ಅಥವಾ

ಒಟ್ಟು 11 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಸತ್ಯಸದಾಚಾರ ಸದ್ಭಕ್ತನಾದಡೆ ಷೋಡಶಭಕ್ತಿಯ ತಿಳಿಯಬೇಕು. ವೀರಮಾಹೇಶ್ವರನಾದಡೆ ಷೋಡಶಜ್ಞಾನವ ತಿಳಿಯಬೇಕು. ಪರಮವಿರಕ್ತನಾದಡೆ ಷೋಡಶಾವರಣವ ತಿಳಿಯಬೇಕು. ಶರಣನಾದಡೆ ಅಷ್ಟಾವಧಾನವ ತಿಳಿಯಬೇಕು. ಐಕ್ಯನಾದಡೆ ತನ್ನಾದಿಮದ್ಯಾವಸಾನವ ತಿಳಿಯಬೇಕು. ಲಿಂಗಾನುಭಾವಿಯಾದಡೆ ಸರ್ವಾಚಾರಸಂಪತ್ತಿನಾಚರಣೆಯ ತಿಳಿಯಬೇಕು. ಈ ವಿಚಾರವನರಿಯದೆ ಬರಿದೆ ಷಟ್ಸ್ಥಲವ ಬೊಗಳುವ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ, ಇಹಪರಂಗಳಿಗೆ ಒಳಗಾದ ವಿಚಾರವೆಂತೆಂದಡೆ ಸತ್ಯಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ ಸತ್ಯನಡೆ ನಡೆಯದೆ, ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ ವರ್ತಿಸುವುದ ಕಂಡು ಅದ ಪರಿಹರಿಸದೆ, ದ್ರವ್ಯದಭಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು ಹುಟ್ಟಂಧಕನೆಂಬೆನಯ್ಯಾ. ಅಂತಪ್ಪ ಪರಮಪಾತಕಂಗೆ ಜಪವ ಹೇಳಿ, ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವ ಕೊಟ್ಟು, ಷಟ್‍ಸ್ಥಲವ ಹೇಳುವನೊಬ್ಬ ಜಂಗಮ ಕೆಟ್ಟಗಣ್ಣವನೆಂಬೆನಯ್ಯಾ. ಇಂತೀ ಅಧಮ ಗುರುಶಿಷ್ಯಜಂಗಮಕ್ಕೆ ಭವಬಂಧನ ತಪ್ಪದು ನೋಡಾ, ಶಂಭುಕೇಶ್ವರದೇವಾ, ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ.
--------------
ಸತ್ಯಕ್ಕ
ಎನ್ನ ತನುವಿನಲ್ಲಿ ಗುರುಮೂರ್ತಿ ಸಂಗನಬಸವಣ್ಣನ ಕಂಡೆನು. ಎನ್ನ ಮನದಲ್ಲಿ ಲಿಂಗಮೂರ್ತಿ ಚನ್ನಬಸವಣ್ಣನ ಕಂಡೆನು. ಎನ್ನ ಭಾವದಲ್ಲಿ ಜಂಗಮಮೂರ್ತಿ ಸಿದ್ಧರಾಮಯ್ಯನ ಕಂಡೆನು. ಎನ್ನ ತೃಪ್ತಿಮುಖದಲ್ಲಿ ಪ್ರಸಾದಮೂರ್ತಿ ಮರುಳಶಂಕರದೇವರ ಕಂಡೆನು. ಎನ್ನ ಅರಿವಿನ ಮುಖದಲ್ಲಿ ನೈಷಿ*ಕಾಮೂರ್ತಿ ಮಡಿವಾಳಯ್ಯನ ಕಂಡೆನು. ಎನ್ನ ಹೃದಯಮುಖದಲ್ಲಿ ಜ್ಞಾನಮೂರ್ತಿ ಪ್ರಭುದೇವರ ಕಂಡೆನು. ಇಂತೀ ಷಟ್‍ಸ್ಥಲವ ಎನ್ನ ಸರ್ವಾಂಗದಲ್ಲಿ ಪ್ರತಿಷೆ*ಯ ಮಾಡಿ ತೋರಿದ ನಿಃಕಳಂಕ ಮಲ್ಲಿಕಾರ್ಜುನಾ, ನಿಮ್ಮ ಶರಣರ ಕಂಡು, ಪರಮಸುಖಿಯಾಗಿರ್ದೆನು.
--------------
ಮೋಳಿಗೆ ಮಾರಯ್ಯ
ಮೆಲ್ಲಮೆಲ್ಲನೆ ಭಕ್ತನೆನಿಸಿಕೊಂಬೆ, ಮೆಲ್ಲಮೆಲ್ಲನೆ ಮಾಹೇಶ್ವರನೆನಿಸಿಕೊಂಬೆ, ಮೆಲ್ಲಮೆಲ್ಲನೆ ಪ್ರಸಾದಿ ಎನಿಸಿಕೊಂಬೆ, ಮೆಲ್ಲಮೆಲ್ಲನೆ ಪ್ರಾಣಲಿಂಗಿ ಎನಿಸಿಕೊಂಬೆ, ಮೆಲ್ಲಮೆಲ್ಲನೆ ಶರಣನೆನಿಸಿಕೊಂಬೆ, ಮೆಲ್ಲಮೆಲ್ಲನೆ ಐಕ್ಯನೆನಿಸಿಕೊಂಬೆ. ಮೆಲ್ಲಮೆಲ್ಲನೆ ಷಟ್‍ಸ್ಥಲವ ಮೀರಿ ನಿರವಯಸ್ಥಲವನೆಯ್ದುವೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಮಾಯಾಕೋಳಾಹಳನೆಂಬ ಬಿರುದ ಸೂರೆಗೊಂಡರು ಪ್ರಭುದೇವರು. ಯೋಗಾಂಗವ ಸೂರೆಗೊಂಡರು ಸಿದ್ಧರಾಮೇಶ್ವರದೇವರು. ಭಕ್ತಿಸ್ಥಲವ ಸೂರೆಗೊಂಡು, ನಿತ್ಯಪವಾಡವ ಗೆದ್ದರು ಬಸವೇಶ್ವರದೇವರು. ಷಟ್‍ಸ್ಥಲವ ಸೂರೆಗೊಂಡರು ಚನ್ನಬಸವೇಶ್ವರದೇವರು. ಐಕ್ಯಸ್ಥಲವ ಸೂರೆಗೊಂಡರು ಅಜಗಣ್ಣದೇವರು. ಶರಣಸತಿ ಲಿಂಗಪತಿಯಾದರು ಉರಿಲಿಂಗದೇವರು. ಪ್ರಸಾದಿಸ್ಥಲವ ಸೂರೆಗೊಂಡರು ಬಿಬ್ಬಿ ಬಾಚಯ್ಯಂಗಳು, ಜ್ಞಾನವ ಸೂರೆಗೊಂಡರು ಚಂದಿಮರಸರು. ನಿರ್ವಾಣವ ಸೂರೆಗೊಂಡರು ನಿಜಗುಣದೇವರು. ಪ್ರಸಾದಕ್ಕೆ ಸತಿಯಾದರು ಅಕ್ಕನಾಗಮ್ಮನವರು. ಉಟ್ಟುದ ತೊರೆದು ಬಟ್ಟಬಯಲಾದರು ಮೋಳಿಗಯ್ಯನ ರಾಣಿಯರು. ಪರಮ ದಾಸೋಹವ ಮಾಡಿ, ಲಿಂಗದಲ್ಲಿ ನಿರವಲಯನೈದಿದರು ನೀಲಲೋಚನೆಯಮ್ಮನವರು. ಪರಮವೈರಾಗ್ಯದಿಂದ ಕಾಮನ ಸುಟ್ಟ ಭಸ್ಮವ ಗುಹ್ಯದಲ್ಲಿ ತೋರಿಸಿ ಮೆರೆದರು ಮಹಾದೇವಿಯಕ್ಕಗಳು. ಗಂಡ ಸಹಿತ ಲಿಂಗದಲ್ಲಿ ಐಕ್ಯವಾದರು ತಂಗಟೂರ ಮಾರಯ್ಯನ ರಾಣಿಯರು. ಇಂತಿವರು ಮುಖ್ಯವಾದ ಏಳುನೂರೆಪ್ಪತ್ತು ಅಮರ ಗಣಂಗಳ ಶ್ರೀಪಾದವ ಅಹೋರಾತ್ರಿಯಲ್ಲಿ ನೆನೆನೆದು ಬದುಕಿದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಆಧಾರ, ಸ್ವಾಧಿಷ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು, ಏರಿ ಏರಿ ಇಳಿದು ಆದಿಯ ನೋಡಿಕೊಂಡು, ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ, ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್‍ಸ್ಥಲವ ಮೆಟ್ಟಿನಿಂದು, ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ, ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಭಕ್ತಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಭಕ್ತಸ್ಥಲ. ಮಾಹೇಶ್ವರಂಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಪ್ರಸಾದಿಸ್ಥಲ. ಪ್ರಾಣಲಿಂಗಿಗೆ ಐಕ್ಯಸ್ಥಲ, ಐಕ್ಯಂಗೆ ಭಕ್ತನ ವಿಶ್ವಾಸವನರಿತು ಮಾಹೇಶ್ವರನ ಪ್ರಸನ್ನತೆಯ ಕಂಡು ಪ್ರಸಾದಿಯ ಪರಿಪೂರ್ಣತ್ವವನರಿದು ಪ್ರಾಣಲಿಂಗಿಯ ಉಭಯವ ತಿಳಿದು ನಿಂದುದ ಕಂಡು, ಇಂತೀ ಚತುಷ್ಟಯ ಭಾವ ಏಕವಾಗಿ ಶರಣನ ಸನ್ಮತದಲ್ಲಿ ಅಡಗಿ, ಒಡಗೂಡಿದಲ್ಲಿ ಐಕ್ಯಂಗೆ ಬೀಜನಾಮ ನಿರ್ಲೇಪ, ಇಂತೀ ಸ್ಥಲಭಾವ. ಪಶುವಿನ ಪಿಸಿತದ ಕ್ಷೀರವ, ಶಿಶುವಿನ ಒಲವರದಿಂದ ತೆಗೆವಂತೆ ಆ ಕ್ಷೀರದ ಘೃತವ, ನಾನಾ ಭೇದಂಗಳಿಂದ ವಿಭೇದಿಸಿ ಕಾಬಂತೆ ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ಫಲ, ಪ್ರಸಾದಿಗೆ ನಿಷೆ*, ಪ್ರಾಣಲಿಂಗಿಗೆ ಮೂರ್ತಿಧ್ಯಾನ, ಶರಣಂಗೆ ನಿಬ್ಬೆರಗು, ಐಕ್ಯಂಗೆ ಈ ಐದು ಲೇಪವಾದ ನಿರ್ನಾಮ. ಇಂತೀ ಷಟ್‍ಸ್ಥಲವ ನೆಮ್ಮಿ ಕಾಬುದು ಒಂದೆ ವಿಶ್ವಾಸ. ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು ಅರಿದವನಿಗಲ್ಲದೆ ಸಾಧ್ಯವಲ್ಲ ನೋಡಾ.
--------------
ಬಾಹೂರ ಬೊಮ್ಮಣ್ಣ
ಭವಿಪಾಕವ ಮುಟ್ಟದೆ ಸಮಸ್ತ ಮತದಿಂದ ಅಯೋಗ್ಯವಾದ ಪದಾರ್ಥವನುಳಿದು ಯೋಗ್ಯವಾದ ಪದಾರ್ಥವ ಕೊಂಡು, ಪಾದೋದಕದಲ್ಲಿ ಪವಿತ್ರತೆಯಿಂದ ಸ್ವಪಾಕವ ಮಾಡಿ, ಪರಶಿವಲಿಂಗವೆಂದರಿದು ಸುಖಿಸಿ ನಿಜೈಕ್ಯರಾದರು. ಇದನರಿಯದ ಆಡಂಬರದ ವೇಷವ ಧರಿಸಿ ಉದಕ ಹೊಯ್ದು ಸ್ವಯ ಚರ ಪರ ಷಟ್ಸ್ಥಲವ ಬೊಗಳುವ ಕುನ್ನಿಗಳ ಕಂಡು ನಾಚಿತ್ತು ಕಾಣಾ, ಎನ್ನ ಮನವು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ಪೃಥ್ವಿಯ ಅಂಗ ಭಕ್ತನಾದಲ್ಲಿ, ಸರ್ವಸಮಾಧಾನಿಯಾಗಿ ಭೂತಹಿತನಾಗಿರಬೇಕು. ಅಪ್ಪುವಿನ ಅಂಗ ಮಾಹೇಶ್ವರನಾದಲ್ಲಿ, ಮಲ ನಿರ್ಮಲವೆನ್ನದೆ ಇರಬೇಕು. ತೇಜದ ಅಂಗ ಪ್ರಸಾದಿಯಾದಲ್ಲಿ, ಜಿಗುಪ್ಸೆ ಚಿಕಿತ್ಸೆಯನರಿಯದಿರಬೇಕು. ವಾಯುವಿನ ಅಂಗ ಪ್ರಾಣಲಿಂಗಿಯಾದಲ್ಲಿ, ಸುಗುಣ ದುರ್ಗುಣಂಗಳನರಿಯದಿರಬೇಕು. ಆಕಾಶದ ಅಂಗ ಶರಣನಾದಲ್ಲಿ, ಲೇಖ ಅಲೇಖಂಗಳನರಿಯದಿರಬೇಕು. ಮಹದಾಕಾಶದಂತೆ ಐಕ್ಯನಾದಲ್ಲಿ, ಸುರಾಳ ನಿರಾಳಂಗಳನರಿಯದಿರಬೇಕು. ಇಂತೀ ಷಟ್ಸ್ಥಲವ ಒಂದ ನೆಮ್ಮಿ, ಒಂದ ವೇಧಿಸಬೇಕು. ವೇಧಿಸುವನ್ನಕ್ಕ ವಿರಳನಾಗಿ, ವೇಧಿಸಿ ನಿಂದಲ್ಲಿ ಅವಿರಳನಾಗಿ, ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ, ನಿಶ್ಚಿಂತನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯಂಗ ಭಕ್ತನಲ್ಲ, ಅಪ್ಪುವಿನಂಗ ಮಹೇಶ್ವರನಲ್ಲ, ಅಗ್ನಿಯಂಗ ಪ್ರಸಾದಿಯಲ್ಲ, ವಾಯುವಂಗ ಪ್ರಾಣಲಿಂಗಿಯಲ್ಲ, ಆಕಾಶದಂಗ ಶರಣನಲ್ಲ. ಇಂತೀ ಪಂಚತತ್ವವ ಮೆಟ್ಟಿ ನೋಡಿ ಕೂಡಿಹೆನೆಂಬುದು ಐಕ್ಯನಲ್ಲ. ಅದೆಂತೆಂದಡೆ: ಆ ಪೃಥ್ವಿ ಅಪ್ಪುವಿನ ಪ್ರಳಯಕ್ಕೊಳಗು, ಆ ಅಪ್ಪು ಅಗ್ನಿಯ ಆಪೋಶನಕ್ಕೆ ಒಡಲು. ಆ ಅಗ್ನಿ ವಾಯುವಿನ ಭಾವಕ್ಕೊಳಗು, ಆ ವಾಯು ಆಕಾಶದ ಅವಧಿಗೊಡಲು. ಇಂತೀ ಪಂಚತತ್ವಂಗಳಲ್ಲಿ ಬೆರಸಿ, ಕೂಡಿಹೆನೆಂಬ ಷಟ್ಸ್ಥಲವ ನಾನರಿಯೆ. ಅದು ನಿಮ್ಮ ಭಾವ, ನಿಮ್ಮಲ್ಲಿಯೆ ಆರರ ಹೊಳಹು. ಅದು ನಿಮ್ಮ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಗುರು ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ, ಪೃಥ್ವಿಯ ಮೇಲಣ ಕಣಿಯ ತಂದು, ಇಷ್ಟಲಿಂಗಮಂ ಮಾಡಿ, ಶಿಷ್ಯನ ತನುವಿನ ಮೇಲೆ ಧರಿಸಿದ ಲಿಂಗವು ಅವತಳವಾಗಿ ಭೂಮಿಯಲ್ಲಿ ಸಿಂಹಾಸನಂಗೊಂಡಿತ್ತೆಂದು ಸಮಾಧಿಯ ಹೋಗುವರಯ್ಯಾ. ಲಿಂಗಕ್ಕೆ ಅವತಳವಾದಡೆ, ಭೂಮಿ ತಾಳಬಲ್ಲುದೆ? ಮಾರಾಂತನ ಗೆಲಿವೆನೆಂದು ಗರಡಿಯ ಹೊಕ್ಕು ಕಠಾರಿಯ ಕೋಲ ನತಫಳೆದುಕೊಂಡು, ಸಾಧನೆಯ ಮಾಡುವಲ್ಲಿ ಕೈತಪ್ಪಿ ಕೋಲು ನೆಲಕ್ಕೆ ಬಿದ್ದಡೆ, ಆ ಕೋಲ ಬಿಟ್ಟು ಸಾಧನೆಯಂ ಬಿಟ್ಟು ಕಳೆವರೇ ಅಯ್ಯ? ತಟ್ಟಿ ಮುಟ್ಟಿ ಹಳಚುವಲ್ಲಿ ಅಲಗು ಬಿದ್ದಡೆ ಭಂಗವಲ್ಲದೆ ಕೋಲು ಬಿದ್ದಡೆ ಭಂಗವೇ ಅಯ್ಯ? ಆ ಕೋಲ [ತ]ಳೆದುಕೊಂಡು ಸಾಧನೆಯಂ ಮಾಡುವದೇ ಕರ್ತವ್ಯ. ಆ ಲಿಂಗ ಹುಸಿ ಎಂದಡೇನಯ್ಯ? ಶ್ರೀ ವಿಭೂತಿವೀಳೆಯಕ್ಕೆ ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೇರಿ ಆ ಗಣಂಗಳು ಹುಸಿಯಾದಡೆ, ಕರ್ಣಮಂತ್ರ ಹುಸಿಯೇ? ಆ ಕರ್ಣಮಂತ್ರ ಹುಸಿಯಾದಡೆ, ಶ್ರೀಗುರುಲಿಂಗವು ಹುಸಿಯೇ? ಶ್ರೀಗುರುಲಿಂಗ ಹುಸಿಯಾದಡೆ ಜಂಗಮಲಿಂಗ ಹುಸಿಯೇ? ಆ ಜಂಗಮಲಿಂಗ ಹುಸಿಯಾದಡೆ, ಪಾದತೀರ್ಥ ಪ್ರಸಾದ ಹುಸಿಯೇ? ಇಂತೀ ಷಟ್‍ಸ್ಥಲವ ತುಚ್ಛವ ಮಾಡಿ, ಗುರೂಪದೇಶವ ಹೀನವ ಮಾಡಿ, ಸಮಾಧಿಯ ಹೊಗುವ ಪಂಚಮಹಾಪಾತಕರ ಮುಖವ ನೋಡಲಾಗದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->