ಅಥವಾ

ಒಟ್ಟು 56 ಕಡೆಗಳಲ್ಲಿ , 25 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ತನ್ನ ವಿನೋದಕ್ಕೆ ಗುರುವಾದ ಗುರು ತನ್ನ ವಿನೋದಕ್ಕೆ ಲಿಂಗವಾದ ಗುರು ತನ್ನ ವಿನೋದಕ್ಕೆ ಜಂಗಮವಾದ ಗುರು ತನ್ನ ವಿನೋದಕ್ಕೆ ಪಾದೋದಕವಾದ ಗುರು ತನ್ನ ವಿನೋದಕ್ಕೆ ಪ್ರಸಾದವಾದ ಗುರು ತನ್ನ ವಿನೋದಕ್ಕೆ ವಿಭೂತಿಯಾದ ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕೃಷಿಯಿಂದ ಮುಂದಣ ಫಲವ ಕಾಬಂತೆ ಅಸಿಕಲಿಯಿಂದ ಮುಂದಣ ಅರಿಬಲವ ಗೆಲುವಂತೆ ಸತ್ಕ್ರೀಮಾರ್ಗ ಮರ್ಮ ಧರ್ಮಂಗಳನರಿದು ಮುಂದಣ ಆಸುರ ಕರ್ಮಂಗಳ ತಮ ಬಂಧಂಗಳನೀಸಿ ಗೆಲುವುದಕ್ಕೆ ಇಷ್ಟಲ್ಲದಿಲ್ಲ. ಇದು ವಸ್ತುಪೂಜಕನ ವಿಶ್ವಾಸ, ಸಂಗನಬಸವಣ್ಣನ ಸಂಬಂಧ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ವಿಶ್ವಾಸಬ್ಥಿತ್ತಿ.
--------------
ಬಾಹೂರ ಬೊಮ್ಮಣ್ಣ
ಪ್ರಸಾದಿಗೆ ಲಕ್ಷಣವಾವುದೆಂದರೆ ಹೇಳಿಹೆ ಕೇಳಿ[ರಯ]. ಕಾಯದಿಂದ ಮನಸ್ಸಿನಿಂದ ವಾಕ್ಯದಿಂದ ಸತ್ಯಶುದ್ಧವಾಗಿ, ವಿಶ್ವಾಸ ಶ್ರದ್ಧೆಯೆಡೆಗೊಂಡು ಶರೀರವನು ಪ್ರಾಣವನು ಒಡೆಯೆಂಗೆ ಸಮರ್ಪಿಸಿ ಪ್ರಸಾದವ ಕೈಕೊಳಬಲ್ಲರೆ ಪ್ರಸಾದಿಯೆಂಬೆ. ಹೀಂಗಲ್ಲದೆ ಕುಳವೆಂಬ ಕೋಳಕ್ಕೆ ಸಿಲ್ಕಿದ ಕಾಳ್ವಿಚಾರಿ ಋಣಪಾತಕರ ಪ್ರಸಾದಿ ಸದ್ಭಾವಿಯೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಇನ್ನೇವೆನಯ್ಯಾ ನಾನು ಕೆಡೆದಿದ್ದೇನೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು; ಜೀವವುಳ್ಳನ್ನಕ್ಕ ಪ್ರಕೃತಿ ಕೆಡದು; ಭಾವಿಸಿಹೆನೆಂಬನ್ನಕ್ಕ ವಿಶ್ವಾಸ ಬಿಡದು; ಈ ಉಭಯವುಳ್ಳನ್ನಕ್ಕ ಮನ ನಿನ್ನ ನೆನೆಯಬಿಡದು. ನೀ ನಷ್ಟವಾದಲ್ಲಿ ಎನ್ನ ಭಾವ ನಷ್ಟ; ಭಾವ ನಷ್ಟವಾದಲ್ಲಿ ಎನ್ನಯ್ಯನಿಲ್ಲ; ನೀನು ಪ್ರಿಯನಲ್ಲ; ಇಮ್ಮಡಿ ದೇವನಲ್ಲ. ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ ಎಲ್ಲಿ ಅಡಗಿತ್ತೆಂದರಿಯೆನಲ್ಲ !
--------------
ಮೋಳಿಗೆ ಮಹಾದೇವಿ
ಮಹದೈಶ್ವರ್ಯವು ಕೈಗೂಡುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಪರಮಪವಿತ್ರನೆನಿಸಬೇಕಾದಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಸರ್ವೈಶ್ವರ್ಯ ಸರ್ವಸಿದ್ಧಿ ದೊರೆಕೊಂಬುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಮಹಾಪುಣ್ಯದ ಫಲವು ಪ್ರಾಪ್ತಿಸುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ದಿನದಿನಕ್ಕೆ ಪಾಪ ಪಲ್ಲಟವಪ್ಪಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಅಂಗಕ್ಕೆ ಶ್ರೀ ವಿಭೂತಿಯೇ ಶೃಂಗಾರ ನೋಡಾ. ಅದೆಂತೆಂದೊಡೆ : `` ಶ್ರೀಕರಂ ಚ ಪವಿತ್ರಂ ಚ ಹಾರಾದ್ಯಾಭರಣಂ ತಥಾ | ಲೋಕವಶ್ಯಕರಂ ಪುಣ್ಯಂ ಪಾಪನಾಶಂ ದಿನೇ ದಿನೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತಕೋಟಿ ಪಾತಕಂಗಳು ಪರಿಹಾರವಾಗಿ ಮುಂದೆ ಶಿವಸಾಯುಜ್ಯಪದವು ದೊರೆಕೊಂಬುದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ. ಎನ್ನ ಗುರುವೆಂದು ಭಾವಿಸಿ ಶರಣೆಂದು ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ. ಜಂಗಮವೆಂದು ನಂಬಿ, ವಿಶ್ವಾಸ ಬಲಿದು, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ. ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು ಬಿಡದೆ ಪಿಡಿದು ಪೂಜಿಸುವವರು ಪ್ರಾಣಲಿಂಗಿಗಳೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು. ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು. ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ, ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ, ವೀರಬೀರೇಶ್ವರಲಿಂಗದೊಳಗಾದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ ಪೂರ್ವಪುಣ್ಯವೊದಗಿ, ಸಂಸಾರ ಹೇಯವಾಗಿ, ಗುರುಕಾರುಣ್ಯವ ಪಡೆದು, ಆತ್ಮಜ್ಞಾನ ತಿಳಿಯಲಿಕ್ಕೆ, ಮನಗೊಟ್ಟು, ತತ್ವವ ಶೋಧಿಸಿ, ಪುರಾತನ ವಚನ ಹಾಡಿಕೊಂಡು ಅನುಭವಿಯಾಗಿ, ನಾನೇ ಅನುಭಾವಿ ನಾನೇ ಪ್ರಭು, ನಾನೇ ಪರಬ್ರಹ್ಮವ ಬಲ್ಲ ಪರಮಜ್ಞಾನಿಯೆಂದು, ಬಸವಾದಿ ಪೂರ್ವಪ್ರಮಥರ ಪುರಾತರ ಮಹಾಗಣಂಗಳ ಜರಿದು, ಈ ಭುವನದಲ್ಲಿ ಇನ್ನಾ ್ಯರು ನಿಜವನರಿತವರಿಲ್ಲೆಂದು ಅಹಂಕರಿಸಿ, ನಾವು ಮಹಾಜ್ಞಾನಿಗಳು, ನಾವು ಕೇವಲ ಶಿವಾಂಶಿಕರು, ನಮ್ಮನ್ನಾರು ಅರಿಯರು, ನಮ್ಮ ಬಲ್ಲವರು ಪುಣ್ಯವಂತರು, ನಮ್ಮನ್ನರಿಯದವರು ಪಾಪಿಷ*ರು. ನಾವು ಮಹತ್ವ ಉಳ್ಳವರು, ನಾವು ಮಕ್ಕಳ ಕೊಡುವೆವು, ರೋಗ ಕಳೆಯುವೆವು, ಬ್ರಹ್ಮಹತ್ಯಾದಿ ಪಿಶಾಚಿಯ ಸೋಂಕು ಬಿಡಿಸುವೆವು ಎಂದು ವಿಭೂತಿ ಮಂತ್ರಿಸಿಕೊಟ್ಟು, ಅವರ ಮನೆಯಲ್ಲಿ ಶಿವಪೂಜೆಯ ಪಸಾರವನಿಳಿಯಿಟ್ಟು, ಆ ರೋಗದವರನ್ನು ಮುಂದೆ ಕೂಡ್ರಿಸಿಕೊಂಡು, ತಾ ಕೂತು ಕಣ್ಣು ಮುಚ್ಚಿ, ಒಳಗೆ ಬೆಳಗವ ಕಂಡು, ಕಣ್ದೆರೆದು, ಬಿರಿಗಣ್ಣಿನಿಂದ ನೋಡ್ತ ಹಡ್ತ ಹುಡ್ತ ಮಾಡಿ ಪರಿಣಾಮವಾಗಲೆಂದು ಹೇಳಲು, ಅದು ರಿಣಾ ತೀರಿಹೋದರೆ, ನಮ್ಮ ಮಹತ್ವ ಎಂಥಾದ್ದು, ಹಿಂದೆ ಇಂಥಾ ಮಹತ್ವ ಬಳಹ ಮಾಡೀವಿಯೆಂದು ಅಲ್ಲಲ್ಲಿ ಹೆಸರು ಹೇಳಿಕೊಳ್ಳಬೇಕು. ಅದು ಹೋಗದಿದ್ದರೆ- ಇವರ ವಿಶ್ವಾಸ ಘಟ್ಟಿಲ್ಲೆಂದು, ಏನರೆ ನೆವ ಕೊಳ್ಳಬೇಕು. ಕೊಟ್ಟರೆ ಹೊಗಳಬೇಕು, ಕೊಡದಿದ್ದರೆ ಬೊಗಳಬೇಕು. ಅವರಿಂದ ಆ ಹಣವು ತನಗೆ ಬಾರದಿದ್ದರೆ ಅವರ ಅರ್ಥವ ಕಳೆಯಬೇಕೆಂಬ ಯೋಚನೆಬೇಕು. ಅಥವಾ ಫಣ್ಯಾಚಾರದಲ್ಲಿ ಅವರಿಂದ ಅರ್ಥವ ಸೆಳೆತಂದು ಹಿಂದೆ ತಾ ಬಿಟ್ಟು ಪೂರ್ವಪ್ರಪಂಚದವರಿಗೆ ಕೊಟ್ಟು ಈ ವಿಷಯಾತುರಕ್ಕೆ ವಾಯು ತಪ್ಪಿ ನಡೆದು ಇದು ಪ್ರಭುವಿನಪ್ಪಣೆಯೆಂದು ಹಾಡಿದ್ದೇ ಹಾಡುವ ಕಿಸಬಾಯಿದಾಸನ್ಹಾಂಗೆ ಹಾದಿಡ್ದೇ ಹಾಡಿಕೊಳ್ಳುತ್ತ, ಕ್ರೀಯ ನಿಃಕ್ರಿಯವಾಗಿ ಸತ್ತ ಕತ್ತಿಯ ಎಲವು ತಂದು ತಿಪ್ಪಿಯಲ್ಲಿ ಬಚ್ಚಿಟ್ಟು ಸುತ್ತುವ ತಲೆಹುಳುಕ ಹುಚ್ಚುನಾಯಿಯಂತೆ, ಉಚ್ಚಿಯಾ ಪುಚ್ಚಿಗೆ ಮೆಚ್ಚನಿಟ್ಟ ನಿಚ್ಚ ಕಚ್ಚಿಗಡಕರಿಗೆ ತಮ್ಮ ನಿಜದೆಚ್ಚರ ಇನ್ನೆಲ್ಲಿಹದೋ ? ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ. ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ. ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ. ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ. ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಾದತೀರ್ಥದ ಘನವ ಕಂಡು ತನುಕರಗಿ ಮನಹಿಗ್ಗಿ ಹೃದಯ ಪಸರಿಸಿ ಅಂತರಂಗದಲ್ಲಿ ವಿಶ್ವಾಸ ತುಂಬಿ, ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ, ಆ ಮಹಾಘನ ಪರಾತ್ಪರವಾದ ಪಾದತೀರ್ಥವನು ಹದುಳಿಗಚಿತ್ತನಾಗಿ ಹರ್ಷಾನಂದದಿಂ ಸೇವನೆಯಮಾಡಿ ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ, ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ ಅವ ಭಕ್ತನಲ್ಲ, ಲಿಂಗವಿರಳ ನೋಡಾ. ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ ಕಾಯಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲವು. ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ. ಕುರುಡನ ಕೈಯ ದರ್ಪಣದಂತೆ
--------------
ಚನ್ನಬಸವಣ್ಣ
ಶಿಲೆ ಮರ ಮಣ್ಣು ಬೆಂಕಿ ನೀರು ಮಳಲುಗಳಲ್ಲಿ ಇಂದು ಚಂದ್ರ ಇಂತಿವರೊಳಗಾದವರ ಮರೆಯಲ್ಲಿ ತಮ್ಮ ವಿಶ್ವಾಸ ಎಂತಿದ್ದಿತ್ತು ಅಂತೆ ವಸ್ತುವಿಪ್ಪುದನರಿತು ಇದು ಸಂಗನಬಸವಣ್ಣ ಸರ್ವಾಧಾರವಾಗಿ ಬಂದ ಸಂಬಂಧ. ಬ್ರಹ್ಮೇಶ್ವರಲಿಂಗವು ವಿಶ್ವಾಸದಲ್ಲಿ ತಪ್ಪದಿಪ್ಪನು.
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->