ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮವೆ ಮಹಾರುದ್ರಸ್ವರೂಪ ನೋಡಯ್ಯ. ಜಂಗಮವೆ ಪರಮಪಾವನ ಕರ್ತ ನೋಡಯ್ಯ. ಜಂಗಮವೆ ಷಟ್ಸ್ಥಲಬ್ರಹ್ಮ ನೋಡಯ್ಯ. ಜಂಗಮವೆ ಶರಣಚಿಂತಾಮಣಿ ಸಂಜೀವನ ನೋಡಯ್ಯ. ಜಂಗಮವೆ ಭವರೋಗವೈದ್ಯ ನೋಡಯ್ಯ ಜಂಗಮವೆ ಸಕಲೈಶ್ವರ್ಯ ನೋಡಯ್ಯ. ಜಂಗಮವೆ ಸಮರಸ ಸುಖಭೋಗಮೂರ್ತಿ ನೋಡಯ್ಯ. ಜಂಗಮವೆ ಕಾಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಇಂದ್ರಿಯಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪ್ರಾಣಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಸರ್ವಾನುಗ್ರಹಮೂರ್ತಿ ನೋಡಯ್ಯ. ಜಂಗಮವೆ ಪಾಪಪುಣ್ಯ ದೋಷರಹಿತ ನೋಡಯ್ಯ. ಜಂಗಮವೆ ಪರಿಪೂರ್ಣಚಿದೈಶ್ವರ್ಯ ನೋಡಯ್ಯಾ. ಜಂಗಮವೆ ನಿತ್ಯತ್ವಮೂರ್ತಿ ನೋಡಯ್ಯಾ. ಜಂಗಮವೆ ಜಯಮಂಗಳಸ್ವರೂಪ ನೋಡಯ್ಯ. ಜಂಗಮವೆ ಶುಭಮಂಗಳ ಸ್ವರೂಪ ನೋಡಯ್ಯ. ಜಂಗಮವೆ ಪಾವನಮೂರ್ತಿ ನೋಡಯ್ಯ. ಜಂಗಮವೆ ಪರುಷದ ಕಣಿ ನೋಡಯ್ಯ. ಜಂಗಮವೆ ನಿಜವಸ್ತು ನೋಡಯ್ಯ. ಜಂಗಮವೆ ಚಿತ್ಕಾರಣಾವತರ್ಯಮೂರ್ತಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು ಶಿವಜ್ಞಾನಿಗಳಾದ ಶಿವಶರಣರಿಗೆ, ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು. ಭಕ್ತಾದಿ ಐಕ್ಯಾಂತಮಾದ ಷಟ್‍ಸ್ಥಲಬ್ರಹ್ಮ ಎಂದೆನ್ನಬಹುದು. ಅಂಗಸ್ಥಲ 44, ಲಿಂಗಸ್ಥಲ 57 ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದುಸ್ಥಲ ಮೊದಲಾದ ಸರ್ವಾಚಾರಸಂಪನ್ನನೆಂದೆನ್ನಬಹುದು. ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ? ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ? ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ ಅಂದೇ ಹೊರಗಾಗಿ ಮತ್ತೆ ಮರಳಿ ಇಂದು ನಾವು ಗುರುಲಿಂಗಜಂಗಮದ ತೀರ್ಥಪ್ರಸಾದ ಪ್ರೇಮಿಗಳೆಂದು, ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು, ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ, ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ, ಪತ್ರಿ, ಪುಷ್ಪ ಮೊದಲಾದುದರಿಂ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ, ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು, ಕಡೆಯಲ್ಲಿ ಎಂ¨ತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನು ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವೇ ಮೂರ್ತಿಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದಂಡಸ್ವರೂಪವೆ ಪಿಂಡಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವೆ ಕಲಾಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಾಕಾರವೆ ಬ್ರಹ್ಮಾನಂದ ಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವೆ ವಿಜ್ಞಾನಬ್ರಹ್ಮವು. ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವೆ ಪರಬ್ರಹ್ಮವು. ಈ ಆರು ಷಟ್ಸ್ಥಲಬ್ರಹ್ಮ ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಓಂಕಾರ ತಾರಕಂ ರೂಪಂ ಮೂರ್ತಿಬ್ರಹ್ಮ ಯಥಾ ಭವೇತ್ | ಓಂಕಾರ ದಂಡರೂಪೇ ಚ ಪಿಂಡಬ್ರಹ್ಮೇತಿ ಕಥ್ಯತೇ || ಓಂಕಾರ ಕುಂಡಲಾಕಾರಂ ಕಲಾಬ್ರಹ್ಮೇತಿ ಕೀರ್ತಿತಂ | ಓಂಕಾರಂ ಅರ್ಧಚಂದ್ರಂ ಚ ಬ್ರಹ್ಮಾನಂದಂ ತಥಾ ಭವೇತ್ || ಓಂಕಾರಂ ದರ್ಪಣಾಕಾರಂ ವಿಜ್ಞಾನಬ್ರಹ್ಮ ಉಚ್ಯತೇ | ಓಂಕಾರಂ ಜ್ಯೋತಿರೂಪಂ ಚ ಪರಬ್ರಹ್ಮ ಯಥಾ ಭವೇತ್ || ಪ್ರಣವಂ ಷಡ್ವಿಧಂ ಚೈವ ಷಟ್ಸ್ಥಲಬ್ರಹ್ಮ ಉಚ್ಯತೇ | ಇತಿ ಷಟ್‍ಬ್ರಹ್ಮ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಂತೀ ವಾಚಾಶ್ರುತಿಗಳಲ್ಲಿ ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಪಂಚಾಶತ್ಕೋಟಿ ವಿಸ್ತೀರ್ಣದೊಳಗಾದ ಕವಿ ಗಮಕಿ ವಾದಿ ವಾಗ್ಮಿಗಳು ಮುಂತಾದ ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು ಷಟ್ಸ್ಥಲಬ್ರಹ್ಮ ಪಂಚವಿಂಶತಿತತ್ವ ಶತ ಏಕಸ್ಥಲ ಮುಂತಾದ ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ ಅನಾದಿವಸ್ತುವಿನ ಬೀಜರೇಣು. ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ ಚೆನ್ನಬಸವಣ್ಣ ಪ್ರಭು ತ್ರೈಮೂರ್ತಿಗಳು. ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ ಸ್ಥೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ ರೂಪು, ರುಚಿ, ಗಂಧ ಸೌಖ್ಯಸಂಬಂಧವಾದಂತೆ ಮತ್ರ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ನಿರಂಜನ ಪ್ರಣವದುತ್ಪತ್ಯ : ಏನೂ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿ ಕಲಾಪ್ರಣವ ಉತ್ಪತ್ಯವಾಯಿತ್ತು . ಆ ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅಕಾರ ಉಕಾರ ಮಕಾರದ ರೂಪಾಂಗಭೇದದಿಂದ ಒಂಬತ್ತು ಪ್ರಣವ ಉತ್ಪತ್ಯವಾಯಿತ್ತು. ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಸಂಬಂಧವಾಗಿಹವು. ಆ ಅಕಾರ ಉಕಾರ ಮಕಾರ ಈ ಮೂರು ಕೂಡಿ ಏಕಾರ್ಥವಾಗಿಹ ಪ್ರಣವ ಶಿವಶಕ್ತಿರಹಿತವಾಗಿಹುದು. ಆ ಶಿವಸಂಬಂಧವಾಗಿಹ ಅಖಂಡಗೋಳಕಾಕಾರಪ್ರಣವದಲ್ಲಿ ಜ್ಯೋತಿಸ್ವರೂಪಪ್ರಣವವೆಂದು, ದರ್ಪಣಾಕಾರಪ್ರಣವವೆಂದು, ಕುಂಡಲಾಕಾರಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು, ತಾರಕಕಾಸ್ವರೂಪಪ್ರಣವವೆಂದು ಆರುಪ್ರಕಾರವಾಗಿಹುದು. ಶಕ್ತಿಸಂಬಂಧವಾದ ಪರಂಜ್ಯೋತಿಸ್ವರೂಪವಾಗಿಹ ಪರಮಪ್ರಣವದಲ್ಲಿ ತಾರಕಸ್ವರೂಪಪ್ರಣವವೆಂದು, ದಂಡಕಸ್ವರೂಪಪ್ರಣವವೆಂದು ಕುಂಡಲಾಕಾರಪ್ರಣವವೆಂದು ಅರ್ಧಚಂದ್ರಕಪ್ರಣವವೆಂದು ದರ್ಪಣಾಕಾರಪ್ರಣವವೆಂದು ಜ್ಯೋತಿಸ್ವರೂಪಪ್ರಣವವೆಂದು ಆರು ಪ್ರಕಾರವಾಗಿಹುದು. ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವದಲ್ಲಿ ಮೂರ್ತಿಬ್ರಹ್ಮಪ್ರಣವವೆಂದು, ಪಿಂಡಬ್ರಹ್ಮಪ್ರಣವವೆಂದು, ಕಲಾಬ್ರಹ್ಮಪ್ರಣವವೆಂದು, ಬ್ರಹ್ಮಾನಂದಬ್ರಹ್ಮಪ್ರಣವವೆಂದು, ವಿಜ್ಞಾನಬ್ರಹ್ಮಪ್ರಣವವೆಂದು ಪರಬ್ರಹ್ಮಪ್ರಣವವೆಂದು ಈ ಆರು ಪ್ರಣವಂಗಳು ಷಟ್‍ಸ್ಥಲಬ್ರಹ್ಮ ತಾನೆ ಷಷ*ಪ್ರಣವವಾಗಿಹುದೆಂದು ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು. ಇನ್ನು ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ದರ್ಪಣಾಕಾರದ ಪ್ರಣವದಲ್ಲಿ ಈಶಾನ್ಯಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕಪ್ರಣವದಲ್ಲಿ ತತ್ಪುರುಷಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರಪ್ರಣವದಲ್ಲಿ ಅಘೋರಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪಪ್ರಣವದಲ್ಲಿ ವಾಮದೇವಮುಖವು ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪಪ್ರಣವದಲ್ಲಿ ಸದ್ಯೋಜಾತಮುಖವು ಉತ್ಪತ್ಯವಾಯಿತ್ತು. ಈಶಾನ್ಯಮುಖದಲ್ಲಿ ಸಾಯುಜ್ಯಪ್ರಣವ ಉತ್ಪತ್ಯವಾಯಿತ್ತು. ತತ್ಪುರುಷಮುಖದಲ್ಲಿ ಸಾಕಲ್ಯಪ್ರಣವ ಉತ್ಪತ್ಯವಾಯಿತ್ತು. ಅಘೋರಮುಖದಲ್ಲಿ ಶಾಂಭವಪ್ರಣವ ಉತ್ಪತ್ಯವಾಯಿತ್ತು. ವಾಮದೇವಮುಖದಲ್ಲಿ ಸ್ವಾಸ್ಯಪ್ರಣವ ಉತ್ಪತ್ಯವಾಯಿತ್ತು. ಸದ್ಯೋಜಾತಮುಖದಲ್ಲಿ ಸೌಖ್ಯಪ್ರಣವ ಉತ್ಪತ್ಯವಾಯಿತ್ತು. ಶಿವಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವು, ಶಕ್ತಿಸಂಬಂಧವಾದ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪರಬ್ರಹ್ಮಪ್ರಣವವು, ಶಿವಶಕ್ತಿರಹಿತವಾಗಿಹ ಅಖಂಡಮಹಾಜ್ಯೋತಿಪ್ರಣವ ಈ ಮೂರು ಪ್ರಣವಂಗಳು ಕೂಡಿ ಏಕಾರ್ಥವಾಗಿ ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ ಅಗಮ್ಯ ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ ಘನವನೇನೆಂದುಪಮಿಸಬಾರದ ಉಪಮಾತೀತಕತ್ತತ್ತವಾಗಿಹನು ನೋಡಾ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾನೆ ಭಕ್ತ ತಾನೆ ಮಾಹೇಶ್ವರನು ತಾನೆ ಪ್ರಸಾದಿ ತಾನೆ ಪ್ರಾಣಲಿಂಗಿ ತಾನೆ ಶರಣ ತಾನೆ ಐಕ್ಯ ನೋಡಾ. ತನ್ನಿಂದಧಿಕವಪ್ಪ ಘನವಿಲ್ಲವಾಗಿ ತಾನೆ ಷಟ್ಸ್ಥಲಬ್ರಹ್ಮ ತಾನೆ ನಾದಬಿಂದುಕಲಾತೀತವಹ ಮಹಾಘನಲಿಂಗೈಕ್ಯ. ತಾನಲ್ಲದೆ ಮತ್ತಾರುಂಟು ಹೇಳಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->