ಅಥವಾ

ಒಟ್ಟು 52 ಕಡೆಗಳಲ್ಲಿ , 16 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದಿಂದ ಉಪಮನ್ಯುವಿಂಗೆ ಶಿವಜ್ಞಾನ ಸಿದ್ಧಿಸಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ವಸಿಷ್ಠ, ವಾಮದೇವ ಮೊದಲಾದ ಸಮಸ್ತಋಷಿಗಳಿಗೆ ಹಿರಿದಪ್ಪ ಪಾಪದೋಷವು ಹರಿದಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ಬ್ರಹ್ಮವಿಷ್ಣ್ವಾದಿಗಳಿಗೆ ಜಗತ್ಸೃಷ್ಟಿರಕ್ಷಾಪತಿತ್ವ ಸಾಧ್ಯವಾಯಿತ್ತು. ಅದೆಂತೆಂದಡೆ:ಬ್ರಹ್ಮಾಂಡಪುರಾಣದಲ್ಲಿ, ಉಪಮನ್ಯುಃ ಪುರಾ ಯೋಗೀ ಮಂತ್ರೇಣಾನೇನ ಸಿದ್ಧಿಮಾನ್ ಲಬ್ಧವಾನ್ಪರಮೇಶತ್ವಂ ಶೈವಶಾಸ್ತ್ರ ಪ್ರವಕ್ತೃತಾಂ ಮತ್ತಂ, ವಿಷ್ಣುಪುರಾಣದಲ್ಲಿ, ವಸಿಷ್ಠವಾಮದೇವಾದ್ಯಾ ಮುನಯೋ ಮುಕ್ತಕಿಲ್ಬಿಷಾಃ ಮಂತ್ರೇಣಾನೇನ ಸಂಸಿದ್ಧಾ ಮಹಾತೇಜಸ್ವಿನೋ[s]ಭವನ್ ಎಂದುದಾಗಿ, ಮತ್ತಂ ಕೂರ್ಮಪುರಾಣದಲ್ಲಿ, ಬ್ರಹ್ಮಾದೀನಾಂ ಚ ದೇವಾನಾಂ ಜಗತ್ಸೃಷ್ಟ್ಯರ್ಥಕಾರಣಂ ಮಂತ್ರಸ್ಯಾಸ್ಯೈವ ಮಹಾತ್ಮ್ಯಾತ್ಸಾಮಥ್ರ್ಯಮುಪಜಾಯತೇ ಎಂದುದಾಗಿ, ಇಂತಪ್ಪ ಪುರಾಣವಾಕ್ಯಂಗಳನರಿದು ವಿಪ್ರರೆಲ್ಲರು ಶ್ರೀ ಪಂಚಾಕ್ಷರಿಯ ಜಪಿಸಿರೋ, ಜಪಿಸಿರೋ. ಮಂತ್ರಂಗಳುಂಟೆಂದು ಕೆಡಬೇಡಿ ಕೆಡಬೇಡಿ. ಮರೆಯದಿರಿ, ಮಹತ್ತಪ್ಪ ಪದವಿಯ ಪಡೆವಡೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವರ ದಿವ್ಯನಾಮವನು.
--------------
ಉರಿಲಿಂಗಪೆದ್ದಿ
ಎನ್ನ ಸರ್ವಾಂಗದಲ್ಲಿ ಲಿಂಗವೈದಾನೆ, ಐದಾನೆ, ಎನ್ನ ಮನವನರಿಯದೆ ಕೆಟ್ಟೆ ಕೆಟ್ಟೆನಯ್ಯಾ. ಎನ್ನ ಅಂತರಂಗ ಬಹಿರಂಗದಲ್ಲಿ ಲಿಂಗವೈದಾನೆ, ಮನವನರಿಯದೆ ಕೆಟ್ಟೆ ಕೆಟ್ಟೆ. ವಿಶ್ವಾಸದಿಂ ಗ್ರಹಿಸಲೊಲ್ಲದೆ ಕೆಟ್ಟೆ ಕೆಟ್ಟೆನಯ್ಯಾ. ಈ ಮನ ವಿಶ್ವಾಸದಿಂದ ಗ್ರಹಿಸಿದಡೆ ಸತ್ಯನಹೆ ನಿತ್ಯನಹೆ ಮುಕ್ತನಹೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಶಿಖಿರಶಿವಾಲಯವ ಕಂಡು ಕೈಮುಗಿದಲ್ಲಿ ದೈವ ಒಪ್ಪುಗೊಂಡಿತ್ತು, ಅದು ತಾನಿ[ತ್ತ] ಆಲಯವಾದ ಕಾರಣ. ಸಮಯದರ್ಶನಕ್ಕೆ ಇಕ್ಕಿ ಎರೆದಲ್ಲಿ, ಧರ್ಮವೆಂದು ಕೊಟ್ಟುಕೊಂಡಲ್ಲಿ, ಶಿವನೊಪ್ಪುಗೊಂಬುದೆ ವಿಧ. ದಿಟವಿರ್ದು ವಿಶ್ವಾಸದಿಂದ ಮಾಡುವ ಭಕ್ತಿ, ಚತುರ್ವಿಧ ಫಲಪದಂಗಳ ಗೊತ್ತಿನ ಮುಕ್ತಿ. ಇದು ಸತ್ಯಕ್ರೀವಂತನ ಚಿತ್ತ, ಗಾರುಡೇಶ್ವರಲಿಂಗದಲ್ಲಿ ಭಕ್ತಿ[ಯ] ಕ್ರೀ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಭಕ್ತಸ್ಥಲ ಗುರುರೂಪು, ಮಾಹೇಶ್ವರಸ್ಥಲ ಲಿಂಗರೂಪು, ಪ್ರಸಾದಿಸ್ಥಲ ಜಂಗಮರೂಪು, ಪ್ರಾಣಲಿಂಗಿಸ್ಥಲ ಆತ್ಮರೂಪು, ಶರಣಸ್ಥಲ ಅರಿವುರೂಪು, ಐಕ್ಯಸ್ಥಲ ಶಬ್ದಮುಗ್ಧ ನಿರ್ನಾಮಭಾವ. ಇಂತೀ ಷಡುಸ್ಥಲಭಕ್ತಿಯ ನೆಮ್ಮಿ, ವಿಶ್ವಾಸವ ಕಂಡು, ಸತ್ಯದಲ್ಲಿಯೆ ನಿಂದು ಬುದ್ಧಿಕೇವಲ, ವಿದ್ಯೆಕೇವಲ ಅವಿದ್ಯೆಕೇವಲ. ಇಂತೀ ತ್ರಿವಿಧ ಕೇವಲಜ್ಞಾನದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳ ಸ್ಥಿರೀಕರಿಸಿ ಸುಚಿತ್ತದಲ್ಲಿ ದಿವ್ಯತೇಜಪ್ರಕಾಶ ಕೇವಲವಪ್ಪ ಪರಂಜ್ಯೋತಿಯಲ್ಲಿ ವಿಶ್ವಾಸದಿಂದ ಪರವಶನಾಗಬೇಕು. ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ವಿಶ್ವಾಸದಿಂದ ಭಕ್ತನಾಗಿ, ಆ ವಿಶ್ವಾಸದೊಳಗಣ ನೈಷ್ಠೆಯಿಂದ ಮಹೇಶ್ವರನಾಗಿ, ಆ ನೈಷ್ಠೆಯೊಳಗಣ ಸಾವಧಾನದಿಂದ ಪ್ರಸಾದಿಯಾಗಿ, ಆ ಸಾವಧಾನದೊಳಗಣ ಸ್ವಾನುಭಾವದಿಂದ ಪ್ರಾಣಲಿಂಗಿಯಾಗಿ, ಆ ಸ್ವಾನುಭಾವದೊಳಗಣ ಅರಿವಿನಿಂದ ಶರಣನಾಗಿ, ಆ ಅರಿವು ನಿಜದಲ್ಲಿ ಸಮರಸಭಾವವನೈದಿ ನಿರ್ಭಾವಪದದೊಳು ನಿಂದ ಭೇದವೇ ಐಕ್ಯಸ್ಥಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಿಶ್ವಾಸದಿಂದ ನಂಬಿದರಯ್ಯಾ ಭಿಲ್ಲಮರಾಯನವರು. ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯನವರು. ವಿಶ್ವಾಸದಿಂದ ನಂಬಿದರಯ್ಯಾ ಕೆಂಭಾವಿಯ ಭೋಗಣ್ಣನವರು. ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರಮಲ್ಲಯ್ಯಗಳು. ವಿಶ್ವಾಸದಿಂದ ನಂಬಿದರಯ್ಯಾ ಸಾಮವೇದಿಗಳು. ವಿಶ್ವಾಸದಿಂದ ನಂಬಿದರಯ್ಯಾ ದಾಸದುಗ್ಗಳೆಯವರು. ವಿಶ್ವಾಸದಿಂದ ನಂಬಿದರಯ್ಯಾ ಸಿರಿಯಾಳಚಂಗಳೆಯವರು. ವಿಶ್ವಾಸದಿಂದ ನಂಬಿದರಯ್ಯಾ ಸಿಂಧುಬಲ್ಲಾಳನವರು. ವಿಶ್ವಾಸದಿಂದ ನಂಬಿದರಯ್ಯಾ ಬಿಬ್ಬಿಬಾಚಯ್ಯಗಳು. ವಿಶ್ವಾಸದಿಂದ ನಂಬಿದರಯ್ಯಾ ಮರುಳಶಂಕರದೇವರು. ಇಂತಪ್ಪ ವಿಶ್ವಾಸಿಗಳ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನಯ್ಯಾ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
ಪ್ರಸಾದ ಪ್ರಸಾದವೆನುತಿಪ್ಪಿರಿ. ಪ್ರಸಾದವೆಂತಿಪ್ಪುದು ? ಪ್ರಸಾದಿಯೆಂತಿಪ್ಪ ? ಪ್ರಸಾದಗ್ರಾಹಕ ಎಂತಿರಬೇಕು ? ಎಂದರಿಯದೆ ಪ್ರಸಾದವೆಂದು ಇಕ್ಕಿಹೆವೆಂಬರು, ಕೊಂಡೆಹೆವೆಂಬರು. ಕೊಂಡು ನಗೆಗೆಡೆಯಾಗುತಿಪ್ಪರಯ್ಯಾ. ಪ್ರಸಾದ ಪರಾಪರವಾದುದು, ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ. ಕರ್ಮಣಾ ಮನಸಾ ವಾಚಾ ಗುರುಭಕ್ತಿವಿಚಕ್ಷಣಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಎಂದು ದೀಕ್ಷಾಮೂರ್ತಿ ಪರಶಿವಗುರುಲಿಂಗಕ್ಕೆ ತನುಮನಧನವನರ್ಪಿಸುವುದು. ಪೂಜಾಕಾರಮೂರ್ತಿ ಪರಮಗುರುಮಹಾಲಿಂಗಕ್ಕೆ ತನುಮನಧನವರ್ಪಿಸಿ, ಶಿಕ್ಷಾಮೂರ್ತಿ ಪರಮಗುರುಜಂಗಮಲಿಂಗಕ್ಕೆ ತನು ಮನ ಧನವನರ್ಪಿಸಿ, ಪ್ರಸನ್ನಪ್ರಸಾದವ ಪಡೆದು ಭೋಗಿಸಿ, ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ, ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ ಆ ಪ್ರಸಾದಿಯೇ ಪ್ರಸಾದಗ್ರಾಹಕ. ಆ ಪ್ರಸಾದಿಯೇ ಗುರುವೆಂದು, ಆ ಪ್ರಸಾದಿಯೇ ಲಿಂಗವೆಂದು ಆ ಪ್ರಸಾದಿಯೇ ಜಂಗಮವೆಂದು ತನುಮನಧನದಲ್ಲಿ ವಂಚನೆ ಇಲ್ಲದೆ ಕೇವಲ ವಿಶ್ವಾಸದಿಂದ ನಂಬಿ ಪ್ರಸಾದವ ಗ್ರಹಿಸುವುದು. ಇದು ಕಾರಣ, ಪ್ರಸಾದಗ್ರಾಹಕನ ಪರಿಯೆಂಬ ಭಾವ ಹಿಂಗದೆ ಇಕ್ಕುವ ಪರಿಯ ನೋಡಾ. ಇದು ಕಾರಣ. ಮಹಾನುಭಾವರ ಸಂಗದಿಂದ ಅರಿಯಬಹುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅ[ಜಾ]ಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ ಕಾಷ*ದ ವೇಷ ಗುರುಚರ[ಲಿಂಗ]ವಾದಲ್ಲಿ, ಎನ್ನ ಕಾಯಕದ ಕಾಷ* ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ, ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು ಆ ಭಾವಕ್ಕೆ ಬಲೋತ್ತ[ರ]ನಾಗಿದ್ದಾತನ ಇರವು, ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ ಅದೇತರಿಂದ ಒದಗಿದ ಕುರುಹು ? ಶಿಲೆಯ ಪ್ರತಿಷೆ*ಯ ಮಾಡಿ ತನ್ನ ಒಲವರ ವಿಶ್ವಾಸದಿಂದ ಬಲಿಕೆಯನರಿವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಷ ತನ್ನೊಳಗಾದಡೂ ತನ್ನ ಕೇಡು, ವಿಷದೊಳಗು ತಾನಾದಡೂ ತನ್ನ ಕೇಡು. ಕರ್ಕಸದ ನಡುವೆ ಹುಟ್ಟಿದ ಕಂಬದಂತೆ. ಇಂತಿವನರಿದು ಮಾಡಿ ನೀಡಿ ವೃಥಾ ನಿರರ್ಥಕ್ಕೆ ಹೋಗಬೇಡ. ಹುತ್ತಕ್ಕೆ ಹಾಲನೆರೆದಲ್ಲಿ ಸರ್ಪ ಕುಡಿಯಿತ್ತೆ ಆ ಹಾಲ? ಅದು ತಮ್ಮ ಕೃತ್ಯದ ಕಟ್ಟಣೆಗೆ ಸರ್ಪನೊಪ್ಪಿ ಕಾಟವ ಬಿಟ್ಟಿತೆ? ಅದು ತಮ್ಮ ಚಿತ್ತದ ದರ್ಪದ ತೆರ. ಇಂತೀ ವಿಶ್ವಾಸದಿಂದ ಶಿವಭಕ್ತಿಯನೊಪ್ಪುಗೊಂಬ, ಇದು ವಿಶ್ವಾಸಿಯ ಸ್ಥಲ. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 86 ||
--------------
ದಾಸೋಹದ ಸಂಗಣ್ಣ
ವಿಶ್ವಾಸದಿಂದ ಅಂಗನೆಯ ಕುಚ, ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಬಳ್ಳ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಆಡಿನ ಹಿಕ್ಕೆ ಲಿಂಗವಾದುದಿಲ್ಲವೆ? ವಿಶ್ವಾಸದಿಂದ ಲಿಂಗವನಪ್ಪಿದ ಹೆಣ್ಣು ಗಂಡಾದುದಿಲ್ಲವೆ? ವಿಶ್ವಾಸದಿಂದ ಓಗರವು ಪ್ರಸಾದವಾಗಿ ಎಂಜಲೆಂದ ವಿಪ್ರರ ಮಂಡೆಯ ಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ? ಇದು ಕಾರಣ, ವಿಶ್ವಾಸದಿಂದ ಗುರು; ವಿಶ್ವಾಸದಿಂದ ಲಿಂಗ; ವಿಶ್ವಾಸದಿಂದ ಜಂಗಮ, ವಿಶ್ವಾಸದಿಂದ ಪ್ರಸಾದ. ವಿಶ್ವಾಸಹೀನಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವ ಶಿವಾ ಆವನಾನೊಬ್ಬನು ಶ್ರೀಮಹಾದೇವನ ದಿವ್ಯಕಾಂತಿಯಿಂದೊಗೆದ ಶ್ರೀಮಹಾಭಸಿತವ ಬಿಟ್ಟು ಹಣೆಯಲ್ಲಿ ಗೋಪಿ ಮಲಿನ ಸಾದು ಕಸ್ತೂರಿ ಚಂದನಗಳೆಂಬ ಮಣ್ಣುಮಸಿಗಳಿಂದ ನೀಳ ಬೊಟ್ಟು ಕಾಗೆವರೆಬೊಟ್ಟು, ಹೂಬೊಟ್ಟು ಅರ್ಧಚಂದ್ರರೇಖೆ, ಅಂಕುಶದ ರೇಖೆ ಮೊದಲಾದ ಕಾಕುವರೆಗಳ ವಿಶ್ವಾಸದಿಂದ ಇಡುತಿಪ್ಪ ಪಾತಕರ ಮುಖವ ನೋಡಲಾಗದು. ಸುಡು ! ಅದು ಅಶುದ್ಧ, ಅದು ಪಾಪದ ರಾಶಿ, ಅದ ನೋಡಿದಡೆ ಮಹಾದೋಷ ಅದೆಂತೆಂದಡೆ, ಪಾರಾಶರಪುರಾಣದಲ್ಲಿ: ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ ಮತ್ತಂ ಶಾಂಭವಪುರಾಣದಲ್ಲಿ: ಅಶುದ್ಧಂಚ ತಥಾ ಪ್ರೋಕ್ತಂ ವರ್ತುಲಂ ಚೋಧ್ರ್ವಪುಂಡ್ರಕಂ ಅಶುದ್ಧಂ ಚಾರ್ಧಚಂದ್ರಂ ಚ ಕೀರ್ತಿತಂ ತು ಕುಶಾದಿಭಿಃ ಮತ್ತಂ ಸೂತಸಂಹಿತೆಯಲ್ಲಿ: ಅಶ್ರೌತಂ ಚೋಧ್ರ್ವಪುಂಡ್ರಂ ತು ಲಲಾಟೇ ಶ್ರದ್ಧಯಾ ಸಹ ಧಾರಯಿಷ್ಯಂತಿ ಮೋಹೇನ ಪಾಷಂಡೋಪಹತಾ ಜನಾಃ ಮತ್ತಂ ಮಾನವಪುರಾಣದಲ್ಲಿ: ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ತತ್ವನಿಷೆ*ೈರ್ನ ಧಾರ್ಯಂ ಚ ನ ಧಾರ್ಯಂ ವೈದಿಕೈರ್ಜನೈಃ ಊಧ್ರ್ವಪುಂಡ್ರಂ ಮುಖಂ ದೃಷ್ಟ್ವಾ ವ್ರತಂ ಚಾಂದ್ರಾಯಣಂ ಚರೇತ್ ಮತ್ತಂ ಸ್ಕಂದಪುರಾಣದಲ್ಲಿ: ಊಧ್ರ್ವಪುಂಡ್ರಂ ದ್ವಿಜಃ ಕುರ್ಯಾತ್ ಲೀಲಯ್ಯಾಪಿ ಕದಾಚನ ತದಾಕಾರೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈ ಎಂದುದಾಗಿ, ಶ್ರೀಮಹಾವಿಭೂತಿಯ ಬಿಟ್ಟು ವೇದವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿ ಇಡುತಿಪ್ಪ ಪಂಚಮಹಾಪಾತಕರ ಮುಸುಡ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇನ್ನಷ್ಟು ... -->