ಅಥವಾ

ಒಟ್ಟು 10 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ ಬಯಲಾದನು. ಗುರುಲಿಂಗದ ಪ್ರಸನ್ನತ್ವದಿಂದ ಮಹೇಶ್ವರ ಬಯಲಾದನು. ಶಿವಲಿಂಗದ ಪ್ರಸನ್ನತ್ವದಿಂದ ಪ್ರಸಾದಿ ಬಯಲಾದನು. ಜಂಗಮಲಿಂಗದ ಪ್ರಸನ್ನತ್ವದಿಂದ ಪ್ರಾಣಲಿಂಗಿ ಬಯಲಾದನು. ಪ್ರಸಾದಲಿಂಗದ ಪ್ರಸನ್ನತ್ವದಿಂದ ಶರಣ ಬಯಲಾದನು. ಮಹಾಲಿಂಗದ ಪ್ರಸನ್ನತ್ವದಿಂದ ಐಕ್ಯ ಬಯಲಾದನು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದದಲ್ಲಿ ಷಡಂಗವು ಸಮರಸವಾದವು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದವನ್ನೇ ಪದಾರ್ಥವ ಮಾಡಿ ಬ್ರಹ್ಮರಂಧ್ರದ ಸಹಸ್ರದಳಕಮಲಕರ್ಣಿಕಾಮಧ್ಯದಲ್ಲಿಪ್ಪ ಸಚ್ಚಿದಾನಂದ ನಿತ್ಯ ಪರಿಪೂರ್ಣವಪ್ಪ ಘನ ಚೈತನ್ಯವೆಂಬ ಪರಮ ಚರಲಿಂಗಕ್ಕೆ ಸಮರ್ಪಣವ ಮಾಡಿ ಆ ಪರಮ ಚರಲಿಂಗದ ಪ್ರಸನ್ನ ಪ್ರಸಾದದೊಳಗೂಡಿ ನಿರವಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೃಷ್ಟಿಯ ಮೇಲಣ ಕಣಿಯ ತಂದು ಇಷ್ಟಲಿಂಗವೆಂದು ಮಾಡಿ ಅಷ್ಟತನುವಿನ ಕೈಯಲ್ಲಿ ಕೊಟ್ಟು ಆ ಅಷ್ಟತನುವಿನ ಕಯ್ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ ಮೆಟ್ಟಿ ಮೆಟ್ಟಿ ಹೂಳಿಸಿಕೊಂಬ ಗುರುದ್ರೋಹಿಗಳ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು. ಇದಕ್ಕೆ ದೃಷ್ಟಾಂತ, ಗಾರುಡ ಪುರಾಣೇ: ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಇಂತೆಂದುದಾಗಿ, ಇಷ್ಟಲಿಂಗ ಬಿದ್ದಡೆ ಆಚಾರಲಿಂಗ ಬಿದ್ದಿತೆ ? ಆಚಾರಲಿಂಗ ಬಿದ್ದಡೆ ಗುರುಲಿಂಗ ಬಿದ್ದಿತೆ ? ಗುರುಲಿಂಗ ಬಿದ್ದಡೆ ಶಿವಲಿಂಗ ಬಿದ್ದಿತೆ ? ಶಿವಲಿಂಗ ಬಿದ್ದಡೆ ಜಂಗಮಲಿಂಗ ಬಿದ್ದಿತೆ ? ಜಂಗಮಲಿಂಗ ಬಿದ್ದಡೆ ಪ್ರಸಾದಲಿಂಗ ಬಿದ್ದಿತೆ ? ಪ್ರಸಾದಲಿಂಗ ಬಿದ್ದಡೆ ಮಹಾಲಿಂಗ ಬಿದ್ದಿತೆ ? ಅಕಟಕಟ ಷಡ್ವಿಧಲಿಂಗದ ಭೇದವನರಿಯದೆ ಕೆಟ್ಟ ಕೇಡ ನೋಡಾ ! ಅಭ್ಯಾಸವ ಮಾಡುವಲ್ಲಿ ಕೋಲು ಬಿದ್ದಡೆ ತನ್ನ ತಾನೆ ಇರಿದುಕೊಂಡು ಸಾಯಬಹುದೆ ? ಆ ಕೋಲಿನಲ್ಲಿ ಅಭ್ಯಾಸವನೆ ಮಾಡಿ ಸುರಗಿಯ ಮೊನೆಯನೆ ಗೆಲಿಯಬೇಕಲ್ಲದೆ ? ಇದು ಕಾರಣ:ಜಲ ಅಗ್ನಿ ನೇಣು ವಿಷ ಅಸಿಪತ್ರ ಸಮಾಧಿ ಇಂತವರಿಂದ ಪ್ರಾಣಹಿಂಸೆಯ ಮಾಡುವರನು ಅಘೋರನರಕದಲ್ಲಿ ಅದ್ದಿ ಅದ್ದಿ ಇಕ್ಕುವ ನಮ್ಮ ಕೂಡಲಸಂಗಮದೇವ.
--------------
ಚನ್ನಬಸವಣ್ಣ
ಅಯ್ಯಾ ತತ್ವ ವಿತತ್ವ ಶೂನ್ಯ ಮಹಾಶೂನ್ಯವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಇನ ಶಶಿ ವ್ಯೋಮ ಸಮೀರ ಅಗ್ನಿ ಅಂಬು ಪೃಥ್ವಿ ನವಗ್ರಹ ದಶದಿಕ್ಕು ಛತ್ತೀಸ ತತ್ವಂಗಳೇನೂ ಇಲ್ಲದಂದು, ತಾರಜ ತಂಡಜ ಬಿಂದುಜ ಭಿನ್ನಾಯುಕ್ತ ಅವ್ಯ[ಕ್ತ] ಅಮದಾಯುಕ್ತ ಮಣಿರಣ ಮಾನ್ಯರಣ್ವ ವಿಶ್ವರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತಿವು ಯಾವವೂ ಇಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಪಶುಪಾಶ ಪತಿ ಕುಂಡಲಿ ಕಾರಕ ಇವೇನೂ ಇಲ್ಲದಂದು, ವಿಜ್ಞಾನಾಲಕರು ಸಕಲಾಕಲರು ಪ್ರಳಯಾಕಲರು ಇವೇನೂ ಇಲ್ಲದಂದು, ದನುಜ ಮನುಜ ದಿವಿಜ ಮನು ಮುನಿ ನಕ್ಷತ್ರಮಂಡಲ ಇವೇನೂ ಇಲ್ಲದಂದು, ಅಂದು ನೀನು ನಿಷ್ಕಲ ನಿರವಯ ನಿಃಶೂನ್ಯನಾಗಿರ್ದೆಯಯ್ಯ ಬಸವಣ್ಣ. ನೀವೊಂದು ಅನಂತಕಾಲ ಅನಂತಯುಗ ನಿಮ್ಮ ಲೀಲಾ ವಿಚಿಂತನೆ ನೆನೆದ ನೆನಹೇ ಸುನಾದ. ಆ ಸುನಾದದ ಪ್ರಕಾಶ ತೇಜೋಪುಂಜವೇ ಬಿಂದು. ನಾದವೇ ನಿರಂಜನ. ಬಿಂದುವೇ ನಿರಾಲಂಬ..... ಕೂಟವೇ ನಿರಾಮಯ. ಇಂತೀ ನಾದ ಬಿಂದು ಕಳೆ ಮೂರು ಕೂಡೆ ಅಖಂಡ ತೇಜೋಮಯವಾಗಿ ಷಡ್‍ಬ್ರಹ್ಮಸ್ವರೂಪವನೈದಿದೆಯಲ್ಲ ಬಸವಣ್ಣ. ನಿನ್ನ ವಿನೋದದಿಂದ ಆ ಷಡ್‍ಬ್ರಹ್ಮದಿಂದ ಷಡ್ವಿಧ ಭೂತಂಗಳು ಪುಟ್ಟಿ ಆ ಷಡ್ವಿಧಭೂತಂಗಳೇ ಎನಗಂಗವಾದಲ್ಲಿ ಆ ಷಡ್‍ಬ್ರಹ್ಮವೇ ಷಡಕ್ಷರಿಮಯವಾಗಿ ಆ ಷಡ್ವಿಧಭೂತಂಗಳೊಳಗೆ ಸಮೇತವಾಗಿ ಕೂಡಿ ಛತ್ತೀಸತತ್ವ ಮಂತ್ರಸ್ವರೂಪವಾದ ಭೇದ ಹೇಗೆಂದಡೆ ಅದಕ್ಕೆ ವಿವರ: ಓಂಕಾರವೇ ಆತ್ಮನು. ಓಂಕಾರ ಯಕಾರ ಸಂಯೋಗವಾದಲ್ಲಿ ಆಕಾಶ ಪುಟ್ಟಿತ್ತು. ಓಂಕಾರ ವಾಕಾರ ಸಂಯೋಗವಾದಲ್ಲಿ ವಾಯು ಪುಟ್ಟಿತ್ತು. ಓಂಕಾರ ಶಿಕಾರ ಸಂಯೋಗದಲ್ಲಿ ಅಗ್ನಿ ಪುಟ್ಟಿತ್ತು. ಓಂಕಾರ ಮಃಕಾರ ಸಂಯೋಗದಲ್ಲಿ ಅಪ್ಪು ಪುಟ್ಟಿತ್ತು. ಓಂಕಾರ ನಕಾರ ಸಂಯೋಗವಾದಲ್ಲಿ ಪೃಥ್ವಿ ಪುಟ್ಟಿತ್ತು. ಇನ್ನ ಯಕಾರ ಓಂಕಾರ ಸಂಯೋಗವಾದಲ್ಲಿ ಭಾವ ಪುಟ್ಟಿತ್ತು. ಯಕಾರವೇ ಜ್ಞಾನ. ಯಕಾರ ವಾಕಾರ ಸಂಯೋಗವಾದಲ್ಲಿ ಮನ ಪುಟ್ಟಿತ್ತು. ಯಕಾರ ಶಿಕಾರ ಸಂಯೋಗವಾದಲ್ಲಿ ಅಹಂಕಾರ ಪುಟ್ಟಿತ್ತು. ಯಕಾರ ಮಃಕಾರ ಸಂಯೋಗವಾದಲ್ಲಿ ಬುದ್ಧಿ ಪುಟ್ಟಿತ್ತು. ಯಕಾರ ನಕಾರ ಸಂಯೋಗವಾದಲ್ಲಿ ಚಿತ್ತು ಪುಟ್ಟಿತ್ತು. ಇನ್ನು ವಕಾರ ಓಂಕಾರ ಸಂಯೋಗವಾದಲ್ಲಿ ಪಂಚವಾಯು ಪುಟ್ಟಿದವು. ವಕಾರ ಯಕಾರ ಸಂಯೋಗವಾದಲ್ಲಿ ಸಮಾನವಾಯು ಪುಟ್ಟಿತ್ತು. ವಾಕಾರ ತಾನೇ ಉದಾನವಾಯು. ವಕಾರ ಶಿಕಾರ ಸಂಯೋಗವಾದಲ್ಲಿ ವ್ಯಾನವಾಯು ಪುಟ್ಟಿತ್ತು. ವಕಾರ ಮಃಕಾರ ಸಂಯೋಗವಾದಲ್ಲಿ ಅಪಾನವಾಯು ಪುಟ್ಟಿತ್ತು. ವಕಾರ ನಕಾರ ಸಂಯೋಗವಾದಲ್ಲಿ ಪ್ರಾಣವಾಯು ಪುಟ್ಟಿತ್ತು. ಇನ್ನು ಶಿಕಾರ ಓಂಕಾರ ಸಂಯೋಗವಾದಲ್ಲಿ ಹೃದಯ ಪುಟ್ಟಿತ್ತು. ಶಿಕಾರ ಯಕಾರ ಸಂಯೋಗವಾದಲ್ಲಿ ಶ್ರೋತ್ರ ಪುಟ್ಟಿತ್ತು. ಶಿಕಾರಾ ವಾಕಾರ ಸಂಯೋಗವಾದಲ್ಲಿ ತ್ವಕ್ಕು ಪುಟ್ಟಿತ್ತು. ಶಿಕಾರ ತಾನೇ ನೇತ್ರ ಶಿಕಾರ ಮಃಕಾರ ಸಂಯೋಗವಾದಲ್ಲಿ ಜಿಹ್ವೆ ಪುಟ್ಟಿತ್ತು. ಶಿಕಾರ ನಕಾರ ಸಂಯೋಗವಾದಲ್ಲಿ ಘ್ರಾಣ ಪುಟ್ಟಿತ್ತು. ಇನ್ನು ಮಃಕಾರ ಓಂಕಾರ ಸಂಯೋಗವಾದಲ್ಲಿ ತೃಪ್ತಿ ಪುಟ್ಟಿತ್ತು. ಮಕಾರ ಯಕಾರ ಸಂಯೋಗವಾದಲ್ಲಿ ಶಬ್ದ ಪುಟ್ಟಿತ್ತು. ಮಕಾರ ವಾಕಾರ ಸಂಯೋಗವಾದಲ್ಲಿ ಸ್ಪರ್ಶನ ಪುಟ್ಟಿತ್ತು. ಮಕಾರ ಶಿಕಾರ ಸಂಯೋಗವಾದಲ್ಲಿ ರೂಪು ಪುಟ್ಟಿತ್ತು. ಮಃಕಾರ ತಾನೇ ರಸ. ಮಕಾರ ನಕಾರ ಸಂಯೋಗವಾದಲ್ಲಿ ಗಂಧ ಪುಟ್ಟಿತ್ತು. ಇನ್ನು ನಕಾರ ಓಂಕಾರ ಸಂಯೋಗವಾದಲ್ಲಿ ಅಂತರ್ವಾಕ್ಕು ಪುಟ್ಟಿತ್ತು. ನಕಾರ ಯಕಾರ ಸಂಯೋಗವಾದಲ್ಲಿ ವಾಕ್ಕು ಪುಟ್ಟಿತ್ತು. ನಕಾರ ವಾಕಾರ ಸಂಯೋಗವಾದಲ್ಲಿ ಪಾಣಿ ಪುಟ್ಟಿತ್ತು. ನಕಾರ ಶಿಕಾರ ಸಂಯೋಗವಾದಲ್ಲಿ ಪಾದ ಪುಟ್ಟಿತ್ತು. ನಕಾರ ಮಃಕಾರ ಸಂಯೋಗವಾದಲ್ಲಿ ಗುಹ್ಯ ಪುಟ್ಟಿತ್ತು. ನಕಾರ ತಾನೇ ವಾಯು. ಇಂತೀ ಛತ್ತೀಸತತ್ವವೆಲ್ಲ ಮಂತ್ರಸ್ವರೂಪವಾದ ಬಸವಣ್ಣನೇ. ಎನಗೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ ಇಂತಿವೆಲ್ಲವನರಿದು ಅರ್ಪಿಸುವ ಭೇದ ಹೇಗೆಂದಡೆ ಪ್ರಮಥದಲ್ಲಿ ಷಟ್‍ಸ್ಥಲದ ವಿವರ: ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಭಕ್ತನ ಷಡ್ವಿಧಲಿಂಗದ ವಿವರ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಭಕ್ತನ ಷಡ್ವಿಧಹಸ್ತದ ವಿವರ: ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಭಕ್ತನ ಷಡ್ವಿಧಮುಖದ ವಿವರ: ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಭಕ್ತನ ಷಡ್ವಿಧಶಕ್ತಿಯ ವಿವರ: ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಭಕ್ತನ ಷಡ್ವಿಧಪದಾರ್ಥದ ವಿವರ: ಗಂಧ ರಸ ರೂಪು ಸ್ಪರ್ಶನ ಶಬ್ದ ಪರಿಣಾಮ. ಇನ್ನು ಭಕ್ತನ ಷಡ್ವಿಧಪ್ರಸಾದದ ವಿವರ: ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರ್ಶಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ದ್ವಿತೀಯದಲ್ಲಿ ಮಾಹೇಶ್ವರನ ಷಟ್‍ಸ್ಥಲ ವಿವರ: ಮಾಹೇಶ್ವರ ಭಕ್ತ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಮಾಹೇಶ್ವರನ ಷಡ್ವಿಧಲಿಂಗದ ವಿವರ: ಗುರುಲಿಂಗ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಮಾಹೇಶ್ವರನ ಷಡ್ವಿಧಹಸ್ತದ ವಿವರ: ಸುಬುದ್ಧಿ ಸುಚಿತ್ತ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಮಾಹೇಶ್ವರನ ಷಡ್ವಿಧಮುಖದ ವಿವರ: ಜಿಹ್ವೆ ಘ್ರಾಣ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಮಾಹೇಶ್ವರನ ಷಡ್ವಿಧಶಕ್ತಿಯ ವಿವರ: ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಮಾಹೇಶ್ವರನ ಷಡ್ವಿಧಭಕ್ತಿಯ ವಿವರ: ನೈಷೆ* ಶ್ರದ್ಧೆ ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಮಾಹೇಶ್ವರನ ಷಡ್ವಿಧಪದಾರ್ಥದ ವಿವರ: ರಸ ಗಂಧ ರೂಪು ಸ್ಪರುಶನ ಶಬ್ದ ಪರಿಣಾಮ ಇನ್ನು ಮಾಹೇಶ್ವರನ ಷಡ್ವಿಧಪ್ರಸಾದದ ವಿವರ: ರಸಪ್ರಸಾದ ಗಂಧಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ತೃತೀಯದಲ್ಲಿ ಪ್ರಸಾದಿಯ ಷಟ್‍ಸ್ಥಲದ ವಿವರ: ಪ್ರಸಾದಿ ಭಕ್ತ ಮಾಹೇಶ್ವರ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಪ್ರಸಾದಿಯ ಷಡ್ವಿಧಲಿಂಗದ ವಿವರ: ಶಿವಲಿಂಗ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಸಾದಿಯ ಷಡ್ವಿದಹಸ್ತದ ವಿವರ: ನಿರಹಂಕಾರ ಸುಚಿತ್ತ ಸುಬುದ್ಧಿ ಸುಮನ ಸುಜ್ಞಾನ ಸದ್ಭಾವ. ಇನ್ನು ಪ್ರಸಾದಿಯ ಷಡ್ವಿಧಮುಖದ ವಿವರ: ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಶ್ರೋತ್ರ ಹೃದಯ. ಇನ್ನು ಪ್ರಸಾದಿಯ ಷಡ್ವಿಧಶಕ್ತಿಯ ವಿವರ: ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಪ್ರಸಾದಿಯ ಷಡ್ವಿಧಭಕ್ತಿಯ ವಿವರ: ಸಾವಧಾನ ಶ್ರದ್ಧೆ ನೈಷೆ* ಅನುಭಾವ ಆನಂದ ಸಮರಸ. ಇನ್ನು ಪ್ರಸಾದಿಯ ಷಡ್ವಿಧಪದಾರ್ಥದ ವಿವರ: ರೂಪು ಗಂಧ ರಸ ಸ್ಪರುಶನ ಶಬ್ದ ಪರಿಣಾಮ. ಇನ್ನು ಪ್ರಸಾದಿಯ ಷಡ್ವಿಧಪ್ರಸಾದದ ವಿವರ: ರೂಪುಪ್ರಸಾದ ಗಂಧಪ್ರಸಾದ ರಸಪ್ರಸಾದ ಸ್ಪರುಶನ ಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇಂತೀ ಮಾರ್ಗಕ್ರಿ ಅಂಗ ಲಿಂಗವಾದಲ್ಲಿ ಮುಂದೆ ಮೀರಿದ ಕ್ರಿಯೆ ಅಂಗ ಲಿಂಗ ತೃತೀಯಸ್ಥಲ. ಇನ್ನು ಚತುರ್ಥದಲ್ಲಿ ಪ್ರಾಣಲಿಂಗಿಯ ಷಡ್ವಿಧ ವಿವರ: ಪ್ರಾಣಲಿಂಗಿ ಭಕ್ತ ಮಾಹೇಶ್ವರ ಪ್ರಸಾದಿ ಶರಣ ಐಕ್ಯ. ಇನ್ನು ಪ್ರಾಣಲಿಂಗಿಯ ಷಡ್ವಿಧಲಿಂಗದ ವಿವರ: ಜಂಗಮಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಾಣಲಿಂಗಿಯ ಷಡ್ವಿಧಹಸ್ತದ ವಿವರ: ಸುಮನ ಸುಚಿತ್ತ ಸುಬುದ್ಧಿ ನಿರಹಂಕಾರ ಸುಜ್ಞಾನ ಸದ್ಭಾವ. ಇನ್ನು ಪ್ರಾಣಲಿಂಗಿಯ ಷಡ್ವಿಧಶಕ್ತಿಯ ವಿವರ: ಆದಿಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಪರಶಕ್ತಿ ಚಿತ್ಯಕ್ತಿ. ಇನ್ನು ಪ್ರಾಣಲಿಂಗಿಯ ಷಡ್ವಿಧಭಕ್ತಿಯ ವಿವರ: ಅನುಭಾವ ಶ್ರದ್ಧೆ ನೈಷೆ* ಸಾವಧಾನ ಆನಂದ ಸಮರಸ. ಇನ್ನು ಪ್ರಾಣಲಿಂಗಿಯ ಷಡ್ವಿಧಪದಾರ್ಥದ ವಿವರ: ಸ್ಪರುಶನ ಗಂಧ ರಸ ರೂಪು ಶಬ್ದ ಪರಿಣಾಮ. ಇನ್ನು ಪ್ರಾಣಲಿಂಗಿಯ ಷಡ್ವಿಧಪ್ರಸಾದದ ವಿವರ: ಸ್ಫರುಶನಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ಪಂಚಮದಲ್ಲಿ ಶರಣನ ಷಟ್‍ಸ್ಥಲದ ವಿವರ: ಶರಣ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಐಕ್ಯ. ಇನ್ನು ಶರಣನ ಷಡ್ವಿಧಲಿಂಗದ ವಿವರ: ಪ್ರಸಾದಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗ. ಶರಣನ ಷಡ್ವಿಧಹಸ್ತದ ವಿವರ: ಸುಜ್ಞಾನ ಸುಚಿತ್ತ ಸುಬುದ್ಧಿ ನಿರಂಕಾರ ಸುಮನ ಸದ್ಭಾವ ಇನ್ನು ಶರಣನ ಷಡ್ವಿಧಶಕ್ತಿಯ ವಿವರ: ಪರಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಚಿತ್ಯಕ್ತಿ. ಇನ್ನು ಶರಣನ ಷಡ್ವಿಧಭಕ್ತಿಯ ವಿವರ: ಆನಂದ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಸಮರಸ. ಇನ್ನು ಶರಣನ ಷಡ್ವಿಧ ಪ್ರಸಾದದ ವಿವರ: ಶಬ್ದಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಪರಿಣಾಮಪ್ರಸಾದ. ಇನ್ನು ಷಷ*ಮದಲ್ಲಿ ಆ ಐಕ್ಯನ ಷಟ್‍ಸ್ಥಲದ ವಿವರ: ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ. ಇನ್ನು ಐಕ್ಯನ ಷಡ್ವಿಧಲಿಂಗದ ವಿವರ: ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ. ಇನ್ನು ಐಕ್ಯನ ಷಡ್ವಿಧಹಸ್ತದ ವಿವರ: ಸದ್ಭಾವ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ. ಇನ್ನು ಐಕ್ಯನ ಷಡ್ವಿಧಮುಖದ ವಿವರ: ಹೃದಯ ಪ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ. ಇನ್ನು ಐಕ್ಯನ ಷಡ್ವಿಧಶಕ್ತಿಯ ವಿವರ: ಚಿತ್ಯಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ. ಇನ್ನು ಐಕ್ಯನ ಷಡ್ವಿಧಭಕ್ತಿಯ ವಿವರ: ಸಮರಸ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ. ಇನ್ನು ಐಕ್ಯನ ಷಡ್ವಿಧಪದಾರ್ಥದ ವಿವರ: ಪರಿಣಾಮ ಗಂಧ ರಸ ರೂಪು ಸ್ಪರುಶನ ಶಬ್ದ. ಇನ್ನು ಐಕ್ಯನ ಷಡ್ವಿಧಪ್ರಸಾದದ ವಿವರ: ಪರಿಣಾಮಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ. ಇಂತಿವೆಲ್ಲವೂ ಅರ್ಪಿತವಾಗಲೊಡನೆ ಏಕಮೇವ ಪರಬ್ರಹ್ಮ ತಾನೆಯಾಗಿ ಉಳಿದ ಉಳುಮೆಯೇ ಬಸವಣ್ಣ. ಆ ಬಸವಣ್ಣನೇ ಎನಗೆ ಇಷ್ಟಬ್ರಹ್ಮವು. ಆ ಇಷ್ಟಬ್ರಹ್ಮದಲ್ಲಿ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಕರಣಂಗಳೆಲ್ಲವು ನಿರವಯಲಾದ ಭೇದ ಹೇಗೆಂದಡೆ ವಾರಿ[ಬಲಿ]ದು ವಾರಿಕಲ್ಲಾಗಿ ವಾರಿಯಾದ ಹಾಗೆ ಉಪ್ಪಿನ ಪೊಟ್ಟಣವಪ್ಪುವಿನೊಳು ಬಯಚಿಟ್ಟ ಹಾಗೆ ಉರಿ ಕರ್ಪುರ ಸಂಯೋಗವಾದ ಹಾಗೆ ಎನ್ನ ಅಂಗ ಮನ ಅಂಗ ಏಕರಸವಾದ ಭೇದವನು ಸಿದ್ಧೇಶ್ವರನು ತೋರಿ[ದ ಕಾ]ರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವೇಶ್ವರನ ಶ್ರೀಪಾದದಲ್ಲಿ ಮನಮಗ್ನ ಯೋಗವೆನಗಾಯಿತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನಗೆನ್ನ ಗುರುಬಸವಣ್ಣ ತೋರಿದ ಘನವ, ನಿಮಗೆ ಬಿನ್ನೈಸುವೆನು ಕೇಳಾ ಪ್ರಭುವೆ. ಪ್ರಸಾದದಿಂದ ಹುಟ್ಟಿದ ಕಾಯಕ್ಕೆ ಪ್ರಸಾದದಿಂದೊಗೆದ ಲಿಂಗವ ಕೊಟ್ಟು ಪ್ರಸಾದಲಿಂಗಮುಖದಲ್ಲಿ ಪ್ರಸಾದಮಯವಾದ, ಪ್ರಣವಪಂಚಾಕ್ಷರಿಯ ಪ್ರಸಾದಿಸಿ ತನ್ನಾದಿರೂಪಿನಲ್ಲಿ ಅನಾದಿಲಿಂಗಪ್ರಸಾದವ ಭೋಗವ ಮಾಡಿ ಆ ಪ್ರಸಾದದಿಂದೊಗೆದ ಪ್ರಸಾದವ ತನ್ನ ಪ್ರಸಾದಜ್ಞಾನವೆಂಬ ಪರಮಶಿಖಿಯಿಂದ ದಹನ ಮಾಡಿ, ಎನಗೆ, ಸಮಸ್ತ ಶಿವಭಕ್ತರ್ಗೆ ಇದು ಭಕ್ತಿ ನೀತಿಯೆಂದು ವಿಭೂತಿಯನಿಟ್ಟು ತ್ರಿಪುರದ ಸಂಚವನಳಿದು ತ್ರಿಜಗವ ರಕ್ಷಿಸಲೆಂದು ತ್ರಿಲೋಚನದಲ್ಲಿ ಉಗ್ರಶಾಂತಿ ಗಾಂಭೀರ್ಯವೆಂಬ ಜಲಬಿಂದುವೆ ಬೀಜವಾಗಿ ಬೆಳೆದ ರುದ್ರಾಕ್ಷಿಯ ಧರಿಸಿ, ಶಾಂಭವೀಮುದ್ರೆಯನೊತ್ತಿ ನಾದ ಬಿಂದು ಕಳೆಯೊಂದಾದಂದಿನ ಅನಾದಿ ಬೋಧಚೈತನ್ಯಜ್ಞಾನಲಿಂಗ ತಾನೆ ಜಂಗಮವೆಂದು ತಿಳುಹಿ ಆ ಜಂಗಮದ ಪಾದೋದಕ ಪ್ರಸಾದವೆ ಇಷ್ಟವಾದ ಷಡ್ವಿಧಲಿಂಗದ ಮೂಲಾಂಗವೆನಿಸುವ ಇಷ್ಟಲಿಂಗಕ್ಕೆ ಮಜ್ಜನ ನೈವೇದ್ಯವ ಸಜ್ಜನಸುದ್ಧ ಶಿವಭಕ್ತಿಯಿಂದ ಮಾಡೆಂದ ಬಸವಣ್ಣ. ಅದೆಂತೆಂದಡೆ; ಹಂಸೆಗೆ ಹಾಲನೆರೆವರಲ್ಲದೆ ಹುಳಿಯನೆರೆವರೆ ? ಇಷ್ಟಲಿಂಗಕ್ಕೆ ಪ್ರಸಾದವೆ ಭೋಜನವೆಂದು ಬಸವಣ್ಣ ನಿರೂಪಿಸಲು, `ನಿರಂತರವೆ ? ಎಂದು ಬಿನ್ನೈಸೆ, ಬೋಧಿಸಿದ ಬಸವಣ್ಣನು. ಅದೆಂತೆಂದಡೆ; ಪದಾರ್ಥವ ಕೊಟ್ಟಡೆ ಫಲಪದ ತಪ್ಪದು, ಪ್ರಸಾದವ ಕೊಟ್ಟಡೆ ಫಲಂ ನಾಸ್ತಿ ಪದಂ ನಾಸ್ತಿ ಭವಂ ನಾಸ್ತಿ ಎಂದನಯ್ಯಾ ಎನ್ನ ಗುರು ಬಸವಣ್ಣನು. ಅದೆಂತೆಂದಡೆ; ಪದಾರ್ಥವೆ ಕರ್ಮರೂಪು, ಪ್ರಸಾದವೆ ನಿಃಕರ್ಮರೂಪು. `ದ್ರವ್ಯಂ ಕ್ರಿಯಾಸ್ವರೂಪಂ ಚ ಪ್ರಸಾದೋ ಕರ್ಮಬಾಹ್ಯಕಃ ಪದಾರ್ಥೋ ಜನ್ಮಹೇತುಃ ಸಾತ್ ಪ್ರಸಾದೋ ಭವನಾಶಕಃ ಇಂತೆಂದು ನುಡಿದು, ನಡೆದು ತೋರಿ ಹೊರೆದನಲಾ ಬಸವಣ್ಣ, ಸಕಲ ಮಾಹೇಶ್ವರರ. ಇದನರಿದು ಕೊಡುವದು, ಇದನರಿದು ಕೊಂಬುದು ಇದೇ ಭಕ್ತಿಗೆ ಬೇಹ ಬುದ್ಧಿ, ಇದೇ ಪ್ರಸಾದಕ್ಕೆ ಪರಮಕಾರಣ. ಇಂತಲ್ಲದವಂಗೆ ಲಿಂಗವಿಲ್ಲ; ಲಿಂಗವಿಲ್ಲಾಗಿ ಪ್ರಸಾದವಿಲ್ಲ. ಇದನರಿದು, ಗುರುವಿಡಿದು ಲಿಂಗದಿಚ್ಛೆಯನರಿದು ಸುಖಿಸಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
-->