ಅಥವಾ

ಒಟ್ಟು 6 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಟ್ಟಿದ ಮನುಜರೆಲ್ಲಾ ಬಂದ ಬಟ್ಟೆಯ ನೋಡಿ ಭ್ರಮೆಗೊಂಡು ಬಳಲುತ್ತೈದಾರೆ. ಇದನರಿದು ಬಂದ ಬಟ್ಟೆಯ ಮೆಚ್ಚಿ, ಕಾಣದ ಹಾದಿಯ ಕಂಡು, ಹೋಗದ ಹಾದಿಯ ಹೋಗುತ್ತಿರಲು, ಕಾಲ ಕಾಮಾದಿಗಳು ಬಂದು ಮುಂದೆ ನಿಂದರು. ಅಷ್ಟಮದಂಗಳು ಬಂದು ಅಡ್ಡಗಟ್ಟಿದವು. ದಶವಾಯು ಬಂದು ಮುಸುಕುತಿವೆ. ಸಪ್ತವ್ಯಸನ ಬಂದು ಒತ್ತರಿಸುತಿವೆ. ಷಡುವರ್ಗ ಬಂದು ಸಮರಸವ ಮಾಡುತಿವೆ. ಕರಣಂಗಳು ಬೆಂದು ಉರಿವುತಿವೆ. ಮರವೆ ಎಂಬ ಮಾಯೆ ಬಂದು ಕಾಡುತಿವಳೆ. ತೋರುವ ತೋರಿಕೆಯೆಲ್ಲವೂ ಸುತ್ತಮೊತ್ತವಾಗಿವೆ. ಇವ ಕಂಡು ಅಂಜಿ ಅಳುಕಿ ಅಂಜನದಿಂದ ನೋಡುತ್ತಿರಲು ತನ್ನಿಂದ ತಾನಾದೆನೆಂಬ ಬಿನ್ನಾಣವ ತಿಳಿದು, ಮುನ್ನೇತರಿಂದಲಾಯಿತು, ಆಗದಂತೆ ಆಯಿತೆಂಬ ಆದಿಯನರಿದು, ಹಾದಿಯ ಹತ್ತಿ ಹೋಗಿ ಕಾಲ ಕಾಮಾದಿಗಳ ಕಡಿದು ಖಂಡಿಸಿ, ಅಷ್ಟಮದಂಗಳ ಹಿಟ್ಟುಗುಟ್ಟಿ, ದಶವಾಯುಗಳ ಹೆಸರುಗೆಡಿಸಿ, ಸಪ್ತವ್ಯಸನವ ತೊತ್ತಳದುಳಿದು, ಷಡ್ವರ್ಗವ ಸಂಹರಿಸಿ, ಕರಣಂಗಳ ಸುಟ್ಟುರುಹಿ, ಮರವೆಯೆಂಬ ಮಾಯೆಯ ಮರ್ಧಿಸಿ, ನಿರ್ಧರವಾಗಿ ನಿಂದು ಸುತ್ತ ಮೊತ್ತವಾಗಿರುವವನೆಲ್ಲ ಕಿತ್ತು ಕೆದರಿ, ಮನ ಬತ್ತಲೆಯಾಗಿ, ಭಾವವಳಿದು ನಿರ್ಭಾವದಲ್ಲಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು, ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು, ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ. ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ, ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ. ಆಶೆ ಆಮಿಷ ತಾಮಸವೆಂಬ ತುರಗವನೇರಿ ಆತುರದ ತುರವನೆ ಕಳೆದನಯ್ಯಾ_ಈ ಮಹಾಮಹಿಮಂಗೆ, ಜಗದ ಜತ್ತಿಗೆಯ, ಹಾದರಗಿತ್ತಿಯ, ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ ? ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ. ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ. ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಜಯಜಯತು.
--------------
ಚನ್ನಬಸವಣ್ಣ
ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ, ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ, ದಶನಾಡಿ ದಶವಾಯು ದಶವಿಧೇಂದ್ರಿಯ ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ ಚತುರಂತಃಕರಣ, ತ್ರಿದೋಷಪ್ರಕೃತಿ, ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ, ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ ತಪೋಲೋಕ, ಸತ್ಯಲೋಕ, ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ, ನಾದಮಂ ತೋರಿ ಭರ್ಗೋದೇವನೆಂಬ ನಾಮಮಂ ತಳೆದು ಊಧ್ರ್ವರೇತುವೆನಿಸಿ, ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ ವಿಶ್ವಗರ್ಭೀಕೃತವಾಗಿ, ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ ದೇವತಾಂತರದಿಂ ಮಾನಸಾಂತರವನನುಕರಿಸಿ, ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ, ಚಿತ್ಸುಧಾಮೃತವೆ ಅಂಗವಾಗಿ ಚಿದರ್ಕಪ್ರಭಾಕರವೆ ಪ್ರಾಣವಾಗಿ, ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ, ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
--------------
ಆದಯ್ಯ
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಶುದ್ದನಪ್ಪನಯ್ಯಾ ಜಾಗ್ರಸ್ವಪ್ನ ಸುಷುಪ್ತಿಯಲ್ಲಿ ಪರಸ್ತ್ರೀ ಅನ್ಯದೈವಭಕ್ತಿಯ ಬಯಸದವ. ಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಅನ್ಯಧನಕಾಂಕ್ಷೆ ಅವ್ಯಕ್ತಚಿಂತೆಯ ಮಾಡದವ. ಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಷಡುವರ್ಗ ಭಾವವಿಲ್ಲದವ. ಅಶುದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ನಿಜೋಪಾಧಿಯ ಭಕ್ತಿಯುಳ್ಳಡೆ. ಅಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸುಪ್ರಸನ್ನಭಕ್ತಿಯುಳ್ಳಡೆ. ಅಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸಮಯಭಕ್ತಿಯುಳ್ಳಡೆ. ಇದು ಕಾರಣ, ಅಲ್ಲಿಯೇ ಇರಲೊಲ್ಲದಿರ್ದನು ಇಲ್ಲಿಯೆ ಚಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆಣ್ಣ ಧ್ಯಾನಿಸಿ ನಿಮ್ಮ ಮರೆದೆನಯ್ಯಾ, ನಾನು ಮರೆದ ಕಾರಣ ನೀನೆನ್ನ ಮರೆದೆ. ನೀ ಮರೆದ ಕಾರಣ ಹೆಣ್ಣು ಸಾಧ್ಯವಾಗದು. ನಿನ್ನ ಮೋಹ ತಪ್ಪಿ ಕೆಟ್ಟೆನಯ್ಯಾ. ಹೊನ್ನು ಹೆಣ್ಣು ಮಣ್ಣು ಎಂಬ ಆಸೆಯೆನ್ನ ಘಾಸಿ ಮಾ[ಡೆ], ಕೆಟ್ಟೆ ಕೆಟ್ಟೆ ಶಿವಧೋ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿಗೆ ಕರ್ತನು ನೀನು. `ತೇನ ವಿನಾ ತೃಣಾಗ್ರಮಪಿ ನ ಚಲತಿ ಎಂಬುದನರಿದೂ, ಮದದಲ್ಲಿದ್ದು ಕೆಟ್ಟೆ. ಈ ಕೇಡಲ್ಲದೆ ಹಸಿವು ತೃಷೆ ವ್ಯಸನ ವಿಷಯ ಪಂಚೇಂದ್ರಿಯ ಷಡುವರ್ಗ ನೀನಾಗಿ ಕಾಡುತ್ತಿವೆ. ಕೆಟ್ಟೆ ಕೆಟ್ಟೆ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿನ ಆಶೆಯಿಂದ ಈ ಅವಸ್ಥೆಗೊಳಗಾದೆನು. ಇನ್ನಿವಕ್ಕಾಶೆಮಾಡೆನು, ನಿಮ್ಮ ಮರೆಯೆನು, ನಿಮ್ಮಾಣೆ. ಭಕ್ತವತ್ಸಲ, ಭಕ್ತದೇಹಿಕ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->