ಅಥವಾ

ಒಟ್ಟು 47 ಕಡೆಗಳಲ್ಲಿ , 20 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಶಿವಲಿಖಿತಕ್ಕೆ ಸಿಕ್ಕು-ವಕ್ರಗಳುಂಟೇನಯ್ಯ ? ಭವಭವದಲ್ಲಿ ಬಂದರು ಬ್ರಹ್ಮ ವಿಷ್ಣು ರುದ್ರರು, ಮಾರ್ಕಂಡೇಯಗೆ ಮರಣ ತಪ್ಪುವುದೆ ? ರವಿ ಚಂದ್ರರ್ಕಗಳಿಗೆ ರಾಹು ಕೇತು ಅಡರದೆ ಬಿಡುವುದೆ ? ಭುವನದ ಹೆಪ್ಪುವೊಡದು ಭೂತಳವೊಂದಾಗದೆ ? ದಿವಾರಾತ್ರಿಯೇಕ ದೀಪ್ತಿ ; ಏಕೋವರ್ಣ ಶಾಂತಕ್ಕೆ ಪವಿತ್ರ ಅಪವಿತ್ರ ಲೋಕಕ್ಕೆ ಬ್ಥಿನ್ನ ಕಾಣೈ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಭಕ್ತಿಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ. ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ ಎನ್ನ ಗುರು ಚೆನ್ನಬಸವಣ್ಣನು. ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
>ಲಿಂಗ ಲಿಂಗವೆಂದಲ್ಲಿಯೇ ತಪ್ಪಿತ್ತು, ಜಂಗಮ ಜಂಗಮವೆಂದಲ್ಲಿಯೇ ತಪ್ಪಿತ್ತು, ಪ್ರಸಾದ ಪ್ರಸಾದವೆಂದಲ್ಲಿಯೇ ತಪ್ಪಿತ್ತು. ಈ ತ್ರಿವಿಧದ ನಿಕ್ಷೇಪದ ಸಂಚವ ಬಲ್ಲರೆ ಈ ಲೋಕದಲ್ಲಿ ಇದ್ದರೇನು? ಆ ಲೋಕಕ್ಕೆ ಹೋದರೇನು ? ಆ ಲೋಕದಿಂದ ಈ ಲೋಕಕ್ಕೆ ಬಂದರೇನು ? ಹದಿನಾಲ್ಕು ಭುವನದೊಳಗಿದ್ದ ನಿಸ್ಸಾರಮಂ ಬಿಟ್ಟು ಲಿಂಗಸಾರಾಯ ಮೋಹಿಯಾಗಿ ಕೂಡಲಚೆನ್ನಸಂಗನಲ್ಲಿ ನಿರ್ಲೇಪನಾದ ಶರಣ.
--------------
ಚನ್ನಬಸವಣ್ಣ
ಲೋಕದ ನುಡಿ ತನಗೆ ಡೊಂಕು, ತನ್ನ ನುಡಿ ಲೋಕಕ್ಕೆ ಡೊಂಕು. ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ. ಕಪಾಲದೊಳಗೆ ಉಲುಹಡಗಿದ, ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು.
--------------
ಚನ್ನಬಸವಣ್ಣ
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೊ. ನರಮಾನವರು ಕೊಡುವರೆಂಬವರ ಬಾಯಲಿ ಬಾಲಹುಳುಗಳು ಸುರಿಯವೆ ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ.
--------------
ಬಸವಣ್ಣ
ಶರಣನೆನಿಸಿಕೊಂಬುದು ಕರ ಅರಿದು ನೋಡಯ್ಯಾ ! ಸತ್ಯಸದ್ಭಕ್ತರೊಳಡಗಿ ತನ್ನ ಕುರುಹ ಲೋಕಕ್ಕೆ ತೋರದಿರಬೇಕು. ಸಕಲಜೀವರಾಶಿಗಳಿಗೆ ರೋಷ ಹರುಷವ ತಾಳದಿರಬೇಕು. ಇಂತಪ್ಪ ಶರಣನಲ್ಲಿ ಸನ್ನಿಹಿತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ ಎನ್ನ ಜ್ಞಾನಕ್ಕೆ ಸ್ವಾನುಭಾವೀಕ್ಷೆಯ ಮಾಡಿ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶವಿಮೋಚ[ನ]ನೆ, ಅನ್ವಯ ಮನದ ಸರ್ವಾಂಗಲೋಲುಪ್ತ, ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.
--------------
ಸಿದ್ಧರಾಮೇಶ್ವರ
ಗುರುಲಿಂಗ ಜಂಗಮವೆಂಬರಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ ? ಸ್ಥಿರಚಿತ್ತದಿಂದ ಜೀವನೆ ಪರಮ, ಪರಮನೆ ಜೀವನೆಂದು ಅರಿವುದು. ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ ? ಅದಲ್ಲದೆ ಏಕವಾಕ್ಯನು ಅಲ್ಲ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮೂರುಲೋಕದ ಮೋಹಿನಿ ಆರುಲೋಕದ ಅಂಗನೆಯರ ಸಂಗವ ಮಾಡಿ, ಮೂರುಲೋಕದ ಮೋಹವ ಮರೆದು ತಾ ಸತ್ತಳು ನೋಡಾ. ಮೂರುಲೋಕದ ಮೋಹಿನಿ ಸತ್ತುದ ಕಂಡು, ಆರುಲೋಕದ ಅಂಗನೆಯರು, ನಾವೀ ಲೋಕದಲ್ಲಿರಲಾಗದೆಂದು ಮೀರಿದ ಲೋಕಕ್ಕೆ ಹೋಗಿ, ಆರೂಢನ ನೋಡುತ್ತ ನೋಡುತ್ತ ಆರೂರವರೂ ಸತ್ತರು. ಇದು ಮೀರಿದ ಲಿಂಗೈಕ್ಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ : ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು. ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ. ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು. ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ. ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು. ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ. ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ. ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ. ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಪರಧನ-ಪರಸತಿ-ಪರನಿಂದೆಗಳಿರೆ ಮುಂದೆ ನರಕವು ಎಂದು ಗುರುವಾಕ್ಯ ಸಾರುತ್ತಿದೆ. ಪರಧನ-ಪರಸತಿ-ಪರಭೂಮಿಗಳುಪಿ ಹತವಾಗಿ ಹೋದ ದುರ್ಯೋಧನ. ಹರಿವ ನದಿಯ ಮಿಂದು ಗೋದಾನ ಮಾಡುವ ನರಕಿಗಳ ನುಡಿಯ ಕೇಳಲಾಗದು. ಹದಿನಾಲ್ಕು ಲೋಕಕ್ಕೆ ಕರ್ತೃ ಶಿವನೊಬ್ಬನೇ ಎಂದು ಶ್ರುತಿಗಳು ಪೊಗಳುತ್ತಿಹವು. ಅರತ ದೇವರ ಪೂಜೆಯ ಮಾಡಿ, ಇಷ್ಟಲಿಂಗವ ಮರೆವ ಮೂಳ ಹೊಲೆಯರಿಗೆ ಮುಕ್ತಿ ಆಗದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನಷ್ಟು ... -->