ಅಥವಾ

ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿ ಅಪ್ಪು ತೇಜ ವಾಯು ಆಕಾಶ ಆತ್ಮ ಮೊದಲಾದ ಷಡುಸ್ಥಲಂಗಳ ವಿವರವೆಂತೆಂದೆಡೆ: ಪೃಥ್ವಿ ಭಕ್ತ, ಅಪ್ಪು ಮಾಹೇಶ್ವರ, ಅಗ್ನಿ ಪ್ರಸಾದಿ, ವಾಯು ಪ್ರಾಣಲಿಂಗಿ, ಆಕಾಶ ಶರಣ, ಆತ್ಮನೈಕ್ಯ. ಇದಕ್ಕೆ ಶ್ರುತಿ: ಸದ್ಯೋಜಾತಂ ತಥಾ ಭಕ್ತಂ ವಾಮದೇವಂ ಮಹೇಶ್ವರಂ ಪ್ರಸಾದಿನಮಘೋರಂಚ ಪುರುಷಂ ಪ್ರಾಣಲಿಂಗಿನಂ ಈಶಾನಂ ಶರಣಂ ವಿಂದ್ಯಾದೈಕ್ಯಮಾತ್ಮಮಯಂ ತಥಾ ಷಡಂಗಂ ಲಿಂಗಮೂಲಂ ಹಿ ದೇವದೈಹಿಕ ಭಕ್ತಯೋ: ಇಂತೆಂದುದಾಗಿ, ಷಡಂಗಕ್ಕೆ ಲಿಂಗಂಗಳಾವಾವೆಂದಡೆ: ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಇಂತೀ ಷಡ್ವಿಧಲಿಂಗಂಗಳಿಗೆ ಕಳೆಯಾವೆಂದಡೆ: ಆಚಾರಲಿಂಗಕ್ಕೆ ನಿವೃತ್ತಿಕಳೆ, ಗುರುಲಿಂಗಕ್ಕೆ ಪ್ರತಿಷಾ*ಕಳೆ, ಶಿವಲಿಂಗಕ್ಕೆ ವಿದ್ಯಾಕಳೆ, ಜಂಗಮಲಿಂಗಕ್ಕೆ ಶಾಂತಿಕಳೆ, ಪ್ರಸಾದಲಿಂಗಕ್ಕೆ ಶಾಂತ್ಯತೀತಕಳೆ, ಮಹಾಲಿಂಗಕ್ಕೆ ಶಾಂತ್ಯತೀತೋತ್ತರ ಕಳೆ. ಇಂತೀ ಷಡ್ವಿಧಲಿಂಗಂಗಳಿಗೆ ಮುಖಂಗಳಾವಾವೆಂದಡೆ: ಆಚಾರಲಿಂಗಕ್ಕೆ ನಾಸಿಕ ಮುಖ, ಗುರುಲಿಂಗಕ್ಕೆ ಜಿಹ್ವೆ ಮುಖ, ಶಿವಲಿಂಗಕ್ಕೆ ನೇತ್ರ ಮುಖ, ಜಂಗಮಲಿಂಗಕ್ಕೆ ತ್ವಕ್ಕು ಮುಖ, ಪ್ರಸಾದಲಿಂಗಕ್ಕೆ ಶ್ರೋತ್ರಮುಖ, ಮಹಾಲಿಂಗಕ್ಕೆ ಹೃನ್ಮುಖ. ಇಂತೀ ಷಡ್ವಿಧಲಿಂಗಂಗಳಿಗೆ ಹಸ್ತಂಗಳಾವಾವೆಂದಡೆ: ಆಚಾರಲಿಂಗಕ್ಕೆ ಸುಚಿತ್ತ ಹಸ್ತ, ಗುರುಲಿಂಗಕ್ಕೆ ಸುಬುದ್ಧಿ ಹಸ್ತ, ಶಿವಲಿಂಗಕ್ಕೆ ನಿರಹಂಕಾರ ಹಸ್ತ, ಜಂಗಮಲಿಂಗಕ್ಕೆ ಸುಮನ ಹಸ್ತ, ಪ್ರಸಾದಲಿಂಗಕ್ಕೆ ಸುಜ್ಞಾನ ಹಸ್ತ, ಮಹಾಲಿಂಗಕ್ಕೆ ಸದ್ಭಾವ ಹಸ್ತ. ಇಂತೀ ಷಡ್ವಿಧ ಲಿಂಗಂಗಳಿಗೆ ತೃಪ್ತಿಯಾವಾವೆಂದಡೆ: ಆಚಾರಲಿಂಗಕ್ಕೆ ಗಂಧತೃಪ್ತಿ, ಗುರುಲಿಂಗಕ್ಕೆ ರಸತೃಪ್ತಿ, ಶಿವಲಿಂಗಕ್ಕೆ ರೂಪುತೃಪ್ತಿ, ಜಂಗಮಲಿಂಗಕ್ಕೆ ಪರುಶನ ತೃಪ್ತಿ, ಪ್ರಸಾದಲಿಂಗಕ್ಕೆ ಶಬ್ದತೃಪ್ತಿ, ಮಹಾಲಿಂಗಕ್ಕೆ ಪಂಚೇಂದ್ರಿಯ ಪ್ರೀತಿಯೇ ತೃಪ್ತಿ. ಇಂತೀ ಷಡ್ವಿಧಲಿಂಗಂಗಳಿಗೆ ಶಕ್ತಿಗಳಾವಾವೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಛಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಛಕ್ತಿ. ಇಂತೀ ಷಡ್ವಿಧಲಿಂಗಂಗಳಿಗೆ ಭಕ್ತಿ ಯಾವಾವೆಂದಡೆ: ಆಚಾರಲಿಂಗಕ್ಕೆ ಶ್ರದ್ಧಾಭಕ್ತಿ, ಗುರುಲಿಂಗಕ್ಕೆ ನಿಷಾ*ಭಕ್ತಿ, ಶಿವಲಿಂಗಕ್ಕೆ ಅವಧಾನಭಕ್ತಿ, ಜಂಗಮಲಿಂಗಕ್ಕೆ ಅನುಭವಭಕ್ತಿ, ಪ್ರಸಾದಲಿಂಗಕ್ಕೆ ಆನಂದಭಕ್ತಿ, ಮಹಾಲಿಂಗಕ್ಕೆ ಸಮರಸಭಕ್ತಿ. ಇಂತೀ ಷಡ್ವಿಧಲಿಂಗಂಗಳಿಗೆ ವಿಷಯಂಗಳಾವಾವೆಂದಡೆ: ಎಳಸುವುದು ಆಚಾರಲಿಂಗದ ವಿಷಯ, ಎಳಸಿ ಮೋಹಿಸುವುದು ಗುರುಲಿಂಗದ ವಿಷಯ, ಮೋಹಿಸಿ ಕೂಡುವುದು ಶಿವಲಿಂಗದ ವಿಷಯ, ಕೂಡಿ ಸುಖಂಬಡುವುದು ಜಂಗಮಲಿಂಗದ ವಿಷಯ, ಸುಖಂಬಡೆದು ಪರಿಣಾಮತೆಯನೆಯಿದೂದು ಪ್ರಸಾದಲಿಂಗದ ವಿಷಯ, ಪರಿಣಾಮತೆಯನೆಯ್ದಿ ನಿಶ್ಚಯಬಡೆವುದು ಮಹಾಲಿಂಗದ ವಿಷಯ. ಇನ್ನು ಆಚಾರಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಬೇರು ಗೆಡ್ಡೆ ಗೆಣಸು ಮೊದಲಾದವರಲ್ಲಿಯ ಗಂಧವನರಿವುದು ಆಚಾರಲಿಂಗದಲ್ಲಿಯ ಆಚಾರಲಿಂಗ. ಮರ ತಿಗುಡು ಹಗಿನ ಮೊದಲಾದವರಲ್ಲಿಯ ಗಂಧವನರಿವುದು ಆಚಾರಲಿಂಗದಲ್ಲಿಯ ಗುರುಲಿಂಗ. ಚಿಗುರು ತಳಿರು ಪತ್ರೆ ಮೊದಲಾದವರಲ್ಲಿಯ ಗಂಧವನರಿವುದು ಆಚಾರಲಿಂಗದಲ್ಲಿಯ ಶಿವಲಿಂಗ. ನನೆ ಮೊಗ್ಗೆ ಅರಳು ಮೊದಲಾದವರಲ್ಲಿಯ ಗಂಧವನರಿವುದು ಆಚಾರಲಿಂಗದಲ್ಲಿಯ ಜಂಗಮಲಿಂಗ. ಕಾಯಿ ದೋರೆ ಹಣ್ಣು ಮೊದಲಾದವರಲ್ಲಿಯ ಗಂಧವನರಿವುದು ಆಚಾರಲಿಂಗದಲ್ಲಿಯ ಪ್ರಸಾದಲಿಂಗ. ಇಂತಿವರಲ್ಲಿಯ ಗಂಧತೃಪ್ತಿಯನರಿವುದು, ಆಚಾರಲಿಂಗದಲ್ಲಿಯ ಮಹಾಲಿಂಗ. ಇನ್ನು ಗುರುಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಮಧುರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಆಚಾರಲಿಂಗ, ಒಗರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಗುರುಲಿಂಗ, ಖಾರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಶಿವಲಿಂಗ, ಆಮ್ರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಜಂಗಮಲಿಂಗ, ಕಹಿಯಾದ ರುಚಿಯನರಿವುದು ಗುರುಲಿಂಗದಲ್ಲಿಯ ಪ್ರಸಾದಲಿಂಗ, ಲವಣವಾದ ರುಚಿಯನರಿವುದು ಗುರುಲಿಂಗದಲ್ಲಿಯ ಮಹಾಲಿಂಗ. ಇನ್ನು ಶಿವಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಪೀತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಆಚಾರಲಿಂಗ, ಶ್ವೇತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಗುರುಲಿಂಗ, ಹರಿತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಶಿವಲಿಂಗ, ಮಾಂಜಿಷ್ಟವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಜಂಗಮಲಿಂಗ, ಕಪೋತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಪ್ರಸಾದಲಿಂಗ, ಇಂತಿವರ ಸಂಪರ್ಕಸಂಯೋಗವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಮಹಾಲಿಂಗ. ಇನ್ನು ಜಂಗಮದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಕಠಿಣವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಆಚಾರಲಿಂಗ, ಮೃದುವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಗುರುಲಿಂಗ, ಉಷ್ಣವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಶಿವಲಿಂಗ, ಶೈತ್ಯವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಜಂಗಮಲಿಂಗ, ಇಂತೀ ಪರುಶನ ನಾಲ್ಕರ ಮಿಶ್ರಪರುಶನವನರಿವುದು ಜಂಗಮಲಿಂಗದಲ್ಲಿಯ ಪ್ರಸಾದಲಿಂಗ, ಪರುಶನೇಂದ್ರಿಯ ತೃಪ್ತಿಯನರಿವುದು ಜಂಗಮಲಿಂಗದಲ್ಲಿಯ ಮಹಾಲಿಂಗ. ಇನ್ನು ಪ್ರಸಾದಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಘಂಟೆ ಜಯಘಂಟೆ ತಾಳ Põ್ಞಸಾಳ ಮೊದಲಾದ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಆಚಾರಲಿಂಗ, ವೀಣೆ ರುದ್ರವೀಣೆ ತುಂಬುರುವೀಣೆ ಕಿನ್ನರವೀಣೆ ಕೈಲಾಸವೀಣೆ ಮೊದಲಾದ ತಂತಿಕಟ್ಟಿ ನುಡಿವ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಗುರುಲಿಂಗ, ಪಟಹ ಪಡಡಕ್ಕೆ ಡಿಂಡಿಮ ಆವುಜ ಪಟಾವುಜ ಮೃದಂಗ ಮುರಜ ಭೇರಿ ಮೊದಲಾದ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಶಿವಲಿಂಗ, ಕಹಳೆ ಹೆಗ್ಗಹಳೆ ಶಂಖ ವಾಂಸ ನಾಗಸರ ಉಪಾಂಗ ಮೊದಲಾದ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಜಂಗಮಲಿಂಗ, ಸಂಗೀತ ಸಾಹಿತ್ಯ ಶಬ್ದಾರ್ಥ ಮೊದಲಾದ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಪ್ರಸಾದಲಿಂಗ, ಪಂಚಮಹಾವಾದ್ಯಂಗಳ ತೃಪ್ತಿಯನರಿವುದು ಪ್ರಸಾದಲಿಂಗದಲ್ಲಿಯ ಮಹಾಲಿಂಗ. ಇನ್ನು ಮಹಾಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಆಚಾರಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು ಮಹಾಲಿಂಗದಲ್ಲಿಯ ಆಚಾರಲಿಂಗ, ಗುರುಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು ಮಹಾಲಿಂಗದಲ್ಲಿಯ ಗುರುಲಿಂಗ, ಶಿವಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು ಮಹಾಲಿಂಗದಲ್ಲಿಯ ಶಿವಲಿಂಗ, ಜಂಗಮಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು ಮಿಶ್ರಾರ್ಪಣದ ತೃಪ್ತಿಯನರಿವುದು ಮಹಾಲಿಂಗದಲ್ಲಿಯ ಪ್ರಸಾದಲಿಂಗ, ಅವಿರಳಭಾವ ಭಾವೈಕ್ಯ ನಿರ್ದೇಶನತೃಪ್ತಿಯನರಿವುದು ಮಹಾಲಿಂಗದಲ್ಲಿಯ ಮಹಾಲಿಂಗ. ಇನ್ನು ಆಚಾರಲಿಂಗ ಮೋಹಿತನಾದಡೆ ಸತಿ ಸುತ ಬಾಂಧವರಲ್ಲಿಯ ಮೋಹವಿಲ್ಲದಿರಬೇಕು. ಆಚಾರಲಿಂಗ ಭಕ್ತನಾದಡೆ ಸ್ವಯ ಕಾಯಕದಲ್ಲಿರಬೇಕು. ಆಚಾರಲಿಂಗ ವೀರನಾದಡೆ ಪೂರ್ವವನಳಿದು ಪುನರ್ಜಾತನಾಗಬೇಕು. ಆಚಾರಲಿಂಗ ಪ್ರಾಣಿಯಾದಡೆ ಭವಿಗಳಿಗೆ ತಲೆವಾಗದಿರಬೇಕು. ಆಚಾರಲಿಂಗ ಪ್ರಸಾದಿಯಾದಡೆ ಜಿಹ್ವೆ ಲಂಪಟವಿಲ್ಲದಿರಬೇಕು. ಆಚಾರಲಿಂಗ ತೃಪ್ತನಾದಡೆ ಭಕ್ತಕಾಯ ಮಮಕಾಯನಾಗಿರಬೇಕು. ಇನ್ನು ಗುರುಲಿಂಗ ಮೋಹಿತನಾದಡೆ ತನುಗುಣ ನಾಸ್ತಿಯಾಗಿರಬೇಕು. ಗುರುಲಿಂಗ ಭಕ್ತನಾದಡೆ ತನು ಗುರುವಿನಲ್ಲಿ ಸವೆಯಬೇಕು. ಗುರುಲಿಂಗ ವೀರನಾದಡೆ ಭವರೋಗಂಗಳಿಲ್ಲದಿರಬೇಕು. ಗುರುಲಿಂಗ ಪ್ರಾಣಿಯಾದಡೆ ಪ್ರಕೃತಿಗುಣರಹಿತನಾಗಿರಬೇಕು. ಗುರುಲಿಂಗ ಪ್ರಸಾದಿಯಾದಡೆ ಗುರುಪ್ರಸಾದವನಲ್ಲದೆ ಸ್ವೀಕರಿಸದಿರಬೇಕು. ಗುರುಲಿಂಗ ತೃಪ್ತನಾದಡೆ ಅರಸುವ ಅರಕೆಯಿಲ್ಲದಿರಬೇಕು. ಇನ್ನು ಶಿವಲಿಂಗ ಮೋಹಿತನಾದಡೆ ಮನಗುಣ ನಾಸ್ತಿಯಾಗಿರಬೇಕು. ಶಿವಲಿಂಗ ಭಕ್ತನಾದಡೆ ಲಿಂಗದ ಏಕೋಗ್ರಾಹಕತ್ವವಳವಟ್ಟಿರಬೇಕು. ಶಿವಲಿಂಗ ವೀರನಾದಡೆ ಕಾಲಕರ್ಮಾದಿಗಳಿಗಳುಕದಿರಬೇಕು. ಶಿವಲಿಂಗ ಪ್ರಾಣಿಯಾದಡೆ ಜನನಮರಣಂಗಳಿಗೊಳಗಾಗದಿರಬೇಕು. ಶಿವಲಿಂಗ ಪ್ರಸಾದಿಯಾದಡೆ ಶಿವಪ್ರಸಾದವನಲ್ಲದೆ ಸ್ವೀಕರಿಸದಿರಬೇಕು. ಶಿವಲಿಂಗ ತೃಪ್ತನಾದಡೆ ದ್ವೈತಾದ್ವೈತವಳಿದಿರಬೇಕು. ಇನ್ನು ಜಂಗಮಲಿಂಗ ಮೋಹಿತನಾದಡೆ ಪ್ರಾಣಗುಣನಾಸ್ತಿಯಾಗಿರಬೇಕು. ಜಂಗಮಲಿಂಗ ಭಕ್ತನಾದಡೆ ಜಂಗಮದಲ್ಲಿ ಧನಮನವ ಮುಟ್ಟಿ ಸವೆಯಬೇಕು. ಜಂಗಮಲಿಂಗ ವೀರನಾದಡೆ ಭಯಭಂಗವಿಲ್ಲದಿರಬೇಕು. ಜಂಗಮಲಿಂಗ ಪ್ರಾಣಿಯಾದಡೆ ತಥ್ಯಮಿಥ್ಯರಾಗದ್ವೇಶಂಗಳಿಲ್ಲದಿರಬೇಕು. ಜಂಗಮಲಿಂಗ ಪ್ರಸಾದಿಯಾದಡೆ ಭೋಗಭೂಷಣಂಗಳಾಸೆಯಿಲ್ಲದಿರಬೇಕು. ಜಂಗಮಲಿಂಗ ತ್ರಪ್ತನಾದಡೆ ದೇಹೋಹಮ್ಮಿಲ್ಲದಿರಬೇಕು. ಇನ್ನು ಪ್ರಸಾದಲಿಂಗ ಮೋಹಿತನಾದಡೆ ಶಬ್ದಜಾಲಂಗಳಿಗೆ ಕಿವಿಯೊಡ್ಡದಿರಬೇಕು. ಪ್ರಸಾದಲಿಂಗ ಭಕ್ತನಾದಡೆ ದಾಸೋಹಮ್ಮಿಲ್ಲದಿರಬೇಕು. ಪ್ರಸಾದಲಿಂಗ ವೀರನಾದಡೆ ಚಿದಹಮ್ಮಿಲ್ಲದಿರಬೇಕು. ಪ್ರಸಾದಲಿಂಗ ಪ್ರಾಣಿಯಾದಡೆ ಪ್ರಾಣಲಿಂಗದೊಳಭಿನ್ನನಾಗಿರಬೇಕು. ಪ್ರಸಾದಲಿಂಗ ಪ್ರಸಾದಿಯಾದಡೆ ಪ್ರಸಾದಪ್ರಸನ್ನನಾಗಿರಬೇಕು. ಪ್ರಸಾದಲಿಂಗ ತೃಪ್ತನಾದಡೆ ಇಂದ್ರಿಯಂಗಳಿಚ್ಛೆಯಿಲ್ಲದಿರಬೇಕು. ಇನ್ನು ಮಹಾಲಿಂಗ ಮೋಹಿತನಾದಡೆ ಅಣಿಮಾದಿ ಅಷ್ಟಮಹದೈಶ್ವರ್ಯಂಗಳ ಬಯಸದಿರಬೇಕು. ಮಹಾಲಿಂಗ ಭಕ್ತನಾದಡೆ ಅಷ್ಟಮಹಾಸಿದ್ಧಿಗಳ ನೆನೆಯದಿರಬೇಕು. ಮಹಾಲಿಂಗ ವೀರನಾದಡೆ ಚತುರ್ವಿಧ ಪದವಿಯ ಹಾರದಿರಬೇಕು. ಮಹಾಲಿಂಗ ಪ್ರಾಣಿಯಾದಡೆ ಇಹಪರಂಗಳಾಸೆ ಇಲ್ಲದಿರಬೇಕು. ಮಹಾಲಿಂಗ ಪ್ರಸಾದಿಯಾದಡೆ ಅರಿವು ಮರಹಳಿದು ಚಿಲ್ಲಿಂಗಸಂಗಿಯಾಗಿರಬೇಕು. ಮಹಾಲಿಂಗ ತೃಪ್ತನಾದಡೆ ಭಾವಸದ್ಭಾವನಿರ್ಭಾವನಳಿದು ಭಾವೈಕ್ಯವಾಗಿ ತಾನಿಃದಿರೆಂಬ ಭಿನ್ನಭಾವ ತೋರದಿರಬೇಕು. ಇಂತೀ ನೂರೆಂಟು ಸ್ಥಲದಲ್ಲಿ ನಿಪುಣನಾಗಿ ಮಿಶ್ರಷಡ್ವಿಧಸ್ಥಲ ಷಡುಸ್ಥಲ ತ್ರಿಸ್ಥಲ ಏಕಸ್ಥಲವಾಗಿ ಸ್ಥಲ ನಿಃಸ್ಥಲವನೆಯ್ದಿ ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕಯ್ಯಾ.
--------------
ಆದಯ್ಯ
-->