ಅಥವಾ

ಒಟ್ಟು 180 ಕಡೆಗಳಲ್ಲಿ , 41 ವಚನಕಾರರು , 134 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವಶುದ್ಧವಾಗಿರಬೇಕು. ಅಸಿ ಕೃಷಿ ಯಾಚಕ ವಾಣಿಜ್ಯತ್ವದಿಂದ ಬಂದ ದ್ರವ್ಯಂಗಳಲ್ಲಿ ಬಾಹ್ಯದ ಬಳಕೆ ಅಂತರಂಗದ ನಿರಿಗೆ ಉಭಯ ಶುದ್ಧವಾಗಿಪ್ಪ ಭಕ್ತನಂಗವೆ ಏಲೇಶ್ವರಲಿಂಗದಂಗ.
--------------
ಏಲೇಶ್ವರ ಕೇತಯ್ಯ
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ. ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ. ಅಳುಪಿಲ್ಲದಿರ್ಪುದೆ ವ್ರತ. ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಗುರುವಾಗಿ ಬಂದು ತನುವ ಕೊರೆದಡೂ ಕೇಳೆ, ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ, ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ. ಅದೆಂತೆಂದಡೆ ; ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ, ಕುಟಿಲದ ದೇವರುಂಟೆ ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ, ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಕ್ಕಳು ಮರಿಗಳು ಸತ್ತು ನಷ್ಟವಾಗಿ, ಕಷ್ಟ ದುಃಖ ನೆಲೆಗೊಂಡಿತ್ತೆಂದು ತನ್ನಿಷ್ಟಲಿಂಗಪೂಜೆಯನಗಲಿಸಿ, ಬಿಟ್ಟಿಯ ಮಾಡಬಹುದೇನಯ್ಯಾ? ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ? ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು. ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು, ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ, ಸಕಲಸುಖಭೋಗಂಗಳ ಹಿಡಿವಲ್ಲಿ, ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ, ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
--------------
ಏಲೇಶ್ವರ ಕೇತಯ್ಯ
ವ್ರತವೆಂಬುದು ನಾಯಕರತ್ನ; ವ್ರತವೆಂಬುದು ಸುಪ್ಪಾಣಿಯ ಮುತ್ತು; ವ್ರತವೆಂಬುದು ಜೀವನ ಕಳೆದ; ವ್ರತವೆಂಬುದು ಸುಯಿದಾನ. ವ್ರತ ತಪ್ಪಲು, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--------------
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ನಾನಾ ಫಲವ ಸಲಹುವಲ್ಲಿ, ಮೂಲದ ಬೆಳೆಯನರಿತು ನೀರನೆರೆಯಬೇಕು. ವ್ರತ ನೇಮ ಕೃತ್ಯ ನಿತ್ಯವ ಮಾಡುವಲ್ಲಿ, ಅತಿಶಯನಾಗಿರಬೇಕು. ಪಟುಭಟನಾದಲ್ಲಿ ಉಭಯದಳ ಪಿತಾಮಹನಾಗಿರಬೇಕು. ಗತಿ ಬಟ್ಟೆಯ ತೋರುವ ಚರಗುರುದ್ವಯ ಗತಿಮಹನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು. ನೆಲಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ. ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಿಲ್ಲದೆ ಅದು ದೃಢವ್ರತವಲ್ಲ. ವ್ರತ ನಿಶ್ಚಿಯವಾವುದೆಂದಡೆ, ಪರಸ್ತ್ರೀ ಪರಧನ ಪರದೂಷಣಯವನರಿದು ಬಿಟ್ಟಡೆ, ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ? ತಾನರಿಯದೆ ತನಗೆ ವ್ರತ ಉಂಟೆ ? ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ? ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ? ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು ಉಭಯ ಬ್ಥಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ.
--------------
ಅಕ್ಕಮ್ಮ
ಸತ್ಯನಲ್ಲ, ಅಸತ್ಯನಲ್ಲ. ಕರ್ಮಿಯಲ್ಲ, ಧರ್ಮಿಯಲ್ಲ, ನಿಃಕರ್ಮಿಯಯ್ಯ ಭಕ್ತನು. ಆಚಾರನಲ್ಲ ಅನಾಚಾರನಲ್ಲ; ಪುಣ್ಯ ಪಾಪ ವಿರಹಿತನಾಗಿ ನಿಷ್ಪಾಪಿಯಯ್ಯ ಭಕ್ತನು. ವ್ರತ ನೇಮ ಮಂತ್ರ ತಂತ್ರ ಭವಿ ಭಕ್ತನೆಂಬುವುದಿಲ್ಲ ನೋಡಾ, ಲಿಂಗೈಕ್ಯಂಗೆ. ಸವಿಕಲ್ಪನಲ್ಲ. ನಿರ್ವಿಕಲ್ಪನಲ್ಲ. ಸೀಮನಲ್ಲ. ನಿಸ್ಸೀಮನಲ್ಲ. ಪರಮ ನಿರಂಜನನು ತಾನೆ ನೋಡಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ. ಪಶುವ ನೆಚ್ಚು ಕೂಡಿ ಹಸಿಗೆಗೆ ಬಂದಂತೆ. ಉಂಬ ಊಣೆಯಕ್ಕೆ ನೆರೆದು, ಭಕ್ತಿಯ ಊಣೆಯಕ್ಕೆ ಹಿಂದುಮುಂದಾದ ಸಂದಣಿಯ ಚೋರರಿಗೇಕೆ, ವ್ರತ ನೇಮ ನಿತ್ಯ? ಇವರಂಗಕ್ಕೆ ಸಂಗವಾದ ಬಂಕೇಶ್ವರಲಿಂಗ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->