ಅಥವಾ

ಒಟ್ಟು 9 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮತ್ತಂ,ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ ಭಯ ಭಕ್ತಿಯಿಂದ `ಎಲೆ ಸದ್ಗುರುಸ್ವಾಮಿ ಆದಿಮೂಲ ಆನಾದಿಮೂಲಂಗಳಿಗತ್ತತ್ತವಾಗಿಹ ಚಿದ್ಬ ್ರಹ್ಮಾಂಡ ಮೊದಲಾಗಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಬ್ರಹ್ಮಾಂಡಗಳೇನೂ ಇಲ್ಲದಂದು, ಇನ್ನೂರಿಪ್ಪತ್ನಾಲ್ಕು ಭುವನಂಗಳು ಮೊದಲಾಗಿ ಮಹಾಭುವನ, ಅತಿಮಹಾಭುವನಂಗಳು ಕಡೆಯಾಗಿ, ಅತಿಮಹಾತೀತ ಮಹಾ ಅನಂತಕೋಟಿ ಭುವನಾದಿಭುವನಂಗಳೇನೂ ಎನಲಿಲ್ಲದಂದು, ಆದಿಮೂಲ ಆನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲ ಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿಯ ರೂಪು-ಲಾವಣ್ಯ-ಸೌಂದರ್ಯ-ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳು ಹೇಗಿರ್ದವೆಂಬುದನು, ನಿರಂಜನಾತೀತ ಪ್ರಣವದುತ್ಪತ್ಯವನು, ಅವಾಚ್ಯ ಪ್ರಣವದುತ್ಪತ್ಯವನು ಕಲಾಪ್ರಣವದುತ್ಪತ್ಯದ ಭೇದವನು, ಅನಾದಿಪ್ರಣವದುತ್ಪತ್ಯದ ಭೇದವನು, ಅನಾದಿ ಅಕಾರ ಉಕಾರ ಮಕಾರದುತ್ಪತ್ಯವನು, ಆದಿಪ್ರಣವದುತ್ಪತ್ಯದ ಭೇದವನು, ಆದಿ ಅಕಾರ ಉಕಾರ ಮಕಾರಂಗಳುತ್ಪತ್ಯವನು, ನಾದ ಬಿಂದುಕಳೆಗಳ ಭೇದವನು, ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದುತ್ಪತ್ಯ ಲಯದ ಭೇದವನು, ಅದಕ್ಕೆ ಅಧಿದೇವತೆಯನು, ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಕಾರ ಉಕಾರ ಮಕಾರದಲ್ಲಿ ಅಡಗಿದ ಭೇದವನು, ಅಕಾರ-ಉಕಾರ-ಮಕಾರ-ನಾದ-ಬಿಂದು-ಕಳೆ-ಪ್ರಕೃತಿ-ಪ್ರಾಣ ಆಧಾರಂಗಳ ಭೇದವನು, ನಾದಬಿಂದುಕಳೆ ಪ್ರಕೃತಿ ಪ್ರಾಣಂಗಳ ಆಧಾರಂಗಳ ಭೇದವನು, ನಾದ-ಬಿಂದು-ಕಳೆ-ಅಕಾರ-ಉಕಾರ-ಮಕಾರವು ಕೂಡಿ ಓಂಕಾರದುತ್ಪತ್ಯವನು, ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದುತ್ಪತ್ಯದ ಭೇದವನು, ಅಖಂಡ ಸ್ವಯಂಭುಲಿಂಗದುತ್ಪತ್ಯವನು, ಅನಾದಿ ಸದಾಶಿವದುತ್ಪತ್ಯದ ಭೇದವನು, ಅನಾದಿ ಈಶ್ವರತತ್ವದುತ್ಪತ್ಯವನು, ಅನಾದಿ ಮಹೇಶ್ವರತತ್ವದುತ್ಪತ್ಯದ ಭೇದವನು, ಆದಿ ಸದಾಶಿವತತ್ವದುತ್ಪತ್ಯದ ಭೇದವನು, ಆದಿ ಈಶ್ವರತತ್ವದುತ್ಪತ್ಯದ ಭೇದವನು, ಆದಿ ಮಹೇಶ್ವರತತ್ವದುತ್ಪತ್ಯದ ಭೇದವನು, ದಶಚಕ್ರದ ಉತ್ಪತ್ಯಭೇದವನು, ದಶಚಕ್ರದ ನ್ಯಾಸವನು, ದಶಚಕ್ರದ ನಿವೃತ್ತಿಯನು, ನವಪದ್ಮದ ನಿವೃತ್ತಿಯನು, ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು, ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಅಕಾರ ಉಕಾರ ಮಕಾರದುತ್ಪತ್ಯವನು, ಆ ಅಕಾರ ಉಕಾರ ಮಕಾರದಲ್ಲಿ ಪೃಥ್ವಿ ಅಗ್ನಿ ಋಗ್ವೇದ ಭೂಲೋಕ ಬ್ರಹ್ಮಾಂಡ ಅಂತರೀಕ್ಷ ಯಜುರ್ವೇದ ವಾಯು ಭುವರ್ಲೋಕ, ವಿಷ್ಣು ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯವನು, ಆ ಅಕಾರ ಉಕಾರ ಮಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾದ ಭೇದವನು, ಆ ಓಂಕಾರ ತಾರಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪದ ಕಾಂತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು, ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು, ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು, ಅತಿಸೂಕ್ಷ್ಮ ಪಂಚಾಕ್ಷರಿಯ ಕಾಂತಿಯನು, ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು, ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು, ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು, ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು, ಸಹಸ್ರಾಕ್ಷರದ ನಿವೃತ್ತಿಯನು, ಷಡ್ವಿಧಮುಖಂಗಳುತ್ಪತ್ಯವನು, ಷಡ್ವಿಧಮುಖಂಗಳ ನೆಲೆಯನು, ಷಡ್ವಿಧಮುಖಂಗಳ ನಿವೃತ್ತಿಯನು, ಷಡ್ವಿಧಭೂತಂಗಳುತ್ಪತ್ಯವನು, ಷಡ್ವಿಧಭೂತಂಗಳ ನೆಲೆಯನು, ಷಡ್ವಿಧಭೂತಂಗಳ ನಿವೃತ್ತಿಯನು, ಷಡ್ವಿಧಲಿಂಗದುತ್ಪತ್ಯವನು, ಷಡ್ವಿಧಲಿಂಗಗಳ ನೆಲೆಯನು, ಷಡ್ವಿಧಲಿಂಗಗಳ ನಿವೃತ್ತಿಯನು, ಷಡ್ವಿಧಕಲೆಗಳುತ್ಪತ್ಯವನು, ಷಡ್ವಿಧಕಲೆಗಳ ನೆಲೆಯನು, ಷಡ್ವಿಧಕಲೆಗಳ ನಿವೃತ್ತಿಯನು, ಷಡ್ವಿಧಸಾದಾಖ್ಯದುತ್ಪತ್ಯವನು, ಷಡ್ವಿಧಸಾದಾಖ್ಯದ ನೆಲೆಯನು, ಷಡ್ವಿಧಸಾದಾಖ್ಯದ ನಿವೃತ್ತಿಯನು, ಷಡ್ವಿಧಹಸ್ತಂಗಳುತ್ಪತ್ಯವನು, ಷಡ್ವಿಧಹಸ್ತಂಗಳ ನೆಲೆಯನು, ಷಡ್ವಿಧಹಸ್ತಂಗಳ ನಿವೃತ್ತಿಯನು, ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು, ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು, ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು, ಅಷ್ಟನಾದದುತ್ಪತ್ಯವನು, ಅಷ್ಟನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು, ಷಡ್ವಿಧಭಕ್ತಿಯ ಉತ್ಪತ್ಯವನು, ಷಡ್ವಿಧಭಕ್ತಿಯ ನೆಲೆಯನು, ಷಡ್ವಿಧಭಕ್ತಿಯ ನಿವೃತ್ತಿಯನು, ಷಡ್ವಿಧಪರಿಣಾಮದುತ್ಪತ್ಯವನು, ಷಡ್ವಿಧಪರಿಣಾಮದ ನೆಲೆಯನು, ಷಡ್ವಿದ ಪರಿಣಾಮದ ನಿವೃತ್ತಿಯನು, ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು, ಚತುರ್ವೇದದ ನಿವೃತ್ತಿಯನು, ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು, ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು, ಮಿಶ್ರಾರ್ಪಣ ಷಡುಸ್ಥಲ ಭೇದವನು, ಇಷ್ಟ-ಪ್ರಾಣ-ಭಾವಲಿಂಗದ ಭೇದವನು, ಇಷ್ಟ-ಪ್ರಾಣ-ಭಾವಲಿಂಗದಲ್ಲಿ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವು ಅಡಗಿಹ ಭೇದವನು ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿ ಅಖಂಡಜ್ಯೋತಿರ್ಮಯಲಿಂಗವಾದ ಭೇದವನು. ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನೆಲೆಯನು, ಪೃಥ್ವಿ ಅಪ್ಪು ತೇಜ ವಾಯು ಆಕಾಶದ ನಿವೃತ್ತಿಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು, ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು, ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು, ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು, ನಿರಾಮಯಾತೀತ ಷಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು, ಆ ಷಟ್ಸ್ಥಲಬ್ರಹ್ಮದಲ್ಲಿ ಮೂವತ್ತಾರು ತತ್ತ್ವಂಗಳುತ್ಪತ್ಯವನು, ಷಡುಶಕ್ತಿಗಳುತ್ಪತ್ಯವನು, ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು, ಪ್ರೇರಕಾವಸ್ಥೆಯ ದರ್ಶನದ ಭೇದವನು, ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು, ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು, ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನದ ಭೇದವನು, ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು, ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು, ಜ್ಞಾನವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು, ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು, ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು, ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು, ತತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು, ಕಲಾಧ್ವದುತ್ಪತ್ಯವನು, ಕಲಾಧ್ವದ ವರ್ತನೆಯನು, ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ, ತಾಮಸನಿರಸನವ ಮಾಡಿ ನುಡಿದ ವಚನದ ಭೇದವನು, ತತ್‍ಪದ ತ್ವಂಪದ ಅಸಿಪದಂಗಳ ಭೇದವನು, ಆ ತ್ವಂಪದ ತತ್ಪದ ಅಕಾರ ಉಕಾರ ಮಕಾರಂಗಳಲ್ಲಿ ಅಡಗಿಹ ಭೇದವನು, ಆ ಆಕಾರ ಉಕಾರ ಮಕಾರ ಏಕವಾಗಿ ಷಟ್ಸ್ಥಲಬ್ರಹ್ಮವಾದ ಭೇದವನು, ವಚನಾನುಭಾವದ ಭೇದವನು ಅರಿಯೆನು, ಎಲೆ ಸದ್ಗುರುಸ್ವಾಮಿ ನಿರೂಪಿಸೆಂದು, ಆ ಶಿಷ್ಯನು ಬಿನ್ನವಿಸಲು ಆ ಸದ್ಗುರುಸ್ವಾಮಿ ನಿರೂಪಿಸಿದ ವಚನವೆಂತೆಂದಡೆ : ಅನಂತಕೋಟಿ ಮಹಾಬ್ರಹ್ಮಾಂಡ ಮೊದಲಾಗಿ ಅನಂತಕೋಟಿ ಪ್ರಣವಬ್ರಹ್ಮಾಂಡ ಕಡೆಯಾಗಿ ಅನಂತಕೋಟಿ ಅತಿಮಹಾಬ್ರಹ್ಮಾಂಡಂಗಳೇನೂಯೇನೂ ಎನಲಿಲ್ಲದಂದು, ಅನಂತಕೋಟಿ ಮಹಾಬ್ರಹ್ಮಾಂಡಂಗಳನೊಳಕೊಂಡು ಇನ್ನೂರಿಪ್ಪತ್ನಾಲ್ಕು ಮಹಾಭುವನ ಮೊದಲಾಗಿ ಅತಿಮಹಾಭುವನಂಗಳು ಅತಿಮಹಾತೀತವೆಂಬ ಮಹಾಭುವನಂಗಳು ಕಡೆಯಾಗಿ ಅನಂತಕೋಟಿ ಅತಿಮಹಾತೀತ ಭುವನಂಗಳು ಏನೂಯೇನೂ ಇಲ್ಲದಂದು ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಮಹಾಘನವ ಮೀರಿದತ್ತತ್ತವಾಗಿಹ ಅಖಂಡ ಅಖಂಡಮಹಾಮೂಲಸ್ವಾಮಿಯ ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ರುದ್ರ ಈಶ್ವರ ಸದಾಶಿವ ಬ್ರಹ್ಮ ನಾರಾಯಣರಳಿದುಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ-ಸ್ವಭಾವಂಗಳನರಿಯದೆ ಅನಂತಕೋಟಿ ದೇವರ್ಕಳಳಿದರು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳನರಿಯದೆ ಅನಂತಕೋಟಿ ವೇದಂಗಳು, ಅನಂತಕೋಟಿ ಮುನಿಗಳು, ಅನಂತಕೋಟಿ ಲೋಕಾದಿಲೋಕಂಗಳೆಲ್ಲ ಪ್ರಳಯಕ್ಕೊಳಗಾದರು ನೋಡಾ. ಆ ಅಖಂಡಮಹಾಮೂಲಸ್ವಾಮಿಯ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ಈ ಲೋಕದ ಜಡರುಗಳೆತ್ತ ಬಲ್ಲರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ ತತ್ವ ವಿತತ್ವ ಶೂನ್ಯ ಮಹಾಶೂನ್ಯವಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಇನ ಶಶಿ ವ್ಯೋಮ ಸಮೀರ ಅಗ್ನಿ ಅಂಬು ಪೃಥ್ವಿ ನವಗ್ರಹ ದಶದಿಕ್ಕು ಛತ್ತೀಸ ತತ್ವಂಗಳೇನೂ ಇಲ್ಲದಂದು, ತಾರಜ ತಂಡಜ ಬಿಂದುಜ ಭಿನ್ನಾಯುಕ್ತ ಅವ್ಯ[ಕ್ತ] ಅಮದಾಯುಕ್ತ ಮಣಿರಣ ಮಾನ್ಯರಣ್ವ ವಿಶ್ವರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತಿವು ಯಾವವೂ ಇಲ್ಲದಂದು, ನಾದ ಬಿಂದು ಕಳೆಗಳಿಲ್ಲದಂದು, ಪಶುಪಾಶ ಪತಿ ಕುಂಡಲಿ ಕಾರಕ ಇವೇನೂ ಇಲ್ಲದಂದು, ವಿಜ್ಞಾನಾಲಕರು ಸಕಲಾಕಲರು ಪ್ರಳಯಾಕಲರು ಇವೇನೂ ಇಲ್ಲದಂದು, ದನುಜ ಮನುಜ ದಿವಿಜ ಮನು ಮುನಿ ನಕ್ಷತ್ರಮಂಡಲ ಇವೇನೂ ಇಲ್ಲದಂದು, ಅಂದು ನೀನು ನಿಷ್ಕಲ ನಿರವಯ ನಿಃಶೂನ್ಯನಾಗಿರ್ದೆಯಯ್ಯ ಬಸವಣ್ಣ. ನೀವೊಂದು ಅನಂತಕಾಲ ಅನಂತಯುಗ ನಿಮ್ಮ ಲೀಲಾ ವಿಚಿಂತನೆ ನೆನೆದ ನೆನಹೇ ಸುನಾದ. ಆ ಸುನಾದದ ಪ್ರಕಾಶ ತೇಜೋಪುಂಜವೇ ಬಿಂದು. ನಾದವೇ ನಿರಂಜನ. ಬಿಂದುವೇ ನಿರಾಲಂಬ..... ಕೂಟವೇ ನಿರಾಮಯ. ಇಂತೀ ನಾದ ಬಿಂದು ಕಳೆ ಮೂರು ಕೂಡೆ ಅಖಂಡ ತೇಜೋಮಯವಾಗಿ ಷಡ್‍ಬ್ರಹ್ಮಸ್ವರೂಪವನೈದಿದೆಯಲ್ಲ ಬಸವಣ್ಣ. ನಿನ್ನ ವಿನೋದದಿಂದ ಆ ಷಡ್‍ಬ್ರಹ್ಮದಿಂದ ಷಡ್ವಿಧ ಭೂತಂಗಳು ಪುಟ್ಟಿ ಆ ಷಡ್ವಿಧಭೂತಂಗಳೇ ಎನಗಂಗವಾದಲ್ಲಿ ಆ ಷಡ್‍ಬ್ರಹ್ಮವೇ ಷಡಕ್ಷರಿಮಯವಾಗಿ ಆ ಷಡ್ವಿಧಭೂತಂಗಳೊಳಗೆ ಸಮೇತವಾಗಿ ಕೂಡಿ ಛತ್ತೀಸತತ್ವ ಮಂತ್ರಸ್ವರೂಪವಾದ ಭೇದ ಹೇಗೆಂದಡೆ ಅದಕ್ಕೆ ವಿವರ: ಓಂಕಾರವೇ ಆತ್ಮನು. ಓಂಕಾರ ಯಕಾರ ಸಂಯೋಗವಾದಲ್ಲಿ ಆಕಾಶ ಪುಟ್ಟಿತ್ತು. ಓಂಕಾರ ವಾಕಾರ ಸಂಯೋಗವಾದಲ್ಲಿ ವಾಯು ಪುಟ್ಟಿತ್ತು. ಓಂಕಾರ ಶಿಕಾರ ಸಂಯೋಗದಲ್ಲಿ ಅಗ್ನಿ ಪುಟ್ಟಿತ್ತು. ಓಂಕಾರ ಮಃಕಾರ ಸಂಯೋಗದಲ್ಲಿ ಅಪ್ಪು ಪುಟ್ಟಿತ್ತು. ಓಂಕಾರ ನಕಾರ ಸಂಯೋಗವಾದಲ್ಲಿ ಪೃಥ್ವಿ ಪುಟ್ಟಿತ್ತು. ಇನ್ನ ಯಕಾರ ಓಂಕಾರ ಸಂಯೋಗವಾದಲ್ಲಿ ಭಾವ ಪುಟ್ಟಿತ್ತು. ಯಕಾರವೇ ಜ್ಞಾನ. ಯಕಾರ ವಾಕಾರ ಸಂಯೋಗವಾದಲ್ಲಿ ಮನ ಪುಟ್ಟಿತ್ತು. ಯಕಾರ ಶಿಕಾರ ಸಂಯೋಗವಾದಲ್ಲಿ ಅಹಂಕಾರ ಪುಟ್ಟಿತ್ತು. ಯಕಾರ ಮಃಕಾರ ಸಂಯೋಗವಾದಲ್ಲಿ ಬುದ್ಧಿ ಪುಟ್ಟಿತ್ತು. ಯಕಾರ ನಕಾರ ಸಂಯೋಗವಾದಲ್ಲಿ ಚಿತ್ತು ಪುಟ್ಟಿತ್ತು. ಇನ್ನು ವಕಾರ ಓಂಕಾರ ಸಂಯೋಗವಾದಲ್ಲಿ ಪಂಚವಾಯು ಪುಟ್ಟಿದವು. ವಕಾರ ಯಕಾರ ಸಂಯೋಗವಾದಲ್ಲಿ ಸಮಾನವಾಯು ಪುಟ್ಟಿತ್ತು. ವಾಕಾರ ತಾನೇ ಉದಾನವಾಯು. ವಕಾರ ಶಿಕಾರ ಸಂಯೋಗವಾದಲ್ಲಿ ವ್ಯಾನವಾಯು ಪುಟ್ಟಿತ್ತು. ವಕಾರ ಮಃಕಾರ ಸಂಯೋಗವಾದಲ್ಲಿ ಅಪಾನವಾಯು ಪುಟ್ಟಿತ್ತು. ವಕಾರ ನಕಾರ ಸಂಯೋಗವಾದಲ್ಲಿ ಪ್ರಾಣವಾಯು ಪುಟ್ಟಿತ್ತು. ಇನ್ನು ಶಿಕಾರ ಓಂಕಾರ ಸಂಯೋಗವಾದಲ್ಲಿ ಹೃದಯ ಪುಟ್ಟಿತ್ತು. ಶಿಕಾರ ಯಕಾರ ಸಂಯೋಗವಾದಲ್ಲಿ ಶ್ರೋತ್ರ ಪುಟ್ಟಿತ್ತು. ಶಿಕಾರಾ ವಾಕಾರ ಸಂಯೋಗವಾದಲ್ಲಿ ತ್ವಕ್ಕು ಪುಟ್ಟಿತ್ತು. ಶಿಕಾರ ತಾನೇ ನೇತ್ರ ಶಿಕಾರ ಮಃಕಾರ ಸಂಯೋಗವಾದಲ್ಲಿ ಜಿಹ್ವೆ ಪುಟ್ಟಿತ್ತು. ಶಿಕಾರ ನಕಾರ ಸಂಯೋಗವಾದಲ್ಲಿ ಘ್ರಾಣ ಪುಟ್ಟಿತ್ತು. ಇನ್ನು ಮಃಕಾರ ಓಂಕಾರ ಸಂಯೋಗವಾದಲ್ಲಿ ತೃಪ್ತಿ ಪುಟ್ಟಿತ್ತು. ಮಕಾರ ಯಕಾರ ಸಂಯೋಗವಾದಲ್ಲಿ ಶಬ್ದ ಪುಟ್ಟಿತ್ತು. ಮಕಾರ ವಾಕಾರ ಸಂಯೋಗವಾದಲ್ಲಿ ಸ್ಪರ್ಶನ ಪುಟ್ಟಿತ್ತು. ಮಕಾರ ಶಿಕಾರ ಸಂಯೋಗವಾದಲ್ಲಿ ರೂಪು ಪುಟ್ಟಿತ್ತು. ಮಃಕಾರ ತಾನೇ ರಸ. ಮಕಾರ ನಕಾರ ಸಂಯೋಗವಾದಲ್ಲಿ ಗಂಧ ಪುಟ್ಟಿತ್ತು. ಇನ್ನು ನಕಾರ ಓಂಕಾರ ಸಂಯೋಗವಾದಲ್ಲಿ ಅಂತರ್ವಾಕ್ಕು ಪುಟ್ಟಿತ್ತು. ನಕಾರ ಯಕಾರ ಸಂಯೋಗವಾದಲ್ಲಿ ವಾಕ್ಕು ಪುಟ್ಟಿತ್ತು. ನಕಾರ ವಾಕಾರ ಸಂಯೋಗವಾದಲ್ಲಿ ಪಾಣಿ ಪುಟ್ಟಿತ್ತು. ನಕಾರ ಶಿಕಾರ ಸಂಯೋಗವಾದಲ್ಲಿ ಪಾದ ಪುಟ್ಟಿತ್ತು. ನಕಾರ ಮಃಕಾರ ಸಂಯೋಗವಾದಲ್ಲಿ ಗುಹ್ಯ ಪುಟ್ಟಿತ್ತು. ನಕಾರ ತಾನೇ ವಾಯು. ಇಂತೀ ಛತ್ತೀಸತತ್ವವೆಲ್ಲ ಮಂತ್ರಸ್ವರೂಪವಾದ ಬಸವಣ್ಣನೇ. ಎನಗೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ ಇಂತಿವೆಲ್ಲವನರಿದು ಅರ್ಪಿಸುವ ಭೇದ ಹೇಗೆಂದಡೆ ಪ್ರಮಥದಲ್ಲಿ ಷಟ್‍ಸ್ಥಲದ ವಿವರ: ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಭಕ್ತನ ಷಡ್ವಿಧಲಿಂಗದ ವಿವರ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಭಕ್ತನ ಷಡ್ವಿಧಹಸ್ತದ ವಿವರ: ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಭಕ್ತನ ಷಡ್ವಿಧಮುಖದ ವಿವರ: ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಭಕ್ತನ ಷಡ್ವಿಧಶಕ್ತಿಯ ವಿವರ: ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಭಕ್ತನ ಷಡ್ವಿಧಪದಾರ್ಥದ ವಿವರ: ಗಂಧ ರಸ ರೂಪು ಸ್ಪರ್ಶನ ಶಬ್ದ ಪರಿಣಾಮ. ಇನ್ನು ಭಕ್ತನ ಷಡ್ವಿಧಪ್ರಸಾದದ ವಿವರ: ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರ್ಶಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ದ್ವಿತೀಯದಲ್ಲಿ ಮಾಹೇಶ್ವರನ ಷಟ್‍ಸ್ಥಲ ವಿವರ: ಮಾಹೇಶ್ವರ ಭಕ್ತ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಮಾಹೇಶ್ವರನ ಷಡ್ವಿಧಲಿಂಗದ ವಿವರ: ಗುರುಲಿಂಗ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಮಾಹೇಶ್ವರನ ಷಡ್ವಿಧಹಸ್ತದ ವಿವರ: ಸುಬುದ್ಧಿ ಸುಚಿತ್ತ ನಿರಹಂಕಾರ ಸುಮನ ಸುಜ್ಞಾನ ಸದ್ಭಾವ. ಇನ್ನು ಮಾಹೇಶ್ವರನ ಷಡ್ವಿಧಮುಖದ ವಿವರ: ಜಿಹ್ವೆ ಘ್ರಾಣ ನೇತ್ರ ತ್ವಕ್ಕು ಶ್ರೋತ್ರ ಹೃದಯ. ಇನ್ನು ಮಾಹೇಶ್ವರನ ಷಡ್ವಿಧಶಕ್ತಿಯ ವಿವರ: ಜ್ಞಾನಶಕ್ತಿ ಕ್ರಿಯಾಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಮಾಹೇಶ್ವರನ ಷಡ್ವಿಧಭಕ್ತಿಯ ವಿವರ: ನೈಷೆ* ಶ್ರದ್ಧೆ ಸಾವಧಾನ ಅನುಭಾವ ಆನಂದ ಸಮರಸ. ಇನ್ನು ಮಾಹೇಶ್ವರನ ಷಡ್ವಿಧಪದಾರ್ಥದ ವಿವರ: ರಸ ಗಂಧ ರೂಪು ಸ್ಪರುಶನ ಶಬ್ದ ಪರಿಣಾಮ ಇನ್ನು ಮಾಹೇಶ್ವರನ ಷಡ್ವಿಧಪ್ರಸಾದದ ವಿವರ: ರಸಪ್ರಸಾದ ಗಂಧಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ತೃತೀಯದಲ್ಲಿ ಪ್ರಸಾದಿಯ ಷಟ್‍ಸ್ಥಲದ ವಿವರ: ಪ್ರಸಾದಿ ಭಕ್ತ ಮಾಹೇಶ್ವರ ಪ್ರಾಣಲಿಂಗಿ ಶರಣ ಐಕ್ಯ. ಇನ್ನು ಪ್ರಸಾದಿಯ ಷಡ್ವಿಧಲಿಂಗದ ವಿವರ: ಶಿವಲಿಂಗ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಸಾದಿಯ ಷಡ್ವಿದಹಸ್ತದ ವಿವರ: ನಿರಹಂಕಾರ ಸುಚಿತ್ತ ಸುಬುದ್ಧಿ ಸುಮನ ಸುಜ್ಞಾನ ಸದ್ಭಾವ. ಇನ್ನು ಪ್ರಸಾದಿಯ ಷಡ್ವಿಧಮುಖದ ವಿವರ: ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಶ್ರೋತ್ರ ಹೃದಯ. ಇನ್ನು ಪ್ರಸಾದಿಯ ಷಡ್ವಿಧಶಕ್ತಿಯ ವಿವರ: ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಆದಿಶಕ್ತಿ ಪರಾಶಕ್ತಿ ಚಿತ್ಯಕ್ತಿ. ಇನ್ನು ಪ್ರಸಾದಿಯ ಷಡ್ವಿಧಭಕ್ತಿಯ ವಿವರ: ಸಾವಧಾನ ಶ್ರದ್ಧೆ ನೈಷೆ* ಅನುಭಾವ ಆನಂದ ಸಮರಸ. ಇನ್ನು ಪ್ರಸಾದಿಯ ಷಡ್ವಿಧಪದಾರ್ಥದ ವಿವರ: ರೂಪು ಗಂಧ ರಸ ಸ್ಪರುಶನ ಶಬ್ದ ಪರಿಣಾಮ. ಇನ್ನು ಪ್ರಸಾದಿಯ ಷಡ್ವಿಧಪ್ರಸಾದದ ವಿವರ: ರೂಪುಪ್ರಸಾದ ಗಂಧಪ್ರಸಾದ ರಸಪ್ರಸಾದ ಸ್ಪರುಶನ ಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇಂತೀ ಮಾರ್ಗಕ್ರಿ ಅಂಗ ಲಿಂಗವಾದಲ್ಲಿ ಮುಂದೆ ಮೀರಿದ ಕ್ರಿಯೆ ಅಂಗ ಲಿಂಗ ತೃತೀಯಸ್ಥಲ. ಇನ್ನು ಚತುರ್ಥದಲ್ಲಿ ಪ್ರಾಣಲಿಂಗಿಯ ಷಡ್ವಿಧ ವಿವರ: ಪ್ರಾಣಲಿಂಗಿ ಭಕ್ತ ಮಾಹೇಶ್ವರ ಪ್ರಸಾದಿ ಶರಣ ಐಕ್ಯ. ಇನ್ನು ಪ್ರಾಣಲಿಂಗಿಯ ಷಡ್ವಿಧಲಿಂಗದ ವಿವರ: ಜಂಗಮಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಪ್ರಸಾದಲಿಂಗ ಮಹಾಲಿಂಗ. ಇನ್ನು ಪ್ರಾಣಲಿಂಗಿಯ ಷಡ್ವಿಧಹಸ್ತದ ವಿವರ: ಸುಮನ ಸುಚಿತ್ತ ಸುಬುದ್ಧಿ ನಿರಹಂಕಾರ ಸುಜ್ಞಾನ ಸದ್ಭಾವ. ಇನ್ನು ಪ್ರಾಣಲಿಂಗಿಯ ಷಡ್ವಿಧಶಕ್ತಿಯ ವಿವರ: ಆದಿಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಪರಶಕ್ತಿ ಚಿತ್ಯಕ್ತಿ. ಇನ್ನು ಪ್ರಾಣಲಿಂಗಿಯ ಷಡ್ವಿಧಭಕ್ತಿಯ ವಿವರ: ಅನುಭಾವ ಶ್ರದ್ಧೆ ನೈಷೆ* ಸಾವಧಾನ ಆನಂದ ಸಮರಸ. ಇನ್ನು ಪ್ರಾಣಲಿಂಗಿಯ ಷಡ್ವಿಧಪದಾರ್ಥದ ವಿವರ: ಸ್ಪರುಶನ ಗಂಧ ರಸ ರೂಪು ಶಬ್ದ ಪರಿಣಾಮ. ಇನ್ನು ಪ್ರಾಣಲಿಂಗಿಯ ಷಡ್ವಿಧಪ್ರಸಾದದ ವಿವರ: ಸ್ಫರುಶನಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಶಬ್ದಪ್ರಸಾದ ಪರಿಣಾಮಪ್ರಸಾದ. ಇನ್ನು ಪಂಚಮದಲ್ಲಿ ಶರಣನ ಷಟ್‍ಸ್ಥಲದ ವಿವರ: ಶರಣ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಐಕ್ಯ. ಇನ್ನು ಶರಣನ ಷಡ್ವಿಧಲಿಂಗದ ವಿವರ: ಪ್ರಸಾದಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗ. ಶರಣನ ಷಡ್ವಿಧಹಸ್ತದ ವಿವರ: ಸುಜ್ಞಾನ ಸುಚಿತ್ತ ಸುಬುದ್ಧಿ ನಿರಂಕಾರ ಸುಮನ ಸದ್ಭಾವ ಇನ್ನು ಶರಣನ ಷಡ್ವಿಧಶಕ್ತಿಯ ವಿವರ: ಪರಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಚಿತ್ಯಕ್ತಿ. ಇನ್ನು ಶರಣನ ಷಡ್ವಿಧಭಕ್ತಿಯ ವಿವರ: ಆನಂದ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಸಮರಸ. ಇನ್ನು ಶರಣನ ಷಡ್ವಿಧ ಪ್ರಸಾದದ ವಿವರ: ಶಬ್ದಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಪರಿಣಾಮಪ್ರಸಾದ. ಇನ್ನು ಷಷ*ಮದಲ್ಲಿ ಆ ಐಕ್ಯನ ಷಟ್‍ಸ್ಥಲದ ವಿವರ: ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ. ಇನ್ನು ಐಕ್ಯನ ಷಡ್ವಿಧಲಿಂಗದ ವಿವರ: ಮಹಾಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ. ಇನ್ನು ಐಕ್ಯನ ಷಡ್ವಿಧಹಸ್ತದ ವಿವರ: ಸದ್ಭಾವ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ. ಇನ್ನು ಐಕ್ಯನ ಷಡ್ವಿಧಮುಖದ ವಿವರ: ಹೃದಯ ಪ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ. ಇನ್ನು ಐಕ್ಯನ ಷಡ್ವಿಧಶಕ್ತಿಯ ವಿವರ: ಚಿತ್ಯಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ. ಇನ್ನು ಐಕ್ಯನ ಷಡ್ವಿಧಭಕ್ತಿಯ ವಿವರ: ಸಮರಸ ಶ್ರದ್ಧೆ ನೈಷೆ* ಸಾವಧಾನ ಅನುಭಾವ ಆನಂದ. ಇನ್ನು ಐಕ್ಯನ ಷಡ್ವಿಧಪದಾರ್ಥದ ವಿವರ: ಪರಿಣಾಮ ಗಂಧ ರಸ ರೂಪು ಸ್ಪರುಶನ ಶಬ್ದ. ಇನ್ನು ಐಕ್ಯನ ಷಡ್ವಿಧಪ್ರಸಾದದ ವಿವರ: ಪರಿಣಾಮಪ್ರಸಾದ ಗಂಧಪ್ರಸಾದ ರಸಪ್ರಸಾದ ರೂಪುಪ್ರಸಾದ ಸ್ಪರುಶನಪ್ರಸಾದ ಶಬ್ದಪ್ರಸಾದ. ಇಂತಿವೆಲ್ಲವೂ ಅರ್ಪಿತವಾಗಲೊಡನೆ ಏಕಮೇವ ಪರಬ್ರಹ್ಮ ತಾನೆಯಾಗಿ ಉಳಿದ ಉಳುಮೆಯೇ ಬಸವಣ್ಣ. ಆ ಬಸವಣ್ಣನೇ ಎನಗೆ ಇಷ್ಟಬ್ರಹ್ಮವು. ಆ ಇಷ್ಟಬ್ರಹ್ಮದಲ್ಲಿ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಕರಣಂಗಳೆಲ್ಲವು ನಿರವಯಲಾದ ಭೇದ ಹೇಗೆಂದಡೆ ವಾರಿ[ಬಲಿ]ದು ವಾರಿಕಲ್ಲಾಗಿ ವಾರಿಯಾದ ಹಾಗೆ ಉಪ್ಪಿನ ಪೊಟ್ಟಣವಪ್ಪುವಿನೊಳು ಬಯಚಿಟ್ಟ ಹಾಗೆ ಉರಿ ಕರ್ಪುರ ಸಂಯೋಗವಾದ ಹಾಗೆ ಎನ್ನ ಅಂಗ ಮನ ಅಂಗ ಏಕರಸವಾದ ಭೇದವನು ಸಿದ್ಧೇಶ್ವರನು ತೋರಿ[ದ ಕಾ]ರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವೇಶ್ವರನ ಶ್ರೀಪಾದದಲ್ಲಿ ಮನಮಗ್ನ ಯೋಗವೆನಗಾಯಿತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
-->