ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿವಿಧನಿರ್ವಚಂಕನೆ ಭಕ್ತ, ತ್ರಿವಿಧವಿರಾಗಿಯೆ ಜಂಗಮ. ಭಾಷೆಗೆ ತಪ್ಪದಿರ್ದಡೆ ಮಾಹೇಶ್ವರ ಪ್ರಸಾದಿ, ವೇಷವ ತೋರದಿರ್ದಡೆ ಜಂಗಮ ಇಂದ್ರಿಯ ವಿಕಾರವಳಿದಡೆ ಪ್ರಸಾದಿ, ಮನವಳಿದಡೆ ಜಂಗಮ. ಪ್ರಾಣಸಂಚಾರಗೆಟ್ಟಡೆ ಪ್ರಾಣಲಿಂಗಿ, ಜೀವಭಾವಗೆಟ್ಟಡೆ ಜಂಗಮ. ಅರಿವಿನ ಭ್ರಾಂತಳಿದರೆ ಶರಣ, ಬೋಧೆಗೆಟ್ಟಡೆ ಜಂಗಮ. ತಾನಿಲ್ಲದಿರ್ದಡೆ ಐಕ್ಯ, ಏನೂ ಇಲ್ಲದಿರ್ದಡೆ ಜಂಗಮ_ ಇಂತೀ ಷಟ್‍ಸ್ಥಲದಲ್ಲಿ ನಿಜವನರಿದು ನೆಲೆಗೊಂಡಾತನೆ ಶ್ರೀಗುರು. ಇಂತಲ್ಲದೆ ನುಡಿಯಲ್ಲಿ ಅದ್ವೈತವನಾಡಿ ನಡೆಯಲ್ಲಿ ಅನಂಗವ ನಡೆವರ ಕಂಡಡೆ ಎನ್ನ ಮನ ನಾಚಿತ್ತು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ ! ಅದೆಂತೆಂದಡೆ : ಆಧಾರಚಕ್ರ ಪೃಥ್ವಿ ಸಂಬಂಧ, ಅಲ್ಲಿಗೆ ಬ್ರಹ್ಮನಧಿದೇವತೆ, ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ ! ಸ್ವಾದಿಷಾ*ನ ಚಕ್ರ ಅಪ್ಪುವಿನ ಸಂಬಂಧ, ಅಲ್ಲಿಗೆ ವಿಷ್ಣು ಅಧಿದೇವತೆ, ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ ! ಮಣಿಪೂರಕಚಕ್ರ ಅಗ್ನಿಯ ಸಂಬಂಧ, ಅಲ್ಲಿಗೆ ರುದ್ರನಧಿದೇವತೆ, ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ ! ಅನಾಹತಚಕ್ರ ವಾಯು ಸಂಬಂಧ, ಅಲ್ಲಿಗೆ ಈಶ್ವರನಧಿದೇವತೆ, ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ ! ವಿಶುದ್ಧಿಚಕ್ರ ಆಕಾಶ ಸಂಬಂಧ, ಅಲ್ಲಿಗೆ ಸದಾಶಿವನಧಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ ! ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನಧಿದೇವತೆ, ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ ! ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ ! ಆ ಲಿಂಗ ನಿಮಗೆಂತಪ್ಪವು ? ಇದು ಕಾರಣ, ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಜಂಗಮಭಕ್ತನು, ಚಿನ್ನದಂತೆ ಕಬ್ಬಿನಂತೆ ಶ್ರೀಗಂಧದಂತೆ ಇರಬೇಕು. ಅದು ಹೇಂಗೆ ? ಆ ಚಿನ್ನವ ಕಾಸಿದಡೆ ಕರಗಿಸಿದಡೆ ಕಡಿದಡೆ ನಿಗುಚಿದಡೆ ಬಣ್ಣ ಅಧಿಕವಲ್ಲದೆ ಕಿರಿದಾಗದು, ಇವರು ನನ್ನನೇಕೆ ಘಾಸಿ ಮಾಡಿದರೆನ್ನದು. ಆ ಕಬ್ಬ ಕಡಿದಡೆ ಖಂಡಿಸಿದಡೆ ಗಾಣದಲಿಕ್ಕಿ ಹಿಂಡಿ, ಹಿಳಿದು, ಬಂದ ರಸವನಟ್ಟಡೆ, ನಾನಾ ಪ್ರಕಾರದಲ್ಲಿ ಸಾಯಸಗೊಳಿಸಿದಡೆಯೂ ಮಿಗೆ ಮಿಗೆ ಮಧುರವಾಗಿಪ್ಪುದಲ್ಲದೆ ವಿಷವಾಗದು, ನನ್ನನೇಕೆ ನೋಯಿಸಿದರೆಂದೆನ್ನದು. ಆ ಶ್ರೀಗಂಧವು ಕೊರೆದಡೆ ತೇದಡೆ ಹೂಸಿದಡೆ ಬೆಂಕಿಯೊಳಗೆ ಹಾಯಿಕಿದಡೆ ಪರಿಮಳ ಘನವಾಯಿತ್ತಲ್ಲದೆ ದುರ್ಗಂಧವಾಗದು, ತನ್ನಲ್ಲಿ ದುಃಖಗೊಳ್ಳದು. ಈ ತ್ರಿವಿಧದ ಗುಣದ ಪರಿಯಲ್ಲಿ; ಭಕ್ತನು ತನ್ನ ಸುಗುಣವ ಬಿಡದ ಕಾರಣ ಸದ್ಭಕ್ತನಹ ಮಾಹೇಶ್ವರನಹ ಪ್ರಸಾದಿಯಹ ಪ್ರಾಣಲಿಂಗಿಯಹ ಶರಣನಹ ಐಕ್ಯನಹ. ಇಂತು ಷಟ್‍ಸ್ಥಲದಲ್ಲಿ ಸಂಪನ್ನನಹಡೆ ಇಂತಪ್ಪ ಜಂಗಮಭಕ್ತಿಯೆ ಮೂಲವಯ್ಯ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಹಾಬಯಲು ನಿರ್ವಯಲು ನಿರವಯ ನಿರಂಜನ ನಿಃಶೂನ್ಯ ನಿಃಕಲ ಪರಶಿವಲಿಂಗವು ಆ ನೆನಹು ನಿರ್ಧರಿಸಿ ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಯುದಯವಾಗಿ, ಆ ಮೂಲ ಚಿತ್ತುಗೂಡಿ, ಗಟ್ಟಿಗೊಂಡು ಗೋಲಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾ ಚಿದ್ಘನಲಿಂಗಕ್ಕೆ ಆ ಚಿತ್ತೆ ಅಂಗವಾಗಿ ಶಕ್ತಿಯೆನಿಸಿತ್ತು ನೋಡಾ. ಆ ಶಿವಶಕ್ತಿಗಳಿಂದೆ ಸಕಲಸಂಭ್ರಮವಾಯಿತ್ತು. ಆ ಸಕಲಸಂಭ್ರಮೈಶ್ವರ್ಯದೊಳಗೆ ಆ ಶಿವನ ಅನಂತ ಸಹಸ್ರ ಸಹಸ್ರಾಂಶದೊಳಗೊಂದಂಶ ಬೇರ್ಪಡಿಸಿ ಚಿದಾತ್ಮನಾಗಿ ಕಾಯಾಶ್ರಯಗೊಂಡು ನಿರ್ಮಿಸಿದಲ್ಲಿ, ಆ ಕಾಯಸಂಗ ಸಕಲನಿಃಕಲತತ್ವಾನ್ವಿತದಿಂದೆ ತನ್ನಾದಿಯ ಮರೆದು ಪರಾದಿ ಸ್ವಯವಾಗಿ, ಪಂಚಕೃತ್ಯಪರಿಯುತದಿಂದಿರ್ದ ಆತ್ಮನ ತೇರ್ಕಡೆಯಾಂತರವರಿದ ಶಿವ ತಾನೆ ಸುಜ್ಞಾನಗುರುವಾಗಿ ಅಂತರಂಗದಲ್ಲಿ ಬೆಳಗಲು, ಆ ಬೆಳಗಿನಿಂದೆ ಆತ್ಮನು ತನ್ನಾದಿ ಮಧ್ಯಾವಸಾನವನರಿದು, ಮಿಥ್ಯ ಮಾಯಾಸಂಸಾರಸಂಬಂಧವನಳಿಸಿ ತನ್ನ ಕಾಂಬಾವಸ್ಥೆಯ ಮುಂದೆ ಆ ಜ್ಞಾನಗುರುವೇ ಕ್ರಿಯಾಘನಗುರುವಾಗಿ ತೋರಲು ಅಜ್ಞಾನಕಲಾತ್ಮನು ಗುರೋಪಾಸ್ತೆಯ ಮಾಡುವ ನಿಲವರಿದು ಗುರುಕಾರುಣ್ಯದಿಂದಿಷ್ಟವನನುಗ್ರಹಿಸಿಕೊಡಲು ಆ ಲಿಂಗವಿಡಿದು ಧಾರಣವಾಗಿ, ಚಿದ್ಭಸಿತ ರುದ್ರಾಕ್ಷಿಯ ಧರಿಸಿ, ಪರಮಪಂಚಾಕ್ಷರ ಪ್ರಾಣವಾಗಿ, ಆ ಗುರುಲಿಂಗಕ್ಕೆ ಭಕ್ತಾಂಗನೆಯಾಗಿ ತ್ರಿವಿಧಾಚಾರವನರಿದು, ಷಟ್‍ಸ್ಥಲದಲ್ಲಿ ನಿಂದು ಚಿದಂಗ ಚಿಲ್ಲಿಂಗಭಾವದವಿರಳ ವಿನೋದಕ್ಕೆ ಭಾವತ್ರಿಸ್ಥಲವನುಂಟುಮಾಡಿಕೊಂಡಾಚರಿಸುತಿರ್ದ ತಾನೆ ನಮ್ಮ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಛಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.
--------------
ಅಕ್ಕಮಹಾದೇವಿ
-->