ಅಥವಾ

ಒಟ್ಟು 218 ಕಡೆಗಳಲ್ಲಿ , 3 ವಚನಕಾರರು , 218 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿದ್ಥಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ ಎನಗೆ ಸಾಲೋಕ್ಯಪದವಯ್ಯಾ. ನಿಮ್ಮ ಶರಣರ ಅರ್ಚನೆ ಪೂಜೆಯೇ ಎನಗೆ ಸಾಮೀಪ್ಯಪದವಯ್ಯಾ. ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ ಎನಗೆ ಸಾರೂಪ್ಯಪದವಯ್ಯಾ. ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ ಎನಗೆ ಸಾಯುಜ್ಯಪದವಯ್ಯಾ. ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರು ಲಿಂಗ ಜಂಗಮ ಪ್ರಸಾದ ಒಂದೇ ಪರಶಿವಮೂರ್ತಿ ಮಹಾವಸ್ತುಗಳು ಕೇಳಿರಣ್ಣಾ. ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ, ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಈ ಚತುರ್ವಿಧ ಪದವಿಯನೂ ಕೂಡುವರೆ, ಗುರು ಲಿಂಗ ಜಂಗಮ ಪ್ರಸಾದವ ನಂಬುವುದು. ಇದು ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಣವವೆ ಸರ್ವವರ್ಣಂಗಳ ಕಾರ್ಯಕಾರಣವ್ಯಾಪ್ತಿ ಮೂಲವು, ಪ್ರಣವವೆ ಸರ್ವದೇವತಾಮಯವು, ಪ್ರಣವವೆ ಸರ್ವಮಂತ್ರಗಳೆಲ್ಲವಕ್ಕೂ ಪ್ರಾಣಕಳೆ. ಪ್ರಣವವೆ ಸರ್ವದೇವತಾಮಯ ಎಂದುದಾಗಿ ಸದ್ಗುರುವಿನುಪದೇಶದಿಂದವು ಪ್ರಣವಾದ್ಥಿಕವಪ್ಪ ಮಹಾಮಂತ್ರವ ಜಪಿಸುವ ಸದ್ಭಕ್ತನೆ ದೈವಜ್ಞನು, ಮಂತ್ರಜ್ಞನು. ಇಂತಪ್ಪ ಸದ್ಭಕ್ತದೇಹಿಕದೇವನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಕರಸ್ಥಲದಲ್ಲಿಯ ಲಿಂಗಕ್ಕೆ ಬಂದ ಪದಾರ್ಥಂಗಳನರ್ಪಿಸುವೆನೆ ? ಅರ್ಪಿಸಲಮ್ಮೆ. ಅದೇನು ಕಾರಣವೆಂದಡೆ: ಎನ್ನ ಕಂಗಳು ಕಂಡವಾಗಿ, ಎನ್ನ ಶ್ರೋತ್ರಗಳು ಕೇಳಿದವಾಗಿ, ಎನ್ನ ಕೈಗಳು ಮುಟ್ಟಿದವಾಗಿ, ಎನ್ನ ನಾಸಿಕ ವಾಸಿಸಿತ್ತಾಗಿ, ಎನ್ನ ಜಿಹ್ವೆ ರುಚಿಸಿತ್ತಾಗಿ. ಇಂತಪ್ಪ ಎನ್ನ ಅಂಜಿಕೆಯ ನಿಮ್ಮ ಶರಣರು ಬಿಡಿಸಿದರಾಗಿ. ಅದೆಂತೆಂದಡೆ: ಎನ್ನ ಶ್ರೋತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನೇತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ತ್ವಕ್ಕಿನಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ಜಿಹ್ವೆಯಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನಾಸಿಕದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಅಲ್ಲಲ್ಲಿ ಅರ್ಪಿತಂಗಳಾಗುತ್ತಿರ್ದವಾಗಿ, ಇನ್ನಂಜೆ ಅಂಜೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ, ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ. ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ. ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ. ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ. ತನುಮನಧನವೊಂದಾಗಿ ತನ್ನದಾದಡೆ ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು ಬೇರೆ ಮುಕ್ತಿ ಎಂತಪ್ಪುದಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ? ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ? ಯೋಗವ ನುಡಿವರೆ ಅಯ್ಯಾ ? ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ ಬಹನಾಗಿ. ಇದು ಕಾರಣ, ಅರಿದು ಮುಕ್ತಿಯ ಹಡೆವಡೆ ಅನುಭವವೇ ಬೇಕು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪುಣ್ಯಾಂಗನೆಯ ಸುತಂಗೆ ಪಿತನುಂಟು, ಪಿತಾಮಹನುಂಟು, ಪ್ರಪಿತಾಮಹನುಂಟು. ಪಣ್ಯಾಂಗನೆಯ ಸುತಂಗೆ ಪಿತನಿಲ್ಲ, ಮೇಲೇನೂ ಇಲ್ಲ, ಅವನ ಬದುಕು ನಗೆಗೆಡೆ. ಭಕ್ತಾಂಗನೆಯ ಸುತನಹ ಸದ್ಭಕ್ತಂಗೆ ಪಿತನು ಗುರು, ಪಿತಾಮಹನು ಜಂಗಮ, ಪ್ರಪಿತಾಮಹನು ಮಹಾಲಿಂಗ ಉಂಟು ಕೇಳಿರಣ್ಣಾ. ಅಭಕ್ತಾಂಗನೆಯ ಸುತನಹ ತಾಮಸಭಕ್ತಂಗೆ ಪಿತನಹ ಗುರುವಿಲ್ಲ, ಪಿತಾಮಹ ಜಂಗಮವಿಲ್ಲ, ಪ್ರಪಿತಾಮಹ ಮಹಾಲಿಂಗವಿಲ್ಲ. ಅವನ ಸ್ಥಿತಿ ಗತಿ ನಗೆಗೆಡೆ ಕೇಳಿರಣ್ಣಾ, ಇದು ದೃಷ್ಟ ನೋಡಿರೆ. ಇದು ಕಾರಣ, ಭಕ್ತಿಹೀನನಾದ ಅಭಕ್ತಾಂಗನೆಯ ಮಗನ ಸಂಗವ ಬಿಡಿಸಿ ಸದ್ಭಕ್ತಿ ಸದಾಚಾರಸಂಪನ್ನರಪ್ಪ ಶರಣರ ಸಂಗದಲ್ಲಿರಿಸಯ್ಯಾ, ನಿಮ್ಮ ಬೇಡಿಕೊಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಗವೊಂದೆಸೆ, ತಾನೊಂದೆಸೆ, ಮತ್ತಾ ಜಗದೊಳಗೆ ತಾ, ತನ್ನೊಳಗೆ ಜಗ. ಆಗಮವೊಂದೆಸೆ, ತಾನೊಂದೆಸೆ, ಮತ್ತಾ ಆಗಮದೊಳಗೆ ತಾ, ತನ್ನೊಳಗೆ ಆಗಮ. ವಿದ್ಥಿಯೊಂದೆಸೆ, ತಾನೊಂದೆಸೆ, ಮತ್ತಾ ವಿದ್ಥಿಯೊಳಗೆ ತಾ, ತನ್ನೊಳಗೆ ವಿದ್ಥಿ. ಕ್ರೀಯೊಂದೆಸೆ, ತಾನೊಂದೆಸೆ, ಮತ್ತಾ ಕ್ರೀಯೊಳಗೆ ತಾ, ತನ್ನೊಳಗೆ ಕ್ರೀ. ಇಂತೀ ಜಗ, ಆಗಮ, ವಿದ್ಥಿ, ಕ್ರೀ ನಿಷೇಧವಾಗಿ, ಹೊದ್ದಿಯೂ ಹೊದ್ದನು, ನೀರ ತಾವರೆಯಂತೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಚ್ಛಾ ಜ್ಞಾನ ಕ್ರಿಯಾ ಶಕ್ತಿ ನಿಮ್ಮಿಚ್ಛೆ ಎಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂದು ನಿಮ್ಮಡಿಗಳು ಬೆಸಸಿದ ಸರ್ವಶ್ರುತಿಗಳಂ ಕೇಳಿ ಬಲ್ಲೆನು. ಈ ಹೀಂಗೆಂದರಿದು ಮನ ಮರಳಿ ಬಿದ್ದು ಗುರುಲಿಂಗಜಂಗಮಕ್ಕೆ ನಾನೂ ಮಾಡಿದೆನೆಂಬ ಅವಿಚಾರದ ಮನದ ಮರವೆಯ ನೋಡಾ. ಇದಿರ ಬೇಡಿದಡೆ ಕೊಡರೆಂಬ ಮನದ ಘಸಣಿಯ ನೋಡಾ. ಶಿವ ಶಿವ ಮಹಾದೇವ, ಮನೋನಾಥ ಮನೋಮಯ, ಎನ್ನ ಮನವ ಸಂತವ ಮಾಡಿ ನಿಮ್ಮಲ್ಲಿ ಬೆರಸು, ಬೆರಸದಿದ್ದಡೆ ನಿಮಗೆ ಮಹಾಗಣಂಗಳಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಮಿಸುವ ವಸ್ತು ಕರಸ್ಥಲಕ್ಕೆ ಬಂದ ಬಳಿಕ ಕಾಮಿಸಲೇನುಂಟುರಿ ಇನ್ನೇನ ಕಾಮಿಸುವುದಯ್ಯಾರಿ ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ ಎಂಬ ವಸ್ತು ``ಓಂ ಯೋ ವೈ ರುದ್ರಸ್ವಭಾವಾನ್ ಅನ್ಯಚ್ಚ ಮೃತಂ ಎಂಬ ವಸ್ತು, ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->