ಅಥವಾ

ಒಟ್ಟು 35 ಕಡೆಗಳಲ್ಲಿ , 11 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನಗನ್ಯವಾದುದ ನೋಡಿದಡೆ ಭವಿಸಂಗ. ಸತ್ಯರು ಒಪ್ಪಿದುದನೊಪ್ಪದಿರ್ದಡೆ ಭವಿಸಂಗ. ಮಾಡಿಕೊಂಡ ವ್ರತವ ಮೀರಿದಡೆ ಭವಿಸಂಗ. ತಾ ಮಾಡಿದ ಭಕ್ತಿಯನಾಡಿಕೊಂಡಲ್ಲಿ ಭವಿಸಂಗ. ಇಂತಿವನರಿದಡೆ ಸದ್ಭಕ್ತಿ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಗುರುವಾಗಿ ಬಂದು ತನುವ ಕೊರೆದಡೂ ಕೇಳೆ, ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ, ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ. ಅದೆಂತೆಂದಡೆ ; ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ, ಕುಟಿಲದ ದೇವರುಂಟೆ ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ, ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ? ತಾನರಿಯದೆ ತನಗೆ ವ್ರತ ಉಂಟೆ ? ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ? ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ? ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು ಉಭಯ ಬ್ಥಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ.
--------------
ಅಕ್ಕಮ್ಮ
ಹಿಡಿದ ವ್ರತವ ಬಿಡುವವನಲ್ಲ, ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ, ಮತ್ರ್ಯದ ಮನುಜರ ಮನ್ನಿಸ, ಪರಸತಿ ಪರದ್ರವ್ಯವ ಮುಟ್ಟ, ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ, ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ ಅದೆಂತೆಂದೊಡೆ: ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ ಎಂದುದಾಗಿ, ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು.
--------------
ಆದಯ್ಯ
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ. ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ. ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
--------------
ಅಕ್ಕಮ್ಮ
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ. ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ. ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು ನಡೆದೆಹೆನೆಂಬುದೆ ಪರಪಾಕದ ಪಾಕುಳ. ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು, ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ, ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ. ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು- ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು, ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ, ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.
--------------
ಏಲೇಶ್ವರ ಕೇತಯ್ಯ
ಮೃತ್ತಿಕೆಯ ಲವಣ ಸ್ವಯಂಪಾಕ, ಮಿಕ್ಕಾದ ಲವಣ ಅಪ್ಪುಭೇದ. ಸಪ್ಪೆಯ ವ್ರತ ನಿಶ್ಚಿಂತ, ಅದು ದೋಷನಾಶನ, ಇಂತೀ ಉಭಯ ವ್ರತವೆ ಕಟ್ಟು. ಮಿಕ್ಕಾದ ಅರುವತ್ತೆರಡು ಶೀಲ ಸ್ವತಂತ್ರಸಂಬಂಧ, ಅವು ಎಂಭತ್ತನಾಲ್ಕು ಲಕ್ಷ ಜೀವವ್ರತದ ಸಂಬಂಧ. ವ್ರತವ ಹಿಡಿದಲ್ಲಿ, ಆ ವ್ರತಕ್ಕೆ ಅನುಸರಣೆ ಬಂದಲ್ಲಿ, ಬಂದಿತು ಬಾರದೆಂಬ ಸಂದೇಹಕ್ಕೆ ಮುನ್ನವೆ ಆತ್ಮ ನಿರಂಗವಾಗಬಲ್ಲುದೊಂದೆ ವ್ರತ. ಮತ್ತೆ ಮಿಕ್ಕಾದವೆಲ್ಲವೂ ಸಂದಣಿಯ ತಗಹು, ಪರಿಸ್ಪಂದದ ಕೊಳಕು, ಲಂದಣಿಗರ ಬಂಧದ ಮಾತಿನ ಮಾಲೆ. ಇಂತೀ ಸಂಗ ದುಸ್ಸಂಗವನರಿತು ಹಿಂಗುವದ ಹಿಂಗಿ, ತನ್ನ ಸಂಗಸುಖಕ್ಕೆ ಬಂದುದ ಕೂಡಿಕೊಂಡು, ವ್ರತಭಂಗಿತನಲ್ಲದೆ ನಿರುತ ಸ್ವಸಂಗಿಯಾದ ಸರ್ವಾಂಗಸಂಬಂಧ ಶೀಲವಂತಂಗೆ, ಬೇರೊಂದುವಿಲ್ಲ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಮನಕ್ಕೆ ವ್ರತವ ಮಾಡಿ, ತನುವಿಗೆ ಕ್ರೀಯ ಮಾಡಬೇಕು. ಇಂದ್ರಿಯಂಗಳಿಗೆ ಕಟ್ಟನಿಕ್ಕಿ, ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು. ಹೀಂಗಲ್ಲದೆ ವ್ರತಾಚಾರಿಯಲ್ಲ. ಮನಕ್ಕೆ ಬಂದಂತೆ ಹರಿದು, ಬಾಯಿಗೆ ಬಂದಂತೆ ನುಡಿದು, ಇಂತೀ ನಾ ವ್ರತಿಯೆಂದರೆ ಮೂಗನರಿಯದೆ ಮಾಣ ಏಲೇಶ್ವರಲಿಂಗನು.
--------------
ಏಲೇಶ್ವರ ಕೇತಯ್ಯ
ಒಡೆಯರು ಭಕ್ತರು ತಾವೆಂದು ಅಡಿಮೆಟ್ಟಿ ಹೋಹಲ್ಲಿ ತಡೆಯಿತು ಶಕುನವೆಂದುಳಿದಡೆ, ಕಾಗೆ ವಿಹಂಗ ಮಾರ್ಜಾಲ ಮರವಕ್ಕಿ ಗರ್ದಭ ಶಶಕ ಶಂಕೆಗಳು ಮುಂತಾದ ಸಂಕಲ್ಪಕ್ಕೊಳಗಾದಲ್ಲಿ ವ್ರತಕ್ಕೆ ಭಂಗ, ಆಚಾರಕ್ಕೆ ದೂರ. ಅದೆಂತೆಂದಡೆ: ಅಂಗಕ್ಕೆ ಆಚಾರವ ಸಂಬಂಧಿಸಿ, ಮನಕ್ಕೆ ಅರಿವು-ಅರಿವಿಂಗೆ ವ್ರತವ ಮಾಡಿದಲ್ಲಿ, ಬೇರೊಂದು ಪರಿಹರಿಸುವ ನಿಮಿತ್ತವುಂಟೇರಿ ಇಂತೀ ಸತ್ಕ್ರಿಯಾವಂತಗೆ ಕಷ್ಟಜೀವದ ಲಕ್ಷದಲ್ಲಿ ಚಿತ್ತ ಮೆಚ್ಚಿಹನ್ನಕ್ಕ ಆತನು ಆಚಾರಭ್ರಷ್ಟ, ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು. ಕೊಡುವೆಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು. ಬಡತನ ಬಂದರೆ ಅನುಭವಿಸಿ, ಬಾರದ ಬಯಸರು. ಹಿಡಿದ ವ್ರತವ ಬಿಡದೆ ನಡೆದು ಕೈವಲ್ಯವ ಪಡದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಅನ್ಯಶಬ್ದಕ್ಕೆ ಜಿಹ್ವಾಬಂಧನ, ದುರ್ಗಂಧಕ್ಕೆ ನಾಸಿಕಬಂಧನ, ನಿಂದೆಗೆ ಕರ್ಣಬಂಧನ, ದೃಕ್ಕಿಂಗೆ ಕಾಮ್ಯಬಂಧನ, ಚಿತ್ತಕ್ಕೆ ಆಶಾಬಂಧನ, ಅಂಗಕ್ಕೆ ಅಹಂಕಾರ ಬಂಧನ. ಇಂತೀ ಷಡ್ಭಾವಬಂಧಂಗಳ ಹರಿದಲ್ಲದೆ ಅರುವತ್ತುನಾಲ್ಕು ಶೀಲಕ್ಕೆ ಸಂಬಂಧಿಯಲ್ಲ. ಹೀಂಗಲ್ಲದೆ ಕಾಂಬವರ ಕಂಡು, ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವನೆಲ್ಲಿಯು ಒಲ್ಲನಾಗಿ.
--------------
ಅಕ್ಕಮ್ಮ
ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ, ಆವ ನೇಮ ವ್ರತವ ಪಿಡಿದು ಆಚರಿಸಿದಡೆ ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು. ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ. ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ. ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ. ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ. ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ. ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ. ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ, ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ, ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ, ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು, ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು ಖಂಡಿತನ ವ್ರತ, ಶೀಲ, ನೇಮ. ಹಾಗಲ್ಲದೆ ದಿಂಡೆಯತನದಿಂದ ಹೋರಿ, ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ ಅದೆಂತೆಂದಡೆ ವ್ರತದ ಅಂಗಳದಲ್ಲಿ ಬೆಳೆದ ಗರ್ಭವ ಮತ್ತಂದಿಗಾಗಲಿಯೆಂಬ ಭಂಡರ ನೋಡಾ ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು. ಅದೆಂತೆಂದಡೆ ತನ್ನಂಗದಲ್ಲಿ ಆದ ಲಿಂಗದೇಹಿಯ ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು, ಅವನೊಂದಾಗಿ ನುಡಿದಡೆ ಕುಂಭೀನರಕ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ.
--------------
ಅಕ್ಕಮ್ಮ
ಇನ್ನಷ್ಟು ... -->