ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು. ನೈಷ್ಠೆದೋರಿದಲ್ಲಿ ಗುರುಲಿಂಗವ ಕಾಣುವನು. ಸಾವಧಾನ ತೋರಿದಲ್ಲಿ ಶಿವಲಿಂಗವ ಕಾಣುವನು. ಅನುಭಾವ ತೋರಿದಲ್ಲಿ ಜಂಗಮಲಿಂಗವ ಕಾಣುವನು. ಆನಂದದೋರಿದಲ್ಲಿ ಪ್ರಸಾದಲಿಂಗವ ಕಾಣುವನು. ಸಮರಸ ತೋರಿದಲ್ಲಿ ಮಹಾಲಿಂಗವ ಕಾಣುವನು. ಇಂತು ಷಡ್ವಿಧಭಕ್ತಿ ನಿಷ್ಪತ್ತಿಯಾದಲ್ಲಿ ಗುರುನಿರಂಜನ ಚನ್ನಬಸವಲಿಂಗವ ಕಾಣದೆ ತಾನು ತಾನಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ. ಎಲ್ಲರಿಗೆಲ್ಲಿಹುದೊ ಶಿವಪ್ರಸಾದ ? ಇಂತಪ್ಪ ಪ್ರಸಾದದ ಘನವಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರೋ. ಪ್ರಸಾದವೆಂಬುದು, ಪರಾಪರನಾಮವುಳ್ಳ ಪರಮಾನಂದವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಮನಿರಂಜನ ಪರಬ್ರಹ್ಮವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಅಖಿಳಕೋಟಿ ಬ್ರಹ್ಮಾಂಡಗಳ ಗಮಿಸುವುದಕ್ಕೆ ಲಯಿಸುವುದಕ್ಕೆ ಮಾತೃಸ್ಥಾನವಾದ ಚಿತ್ಪ್ರಕಾಶವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಶಿವತತ್ವ ಪರಿಪೂರ್ಣತ್ವ ಪರಂಜ್ಯೋತಿ ಪರಮಪ್ರಕಾಶವೇ ಪ್ರಸಾದ ಕಾಣಿರೋ. ಇಂತಪ್ಪ ವಿಚಾರವ ತಿಳಿದು ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮರೆಂದೆನ್ನಬಹುದು. ಇಂತಪ್ಪ ನಿರ್ಣಯವ ತಿಳಿದು ಪ್ರಸಾದವ ಕೊಳಬಲ್ಲಡೆ ಪ್ರಸಾದಿಗಳೆನ್ನಬಹುದು; ಪ್ರಳಯವಿರಹಿತರೆಂದೆನ್ನಬಹುದು. ಸತ್‍ಸದ್ಭಕ್ತರೆಂದೆನ್ನಬಹುದು. ಇಂತೀ ಭೇದವ ತಿಳಿಯದೆ ನೀರು ಕೂಳಿಗೆ ಪಾದೋದಕ ಪ್ರಸಾದವೆಂದು ಒಡಲಹೊರವುದು ಪ್ರಸಾದವಲ್ಲ. ಅಂತಪ್ಪ ಘನಮಹಾಪ್ರಸಾದದ ಸಕೀಲಸಂಬಂಧವನರಿದು ನಿರ್ಧರಿಸಿದವರಾರೆಂದರೆ, ಹಿಂದಕ್ಕೆ ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರಾ ಎಪ್ಪತ್ತು ಪ್ರಮಥಗಣಂಗಳು ಕೊಂಡುದು ಇದೇ ಪ್ರಸಾದ. ಇನ್ನು ಮುಂದಿನವರಿಗಾದಡು ಇದೇ ಪ್ರಸಾದ. ಇಂತಪ್ಪ ಪರತತ್ವಪ್ರಸಾದಕ್ಕೆ ಸುಜ್ಞಾನಿಗಳಾಗಿ ಸತ್ಕ್ರಿಯಾ ಸಮ್ಯಜ್ಞಾನವೆಂಬ ಎರಡುಕಾಲಿಗೆ ಷಡ್ವಿಧಭಕ್ತಿ ಎಂಬ ಹಲ್ಲು ಜೋಡಿಸಿ, ಏಣಿಯ ಹಚ್ಚಿ, ನಿರ್ವಯಲಪದವನೈದಲರಿಯದೆ, ಅಹಂಕಾರ ಮಮಕಾರವೆಂಬ ಎರಡುಕಾಲಿಗೆ ಅಷ್ಟಮದವೆಂಬ ಹಲ್ಲುಜೋಡಿಸಿ ಸಪ್ತವ್ಯಸನಗಳೆಂಬ ಕೀಲುಜಡಿದು ಷಡ್ವರ್ಗಗಳೆಂಬ ಹಗ್ಗದ ಬಿರಿಯ ಬಂಧಿಸಿ, ಏಣಿಯ ಯಮಲೋಕಕ್ಕೆ ಹಚ್ಚಿ, ನರಕವ ಭುಂಜಿಸುವ ನರಕಜೀವಿಗಳಿಗೆ ಪ್ರಸಾದಿಗಳೆಂದಡೆ ನಿಮ್ಮ ಶರಣ ಚೆನ್ನಬಸವಣ್ಣ ಕಂಡು, ಇಂತಪ್ಪ ಮೂಳಹೊಲೆಯರ ಮೂಗಕೊಯ್ದು ಮೆಣಸಿನ ಹಿಟ್ಟು ತುಂಬಿ ಮೂಡಲದಿಕ್ಕಿಗೆ ಅಟ್ಟೆಂದ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ ಲಿಂಗ ಜಂಗಮವಲ್ಲದೆ, ಅನ್ಯದೈವಂಗಳ ತ್ರೈಕರಣದಲ್ಲಿ ಅರ್ಚಿಸದಿರ್ಪುದೆ ಲಿಂಗಾಚಾರವೆಂಬೆನಯ್ಯಾ. ಭಕ್ತನಾದಡೆ ಸತ್ಯಶುದ್ಧ ಕಾಯಕ [ವ ಮಾಡಿ], ಮಹೇಶನಾದಡೆ ಸತ್ಯಶುದ್ಧ ಭಿಕ್ಷವ ಬೇಡಿ ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ ತಿಳಿದು ಹಸಿವು ತೃಷೆ ಶೀತಕ್ಕೆ ಪರಹಿತಾರ್ಥಿಯಾಗಿರ್ಪುದೆ ಸದಾಚಾರವೆಂಬೆನಯ್ಯಾ. ಗುರುಮಾರ್ಗಾಚಾರದಲ್ಲಿ ನಿಂದ ಶಿವಲಾಂಛನಧಾರಿಗಳೆಲ್ಲಾ ಪರಶಿವಲಿಂಗವೆಂದು ಭಾವಿಸಿ, ಅರ್ಥ ಪ್ರಾಣಾಭಿಮಾನವನರ್ಪಿಸುವುದೆ ಶಿವಾಚಾರವೆಂಬೆನಯ್ಯಾ. ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂಬೆನಯ್ಯಾ. ಜಾತ್ಯಾಶ್ರಮ ಕುಲಗೋತ್ರ ನಾಮರೂಪು ಕ್ರಿಯಾರಹಿತನಾಗಿ, ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ, ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು, ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ ಷಟ್‍ಸ್ಥಲಮಾರ್ಗದಲ್ಲಿ ನಿಂದ ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ, ತನುಮನಧನಂಗಳ ಸಮರ್ಪಿಸಿ, ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ ಭೃತ್ಯಾಚಾರವೆಂಬೆನಯ್ಯಾ. ಮಲ ಮಾಯಾ ಪಾತಕ ಸೂತಕ ರಹಿತವಾದ ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುವಿನಿಂದ ವೇಧಾಮಂತ್ರ ಕ್ರಿಯಾದೀಕ್ಷೆಯ ಪಡೆದು ದ್ವಾದಶ ಮಲಪಾಶ ಕರ್ಮವ ತ್ಯಜಿಸಿ, ಮನ ಮಾರುತ ಮೊದಲಾದ ದ್ವಾದಶ ಇಂದ್ರಿಯಂಗಳ ಗುರುಪಾದಜಲದಿಂದ ಪ್ರಕ್ಷಾಲಿಸಿ ದಂತಪಙಫ್ತೆಕ್ರಿಯೆಗ? ಮಾಡಿ, ಕಟಿಸ್ನಾನ, ಕಂಠಸ್ನಾನ, ಮಂಡೆಸ್ನಾನ ಸರ್ವಾಂಗಸ್ನಾನವ ಮಾಡಿ ಕ್ರಿಯಾಭಸಿತದಿಂದ ಸ್ನಾನ ಧೂಲನ ಧಾರಣದ ಮರ್ಮವ ತಿಳಿದಾಚರಿಸಿ ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಷೋಪಚಾರದಿಂದ ಗುರು-ಲಿಂಗ-ಜಂಗಮವನರ್ಚಿಸಿ ನಿರ್ವಂಚಕತ್ವದಿಂದ ಘನಪಾದತೀರ್ಥಪ್ರಸಾದ ಮಂತ್ರದಲ್ಲಿ ನಿಂದ ನಿಜಾವಸ್ಥೆಯ ಕ್ರಿಯಾಚಾರವೆಂಬೆನಯ್ಯಾ ಅಂತರಂಗದಲ್ಲಿ ಕರಣವಿಷಯ ಕರ್ಕಶದಿಂದ ಅಹಂಕರಿಸಿ ಗುರುಹಿರಿಯರಲ್ಲಿ ಸಂಕಲ್ಪ ವಿಕಲ್ಪಗಳಿಂದ ಕುಂದು-ನಿಂದೆ ಹಾಸ್ಯ-ರೋಷಂಗಳೆಂಬ ಅಜ್ಞಾನವ ಬಳಸದೆ ಪರಮಪಾತಕರ ದರ್ಶನಸ್ಪರ್ಶನಸಂತರ್ಪಣೆ ಪಂಕ್ತಿಪಾಕವ ಕೊಳ್ಳದೆ ಸತ್ಯ ನಡೆನುಡಿಯುಳ್ಳ ಶಿವಶರಣಗಣಂಗಳಲ್ಲಿ ಷಡ್ವಿಧಭಕ್ತಿ ಮುಂದುಗೊಂಡು, ಎರಡೆಂಬತ್ತೆಂಟುಕೋಟಿ ವಚನಾನುಭವದಲ್ಲಿ ನಿಂದ ನಿಲುಕಡೆಯೆ ಜ್ಞಾನಾಚಾರವೆಂಬೆನಯ್ಯಾ. ತನುವಿಕಾರದಿಂದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳ ಬಳಕೆ ಮಾಡದೆ ಲೋಕದಂತೆ ನಡೆನುಡಿಗಳ ಬಳಸದೆ, ತನ್ನ ಗುಣಾವಗುಣಂಗಳ ಸ್ವಾತ್ಮಾನುಭವದಿಂದರಿದು, ದುರ್ಗುಈವ ತ್ಯಜಿಸಿ, ಸದ್ಗುಣವ ಹಿಡಿದು ಬಿಡದಿಪ್ಪುದೆ ಭಾವಾಚಾರವೆಂಬೆನಯ್ಯಾ. ಕೊಡುವಲ್ಲಿ ಕೊಂಬಲ್ಲಿ ಅತಿಯಾಸೆಯಿಂದ ಹುಸಿಯ ನುಡಿಯದೆ, ಕೊಟ್ಟ ಭಾಷೆಗ? ಪ್ರಾಣಾಂತ್ಯ ಬಂದಡೆಯೂ ನುಡಿಯಂತೆ ನಡೆವುದೆ ಸತ್ಯಾಚಾರವೆಂಬೆನಯ್ಯಾ. ಕಾಲ ಕಾಮರ ಬಾಧೆಗೊ?ಗಾಗದ ಹಠಯೋಗ ಫಲಪದಂಗ? ತಟ್ಟುಮುಟ್ಟು ಸೋಂಕುಗಳಿಲ್ಲದೆ ಲಿಂಗಾಣತಿಯಿಂದ ಬಂದೊದಗಿದ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿರ್ಪುದೆ ನಿತ್ಯಾಚಾರವೆಂಬೆನಯ್ಯಾ. ಸರ್ವಾವಸ್ಥೆಯಲ್ಲಿ ದಶವಿಧಪಾದೋದಕ ಏಕಾದಶಪ್ರಸಾದ ಛತ್ತೀಸ ಪ್ರಣವ ಮೊದಲಾದ ಮಹಾಮಂತ್ರಂಗಳಲ್ಲಿ ಎರಕವನುಳ್ಳುದೆ ಧರ್ಮಾಚಾರವೆಂಬೆನಯ್ಯಾ. ಇಂತೀ ಏಕಾದಶವರ್ಮವ ಗುರುಕೃಪಾಮುಖದಿಂದರಿದು, ಆಚಾರವೆ ಅಂಗ ಮನ ಪ್ರಾಣ ಭಾವಂಗಳಾಗಿ, ಇಹಪರವ ವಿೂರಿ, ಪಿಂಡಾದಿ ಜ್ಞಾನಶೂನ್ಯಾಂತವಾದ ಏಕೋತ್ತರಮಾರ್ಗದಲ್ಲಿ ನಿಂದು, ಬಯಲೊಳಗೆ ಬಚ್ಚಬರಿಯ ನಿರ್ವಯಲ ಸಾಧಿಸುವುದೆ ಸರ್ವಾಚಾರ ಸಂಪತ್ತಿನಾಚಾರದ ನಿಲುಕಡೆ ನೋಡಾ ಇಂತು ಆಚಾರದ ಕುರುಹ ತಿಳಿದು ಪಂಚಾಚಾರವ ಬಹಿಷ್ಕರಿಸಿ ಸಪ್ತಾಚಾರವ ಗೋಪ್ಯವ ಮಾಡಿ, ದರಿದ್ರನಿಗೆ ನಿಧಿನಿಧಾನ ದೊರೆತಂತೆ, ರೋಗಿಗೆ ವೈದ್ಯದ ಲತೆ ದೊರೆತಂತೆ, ಮೂಕ ಫಲರಸವ ಸವಿದಂತೆ, ಕಳ್ಳಗೆ ಚೇಳೂರಿದಂತೆ, ತಮ್ಮ ಚಿದಂಗಸ್ವರೂಪರಾದ ಶರಣಗಣಂಗಳಲ್ಲಿ ಉಸುರಿ, ದುರ್ಜನಾತ್ಮರಲ್ಲಿ ಬಳಸದೆ ನಿಂದ ಪರಮಸುಖಿ ನಿಮ್ಮ ಶರಣನಲ್ಲದೆ ಉಳಿದ ಕಣ್ಗೆಟ್ಟಣ್ಣಗಳೆತ್ತ ಬಲ್ಲರಯ್ಯಾ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->