ಅಥವಾ

ಒಟ್ಟು 26 ಕಡೆಗಳಲ್ಲಿ , 10 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಗಕ್ರಿಯಾಸಮಯದಲ್ಲಿ ಶಿವಶಕ್ತಿಸಂಪುಟ. ವಿೂರಿದಕ್ರಿಯಾಸಮಯದಲ್ಲಿ ಶಿವಲಿಂಗಸಂಪುಟ. ಉಭಯಕ್ರಿಯಾನುಭಾವ ನೆಲೆಗೊಂಡಲ್ಲಿ ಮನಲಿಂಗಸಂಪುಟ. ಮನ ಲಿಂಗ ಲೀಯವಾದ ಬಳಿಕ ತೆರಹಿಲ್ಲದೆ ಕುರುಹಳಿದ ಲಿಂಗೈಕ್ಯ. ಸುತ್ತಿದ ಪ್ರಪಂಚು ಮೆಲ್ಲಮೆಲ್ಲನೆ ಅಚ್ಚುಗವಿಲ್ಲದೆ ಹಿಂಗಿದವು ಕೂಡಲಚೆನ್ನಸಂಗಾ ಲಿಂಗೈಕ್ಯಂಗೆ.
--------------
ಚನ್ನಬಸವಣ್ಣ
ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು. ಲೆಕ್ಕವಿಲ್ಲದ ಸನ್ನೆಗೆ ದ್ಥಿಕ್ಕರಿಸಿ ನಿಲುವದು. ಕುಟಿಲ ಕವಳವನೊಲ್ಲದು. ಮದ್ದು ಮರುಡೆ ಬೆಳುವೆಯ ಗುಣ ಗಾಳಿಯ ಲೆಕ್ಕಿಸದು. ಇಂತೀ ಅರಿಗುರಿಯ ಕೋಡ ಕಿತ್ತು ಒಂದ ಹಿಂದಕ್ಕಿರಿಸಿ, ಒಂದ ಹಿಡಿದಾಡ ಬಂದೆ. ಆ ಕೋಡಿನಲ್ಲಿ ನಾನಾ ವರ್ಣದ ಶಬ್ದದ ಉಲುಹು. ಇಂತಿವೆಲ್ಲವ ಒಂದುಂಗುರದಲ್ಲಿ ಸೇರಿಸಿ ಅಂಗುಲಿಗಳಲ್ಲಿ ಮುಟ್ಟಿಯಾಡುತ್ತ ಬಂದೆ, ಮೇಖಲೇಶ್ವರಲಿಂಗದಲ್ಲಿ ಲೀಯವಾದ ಶರಣರ ನೋಡಿಹೆನೆಂದು
--------------
ಕಲಕೇತಯ್ಯ
ಅಂದು ಮೊದಲಾಗಿ ಇಂದು ಕಡೆಯಾಗಿ ಆ ಪರಾಪರದಲ್ಲಿ ಲೀಯವಾದ ಶರಣರಿಗೆ ಅಂಥಾದಿಂಥಾದೆಂದು ಹೇಳಬಾರದು. ಉಪಮಾತೀತವ ಹೇಂಗಿದ್ದುದೆಂದಡೆ, ಹಾಂಗೆ ಇದ್ದುದು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: ``ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ. ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ ! ಗುಹೇಶ್ವರ ಸಾಕ್ಷಿಯಾಗಿ, ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು ತೋರದಾಗಿ, ಅದೇನು ಕಾರಣವೆಂದಡೆ: ಆತನ ಮನ ಲಿಂಗದಲ್ಲಿ ಲೀಯವಾದ ಕಾರಣ. ಸೂರ್ಯಂಗೆ ಶೀತರುಚಿಗಳು ತೋರಿದರೂ, ಚಂದ್ರನಿಗೆ ಉಷ್ಣರುಚಿಗಳು ತೋರಿದರೂ, ಅಗ್ನಿ ತಲೆಕೆಳಕಾಗಿ ಉರಿದಡೆಯೂ, ತೋರುವ ನಾನಾ ಆಶ್ಚರ್ಯಂಗಳೆಲ್ಲ ಮಾಯಾವಿಲಾಸವೆಂದರಿದ ಶರಣಂಗೆ ಒಂದಾಶ್ಚರ್ಯವೂ ತೋರದಾಗಿ ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅರಿವಿನೊಳಗಡಗಿದನು.
--------------
ಸ್ವತಂತ್ರ ಸಿದ್ಧಲಿಂಗ
ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ. ಲಿಂಗವೆ ಅಂಗ, ಆ ಅಂಗವೆ ಆಗಮ್ಯ ಅಗೋಚರ ಅಪ್ರಮಾಣ. ಲಿಂಗಸಂಗವೆ ಜಂಗಮಲಿಂಗ. ಜಂಗಮ ಒಂದೆರಡೆಂದು ಸಂದು ಮಾಡಲಂಜಿ ಬೆರಗಾಗಿರಲು, ಬೇಗೆಯೆದ್ದು ಬೆಳಗಾಯಿತ್ತ ಕಂಡು, ಕಣ್ಣು ಮುಚ್ಚಿ ಕರಗಿ ಪ್ರಾಣಲಿಂಗ ಲೀಯವಾದ, ಬಸವಪ್ರಿಯ ಕೂಡಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಮುಟ್ಟಿತ್ತು ಕೆಟ್ಟಿತ್ತೆಂದಡೆ, ಇನ್ನರಸುವ ಠಾವಾವುದಯ್ಯಾ ? ತನುವ ಮರೆದಡೆ, ನೆನಹಿನೊಳಗದೇನೊ ? ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ ? ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ ? ಅರಿವು ಲಿಂಗದಲ್ಲಿ ಪ್ರತಿಷೆ*ಯಾಗಿ, ನಿರ್ಲೇಪನಾಗಿ, ಮಹಾಲಿಂಗ ಕಲ್ಲೇರ್ಶವರನಲ್ಲಿ ಲೀಯವಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ ಕೂಡಿದ ಬಳಿಕ ಕೂಡಿಹೆನೆಂಬ ಅವಸ್ಥೆಯುಂಟೆ ಹೇಳಾ?. ಕ್ಷುಧೆಯಡಿಸಿದವ ಭೋಜನವ ಮಾಡಿದ ಬಳಿಕ ಮತ್ತೆ ಭೋಜನವ ಮಾಡಿಹೆನೆಂಬ ಅವಸ್ಥೆಯುಂಟೇ ಹೇಳಾ?. ರುsುಳ ಹತ್ತಿದವ ಉದಕದಲ್ಲಿ ಮುಳುಗಿದ ಬಳಿಕ ಮತ್ತೆ ಉದಕದಲ್ಲಿ ಮುಳುಗಿಹೆನೆಂಬ ಅವಸ್ಥೆಯುಂಟೆ ಹೇಳಾ?. ಶಿವನ ನೆನೆನೆನೆದು ಮನ ಶಿವನಲ್ಲಿ ಲೀಯವಾದ ಬಳಿಕ ಮತ್ತೆ ನೆನೆದಿಹೆನೆಂಬ ಅವಸ್ಥೆಯುಂಟೆ ಹೇಳಾ. ಅನುಪಮ ನಿಜಾನುಭವ ಸಂಧಾನ ನಿಂದ ನಿಜವು ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.
--------------
ಸ್ವತಂತ್ರ ಸಿದ್ಧಲಿಂಗ
ತಾ ಗುರುಲಿಂಗಜಂಗಮದ ಪಾದಕ್ಕೆರಗಿ ಲೀಯವಾದ ಬಳಿಕ, ಇದು ಚಿಹ್ನೆ ನೋಡಯ್ಯಾ. ಗುರುಲಿಂಗಜಂಗಮದ ಪಾದವೆ ತನ್ನ ಸರ್ವಾಂಗದಲ್ಲಿ ಅಚ್ಚೊತ್ತಿದಂತಾಯಿತ್ತಾಗಿ, ಅಲ್ಲಿಯೆ ಪಾದಾರ್ಚನೆ, ಅಲ್ಲಿಯೆ ಪಾದೋದಕ ಸೇವನೆ. ಬೇರೆ ಪೃಥಕ್ ಎಂಬುದಿಲ್ಲಯ್ಯ. ಅದೆಂತೆಂದಡೆ: ಪರಮಗುರುಲಿಂಗಜಂಗಮದ ಸಂಬಂಧ ಸಮರತಿಯ ಸೋಂಕಿನಲ್ಲಿ, ಪರಮಾನಂದಜಲವೆ ಪ್ರವಾಹವಾಗಿ, ಸರ್ವಾಂಗದಲ್ಲಿ ಪುಳಕವಾಗಿ ಹರಿವುತ್ತಿರಲು, ಆ ಪರಮಸುಖಸೇವನೆಯ ಮಾಡುವಲ್ಲಿ, ಪಾದೋದಕ ಸೇವನೆಯೆನಿಸಿತ್ತಯ್ಯ. ಈ ಪರಮಾಮೃತದ ತೃಪ್ತಿ ಬಸವಣ್ಣಂಗಾಯಿತ್ತು. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜ್ಞಾತೃ ಜ್ಞಾನ ಜ್ಞೇಯ ಮೂರೊಂದಾದುದೇ ಜೀವ ಪರಮರೈಕ್ಯವಯ್ಯ. ಆ ಜೀವ ಪರಮರೈಕ್ಯವಾದುದೆ ಮನ ಲೀಯ. ಮನ ಲೀಯವಾದ ಬಳಿಕ ಇನ್ನು ಧ್ಯಾನಿಸಲುಂಟೆ? ಅರಿಯಲುಂಟೆ ಹೇಳ? ಬಾಹ್ಯಾಭ್ಯಂತರ ಇಂದ್ರಿಯದ ಮನದ ವಿಕಾರವಳಿದು ಅವಿದ್ಯಾವಾಸನೆಯಡಗಿ, ಅಹಂಕಾರ ಉಡುಗಿದ ಜೀವನ್ಮುಕ್ತಂಗೆ ಸರ್ವಶೂನ್ಯವಾಗಿ, ಸಮುದ್ರಮಧ್ಯದ ತುಂಬಿದ ಕೊಡದಂತೆ ಇದ್ದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ನಿತ್ಯಾನಂದ ನಿಜದಾಕಾರದ ಪರಮ ನಿರ್ಮಲ ಲಿಂಗತೇಜದೊಳಗೆ ಮನವಳಿದು ಲೀಯವಾದ ಮತ್ತೆ ತಾನೆಂಬುದಿಲ್ಲ. ಅನಾದಿ ಅವಿದ್ಯವ ಮೀರಿ ನಿಂದ ಪರಮಾನಂದ ಜ್ಞಾನಪಾದೋದಕ ರೂಪು ತಾನೆಯಲ್ಲದೆ ಅನ್ಯವಿಲ್ಲ. ಇದು ಕಾರಣ, ಅರಿವುದೊಂದಿಲ್ಲ ಅರುಹಿಸಿಕೊಂಬುದೊಂದಿಲ್ಲ. ಅರಿವ ಅರುಹಿಸಿಕೊಂಬುವ ಈ ಉಭಯ ಒಂದಾದ ನಿಲವೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬೆನು.
--------------
ಸ್ವತಂತ್ರ ಸಿದ್ಧಲಿಂಗ
ಸಮರಸ ಪಾದೋದಕದಲ್ಲಿ ಲೀಯವಾದ ಶರಣಂಗೆ ಭಿನ್ನವಿಟ್ಟರಿವ ಪಾದೋದಕದ ಕಟ್ಟಳೆ ಭಾವಿಸ, ಕಾರ್ಯಕಾರಣ ನಷ್ಟವಾದುದಾಗಿ. ದಶವಿಧಪಾದೋದಕವನರಿಯದಿರ್ದ ಪಾದೋದಕ ತಾನೆಯಾಗಿ, ಗುರುನಿರಂಜನ ಚನ್ನಬಸವಲಿಂಗಕ್ಕಾವರಿಸಿ ಅಡಗಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ ಕಾಯವಿಲ್ಲ, ಕಾಯವಿಲ್ಲಾಗಿ ಕರ್ಮವಿಲ್ಲ. ಆದೆಂತೆಂದಡೆ: ಕಾರ್ಯವಿಲ್ಲದ ಕುಲಾಲಚಕ್ರಭ್ರಮಣದಂತೆ, ದೇಹವಿಡಿದು ಚರಿಸಿದನೆಂದಡೆ ದೇಹಿಯೆನಬಹುದೇ ಶರಣನಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಬೇರಿಲ್ಲಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ, ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ, ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ, ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ, ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ, ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ, ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ, ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ, ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ, ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ, ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ, ಲೀಯವ ಮಾಡಿದರು ನಮ್ಮ ಶರಣರು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ? ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇನ್ನಷ್ಟು ... -->