ಅಥವಾ

ಒಟ್ಟು 60 ಕಡೆಗಳಲ್ಲಿ , 12 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
--------------
ಅಕ್ಕಮ್ಮ
ಅನ್ಯದೈವ ಭವಿನಾಸ್ತಿಯಾದಲ್ಲಿ, ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರೆದಲ್ಲಿ, ಲಿಂಗಕ್ಕೆ ಕೊಡದೆ ಕೊಂಡಲ್ಲಿ, ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು
--------------
ಅಕ್ಕಮ್ಮ
ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ, ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ, ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ, ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ, ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ, ಗಮನ ಸುಮನ ಸಮತೆ ನೇಮ ಸಂತೋಷವ್ರತ. ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು? ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ, ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ, ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ. ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು.
--------------
ಶಿವಲೆಂಕ ಮಂಚಣ್ಣ
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಎಂಬತ್ತನಾಲ್ಕುಲಕ್ಷ ವ್ರತಶೀಲ, ಅರವತ್ತನಾಲ್ಕು ನೇಮ, ಅರುವತ್ತಾರು ವ್ರತಂಗಳಲ್ಲಿ ಇವ ಪ್ರಮಾಣಿಸಿ ನಾಮವಿಟ್ಟೆಹೆನೆಂದಡೆ ಎನಗಾಗದು, ಚೆನ್ನಬಸವಣ್ಣಂಗಲ್ಲದೆ. ಆತ ಜ್ಞಾನಸೂತ್ರಧಾರಿ, ನಾನು ಕ್ರಿಯಾವರ್ತಕ. ಮಾಡಿಕೊಂಡ ವ್ರತಕ್ಕೆ ಕೇಡು ಬಂದಿಹಿತೆಂದು, ಬೆನ್ನ ಮತ್ಸದ ಹುಣ್ಣಿನ ಪಶುವಿನಂತೆ ಎಲ್ಲಿಯೂ ನುಸುಳಲಮ್ಮೆನು. ಬ್ಥಿನ್ನಭಾವದ ಕ್ರೀಯಲ್ಲಿ ನೆಮ್ಮಿದೇನೆ, ಎನಗೆ ಅಭಿನ್ನದಠಾವ ಹೇಳಾ, ಚೆನ್ನಬಸವಣ್ಣಪ್ರಿಯ ಏಲೇಶ್ವರಲಿಂಗವೆ.
--------------
ಏಲೇಶ್ವರ ಕೇತಯ್ಯ
``......................ರು, ನೀವು ಕೇಳಿ, ನಿಚ್ಚಕ್ಕೆ ನಿಜಹುಸಿಯ ಕಂಡೆವಲ್ಲಾ ! ವಾಯು ಬೀಸುವಲ್ಲಿ ಆಕಾಶ ಬಲಿದಲ್ಲಿ ಲಿಂಗಾರ್ಪಿತ ಮುಖವನರಿಯರಲ್ಲ. ಭೋಜನವನುಂಡು ಭಾಜನವನಲ್ಲಿಟ್ಟು ಹೋಹ ಹಿರಿಯರ ವ್ರತಕ್ಕೆ ಅದೇ ಭಂಗ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
``ಗಚ್ಛನ್ ತಿಷ್ಠನ್, ಸ್ವಪನ್ ಜಾಗ್ರನುನ್ಮಿಷನ್ನಿಮಿಷನ್ನಪಿ ಶುಚಿರ್ವಾ[s]ಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ಇಂತೆಂದುದಾಗಿ, ಕಂಗಳ ಮುಂದಣಿಂದ ಗುರುಲಿಂಗ ಹಿಂಗಿದಡೆ, ವ್ರತಕ್ಕೆ ಭಂಗವಾಗುವುದೆಂದು (ಶ್ರೀಗುರು) ತಂದುಕೊಟ್ಟನು ಕರಸ್ಥಲದಲ್ಲಿ ಇಷ್ಟಲಿಂಗವನು. ಆ ಲಿಂಗ ಮುಟ್ಟಲೊಡನೆ ತನು ಪ್ರಸಾದವಾಯಿತ್ತು ಮನ ಪ್ರಸಾದವಾಯಿತ್ತು. ಇಂತು ಸರ್ವಾಂಗ ಪ್ರಸಾದವಾಯಿತ್ತು ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ. ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ? ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ? ತನ್ನ ಮನೆಗೆ ಕಟ್ಟಳೆ ಇರಬೇಕು. ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ, ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು. ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು. ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು. ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ. ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.
--------------
ಅಕ್ಕಮ್ಮ
ಭವಿಯಲಾದ ಪಾಕವ ತಂದು ಮನೆಯಲ್ಲಿರಿಸಿಕೊಂಡು ಭುಂಜಿಸುತ್ತ ಅವರ ಮನೆಯ ಒಲ್ಲೆನೆಂಬುದು ವ್ರತಕ್ಕೆ ಹಾನಿ, ಪಂಚಾಚಾರಕ್ಕೆ ದೂರ, ಪಂಚಾಚಾರಶುದ್ಭತೆಗೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಬಲ್ಲನಾಗಿ ಒಲ್ಲನು.
--------------
ಅಕ್ಕಮ್ಮ
ಹಿಡಿದ ವ್ರತ ಘಟಿಸಿತ್ತೆಂದು ಮುಂದೆ ಒಂದು ವ್ರತಕ್ಕೆ ಅಡಿಯಿಡುವ ಪರಿಯಿನ್ನೆಂತೊ? ಆ ವ್ರತ ತನಗೆ ಸಂಭವಿಸಿ ನಿಂದಲ್ಲಿ ಹೆಣ್ಣಿಗೆ ವಿಷಯ ಹೊನ್ನು ಮಣ್ಣಿಗೆ ಅಪೇಕ್ಷೆ ಮತ್ತೆ, ಸರ್ವೇಂದ್ರಿಯಂಗಳಲ್ಲಿ ಹಿಂಗಿ ನಿಂದ ವ್ರತದಂಗವಾವುದು? ತಾ ನಿಂದ ವ್ರತ ಒಂದಂಗದಲ್ಲಿ ಸಲೆ ಸಂದುದು. ಆ ಭಾವದಲ್ಲಿ ಸರ್ವವ್ರತ ಸಂದಿತ್ತು, ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ ವ್ರತಕ್ಕೆ ಬೀಜ ಮೊದಲಾಯಿತ್ತು. ಭವಿಸಂಗ ಭವಿಪಾಕ ಅನ್ಯದೈವ ಪೂಜಿಸುವವರ ದೂರಸ್ಥನಾಗಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿಯಬೇಕಾದಡೆ.
--------------
ಅಕ್ಕಮ್ಮ
ಇನ್ನಷ್ಟು ... -->