ಅಥವಾ

ಒಟ್ಟು 33 ಕಡೆಗಳಲ್ಲಿ , 21 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು ಆ ಜಗದ ಸ್ವರೂಪನೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಕೋಗಿಲೆಯ ತತ್ತಿಯನೊಡೆದು ಕಾಗೆ ಮರಿಯಮಾಡಿ ಸಲಹಿದಡೇನು ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ? ಲೋಕದ ಮಧ್ಯದಲ್ಲಿ ಅನಾದಿಶರಣನು ಲೋಕೋಪಕಾರಕ್ಕಾಗಿ ಜನಿಸಿದಡೇನು ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ ಮರಳಿ ಲೋಕವ ಬೆರೆಯನು ನೋಡಾ, ನಿಮ್ಮನರಿದ ಶಿವಜ್ಞಾನಿಶರಣನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಧರಣಿಯ ಪಸರಿಸಿ, ಉರಗನನಡಿಯಿಟ್ಟು ಶರದ್ಥಿಯೇಳಕ್ಕೆ ಎರದನೊಕ್ಕುಡಿತೆ ಉದಕವ ಹರಿಯಜ ಸುರರಿಗೆ ಪರಿಪರಿಯ ಲೋಕವ ಕೊಟ್ಟು ಅರಿದಂತಿರ್ದ ಕಾಣಾ! ರಾಮನಾಥ
--------------
ಜೇಡರ ದಾಸಿಮಯ್ಯ
ಊರ ಹೊರಗೊಂದು ದೇಗುಲ, ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ. ಗೊರತಿಯ ಕೈಯಲ್ಲಿ ಸೂಜಿ, ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ ! ಗೊರತಿಯ, ಸೂಜಿಯ, ಹದಿನಾಲ್ಕು ಲೋಕವ; ಒಂದಿರುಹೆ ನುಂಗಿತ್ತ ಕಂಡೆ !_ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನೊಳಿಹ ಮೂರು ಲೋಕವ ನುಂಗಿ ಮುಂದೆ ತೋರುತಿಹ ಪರಬ್ರಹ್ಮ ಕಿರಣವು ಆ ಕಿರಣದೊಳು ನೆನವನಡಗಿಸಿ ಸುಷುಪ್ತಿಯ ನಿಲವ ಕಾಣಬಲ್ಲಾತನೆ ಪರಮ ಲಿಂಗೈಕ್ಯ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಾಳೆ ಬಲಿದು ಈಳೆಯ ಮರನಾಯಿತ್ತು. ಆ ಈಳೆಯ ಮರನ ಏರಿ ಈರೇಳು ಲೋಕವ ಕಂಡವನ ಕಂಗಳ ಮಧ್ಯದಲ್ಲಿ ನಿಂದವನ ಆರೆಂದರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ. ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು. ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು. ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು. ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು. ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು. ಕಂಡಿತ್ತು ಬೆಂಕಿಯ ಬೆಳಗ, ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು. ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಹಾಮಲೆಯಲ್ಲಿ ಮಕ್ಷಿಕವಿರ್ಪುದು. ಆ ಮಕ್ಷಿಕನ ಬಾಯೊಳಗೆ ಉಡುವಿರ್ಪುದು. ಆ ಉಡುವಿನ ಬಾಯೊಳಗೆ ವ್ಯಾಘ್ರವಿರ್ಪುದು. ಆ ವ್ಯಾಘ್ರನ ಬಾಯೊಳಗೆ ಅರಸಿನ ಶಿಶುವಿರ್ಪುದು. ಆ ಶಿಶು ಒದರಲು ಮಕ್ಷಿಕ ಬಿಟ್ಟಿತ್ತು, ಉಡವು ಸತ್ತಿತ್ತು, ವ್ಯಾಘ್ರ ಬಿಟ್ಟಿತ್ತು. ಆ ಶಿಶು ಮೂರು ಲೋಕವ ನುಂಗಿ ತಾಯಿತಂದೆಯ ಕೊಂದು ಬಟ್ಟಬಯಲಲ್ಲಿ ನಿರ್ವಯಲಾಯಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ, ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ ? ಇದೆಂತೊ? ಅರಿಯಲೆ ಬಾರದು. ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ, ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮನೆಯೊಳಗಣ ಕಿಚ್ಚು ಕಾನನವ ಸುಟ್ಟಿತ್ತು, ಕಾನನ ಬೆಂದಲ್ಲಿ ಮನೆ ಉರಿಯಹತ್ತಿತ್ತು, ಮನೆ ಬೆಂದು ಕಂಬ ಉಳಿಯಿತ್ತು. ಆ ಕಂಬದ ಮೇಲೆ ರತ್ನವಿದ್ದುದ ಕಂಡೆ. ಅದರ ಬೆಳಗು ಮೂರು ಲೋಕವ ತುಂಬಿತ್ತಲ್ಲಾ ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುದೇವರ ನಿಲವಿಂಗೆ ನಾನು ಶರಣೆನುತಿರ್ದೆನು
--------------
ಚನ್ನಬಸವಣ್ಣ
ಇವಳಾವಾವ ವಂಚಕದಲಿ ಹುಟ್ಟಿ ಬೆಳೆದವನೆಂದರಿಯೆ. ನೋಡಯ್ಯಾ, ಇಂತೀ ಲೋಕವ ಹೊರಿಸೆಂದು ತಲೆವಗ್ಗವಿಕ್ಕಿಕೊಟ್ಟಾ, ಕಪಿಲಸಿದ್ಧಮಲ್ಲಿನಾಥಯ್ಯನವ್ಯಯ!
--------------
ಸಿದ್ಧರಾಮೇಶ್ವರ
ಕಾಲಾಗ್ನಿಯೆಂಬ ಕಾಡುಗಿಚ್ಚೆದ್ದು ಲೋಕವ ಸುಟ್ಟಿತ್ತೆಂದಡೆ ಶಿವಶರಣರಂಜರು. ಶಶಿಧರ ಮುನಿದು ಬಿಸುಗಣ್ಣ ತೆಗೆದಡೆ ಶಿವಶರಣರದ ಮನಸಿಗೆ ತಾರರು. ಅಸಮಾಕ್ಷಲಿಂಗವ ತಮ್ಮ ವಶಕ್ಕೆ ತಂದ ಶರಣರು, ಮುನಿದು ಉರಿಗಣ್ಣ ತೆಗೆದಡೆ, ಚತುರ್ದಶ ಭುವನದೊಳಗೆ ಆರೂ ಗುರಿಯಲ್ಲ. ಗುಹೇಶ್ವರಾ ನಿಮ್ಮ ಅರಿವಿನ ಬೆಳಗು ಬಿಸಿಯಾದಡೆ ಸಿದ್ಧರಾಮಯ್ಯದೇವರೆಂಬ ಶಿವಯೋಗಿಯ ಹೃದಯವೆ ಗುರಿ.
--------------
ಅಲ್ಲಮಪ್ರಭುದೇವರು
ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗೆ ತುಪ್ಪವಲ್ಲದೆ ತುಪ್ಪ ಬೆಣ್ಣೆಯಪ್ಪುದೆ? ತರು ಬೆಂದಲ್ಲಿ ಕರಿಯಲ್ಲದೆ, ಕರಿ ಬೆಂದಲ್ಲಿ ತರು ಉಂಟೆ? ಇದು ಅಘಟಿತ, ಅನಾಮಯ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ. ಆಕಾರವಿಡಿದು ಸಾಕಾರಸಹಿತ ನಡೆವೆ. ಹೊರಗೆ ಬಳಸಿ ಒಳಗೆ ಮರೆದಿಪ್ಪೆ. ಬೆಂದನುಲಿಯಂತೆ ಹುರಿಗುಂದದಿಪ್ಪೆ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಹತ್ತರೊಳಗೆ ಹನ್ನೊಂದಾಗಿ ನೀರತಾವರೆಯಂತಿಪ್ಪೆ.
--------------
ಅಕ್ಕಮಹಾದೇವಿ
ಇನ್ನಷ್ಟು ... -->