ್ತರಾದೆವೆಂಬರು. ದ್ವಿತೀಯದಲ್ಲಿ ಮಾಹೇಶ್ವರರಾದೆವೆಂಬರು. ತೃತೀಯದಲ್ಲಿ ಪ್ರಸಾದಿಯಾದೆವೆಂಬರು. ನಾಲ್ಕನೆಯಲ್ಲಿ ಪ್ರಾಣಲಿಂಗಿಯಾದೆವೆಂಬರು. ಅಯ್ದನೆಯಲ್ಲಿ ಶರಣರಾದೆವೆಂಬರು. ಆರನೆಯಲ್ಲಿ ಐಕ್ಯರಾದೆವೆಂಬರು. ಆರುಸ್ಥಲವ ಮೀರಿ ನಿರವಯಸ್ಥಲವನೆಯ್ದಿದೆವೆಂಬರು. ಇದು ಖಂಡಿತ ಷಟ್‍ಸ್ಥಲಬ್ರಹ್ಮಜ್ಞಾನ ನಿರ್ಣಯವಲ್ಲ. ಆವಾವಸ್ಥಲವನಂಗಂಗೊಂಡರು ಆ ಸ್ಥಲದಲ್ಲಿ ಷಡ್ವಿಧಲಿಂಗದಲ್ಲಿ ಬೆರಸಿ ಬೇರಿಲ್ಲದಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->