ಅಥವಾ

ಒಟ್ಟು 6 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಭಕ್ತಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಶರಣಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಐಕ್ಯಸ್ಥಲವೆಂತು ಅಳವಡುವುದಯ್ಯಾ ! ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ದೀಕ್ಷಾಮೂರ್ತಿರ್ಗುರುರ್ಲಿಂಗಂ ಪೂಜಾಮೂರ್ತಿಃ ಪರಶ್ಶಿವಃ | ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕರ್ತಾ ಚ ಜಂಗಮಃ || ಎಂದುದಾಗಿ, ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ, ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು, ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು. ಅನ್ಯದೈವ ಪರವಧು ಪರಧನವಂ ಬಿಟ್ಟು, ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆಇಲ್ಲದೆ, ಏಕೋನಿಷೆ* ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು. ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ. ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ, ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ ಪ್ರಾಣಲಿಂಗಾರ್ಪಿತ. ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ, ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ. ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ, ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ. ಮನ ಬದ್ಧಿ ಚಿತ್ತ ಅಹಂಕಾರದ ಗುಣವಳಿದು, ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ, ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ. ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು. ಸಪ್ತಧಾತುವಿನ ಉರವಣೆಯಂ ಮೆಟ್ಟಿ, ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ. ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು, ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು. ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು. ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ. ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ. ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ ಅಳವಡಿಸಿ ಮರೆದಿರಿ.
--------------
ಹಾವಿನಹಾಳ ಕಲ್ಲಯ್ಯ
ಅಧ್ಯಾತ್ಮ ಅದ್ಯಾತ್ಮವೆಂದೆಂಬಿರಿ, ಅಧ್ಯಾತ್ಮವಾರಿಗೆ ? ಶ್ರೀಗುರು ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ, ಕರಸ್ಥಲದಲ್ಲಿ ಕೊಟ್ಟ ಬಳಿಕ ಬೇರೆ ಯೋಗವುಂಟೆ ? ತನ್ನ ಹಸ್ತವ ಮಸ್ತಕದಲ್ಲಿಟ್ಟು ವಾಯುಪ್ರಾಣಿಯಾಗಿರ್ದು ಕೊಂದು ಲಿಂಗಪ್ರಾಣಿಯ ಮುಕ್ತನ ಮಾಡಿದ ಬಳಿಕ, ಅಕ್ಷರವೈದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗವುಂಟೆ ಶಿವಯೋಗವಲ್ಲದೆ? ಲಿಂಗಾರ್ಚನೆಯ ಮಾಡಿ ಜಂಗಮಪ್ರಸಾದವ ಕೊಂಡ ಬಳಿಕ, ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿರಿಸಿ, ಇದು ಉರುತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರು ಚೆನ್ನಬಸವಣ್ಣ, ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಷಡುಸ್ಥಲಕ್ಕೆ ಅಧಿಕಾರಿಯಾದೆನು, ನಿನ್ನವರ ಸಲುಗೆಗೆ ಸಂದೆನು. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು ಕಾಣಾ, ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ, ಆ ಲಿಂಗನಿಷೆ* ಗಟ್ಟಿಗೊಂಡು, ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ, ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷೆ*ಯನುಳ್ಳ ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು. ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷಾ*ಚಾರಯುಕ್ತನಾದ ವೀರಮಾಹೇಶ್ವರನು. ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯಯೆಂಬ ಷಡುಸ್ಥಲಕ್ಕೆ ಷಡ್ವಿಧಮೂರ್ತಿಗಳಿಪ್ಪವು ನೋಡಾ. ಅದು ಹೇಗೆಂದಡೆ : ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ, ಸ್ವಾಧಿಷಾ*ನದಲ್ಲಿ ವಿಷ್ಣುವೆಂಬ ಮೂರ್ತಿ, ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ, ಅನಾಹತದಲ್ಲಿ ಈಶ್ವರನೆಂಬ ಮೂರ್ತಿ, ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ, ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ, ಇಂತೀ ಭೇದವ ಮರೆತು ಇರಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->