ಅಥವಾ

ಒಟ್ಟು 72 ಕಡೆಗಳಲ್ಲಿ , 25 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಂದು ಮುಂದು ಸಂದಳಿದ ಬಳಿಕ ಆನು ನೀನೆಂಬ ಭೇದವೇತಕಯ್ಯ? ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ? ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು, ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು, ನಾನಾ ವರ್ಣ ಆನಂದನೆಂಬ ಅದ್ಥಿದೇವತೆ ಮಧ್ಯಮಸ್ಥಾನದಲ್ಲಿ, ಸಿದ್ಧ ಸಂಯೋಗವೆಂಬ ಸರೋವರದಲ್ಲಿ, ವೈನೈಯೆಂಬ ಕೊಳಂಗಳು ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು, ಅದ್ಥಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ ನಿತ್ಯವೆಂಬ ಕೊಳ. ಶುದ್ಥಶ್ವೇತನೆಂಬ ಅಮೃತ ಪ್ರವಾಹ, ದಳವೊಂದು, ಮೂಲ ಮೂರು, ಫಲವಾರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅದ್ಥಿದೇವತೆ.
--------------
ಸಿದ್ಧರಾಮೇಶ್ವರ
ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ, ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ, ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ. ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ ಮಹಾಭೂತ, ವಾಮದೇವವಕ್ತ್ರ, ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ, ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ. ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ, ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ. ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ. ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ. ಹೃದಯ ಸ್ಥಾನದಲ್ಲಿ ಅನಾಹತಚಕ್ರ, ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ, ಈಶ್ವರ ಪೂಜಾರಿ ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ. ಕÀಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ, ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_ ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ. ಬಾಲಷಟ್ಕೋಟಿ ಸೂರ್ಯಪ್ರಕಾಶ ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ. ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ. ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ] ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ. ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ, ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_ ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಪರತತ್ತ್ವದ ವಾಯುವಿನ ಮೇಲೆ ನಿರಂಜನ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರ ಎಪ್ಪತ್ತುದಳದಪದ್ಮ. ಆ ಪದ್ಮದ ವರ್ಣ ತೊಂಬತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ಇನ್ನೂರ ಎಪ್ಪತ್ತಕ್ಷರ : ಆ ಅಕ್ಷರ ತತ್ತಾ ್ವತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದವೆಂಬ ಮಹಾಶಕ್ತಿ. ವಿಮಲಾನಂದಬ್ರಹ್ಮವೆ ಅದ್ಥಿದೇವತೆ. ಅಲ್ಲಿಯ ನಾದ ನಿರಾಳನಾದ. ಅಲ್ಲಿಯ ಬೀಜಾಕ್ಷರ ಕಲಾಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ. ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು_ಎಂಬ ಆದು ಅಧಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ, ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ, ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಉದಕವೊಂದರಲ್ಲಿ ತಂದು, ವರ್ಣ ಭೇದಕ್ಕೆ ಹಲವಾದ ತೆರನಂತೆ, ಆತ್ಮ ನಾನೆಂಬುದ ಮರೆದು, ಸರ್ವರಲ್ಲಿ ಬೆರಸುವ ಚಿತ್ತ ಒಂದೋ, ಎರಡೋ ? ನೆಲಜಲ ಒಂದಾದಡೆ, ಬೆಳೆವ ವೃಕ್ಷ ಹಲವಾದ ತೆರದಂತೆ, ಅರಿವು ಮರವೆಗೊಳಗಾದ ಆತ್ಮನ ತಿಳಿದಲ್ಲಿ, ಬೇರೊಂದೆಡೆಗೆ ತೆರಪಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಶಿವತತ್ವದ ತೇಜದ ಮೇಲೆ ನಿರಾಳ ಮಣಿಪೂರ ಚಕ್ರ. ಅಲ್ಲಿಯ ಪದ್ಮ ಮುನ್ನೂರರುವತ್ತು ದಳದ ಪದ್ಮ ; ಆ ಪದ್ಮದ ವರ್ಣ ಉಪಮಾತೀತವು. ಅಲ್ಲಿಯ ಅಕ್ಷರ ಮುನ್ನೂರರುವತ್ತಕ್ಷರ ; ಆ ಅಕ್ಷರ ರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳಶಿವಶಕ್ತಿ. ನಿರಂಜನಬ್ರಹ್ಮವೇ ಅದ್ಥಿದೇವತೆ. ಅಲ್ಲಿಯ ನಾದ ಬ್ರಹ್ಮನಾದ. ಅಲ್ಲಿಯ ಬೀಜಾಕ್ಷರ ಮಕಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಊರೆಂಬುದರಿಯ ಉಲುವೆಂಬುದರಿಯ ಬರಿಯ ಮಾತಿನ ಬಣ್ಣವನರಿಯದ ಸಿರಿಸಂಪದದೊಳಾನಂದ ತಲೆಗೇರಿ ಜಾತಿ ಗೋತ್ರ ಕುಲಾಶ್ರಮ ವರ್ಣ ನಾಮಂಗಳೆನುಯೇನೆಂಬ ಭಾವವ ಮರೆದಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ, ನಾಮ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ, ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ, ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ, ಕಾಯ ಕರಣ ವಿಷಯಭ್ರಮೆ, ವಾಯು ಮನ ಭಾವ ಜೀವ ಮೋಹಭ್ರಮೆ, ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ ನಿಮ್ಮಡಿಗಬ್ಥಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ - ಇಂತೀ ದಶವಾಯುಗಳು. ಅಲ್ಲಿ ಪ್ರಾಣವಾಯು ಇಂದ್ರನೀಲವರ್ಣ ಕಂಡದ ಅಧೋ ಭಾಗೆಯಲ್ಲಿರ್ದ ಹೃದಯ ಪಾದ ನಾಬ್ಥಿ ನಾಶಿಕವಧರಂಗಳಲ್ಲಿ ಉಚ್ಛಾ ್ವಸ ನಿಶ್ವಾಸಂಗಳಿಂದ ಚರಿಸುತ್ತಿಹುದು. ಅಪಾನವಾಯು ಇಂದ್ರಗೋಪವರ್ಣ, ವಾಯು ಶಿಶ್ನ ಉರ ಜಾನು ಪಾದ ಜಂಘೆ ನಾಬ್ಥಿಮೂಲ ಜಠರದಲ್ಲಿರ್ದು ಮಲ ಮೂತ್ರಂಗಳ ಪೊರಮಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಕರ್ಣ ಅಕ್ಷಿ ಘ್ರಾಣ ಗಂಡಾಗ್ರ ಗುಲ್ಫಂಗಳಲ್ಲಿ ವರ್ತಿಸುತ್ತ ಹಿಡಿವುದು ಬಿಡುವುದು ಇವು ಮೊದಲಾದ ವ್ಯಾಪಾರಂಗಳ ಮಾಡುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಹಸ್ತಪಾದಾ ಸರ್ವಸಂದುಗಳಲ್ಲಿರ್ದು ಸಂದು ಸಂದುಗಳಿಗೆ ಪಟುತ್ವಮಂ ಪುಟ್ಟಿಸುತ್ತಿಹುದು. ಸಮಾನವಾಯು ಶುದ್ಧ ಸ್ಫಟಿಕವರ್ಣ, ದೇಹ ಮಧ್ಯದಲ್ಲಿರ್ದು ಸರ್ವ ಸಂದುಗಳಲ್ಲಿ ವ್ಯಾಪಿಸಿಕೊಂಡು, ಕೊಂಡಂತಹ ಅನ್ನರಸವ ಸರ್ವಾಂಗಕ್ಕೆ ಸಮಾನವಂ ಮಾಡಿ ಅಷ್ಟಕೋಟಿ ರೋಮನಾಳಂಗಳಿಗೂ ಹಂಚಿಕ್ಕಿ ಅಂಗವಂ ಪೋಷಿಸುತ್ತಿಹುದು. ನಾಗವಾಯು ಬಾಲಸೂರ್ಯನ ವರ್ಣ, ಕಂಠಸ್ಥಾನದ್ಲರ್ದು ವದ್ರ್ಥಿ ನಿರೋಧಂಗಳಿಂದುದ್ಗಾರಮಂ ಮಾಡಿಸುತ್ತಿಹುದು. ಕೂರ್ಮವಾಯು ಕುಂದೇಂದುವಿನ ವರ್ಣ, ನೇತ್ರಮೂಲದಲ್ಲಿರ್ದು ಉನ್ಮೀಲನ ನಿಮೀಲನಾಡಿಗಳನು ಮಾಡುತ್ತಿಹುದು. ಕೃಕರವಾಯು ನೀಲವರ್ಣ ಕಾಯದಲ್ಲಿರ್ದು ಕ್ಷುಧಾ ಧರ್ಮಂಗಳಂ ಮಾಡುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ, ತಾಳಮೂಲದಲ್ಲಿರ್ದು ಅಗುಳಿಕೆಯಾರಡಿಗಳಂ ಪುಟ್ಟಿಸ್ಕ್ತುಹುದು. ಧನಂಜಯವಾಯು ಸಪ್ತ ಜಾಂಬೂನದ ವರ್ಣ, ಶೋಕರಾಗಂಗಳ ಪುಟ್ಟಿಸಿ ಹಾಡಿಸ್ಕ್ತುಹುದು. ಇಂತೀ ದಶವಾಯುಗಳ ದೇಹವನುದ್ಧರಿಸುತ್ತಿಹವು. ಈ ವಾಯುವನೇರಿ ಜೀವನು ಈಡಾಪಿಂಗಳ ಮಾರ್ಗದಲ್ಲಿ ವ್ಯವಹರಿಸುತ್ತಿಹನು. ಈ ವಾಯುಗ್ಕಯನರಿದು ಯೋಗಿಸುವುದೇ ಯೋಗ. ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಿಜವನೈದುವದೇ ಮಾರ್ಗವು
--------------
ಸಿದ್ಧರಾಮೇಶ್ವರ
ಪರತತ್ತ್ವದ ಹೃದಯದ ಮೇಲೆ ನಿರಂಜನ ಆಜ್ಞಾಚಕ್ರ. ಅಲ್ಲಿಯ ಪದ್ಮ ವಿಶ್ವತೋದಳಪದ್ಮ. ಆ ಪದ್ಮದ ವರ್ಣ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರಂಗಳು ವಿಶ್ವತೋ ಅಕ್ಷರಂಗಳು. ಆ ಅಕ್ಷರಂಗಳು ವಿಶ್ವಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಮಯಾನಂದಾತೀತವೆಂಬ ಮಹಾಶಕ್ತಿ. ನಿರಂಜನಾತೀತವೆಂಬ ಮಹಾಘನಲಿಂಗವೆ ಅಧಿದೇವತೆ. ಅಲ್ಲಿಯ ನಾದ ಮಹಾಗುಹ್ಯನಾದ. ಅಲ್ಲಿಯ ಬೀಜಾಕ್ಷರ ನಿರಂಜನಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿವತತ್ತ್ವದ ಹೃದಯದ ಮೇಲೆ ನಿರಾಳ ಆಜ್ಞಾಚಕ್ರ. ಅಲ್ಲಿಯ ಪದ್ಮ ಅನೇಕ ಕೋಟಿದಳಪದ್ಮ. ಆ ಪದ್ಮದ ವರ್ಣ ಅಂಥಾದಿಂಥಾದೆಂದು ಉಪಮೆ ಇಲ್ಲದ ಉಪಮಾತೀತವಾಗಿಹುದು. ಅಲ್ಲಿಯ ಅಕ್ಷರ ಅನೇಕ ಕೋಟಿ ಅಕ್ಷರ ; ಆ ಅಕ್ಷರ ಸರ್ವಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳಪ್ರಣವವೆಂಬ ಮಹಾಶಕ್ತಿ. ನಿರಾಳಾತೀತವೆಂಬ ಮಹಾಘನಲಿಂಗವೆ ಅಧಿದೇವತೆ. ಅಲ್ಲಿಯ ನಾದ ಪರಮಾನಂದವೆಂಬ ಮಹಾನಾದ. ಅಲ್ಲಿ ಬೀಜಾಕ್ಷರ ಕಲಾಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಪ್ತಕೋಟಿ ಮಹಾಮಂತ್ರ ವಿಶಾಲವಾಗದಂದು, ತೊಂಬತ್ತುನಾಲ್ಕು ಪದ ವಿಶಾಲವಾಗದಂದು, ವರ್ಣ ಐವತ್ತೆರಡು ವಿಶಾಲವಾಗದಂದು, ಇನ್ನೂರಾ ಇಪ್ಪತ್ತುನಾಲ್ಕು ಭುವನ ವಿಶಾಲವಾಗದಂದು, ತೊಂಬತ್ತಾರುತತ್ವ ವಿಶಾಲವಾಗದಂದು, ಅರುವತ್ತುನಾಲ್ಕು ಕಲೆಜ್ಞಾನ ವಿಶಾಲವಾಗದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಅಪ್ಪುವಿನ ಮೇಲೆ ನಿರಂಜನ ಸ್ವಾಧಿಷಾ*ನಚಕ್ರ. ಅಲ್ಲಿಯ ಪದ್ಮ ನಾನೂರಐವತ್ತು ದಳದಪದ್ಮ. ಆ ಪದ್ಮದ ವರ್ಣ ಎಪ್ಪತ್ತುಸಾವಿರದಾರುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ. ಅಲ್ಲಿಯ ಅಕ್ಷರ ನಾನೂರಐವತ್ತಕ್ಷರ, ಆ ಅಕ್ಷರ ಮನಾತೀತವಾಗಿಹುದು. ಅಲ್ಲಿಯ ಶಕ್ತಿ ಆನಂದಶಕ್ತಿ , ಅಚಲಾನಂದ ಬ್ರಹ್ಮವೇ ಅಧಿದೇವತೆ. ಅಲ್ಲಿಯ ನಾದ ಪರನಾದ. ಅಲ್ಲಿಯ ಬೀಜಾಕ್ಷರ ಪರಬ್ರಹ್ಮಸ್ವರೂಪವಾಗಿಹ ಪರಮೋಂಕಾರ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ ಮಹಾಜ್ಯೋತಿಯಪ್ಪವು ತಪ್ಪದು, ನೋಡಿರೇ ದೃಷ್ಟವ, ಮತ್ತಂತಿಂತೆಂದುಪಮಿಸಲುಂಟೇ ? ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್‍ಭಕ್ತನ ಅಂತರಂಗಬಹಿರಂಗಸರ್ವಾಂಗ ಪರಂಜ್ಯೋತಿರ್ಲಿಂಗವು, ಮತ್ತೆ, ದೇಹವೆಂದು ಪ್ರಾಣವೆಂದು ಆಧಾರಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಬ್ರಹ್ಮರಂಧ್ರವೆಂದು ವರ್ಣ ದಳ ಛಾಯೆ ಅಧಿದೇವತೆಯೆಂದು ವಿವರಿಸಿ ನುಡಿಯಲುಂಟೆ ? ಪಂಚ¨sõ್ಞತಿಕದ ತನುವಿನಂತೆ ಪಂಚವಿಂಶತಿ ತತ್ತ್ವವನು ಸಂಬಂಧಿಸಿ ನುಡಿಯಲುಂಟೇ, ಕೇವಲ ಜ್ಯೋತಿರ್ಮಯಲಿಂಗತನುವಿಂಗೆ ? ಸದ್ಭಕ್ತನ ಅಂಗ ಲಿಂಗ, ಮನ ಲಿಂಗ, ಪ್ರಾಣ ಲಿಂಗ, ಭಾವ ಲಿಂಗ, ಪಂಚವಿಶಂತಿ ತತ್ತ್ವಂಗಳೆಲ್ಲವೂ ಲಿಂಗತತ್ವ. ಇದು ಕಾರಣ, ಲಿಂಗವಂತನ ತನು ಸರ್ವಾಂಗಲಿಂಗವೆಂಬುದಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->