ಅಥವಾ

ಒಟ್ಟು 307 ಕಡೆಗಳಲ್ಲಿ , 34 ವಚನಕಾರರು , 247 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣ ಸಕಾಯನೆಂಬೆನೆ ಸಕಾಯನಲ್ಲ. ಅಕಾಯನೆಂಬೆನೆ ಅಕಾಯನಲ್ಲ. ಅದೇನು ಕಾರಣವೆಂದಡೆ; ಶಿವಕಾಯವಾದ ನಿಜಬೋಧವೆ ಕಾಯವಾದ ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು, ಪರಕಾಯರೂಪನು.
--------------
ಸ್ವತಂತ್ರ ಸಿದ್ಧಲಿಂಗ
ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು ನಿರಾಕುಳ ನಿರಾಮಯ ನಿಃಶೂನ್ಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು, ಬಹಿರಂಗದಲ್ಲಿ ಹಳಿದಾಡುವರೇನಯ್ಯ ? ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು ಅಂತರಂಗದಲ್ಲಿ ಹಳಿದಾಡುವರೇನಯ್ಯ ? ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ. ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ. ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಮಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಶಿಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ವಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಯಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಇಂತು ಪಂಚಾಕ್ಷರದ ನೆಲೆಯ ಮೇಲೆ ಓಂಕಾರವ ನೋಡಲು ಗುರುನಿರಂಜನ ಚನ್ನಬಸವಲಿಂಗಾ ತಾನಾಗಿ ಕಾಣಿಸಿಕೊಳ್ಳುತಿರ್ದ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ ಎರಡೆಸಳ ಸ್ಥಾವರ ಗದ್ದುಗೆಯ ಕಂಡೆನಯ್ಯ. ಆ ಗದ್ದುಗೆಯ ಮೇಲೆ ಸ್ಫಟಿಕವರ್ಣದ ಮೂರ್ತಿ ನೆಲೆಯಂಗೊಂಡಿರ್ಪನು ನೋಡಾ. ಆ ಸ್ಫಟಿಕವರ್ಣದಮೂರ್ತಿಯ ಕೂಡಿ ಅಗ್ನಿಗಿರಿಯ ಪಟ್ಟಣಮಂ ಹೊಗಲು, ಅಲ್ಲಿ ಆಚಾರಲಿಂಗದೇವರು, ಗುರುಲಿಂಗದೇವರು, ಶಿವಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಗೆ ಸೂಚನೆಯ ಮುಟ್ಟಿಸಲು ಆಚಾರಲಿಂಗದೇವರು ನಾಶಿಕಾಗ್ರದಲ್ಲಿ ನೆಲೆಯಂಗೊಂಡರು. ಗುರುಲಿಂಗದೇವರು ಜಿಹ್ವಾಗ್ರದಲ್ಲಿ ನೆಲೆಯಂಗೊಂಡರು. ಶಿವಲಿಂಗದೇವರು ನೇತ್ರಸ್ವಯದಲ್ಲಿ ನೆಲೆಯಂಗೊಂಡರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ ಚಂದ್ರಗಿರಿಯ ಪಟ್ಟಣಮಂ ಪೊಗಲು ಅಲ್ಲಿ ಜಂಗಮಲಿಂಗದೇವರು, ಪ್ರಸಾದಲಿಂಗದೇವರು, ಮಹಾಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಂಗೆ ಸೂಚನೆಯಂ ಮುಟ್ಟಿಸಲು, ಜಂಗಮಲಿಂಗದೇವರು ತ್ವಕ್ಕಿನ ಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಪ್ರಸಾದಲಿಂಗದೇವರು ಶ್ರೋತ್ರಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಮಹಾಲಿಂಗದೇವರು ಭಾವಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ, ಅಗ್ನಿಗಿರಿಯಪಟ್ಟಣ ಚಂದ್ರಗಿರಿಯ ಪಟ್ಟಣದ ಮುಂದಳ ದಿಕ್ಕಿನಲ್ಲಿ ಸಾವಿರೆಸಳಮಂಟಪ ಕಂಡೆನಯ್ಯ. ಆ ಮಂಟಪದೊಳಗೆ ಮಹಾಜ್ಞಾನಪ್ರಕಾಶವು ಹೊಳೆವುತಿರ್ಪುದು ನೋಡಾ. ಆ ಬೆಳಗಿನೊಳು ಕೂಡಿ ತಾನುತಾನಾಗಿರ್ಪನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು ನಿಜವ ತೋರುತಿರ್ಪಳು ನೋಡಾ. ಆ ನಿಜವ ಈ ಜನಂಗಳೇನು ಬಲ್ಲರಯ್ಯ ? ಅಜ ಹರಿ ಸುರ ನಾರದ ಮೊದಲಾದವರಿಗೆ ಅಗೋಚರವೆನಿಸಿತ್ತು ನೋಡಾ. ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ. ಆ ಬಾಲೆಯ ಅಂಗವ ಕೂಡಬಲ್ಲನಯ್ಯ. ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ. ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನುವನರಿದು ಅನುಭಾವಿಯಾದ ಕಾರಣ ಸಮ್ಯಗ್‍ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು ಆ ಶಿವಭಾವದಲ್ಲಿ ತನ್ನಹೃದಯವ ಸಮ್ಮೇಳವ ಮಾಡಿದ ಶರಣನು. ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ ಸರ್ವಲೋಕವನು ಶಿವನೊಳಗಡಗಿಸಿದನಾಗಿ, ಆ ಶಿವನ ತನ್ನೊಳಗಡಗಿಸಿ, ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು ಆಚರಿಸುತಿದ್ದನಯ್ಯ ಆ ಶರಣನು. ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು? ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾಧೀನವಲ್ಲದೆ, ಮತ್ತೊಂದನರಿಯನು. ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ. ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಿದರೆ ಕತ್ತಲೆ ಹರಿದು ಬೆಳಗಾಯಿತ್ತು ನೋಡಾ. ಸುಜ್ಞಾನದಿಂದ ಅಜ್ಞಾನವಳಿದು ಅತ್ತತ್ತಲೆ ನಿರಂಜನಲಿಂಗದೊಳು ನಿರ್ವಿಕಾರನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ದಶದಿಕ್ಕುಗಳಿಂದ ರೂಹಿಸಬಾರದಾಗಿ, ಕಾಲಂಗಳಿಂದ ಕಲ್ಪಿಸಬಾರದು. ಕಾಲಂಗಳಿಂದ ಕಲ್ಪಿಸಬಾರದಂಥ ಅಖಂಡ ಚಿನ್ಮಾತ್ರ ಸ್ವರೂಪನಾದ ಶಿವನ ಸ್ವಾನುಭಾವಜ್ಞಾನದಿಂ ಸಾದ್ಥಿಸಿ ಕಂಡ ಶಾಂತ ಸ್ವಯಂಜ್ಯೋತ ಸ್ವರೂಪನಾದ ಶರಣ. ಅಂಗಸಂಗವಿಲ್ಲದೆ ನಿಸ್ಸಂಗಿಯಾದ ಕಾರಣ ಉಪಮಿಸಬಾರದು. ಕಡೆ ಮೊದಲಿಲ್ಲದಾಕಾಶವು ಖೇಚರಾದಿಗಳಿಂದ ಲೇಪವಿಲ್ಲದಂತೆ ನಿತ್ಯ ನಿಜ ಜೈತನ್ಯಾಕಾರ ರೂಪನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ . ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ . ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ . ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ . ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->