ಅಥವಾ

ಒಟ್ಟು 5 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಶಿವಶಕ್ತಿಗಳಿಂದಾದ ಲಿಂಗ. ಲಿಂಗೋದ್ಭವ ಶಿವ, ಶಿವ ಮೂರ್ತಿತತ್ವ. ತತ್ವಮೂರ್ತಿ ಮುಖದಿಂದ ಲೋಕ. ಲೋಕದಿಂದ ಭೋರನೆ ಹುಟ್ಟಿದ ವೇದ. ವೇದಾಗಮನದಿಂದ ಹುಟ್ಟಿದ ಶಿವವಿದ್ಯೆ. ಶಿವವಿದ್ಯೆಯಿಂದ ಹುಟ್ಟಿದ ಶಿವದೀಕ್ಷೆ. ಶಿವದೀಕ್ಷೆಯಿಂದಾದ ನಿಃಪತಿತತ್ವದ ಕುಳವಾರು. ಆ ದೀಕ್ಷೆಯಿಂದ ಭಾವಹುಟ್ಟಿ, ಭಾವಕ್ಕೆ ಸ್ಥಾವರ ಹುಟ್ಟಿ, ಜಂಗಮಮುಖದಿಂದ ಪ್ರಸಾದ ಉದಯವಾಯಿತ್ತು. ಪ್ರಸಾದದಿಂದ ಲಿಂಗಾಚಾರವಾಯಿತ್ತು. ಆಚಾರದಿಂದ ಗುರು. ಅಂತು ನಿಃಪತಿಗಾದ ಪ್ರತಿತತ್ವವೆಂಬ ಷಡುಸ್ಥಲವು. ಗುರುವಿಂದ ಸಮಾಧಿ, ಸಮಾಧಿಗೆ ಧ್ಯಾನ ಹುಟ್ಟಿ, ಧ್ಯಾನದಿಂದಾದ ಜ್ಞಾನ, ಜ್ಞಾನದಿಂದರ್ಪಣ. ಅರ್ಪಣಕ್ಕೆ ನಿಯಮ, ನಿಯಮಕ್ಕೆ ಭಕ್ತಿ. ಭಕ್ತಿ ಉಂಟಾದಲ್ಲಿ ಸಕೀಲವೆಂಬ ಷಡುಸ್ಥಲವು. ಭಕ್ತಿಯಿಂದಾದ ಮನ, ಮನದಿಂದಾದ ಮತಿ, ಮತಿಯಿಂದಾದ ಅಭ್ಯಾಸ, ಅಭ್ಯಾಸದಿಂದಾದ ಧನ, ಧನದಿಂದಾದ ತನು, ತನುವಿನಿಂದಾದ ಮೋಹ. ಮೋಹವೆಂಬಿವು ಅಸಾಧ್ಯವೆಂಬ ಷಡುಸ್ಥಲವು. ಆ ಮೋಹದಿಂದ ಶಕ್ತಿ ಹುಟ್ಟಲು, ಅದರಿಂದಾದ ಬಾವಶುದ್ಧಿ, ಭಾವಶುದ್ಧಿಯಿಂದ ನಿರಾಲಸ್ಯವಾಗಿ, ಅಲ್ಲಿ ಶಿವಧರ್ಮ, ಆ ಶಿವಧರ್ಮದಲ್ಲಿ ನೀರಜತ್ವ. ನೀರಜತ್ವವೆ ನಿರುಪಾಧಿ. ನಿರುಪಾಧಿಕವೆಂಬ ಷಡುಸ್ಥಲವು, ನಿರುಪಾಧಿಯಿಂದೈಕ್ಯ, ಐಕ್ಯನ ಶಿಶು ಶರಣ. ಶರಣರ ಶಿಶು ಪ್ರಾಣಲಿಂಗಿ, ಪ್ರಾಣಲಿಂಗಿಯ ಶಿಶು ಪ್ರಸಾದಿ. ಪ್ರಸಾದಿಯ ಶಿಶು ಮಹೇಶ್ವರ, ಮಹೇಶ್ವರನ ಶಿಶು ಭಕ್ತ. ಇಂತು ಸಾಕಾರ ಷಡುಸ್ಥಲ. ಶಂಭು ಸೊಡ್ಡಳ ಮಹಾಮಹಂತರುಮಪ್ಪ ಮೂವತ್ತಾರು ಕುಳವರಿದಂಗೆ ಶರಣು, ಶರಣೆಂಬೆ.
--------------
ಸೊಡ್ಡಳ ಬಾಚರಸ
ಭಕ್ತರಲ್ಲಿ ಬಣ್ಣವನರಸುವಾತನೆ ಆಚಾರದ್ರೋಹಿ. ಜಂಗಮದಲ್ಲಿ ಜಾತಿಯನರಸುವಾತನೆ ಗುರುದ್ರೋಹಿ. ಪಾದೋದಕದಲ್ಲಿ ಸೂತಕವ ಪಿಡಿವಾತನೆ ಲಿಂಗದ್ರೋಹಿ. ಪ್ರಸಾದದಲ್ಲಿ ರುಚಿಯನರಸುವಾತನೆ ಜಂಗಮದ್ರೋಹಿ. ಇಂತೀ ಚತುರ್ವಿಧದೊಳಗೆ ಸನ್ನಿಹಿತನಾದಾತನೆ ಭಕ್ತ, ಇಂತೀ ಚತುರ್ವಿಧದೊಳಗೆ ಕಲಿಯಾದಾತನೆ ಮಾಹೇಶ್ವರ, ಇಂತೀ ಚತುರ್ವಿಧದೊಳಗೆ ಅವಧಾನಿಯಾದಾತನೆ ಪ್ರಸಾದಿ, ಇಂತೀ ಚತುರ್ವಿಧದೊಳಗೆ ತದ್ಗತನಾದಾತನೆ ಪ್ರಾಣಲಿಂಗಿ, ಇಂತೀ ಚತುರ್ವಿಧದೊಳಗೆ ಲವಲವಿಕೆಯುಳ್ಳಾತನೆ ಶರಣ, ಇಂತೀ ಚತುರ್ವಿಧದೊಳಗೆ ಅಡಗಿದಡೆ ಐಕ್ಯ. ಇಂತಿಪ್ಪ ಷಡುಸ್ಥಲವು ಸಾಧ್ಯವಾದಡೆ ಲಿಂಗದೇಹಿ. ಆತ ನಡೆಯಿತ್ತೇ ಬಟ್ಟೆ ಆತ ನುಡಿಯಿತ್ತೇ [ಸಿದ್ಧಾಂತ]. ಕೂಡಲಚೆನ್ನಸಂಗಯ್ಯನಲ್ಲಿ ಆತನೇ ಸರ್ವಾಂಗಲಿಂಗಿ, ಆತನೆ ನಿರ್ದೇಹಿ
--------------
ಚನ್ನಬಸವಣ್ಣ
-->