ಅಥವಾ

ಒಟ್ಟು 160 ಕಡೆಗಳಲ್ಲಿ , 32 ವಚನಕಾರರು , 137 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಆದಿ ಅನಾದಿ ಸುರಾಳ ನಿರಾಳ ಶೂನ್ಯ ನಿಃಶೂನ್ಯದಿಂದತ್ತತ್ತಲಾದ ಘನಮಹಾಲಿಂಗವೆಂಬ ಪರಬ್ರಹ್ಮವು, ಗುರುಕರುಣದಿಂ ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬರಲು ಆ ಲಿಂಗದಲ್ಲಿ ಕೃಷ್ಣಾ ಭಾಗೀರಥಿ ಮೊದಲಾದ ಅನೇಕ ತೀರ್ಥಂಗಳು, ಕಾಶಿರಾಮೇಶ್ವರ ಮೊದಲಾದ ಅನೇಕ ಕ್ಷೇತ್ರಂಗಳು, ಹಿಮಾಚಲ ಶ್ರೀಶೈಲಪರ್ವತ ಮೊದಲಾದ ಅನೇಕ ಪುಣ್ಯಶೈಲಂಗಳುಂಟೆಂದು, ತನ್ನ ಸ್ವಾನುಭಾವಮೂಲಜ್ಞಾನದಿಂ ತಿಳಿದು, ಸಕಲ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಮನವ ಮಹಾಘನದಲ್ಲಿರಿಸಿ ಇರಬಲ್ಲಡೆ ಆತನೇ ಅನಾದಿಸದ್ವೀರಮಹೇಶ್ವರನ ಭಕ್ತನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತೆರೆಯ ಮರೆಯ ಬಹು ರೂಪದಂತೆ, ಸೀರೆಯ ಮರೆಯ ಉಪಸ್ಥಳದಂತೆ, ಆ ಪೂರ್ವ ಕಟ್ಟಿದ ಮರೆಯ ಬಿಡುವನ್ನಕ್ಕ ಸೈರಿಸಲಾರದವನಂತೆ ಎನ್ನ ತಲ್ಲಣ. ನಿನ್ನಯ ಕಲ್ಲಿನ ಮರೆಯ ನನ್ನಿಯ ರೂಪ ತೋರು. ಎನ್ನಯ ಕಲ್ಲೆದೆಯ ಬಿಡಿಸು, ಮನೋವಲ್ಲಭ, ಅಲೇಖನಾದ ಶೂನ್ಯ, ಉರಿಗಲ್ಲಿನ ಖುಲ್ಲತನವ ಬಿಡು, ಬೇಡಿಕೊಂಬೆ ನಿನ್ನನು.
--------------
ವಚನಭಂಡಾರಿ ಶಾಂತರಸ
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು. ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು. ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು. ಇಂತಿವರ ಗೋಷ್ಠಿಯ ಹುದುಗಿಗಾರದೆ, ಅಲೇಖನಾದ ಶೂನ್ಯ ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು. ಮೂಷಕನ ಮೀಸೆಯ ಬಿಂದು ಮೂರುಲೋಕವ ಮುಣುಗಿಸಿತ್ತು. ಕಾಸದ ನೀರು ಬಿಸಿಯಾಗಿ ಕುಡಿವರ ಮೀಸೆ ಸುಟ್ಟಿತ್ತು. ಸಾಸಿವೆಯ ಮೂಷಕನ ಮೀಸೆಯ ಬಿಸಿನೀರ ಕುಡಿವಾತನ, ಬಾಯೊತ್ತಿನ ಮೀಸೆಯಲ್ಲಿ ಹುಟ್ಟಿತ್ತು ಒಂದು ಹಾಸರೆಗಲ್ಲು. ಹಾಸರೆಗಲ್ಲಿನ ಮೇಲೆ ಕುಳಿತಿದಾತನ ಕೇಳಿಹರೆಂದು ಏತಕ್ಕಡಗಿದೆ, ಅಲೇಖಮಯ ಶೂನ್ಯ ಕಲ್ಲಿನ ಮನೆಯೊಳಗೆ.
--------------
ವಚನಭಂಡಾರಿ ಶಾಂತರಸ
ಎತ್ತಬಾರದ ಕಲ್ಲು ನೀರಿನ ಮೇಲೆ ತೆಪ್ಪದಂತೆ ಹೋದಾಗ ಮೇಲೆ ಕುಳಿತು ಒತ್ತುವರ ನುಂಗಿತ್ತು. ನುಂಗಿದವರು ಅಲ್ಲಿದಂತೆ ಹೊಳೆಯ ನೀರ ತಪ್ಪಲಿಕ್ಕೆ ಕುಡಿದು, ಆ ತೆಪ್ಪ ಪೃಥ್ವಿಯಲ್ಲಿ ನಿಂದಿತ್ತು. ಈ ಗುಣಬ್ಥಿತ್ತಿಯ ಕೇಳಿಹರೆಂದು, ಅಲೇಖನಾದ ಶೂನ್ಯ ಶಿಲೆಯ ಮರೆಯಾದ.
--------------
ವಚನಭಂಡಾರಿ ಶಾಂತರಸ
ಆದಿಮೂಲ ಅನಾದಿಮೂಲವಿಲ್ಲದಂದು, ಅಜಾಂಡ ಬ್ರಹ್ಮಾಂಡವಿಲ್ಲದಂದು, ವೇದಾಂತ ಸಿದ್ಧಾಂತವಿಲ್ಲದಂದು, ವ್ಯೋಮ ವ್ಯೋಮಾಕಾಶವಿಲ್ಲದಂದು, ಜೀವಹಂಸ ಪರಮಹಂಸರಿಲ್ಲದಂದು, ಅಜಪೆ ಗಾಯತ್ರಿ ಇಲ್ಲದಂದು, ಅನಂತಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು, ಭಾವ ನಿರ್ಭಾವವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ, ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ, ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ, ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ, ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ, ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು. ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ, ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಬ್ರಹ್ಮಮೂರ್ತಿಗೂ ಶಿಲೆ ಒಂದೆ, ವಿಷ್ಣು ಮೂರ್ತಿಗೂ ಶಿಲೆ ಒಂದೆ, ರುದ್ರಮೂರ್ತಿಗೂ ಶಿಲೆ ಒಂದೆ, ರೂಪಿನ ಅವತಾರ ಬ್ಥಿನ್ನವಾಯಿತ್ತು, ಸ್ಥೂಲ ಸೂಕ್ಷ್ಮ ಕಾರಣದಂತೆ, ಕುಂಭ ಜಲ ಬಿಂಬದಂತೆ, ಇನ್ನಾರನಹುದೆಂಬೆ, ಇನ್ನಾರನಲ್ಲಾ ಎಂಬೆ ? ಬ್ರಹ್ಮ ಕಾಲು, ವಿಷ್ಣು ಕೈ, ರುದ್ರ ಕಣ್ಣು, ಈಶ್ವರ ತಲೆ, ಸದಾಶಿವ ಪ್ರಾಣವಾದಲ್ಲಿ ಇವು ಸಮಯ. ಈ ಪಂಚಕೋಶಕ್ಕೆ ಆಧಾರ ಪರಮಜ್ಞಾನ. ಅದ ಭೇದಿಸಲರಿಯದೆ ವಾದವ ಮಾಡಿದರೆಲ್ಲರು. ನಾದ ಬಿಂದು ಕಳೆ ಅತೀತನರಿ, ಅಲೇಖನಾದ ಶೂನ್ಯ ಕಲ್ಲಿನೊಳಗಾದವನ.
--------------
ವಚನಭಂಡಾರಿ ಶಾಂತರಸ
ನಹ್ಯತೆ ಸಹ್ಯತೆ ಶಂಕರಿತೆ ಮೂಲಭದ್ರಿಕೆ ಮಾಯಾರಿತು ಮಂತ್ರರಿತು ತಂತ್ರಸಾಧನ ಮಾತ್ರಾಯ ಪೂರ್ವನಿರೀಕ್ಷಣೆ ರಘುವಾಚ ವಾದಮೂಲ ವೈದಿಕಧರ್ಮ ಸಾಂಖ್ಯನ ಮತ ವ್ಯಾಪಾರ ಸಂಗ್ರಹ ಮಾಯಾ ತರ್ಕ ಶೂನ್ಯ, ಉತ್ತರ ಸಂಕಲ್ಪ ಚಿಂತನೆ ಮೊದಲಾದ ವೇದಾಧ್ಯಾಯ, ಉಭಯಚಿಂತನೆಯಾದರೂ ವೇದವೇದ್ಯರಲ್ಲ. ಅದೆಂತೆಂದಡೆ : ಮದವ ಸ್ವೀಕರಿಸಿದ ಮದೋನ್ಮತ್ತನಂತೆ, ತನ್ನ ಕೊರತೆಯ ತಾನರಿಯದೆ ಇದಿರಿಗೆ ಚತುರತೆಯನೊರೆವವನಂತೆ, ವೇದಘಾತಕರಲ್ಲದೆ ವೇದವೇದ್ಯರಲ್ಲ. ವೇದವೇದ್ಯರಾರೆಂದಡೆ ತಾನೆಂಬುದ ತಾನರಿದು, ತಾನೆಂಬ ಭಾವ ಏನೂ ಇಲ್ಲದೆ, ಶ್ರುತಿ ಸ್ಮೃತಿ ತತ್ತ್ವಜ್ಞಾನ ಭೇದಂಗಳ ಧ್ಯಾನಪರಿಪೂರ್ಣನಾಗಿ, ಪ್ರಾಣಿಗಳ ಕೊಲ್ಲದೆ, ಗೆಲ್ಲ ಸೋಲವನೊಲ್ಲದೆ, ತ್ರಿವಿಧದರ್ಚನೆಯಲ್ಲಿ ನಿಲ್ಲದೆ, ಎಲ್ಲಾ ಆತ್ಮಂಗಳಲ್ಲಿ ಸಲ್ಲೀಲೆವಂತನಾಗಿ, ಭಾವ ನಿಜವಸ್ತುವಿನಲ್ಲಿ ವೇದ್ಥಿಸಿ ನಿಂದಾತನೇ ವೇದವೇದ್ಯ, ಲಲಾಮಬ್ಥೀಮಸಂಗಮೇಶ್ವರ ಲಿಂಗದೊಳಗಾದ ಶರಣ.
--------------
ವೇದಮೂರ್ತಿ ಸಂಗಣ್ಣ
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ಐದಕ್ಷರ ಆದಿಯಾದ, ಇಪ್ಪತ್ತೈದಕ್ಷರ ಸಂಯೋಗದ ಮೂವತ್ತಾರಕ್ಷರವಾನಂದದ ಆನಂದ ಸಾನಂದ ಶೂನ್ಯ ತನ್ನಯ ಅಂಗ ಭಾನುವಿನ ಪ್ರಭೆಯಪ್ಪ ಹೇಮ ಕಲಶಕ್ಕೆಲಸಂದಿದ ಮೇಲೆ ಆಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕರ್ಮವ ನುಂಗಿತ್ತು ಹಾಹೆ, ಹಾಹೆಯ ನುಂಗಿತ್ತು ರಜ್ಜು, ರಜ್ಜುವ ನುಂಗಿತ್ತು ವಿದ್ಯೆ, ವಿದ್ಯೆಯ ನುಂಗಿತ್ತು ಕಳೆ, ಕಳೆಯ ನುಂಗಿತ್ತು ಬೆಳಗು, ಬೆಳಗ ನುಂಗಿತ್ತು ನಾದ, ನಾದವ ನುಂಗಿತ್ತು ಶೂನ್ಯ, ಶೂನ್ಯವ ನುಂಗಿತ್ತು ಮಹಾಶೂನ್ಯ, ಮಹಾಶೂನ್ಯವ ನುಂಗಿತ್ತು ನಿರಾಳ. ಆ ನಿರಾಳದಲ್ಲಿ ನಿಂದು ನಿಶ್ಚಿಂತವಾಸಿಯಾಗಿದ್ದೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮಲ್ಲಿ ಅವಿರಳನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಕಾಲಲ್ಲಿ ಕಟ್ಟಿದ ಸಡ್ಡೆಯ ಕೀಳುವರಿಲ್ಲ. ಕೈಯಲ್ಲಿ ಹಿಡಿದ ಮೊರನ ಬೇಡಾ ಎಂಬವರಿಲ್ಲ. ತಲೆಯಲ್ಲಿ ಹೊತ್ತ ಕೊಂಗವ ಇಳುಹುವರಿಲ್ಲ. ಸಡ್ಡೆಗೆ ಮೂರು ಕವೆ. ಒಂದೆ ಚಿತ್ತವಟ್ಟ. ಮೊರಕೆ ಮೂರು ಗೋಟು, ಮಾಡುವಾಕೆ ಒಬ್ಬಳೆ. ಕೊಂಗಕ್ಕೆ ಎರಡು ಗೋಟು, ತೂರುವರು ಮೂವರು. ರಾಶಿವೊಂದೆ, ಕೊಳಗ ಎರಡು, ಅಳೆವರು ಲೆಕ್ಕಕ್ಕೆ ಕಡೆಯಿಲ್ಲ. ಇದ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನೊಳಹೊಕ್ಕ.
--------------
ವಚನಭಂಡಾರಿ ಶಾಂತರಸ
ಇನ್ನಷ್ಟು ... -->