ಅಥವಾ

ಒಟ್ಟು 37 ಕಡೆಗಳಲ್ಲಿ , 17 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ್ವಸಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರಲ್ಲದೆ, ಹಂದಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮಚ್ಚುವರೆ, ಹುಡುಹುಡು ಎಂದಟ್ಟುವರಲ್ಲದೆ ? ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರಲ್ಲದೆ, ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮಚ್ಚುವರೆ ? ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂದ ಕರಕಷ್ಟ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಇದರ ನಿರ್ವಚನ : ಬ್ರಹ್ಮೇಶ್ವರಿ ವಿಷ್ಣೇಶ್ವರಿ ರುದ್ರೇಶ್ವರಿ ಮಹೇಶ್ವರಿಯೆಂಬ ಆ ರುದ್ರಶಕ್ತಿಸಹ ಸಪ್ತವ್ಯಸನಗಳೆಂಬ ಮೆಟ್ಟನಿಕ್ಕಿ, ಪ್ರಣಮವೆಂಬ ವೀಣೆಯ ವಿಸ್ತರಿಸಿ, ಸಪ್ತಸ್ಥಾನದಲ್ಲಿ ಎಳೆಯಂ ಬಿಗಿದು, ಹಂಸ ಹಂಸವೆಂಬ ಬೆರಳಲ್ಲಿ ನುಡಿಸುತ್ತ ಗೊಹೇಶ್ವರನಾಳದಲ್ಲಿ ಮಹಾ ಮಹಾತ್ಮನೆಂಬ ವಚನವ ಪಾಡುತ್ತ ಉರಿಗೆಂಡದ ಕಣ್ಣತೆರೆದು, ವಕ್ರಂಗಳ ವಿಸರ್ಜಿಸಿ, ಕಂಗಳ ಮುಚ್ಚಿ, ಸದೈಶ್ವರಿಯ ಸರವಿಗೈದು ಪರಸ್ಥಾನದಲ್ಲಿ ಒಲದಾಡುತಿರ್ದ ಜೋಗಿಯ ಕಂಡು, ಸಾರಾಯ ಸಂತೋಷಮಂ ಮಾಡುತ್ತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ತಾವು ಭಕ್ತರೆಂದು ಪುರಾತರ ವಚನವ ಕೇಳಿ, ಆಹಾ ಇನ್ನು ಸರಿಯುಂಟೆಯೆಂದು ಕೈವಾರಿಸುವರು ನೋಡಾ. ಆ ಪುರಾತರ ವಚನವನೊತ್ತಿ ಹೇಳಹೋದಡೆ, ನಮಗೆ ಅಳವಡುವುದೆ ಗೃಹಸ್ಥರಿಗೆ ಎಂಬರು. ಕೇಳಿ ಕೇಳಿ ಸತ್ಯವ ನಂಬದ ಮೂಳರನೇನೆಂಬೆನಯ್ಯಾ, ಕಲಿದೇವಯ್ಯ?
--------------
ಮಡಿವಾಳ ಮಾಚಿದೇವ
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು, ಮನ ಘನವನರಿಯದು, ಘನ ಮನವನರಿಯದು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು !
--------------
ಅಲ್ಲಮಪ್ರಭುದೇವರು
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೇಶವನಲ್ಲದೆ ಅತಃಪರದೈವವಿಲ್ಲೆಂದು ವೇದವ್ಯಾಸಮುನಿ ಭಂಗಬಟ್ಟುದನರಿಯಿರೆ ! `ಅಹಂ ಸರ್ವಜಗತ್‍ಕರ್ತಾ ಮಮ ಕರ್ತಾ ಮಹೇಶ್ವರಃ ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ ! ಕೂಡಲಸಂಗಮದೇವನು ದಕ್ಷನ ಯಜ್ಞವ ಕೆಡಿಸಿದುದ ಮರೆದಿರಲ್ಲಾ !
--------------
ಬಸವಣ್ಣ
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು ಕುಂಬ್ಥಿನಿಯ ಮೇಲೆ ಕಾಗಿ ತಾ ಕರೆದಂತೆ, ಅರಸಿ ಮಂಚವನೇರಿದಳೆಂದು ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ, ಮಹಾರಾಜಕುಮಾರನು ಆನೆಯನೇರಿದನೆಂದು ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ, ಮಹಾವೀರಕುಮಾರ ಮಹಾತೇಜಿಯನೇರಿದನೆಂದು ಮೈಲಿಗೆಯ ತೊಳೆಯುವ ಮಡಿವಾಳನಮಗ ತಾ ಮೋಳಿಗೆಯ ಹೇರುವ ಕತ್ತೆಯನೇರುವಂತೆ, ಬಾಲಹನುಮನು ಲಂಕೆಗೆ ಹಾರಿದನೆಂದು ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ, ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ ತಾ ಲಂಘಿಸಿ ಹಾರುವಂತೆ. ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ, ಬೆರಸದ ಶಿವಶರಣರು ಹಾಡಿದ ವಚನವ ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ ದೇವ ದಾನವ ಮಾನವರು ಮೊದಲಾದ ಜೀವಾತ್ಮರು ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತೀ ವಿಚಾರವನು ತಿಳಿಯದೆ ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ಹೆಸರಿಟ್ಟು ಇಷ್ಟಲಿಂಗದಲ್ಲಿ ಅವಿಶ್ವಾಸವ ಮಾಡಿ, ಕ್ರಿಯಾಚಾರದಲ್ಲಿ ಅನಾಚಾರಿಯಾಗಿ, ಜೀವಾತ್ಮನೇ ಪರಮಾತ್ಮನೆಂದು ಅಹಂಕರಿಸಿ, ದೇಹದ ಸಕಲಕರಣವಿಷಯಂಗಳಲ್ಲಿ ಮನಮಗ್ನವಾಗಿ ತನ್ನ ನಿಜದ ನಿಲವ ಮರೆದು, ಪರರಿಗೆ ಶಿವಶರಣಂಗಳ ವಚನವ ನೋಡಿ ಶಿವಾನುಭಾವವ ಪೇಳುವ ಕುನ್ನಿ ಮನುಜರ ಕೂಗ್ಯಾಡಿ ಕೂಗ್ಯಾಡಿ ನರಕದಲ್ಲಿಕ್ಕೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ. ಸೀತಾಳದಾಪ್ಯಾಯನವಾಯಿತೆಂದಡೆ ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು ನೇಮವ ಮಾಡಲೆಂದು ಕೊಟ್ಟಡೆ ಕೊಂಡೋಡಿ ಹೋದನು ಅನಿಮಿಷನು. ಅಭವನ ಮಹಾಮನೆಯ ಹೊಕ್ಕಡೆ ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು. ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ, ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ ಆಚಾರ ವಿಚಾರದಿಂದ ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ. ಗೊಹೇಶ್ವರನ ಶರಣ ತೋರಿದಡರಿದನು ಕೂಡಲಸಂಗಮದೇವರ.
--------------
ಬಸವಣ್ಣ
ಪಂಚವರ್ಣದ ಗಿಳಿಯೊಂದು ಪ್ರಪಂಚರಚನೆಗೆ ಬಂದು. `ಭವ ಬ್ರಹ್ಮ, ಭವ ಬ್ರಹ್ಮ' ಎಂಬುತ್ತಿದೆ, ಆ ಗಿಳಿಯು ಮೂರು ಮನೆಯ ಪಂಜರದಲ್ಲಿ ಕೂತು, `ಕುರುಷ್ವ ಲಿಂಗಪೂಜಾಂ, ಲಿಂಗಪೂಜಾಂ' ಎಂಬುತ್ತಿದೆ. ಆ ಗಿಳಿಯ ವಚನವ ಕೇಳಿದಾತಂಗೆ ಸುಖ, ಗಿಳಿಗೆ ಸುಖ; ಕೇಳದವಂಗೆ ಸುಖವಿಲ್ಲ, ಹೇಳಿದವಂಗೆಯು ಸುಖವಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗ ಮುಟ್ಟಿ ಆಚಮನ ಮಾಡುವರು ಲಿಂಗಾಂಗಿಗಳಲ್ಲದವರು. ಮಾಡಿದಡೆಯೂ ಮಾಡಲಿ. ಲಿಂಗ ಪಾದೋದಕವ ಧರಿಸಿ, ಮರಳಿ ಅಪವಿತ್ರ ಶಂಕೆಯಿಂದ ಆಚಮನ ಮಾಡಿದಡೆ ಅಘೋರನರಕದಲ್ಲಿಕ್ಕುವದಯ್ಯಾ, ಆ ಪಾದೋದಕವೆ ವಿಷವಾಗಿ. ಅದೆಂತೆಂದಡೆ: ಶಂಭೋಃ ಪಾದೋದಕಂ ಪೀತ್ವಾ ಪಶ್ಚಾದಶುಚಿಶಂಕಯಾ | ಯ ಆಚಮತಿ ಮೋಹೇನ ತಂ ವಿದ್ಯಾದ್ಬ್ರಹ್ಮ ಘಾತಕಂ || ಇಂತೆಂಬ ವಚನವ ಕೇಳಿ ನಂಬುವದಯ್ಯಾ. ಪರಮಪಾವನವಪ್ಪ ಪಾದೋದಕವ ನಂಬದವರು, ಬಸವಪ್ರಿಯ ಕೂಡಲಚೆನ್ನಸಂಗಯ್ಯಂಗೆ ದೂರ.
--------------
ಸಂಗಮೇಶ್ವರದ ಅಪ್ಪಣ್ಣ
ಆದಿ ಭಕ್ತ, ಅನಾದಿ ಜಂಗಮ, ಆದಿ ಶಕ್ತಿ, ಅನಾದಿ ಶಿವನು ನೋಡಾ. ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ [ಎನ್ನ] ಹೃದಯಕಮಲದಲ್ಲಿ ನಿಮ್ಮ ಕಂಡೆನು. ಆ ಕಾಂಬ ಜ್ಞಾನವೆ ಜಂಗಮ, ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು. ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು, ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು. ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ, ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ.
--------------
ಬಸವಣ್ಣ
>ಪುರಾತನರ ವಚನವ ಕಲಿತು ಹೇಳುವವರನೇನೆಂಬೆ ! ಅದ ಕುಳ್ಳಿರ್ದು ಕೇಳುವವರನೇನೆಂಬೆ ! ಅದಕ್ಕೆ ಮನ ನಾಚದವರನೇನೆಂಬೆ ! ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಶಬ್ದ ನಷ್ಟವಾಗದವರನೇನೆಂಬೆ !
--------------
ಚನ್ನಬಸವಣ್ಣ
ನಿರಾಕಾರ ಪರವಸ್ತು ಹೇಗೆಂದಡೆ : ಹೆಣ್ಣಲ್ಲ ಗಂಡಲ್ಲ, ಬೀಜವಲ್ಲ ವೃಕ್ಷವಲ್ಲ, ಆಕಾರವಲ್ಲ ನಿರಾಕಾರವಲ್ಲ, ಸ್ವೇತವಲ್ಲ ಪೀತವಲ್ಲ, ಹರಿತವಲ್ಲ ಮಾಂಜಿಷ್ಟವಲ್ಲ, ಕಪೋತವಲ್ಲ, ಮಾಣಿಕ್ಯವಲ್ಲ. ಆತನು ವರ್ಣಾತೀತನು, ವಾಙ್ಮನಕ್ಕಗೋಚರನು. ಇಂತಪ್ಪ ವಸ್ತುವಿನೊಳಗೆ ಬೆರೆವ ಪರಿಯೆಂತೆಂದಡೆ : ಗುರುವಿನ ವಾಕ್ಯವಿಡಿದು ಆಚರಿಸಿದವನು ಐಕ್ಯನು. ಹೇಗೆಂದಡೆ : ಎಲೆಯಿಲ್ಲದ ವೃಕ್ಷದಂತೆ, ಸಮುದ್ರದೊಳಗೆ ನೊರೆ ತೆರೆ ಬುದ್ಬುದಾಕಾರ ಅಡಗಿದ ಹಾಗೆ ಭಕ್ತನು ಮಹೇಶ್ವರನೊಳಡಗಿ, ಆ ಮಹೇಶ್ವರನು ಪ್ರಸಾದಿಯೊಳಡಗಿ, ಆ ಪ್ರಸಾದಿಯು ಪ್ರಾಣಲಿಂಗಿಯೊಳಡಗಿ, ಆ ಪ್ರಾಣಲಿಂಗಿಯು ಶರಣನೊಳಡಗಿ, ಆ ಶರಣ ಐಕ್ಯನೊಳಡಗಿ, ಆ ಐಕ್ಯನು ನಿರವಯದೊಳು ಕೂಡಿ ಕ್ಷೀರವು ಕ್ಷೀರವ ಕೂಡಿದಂತೆ ನೀರು ನೀರ ಕೂಡಿದಂತೆ ಜ್ಯೋತಿ ಜ್ಯೋತಿಯ ಕೂಡಿದಂತೆ ಬಯಲು ಬಯಲ ಕೂಡಿ ಚಿದ್ಬಯಲುವಾಗಿ ನಿಂದ ನಿಲವ ಲಿಂಗದೊಳರುಹಿ ಮೂವತ್ತಾರುಲಿಂಗದ ಮುಖದಿಂದಾದ ಮೂವತ್ತಾರು ವಚನವ ಓದಿದವರು ಕೇಳಿದವರು ಸದ್ಯೋನ್ಮುಕ್ತರಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ ಎನ್ನಂಗದ ಭಂಗ ಹಿಂಗಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಲಿಂಗದ ಸಂಯೋಗವಾಯಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ, ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ, ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ, ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ. ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ, ಕರದವನೆ ನೆರದ, ನೆರದವನೆ ಕುರುಹನರಿದ, ಅರಿದವನೆ ನಿಮ್ಮನರಿದವ ಕಾಣಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಇನ್ನಷ್ಟು ... -->