ಅಥವಾ

ಒಟ್ಟು 181 ಕಡೆಗಳಲ್ಲಿ , 37 ವಚನಕಾರರು , 164 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ? ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ? ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ? ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ? `ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬ ಲೋಕದ ಗಾದೆಮಾತಿನಂತೆ, ಸದ್ಗುರುಕಾರುಣ್ಯವಾದಡೂ ಸಾದ್ಥಿಸಿದವನಿಲ್ಲ , ಸಕಳೇಶ್ವರಾ.
--------------
ಸಕಳೇಶ ಮಾದರಸ
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ, ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ. ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ 93
--------------
ಬಸವಣ್ಣ
ನಿಷ್ಠೆಯ ಮರೆದರೇನಯ್ಯಾ ? ಲೋಕದ ಮನುಜರ ದೃಷ್ಟಿಗೆ ಸಿಲ್ಕಿ ಭ್ರಷ್ಟೆದ್ದುಹೋದರು. ತನು ಕಷ್ಟಮಾಡಿದರೇನಯ್ಯಾ ಮನ ನಿಷ್ಠವಾಗದನ್ನಕ್ಕ ? ತನು ಮನವೆರಡು ನಷ್ಟವಾಗಿ, ಘನವ ನೆಮ್ಮಿ, ನಿಮ್ಮ ನೆನಹು ನಿಷ್ಪತ್ತಿಯಾದ ಶರಣರ ಎನಗೊಮ್ಮೆ ತೋರಯ್ಯ, ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಎಂಜಲಮಾತ ನುಡಿವುತ್ತಿಪ್ಪ ಜಗದ ಜಂಗುಳದೊಳಗಿದಡೆ ಶೀಲವಂತನೆ ? ಬ್ಥಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು, ಮಕರಶೃಂಗಾರವ ಮಾಡಿದಡೆ ಮಹಂತನೆ ? ಲಿಂಗಶೃಂಗಾರವ ಮಾಡಿ, ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು. ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ, ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಅಷ್ಟಭೋಗಂಗಳ ಕಾಮಿಸಿ, ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ ಸ್ವಾನುಭಾವರ ಸುಖದೊಳಗಿರಬಲ್ಲಡೆ ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ. ಇಂದ್ರಿಯ ನಿರೂಡ್ಥೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ ನಿಚ್ಚಯ ದೃಡಚಿತ್ತದೊಳಿರಬಲ್ಲಡೆ ಕರಸ್ಥಲದಲ್ಲಿ ಧರಿಸುವುದಯ್ಯಾ. ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ ಉರಸ್ಥಲದಲ್ಲಿ ಧರಿಸುವುದಯ್ಯಾ. ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು ಶಿವಾನುಭಾವದ ಸುಖದೊಳಿರಬಲ್ಲಡೆ ಕಂಠಸ್ಥಲದಲ್ಲಿ ಧರಿಸುವುದಯ್ಯಾ. ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ. ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ ಅಮಳೋಕ್ಯದಲ್ಲಿ ಧರಿಸುವುದಯ್ಯಾ. ಶಿವತತ್ವದ ಮೂಲಜ್ಞಾನಸಂಬಂದ್ಥಿಗಳಪ್ಪ ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇಂತಪ್ಪ ನಿರ್ಣಯವನು ಸ್ವಾನುಭಾವ ಗುರುಮುಖದಿಂ ತಿಳಿದು ವಿಚಾರಿಸಿಕೊಳ್ಳದೆ, ಬ್ಥಿನ್ನಗುರುವಿನ ಕೈಯಲ್ಲಿ ಉಪದೇಶವ ಹಡದು, ಲಿಂಗವ ಪಡಕೊಂಡು ಗುರುಕಾರುಣ್ಯ ಉಳ್ಳವರೆಂದು ಲೋಕದ ಮುಂದೆ ಬೊಗಳುವ ಮೂಳಹೊಲೆಯರ ಕಟಬಾಯ ಸೀಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಹೊಡೆದಡೆ, ಎನ್ನ ಸಿಟ್ಟು ಮಾಣದು. ಅದೇನು ಕಾರಣವೆಂದಡೆ, ನೀವು ಪಡಕೊಂಡ ಗುರುವಿಗೆ ಗುರುಕಾರುಣ್ಯವಿಲ್ಲ. ಅವನ ಗುರುವಿಗೆ ಮುನ್ನವೇ ಗುರುಕಾರುಣ್ಯವಿಲ್ಲ. ನಿಮಗಿನ್ನಾವ ಕಡೆಯ ಗುರುಕಾರುಣ್ಯವೊ? ಎಲೆ ಮರುಳ ಮಾನವರಿರಾ ಗುರುಕಾರುಣ್ಯವಾದ ಬಳಿಕ ತನು-ಮನ-ಧನದಾಸೆ ಹಿಂದುಳಿದು ಗುರು-ಲಿಂಗ-ಜಂಗಮದಾಶೆ ಮುಂದುಗೊಂಡಿರಬೇಕು. ಗುರುಕಾರುಣ್ಯವಾದಡೆ ಆಣವಮಲ, ಮಾಯಾಮಲ, ಕಾರ್ಮಿಕಮಲಗಳ ಜರಿದು ಇಷ್ಟ-ಪ್ರಾಣ-ಭಾವದಲ್ಲಿ ಭರಿತವಾಗಬೇಕು. ಗುರುಕಾರುಣ್ಯವಾದಡೆ ಲಿಂಗವು ಆರಿಗೂ ತೋರದಿರಬೇಕು. ಇಷ್ಟುಳ್ಳಾತನೆ ಗುರುಕಾರುಣ್ಯ ಉಳ್ಳವನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ. ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು, ನಾವು ಜಂಗಮಲಿಂಗಿಗಳು, ನಾವು ಸದಾಚಾರಸದ್ಭಕ್ತರು ಎಂಬರಯ್ಯ. ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ, ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ, ಗುರು-ಹಿರಿಯರು ಜಂಗಮಲಿಂಗಿಗಳೆಂದು ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು, ಸದಮಲದ ಬೆಳಗ ತೋರೇವು ಎಂದು ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ, ಲಿಂಗಾಂಗಸಮರಸವ ತೋರಿ, ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ, ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ ಆಚರಣೆಯೆಂತಾಯಿತ್ತೆಂದೊಡೆ- ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ. ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ, ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ. ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು ಕಾಣದೆ ಕಮ್ಮರಿಬಿದ್ದಂತಾಯಿತಯ್ಯ. ಅದೇನು ಕಾರಣವೆಂದಡೆ, ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ, ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ. ಉಪಾದ್ಥಿಯುಳ್ಳವರು ಗುರುವಲ್ಲ ಶಿಷ್ಯರಲ್ಲ. ಉಪಾದ್ಥಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ, ಉಪಾದ್ಥಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜ್ಞಾನಸಂಪನ್ನರಾದವರಿಂಗೆ ಹೀನವೃತ್ತಿವುಂಟೇನಯ್ಯ? ಭಾವಬೆರಗಾದವರಿಂಗೆ ಲೋಕದ ಹಂಗುಂಟೇನಯ್ಯ? ಶಿವಜ್ಞಾನ ಉದಯವಾದ ಬಳಿಕ ಮಾತಿನ ಹಂಗುಂಟೇನಯ್ಯ? ತಾನುತಾನಾದ ಬಳಿಕ ಯಾರ ಹಂಗಿಲ್ಲವಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
--------------
ಅಲ್ಲಮಪ್ರಭುದೇವರು
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು ಆ ಜಗದ ಸ್ವರೂಪನೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಕೋಗಿಲೆಯ ತತ್ತಿಯನೊಡೆದು ಕಾಗೆ ಮರಿಯಮಾಡಿ ಸಲಹಿದಡೇನು ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ? ಲೋಕದ ಮಧ್ಯದಲ್ಲಿ ಅನಾದಿಶರಣನು ಲೋಕೋಪಕಾರಕ್ಕಾಗಿ ಜನಿಸಿದಡೇನು ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ ಮರಳಿ ಲೋಕವ ಬೆರೆಯನು ನೋಡಾ, ನಿಮ್ಮನರಿದ ಶಿವಜ್ಞಾನಿಶರಣನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ ! ಭವಿಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು, ಕೂಡಲಸಂಗನ ಶರಣರ ಒಕ್ಕುದ ಕೊಂಡು ಅನ್ಯವನಾಚರಿಸಿದಡೆ ತಪ್ಪದು ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
--------------
ಬಸವಣ್ಣ
ಮೂರು ಲೋಕದ ಮೇಲೆ ಒಂದು ಪಕ್ಷಿ ಕುಳಿತು ಐವರ ಸಂಗವ ಮಾಡಿ, ಸಾವಿರೆಸಳ ಮಂಟಪಕ್ಕೆ ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
`ಹೆಸರು ಹಾಲಯ್ಯ ಎರೆದುಂಬುದಂಬಿಲ' ಎಂಬ ಲೋಕದ ಗಾದೆಯ ಮಾತು ದಿಟವಾಯಿತಲ್ಲಾ ! ಮಾತು ಕಲಿತು ಮಂಡೆಯ ಬೋಳಿಸಿಕೊಂಡು ಊರ ಮಾರಿಯ ಮರನೇರಿದಂತೆ ಮಾಯೆಯ ಕೊರಳಲ್ಲಿ ಕಟ್ಟಿಕೊಂಡು ಘಟಸರಣಿಯ ಪಶುಗಳು ಜಂಗಮವೆಂದು ಸುಳಿವ ನಾಚಿಕೆಯ ನೋಡಾ ಗುಹೇಶ್ವರ
--------------
ಅಲ್ಲಮಪ್ರಭುದೇವರು
ಲೋಕದ ನುಡಿ ತನಗೆ ಡೊಂಕು, ತನ್ನ ನುಡಿ ಲೋಕಕ್ಕೆ ಡೊಂಕು. ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ. ಕಪಾಲದೊಳಗೆ ಉಲುಹಡಗಿದ, ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು.
--------------
ಚನ್ನಬಸವಣ್ಣ
ಇನ್ನಷ್ಟು ... -->