ಅಥವಾ

ಒಟ್ಟು 58 ಕಡೆಗಳಲ್ಲಿ , 26 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರವೇ ನಾದಮಯ. ಓಂಕಾರವೇ ಮಂತ್ರಮಯ. ಓಂಕಾರವೇ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ. ಪ್ರಣವವೇ ಪರಮಾತ್ಮ ಸ್ವರೂಪವಾಗಿ ಪರಮೇಶ್ವರನ ಗೌಪ್ಯಮುಖ ನೋಡಾ. ಪ್ರಣವವೆ ಶಿವಶರಣರ ಹೃದಯಾದ್ಥಿಪತಿ ಇದು ಕಾರಣ, ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ. ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವೆಂದರಿಯರು, ಹಿರಿಯರೆಂದರಿಯರು; ದೇವರೆಂದರಿಯರು, ಭಕ್ತರೆಂದರಿಯರು. ಲಿಂಗವೆಂದರಿಯರು, ಜಂಗಮವೆಂದರಿಯರು; ಬಂದ ಬರವನರಿಯರು ನಿಂದ ನಿಲವನರಿಯರು. ಶಿವಶರಣರ ನೋಯಿಸುವ ಪಾತಕರನೇನೆಂಬೆ ? ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು.
--------------
ಅಲ್ಲಮಪ್ರಭುದೇವರು
ಅಷ್ಟಭೋಗಂಗಳ ಕಾಮಿಸಿ, ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ ಸ್ವಾನುಭಾವರ ಸುಖದೊಳಗಿರಬಲ್ಲಡೆ ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ. ಇಂದ್ರಿಯ ನಿರೂಡ್ಥೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ ನಿಚ್ಚಯ ದೃಡಚಿತ್ತದೊಳಿರಬಲ್ಲಡೆ ಕರಸ್ಥಲದಲ್ಲಿ ಧರಿಸುವುದಯ್ಯಾ. ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ ಉರಸ್ಥಲದಲ್ಲಿ ಧರಿಸುವುದಯ್ಯಾ. ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು ಶಿವಾನುಭಾವದ ಸುಖದೊಳಿರಬಲ್ಲಡೆ ಕಂಠಸ್ಥಲದಲ್ಲಿ ಧರಿಸುವುದಯ್ಯಾ. ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ. ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ ಅಮಳೋಕ್ಯದಲ್ಲಿ ಧರಿಸುವುದಯ್ಯಾ. ಶಿವತತ್ವದ ಮೂಲಜ್ಞಾನಸಂಬಂದ್ಥಿಗಳಪ್ಪ ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನುಲಿಯೊಡೆಯರೆ ನಿಮ್ಮಾಳ್ದರೇನಾದರು ? ಆಳ್ದರು ಜಂಗಮದ ಪಾದದ ಕೆಳಗೈದಾರೆ. ಪಾದ ಲಿಂಗವಪ್ಪುದೆ ? ಪಾದಕ್ಕೆಯೂ ಲಿಂಗಕ್ಕೆಯೂ ಭೇದವುಂಟೆ ? ನಾವರಿದುದಿಲ್ಲ, ಸುಮ್ಮನಿರಿ ನೀವು. ಇದಕ್ಕಿನ್ನೇನು ಪ್ರಾಯಶ್ಚಿತ ? ಶಿವಶರಣರ ಚರಣೋದಕವ ಕರುಣಿಸಬೇಕು, ಕೊಡಬಾರದು. ಅದೇನು ಕಾರಣ ? ನೀವು ಲಿಂಗವ ಕೇಳಿದಿರಾಗಿ, ಶರಣಂಗೆ ಲಿಂಗವಿಲ್ಲ, ನಾವು ಪೂಜಕರಲ್ಲ. ಭಕ್ತಿಯೆಂಬುದಾವುದು ? ಅರ್ಧಶರೀರ ಶಿವನಾರು ? ದಕ್ಷಿಣಂಗೆ ಮಹೇಶ್ವರನಾರು ? ಭೃಂಗೀಶ್ವರನೊಬ್ಬನೆ ? ಮತ್ತೆ ಕಂಡುದಿಲ್ಲ, ಧರ್ಮೇಶ್ವರ[ಲಿಂಗಾ].
--------------
ಹೆಂಡದ ಮಾರಯ್ಯ
ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ, ಇಂದ್ರನಾದಡಾಗಲಿ, ಚಂದ್ರನಾದಡಾಗಲಿ, ಎಮ್ಮ ಶಿವಶರಣರ ನೋವು ಎನ್ನ ನೋವು ನೋಡಾ. `ಅವರನೊರಸುವೆನುರುಹುವೆ'ಯೆಂದು ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ನೊಸಲ ಕಣ್ಣಿಂಗೆ ಬೆಸನನಿತ್ತಡೆ, ನಿಲಬಲ್ಲ ಗರುವರನಾರನೂ ಕಾಣೆ.
--------------
ಸಿದ್ಧರಾಮೇಶ್ವರ
ಹಾಡಿದರೆ ಹಾಡುವೆನಯ್ಯ ಶಿವಶರಣರ ಮನವೊಲಿದು. ನೋಡಿದರೆ ನೋಡುವೆನಯ್ಯ ಸದ್ಭಕ್ತಸ್ತ್ರೀಯರ ಎನ್ನ ಹೆತ್ತ ತಾಯಿಗಳೆಂದು. ಬೇಡಿದರೆ ಬೇಡುವೆನಯ್ಯ ಎನ್ನ ಶ್ರೀಗುರುವಿನಲ್ಲಿ ನಿತ್ಯ ನಿಜಮುಕ್ತಿಯ. ಕೂಡಿದರೆ ಕೂಡುವೆನಯ್ಯ ಅಖಂಡೇಶ್ವರಾ, ನಿಮ್ಮ ಶ್ರೀಚರಣವನೊಡಗೂಡುವ ಅವಿರಳ ಸಮರಸಭಕ್ತಿಯಲ್ಲಿ.
--------------
ಷಣ್ಮುಖಸ್ವಾಮಿ
ಶಿವಶರಣರ ಬರವ ಕಂಡು ಶಿರಬಾಗಿ, ಕರ ಮುಗಿದಂಜಲೇಬೇಕು. ಶರಣೆನ್ನಲೊಲ್ಲದೀ ಮನವು. ಆಗಿನ ಸಧ್ಯಃಫಲದ ಲಾಭದ ಭಕ್ತಿಯನರಿಯದಾಗಿ, ಶರಣೆನ್ನಲೊಲ್ಲದೀ ಮನವು. ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ, ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ, ನಗು[ತ್ತಲೈದಾನೆ]
--------------
ಮೈದುನ ರಾಮಯ್ಯ
ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು, ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು, ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು, ಅನುಭಾವವಿಲ್ಲದ ಏನನೂ ಅರಿಯಬಾರದು. ತನ್ನಲ್ಲಿ ತಾ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕ್ಕೆನಲುಂಟೆ ಕೂಡಲಸಂಗಮದೇವಯ್ಯಾ, ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ
--------------
ಬಸವಣ್ಣ
ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ. ಕೇಳಿದ ಸುಖ ಕಿವಿಗೆ ಬೇಟವಾಯಿತ್ತು. ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು. ಕಂಗಳಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು. ಶಿವಶರಣರ ದರುಶನದ ಸುಖವನೇನೆಂದೆನಬಹುದು ? ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನನಗಲಿದ ದುಃಖ ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ.
--------------
ಮುಕ್ತಾಯಕ್ಕ
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ. ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು. ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು. ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು. 473
--------------
ಬಸವಣ್ಣ
ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ! ಎಲ್ಲರು ಅಲ್ಲ ಎಂಬುದು ಪ್ರಮಾಣವಲ್ಲ ಕಾಣಿಭೋ. ಅದೇನು ಕಾರಣವೆಂದರೆ: ಶಿವಶರಣರ ಹೃದಯದಂತಸ್ಥವನರಿಯರಾಗಿ, ಎನ್ನ ಅಹುದೆಂಬುದನು, ಅಲ್ಲ ಎಂಬುದನು ಮನ್ಮನೋಮೂರ್ತಿ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ನೀನೆ ಬಲ್ಲೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು ! ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು, ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ ? ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ, ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ, ಸಚ್ಚಿದಾನಂದಪರಬ್ರಹ್ಮವ ಕೂಡಿ ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು. ಅವರೇ ನಿಮ್ಮ ಶರಣರು, ಅವರೇ ಮಹಾಜ್ಞಾನಘನವ ನುಂಗಿದ ಮಹಾಂತರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಜನ್ಮ ಶಿವಕುಲಜನಾಗಿ ಶಿವಶರಣರ ಮನೆಯ ಒಕ್ಕುದ ಕೊಂಬುದು. ಭವಭಾರಿಯ ಮನೆಯಲು ಲಿಂಗಾರ್ಚನೆಯ ಮಾಡಲಾಗದು. ಭವಿವಿರಹಿತಂ, ಭವಿಪಾಕವ ತನ್ನ ಲಿಂಗಕ್ಕೆ ಕೊಟ್ಟಡೆ ರೌರವಂ ನರಕ ನೋಡಾ. ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ನ ಅನಿವೇದ್ಯಂ ತು ಭುಂಜೀಯಾನ್ನರಕೇ ಕಾಲಮಕ್ಷಯಂ ಇದು ಕಾರಣ ಕೂಡಲಚೆನ್ನಸಂಗಯ್ಯಾ, ಭವಿಯ ಸಂಗ ಪುನರಪಿ ಜನ್ಮ.
--------------
ಚನ್ನಬಸವಣ್ಣ
ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ. ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ ಕರ್ಮವೆಡೆವೋಗಲೆಡೆಯಿಲ್ಲ. ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು. ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು, ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು. ``ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್‍ಕುರುತೇ ಮಮಱಱ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ನಿಃಕರ್ಮಿಗಳಾಗಿ ಲಿಂಗಸುಖಿಗಳು.
--------------
ಆದಯ್ಯ
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ ಕೆಲದಲ್ಲಿದ್ದವರಿಗೆ ಅರಿಯಬಹುದೆ ? ನಿಜಗುಣಭರಿತ ಶಿವಶರಣರ ನಿಲವ ಕಂಡಿಹೆನೆಂದಡೆ ಕಾಣಬಹುದೆ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->