ಅಥವಾ

ಒಟ್ಟು 32 ಕಡೆಗಳಲ್ಲಿ , 14 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ, ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ? ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ, ಆರಾರೆಂದಂತೆ ಆರೈಕೆಯಲ್ಲಿದ್ದು ; ತಾನು ತಾನಾದವಂಗೆ ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು ಮಜ್ಜನಕ್ಕೆರೆವರೆಲ್ಲ ಶೀಲವಂತರೆ ? ಭವಿಪಾಕವನೊಲ್ಲೆವೆಂದು ಭುಂಜಿಸುವ ಉದರಪೋಷಕರೆಲ್ಲ ಶೀಲವಂತರೆ? ವರಲ್ಲ, ನಿಲ್ಲು ಮಾಣು. ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ
--------------
ಚನ್ನಬಸವಣ್ಣ
ಕೈ ತುಂಬಿ ಹಿಡಿದು, ಕಂಗಳು ತುಂಬಿ ನೋಡಿ, ಮನ ತುಂಬಿ ಹಾರೈಸಿ, ಎಡೆಬಿಡುವಿಲ್ಲದೆ ಅರಿದ ಮತ್ತೆ ಆ ಕುರುಹು ಕೈಗೆ ಆದಿಯಾಗಿ, ಕಂಗಳಿಗೀಡಾಗಿ, ಆತ್ಮನರಿವಿನಲ್ಲಿ ಉಭಯವಳಿದು ನಿಂದಲ್ಲಿಯೆ ಲೀಯವಾಗಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು ಸಾಯದಕಿನ್ನ ಮುನ್ನವೆ ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವ ಮಂತ್ರವನು ಸಂಬಂಧಿಸಿಕೊಳ್ಳಬೇಕಲ್ಲದೆ, ಸತ್ತ ಶವಕ್ಕೆ ಭುಜಪತ್ರದ ಮೇಲೆ ಪ್ರಣಮವ ಬರದು ಆ ದೇಹಕ್ಕೆ ಹಚ್ಚಿದರೆ ಆ ದೇಹವು ಮಂತ್ರದೇಹವಾಗಬಲ್ಲದೆ? ಆಗಲರಿಯದು. ಅದೆಂತೆಂದಡೆ: ಚಿತ್ರಕನು ಕಾಗದದ ಮೇಲೊಂದು ಚಿತ್ರವ ಬರೆದು ಗೋಡೆಗೆ ಹಚ್ಚಿದರೆ ಆ ಗೋಡೆಯು ಚಿತ್ರವಾಗಲರಿಯದು ಎಂಬ ಹಾಗೆ. ಉಭಯವು ಒಂದೇ ಆದ ಕಾರಣ; ಅಂತಪ್ಪ ಮೂಢಾತ್ಮರ ಮೇಳಾಪವ ವಿಸರ್ಜಿಸಿದ ಶಿವಶರಣನು ದೇಹದಲ್ಲಿರುವ ಪರಿಯಂತರದಲ್ಲಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವಮಂತ್ರವನು ಮುಳ್ಳೂರಲಿಕ್ಕೆ ಇಂಬಿಲ್ಲದ ಹಾಗೆ ಸ್ವಾಯತವ ಮಾಡಿಕೊಂಡು ಆ ಮಂತ್ರದಲ್ಲಿ ಲೀಯವಾಗಿ ಪ್ರಪಂಚವನಾಚರಿಸುತ್ತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊನ್ನು ತನ್ನ ಬಣ್ಣದ ಲೇಸುವ ತಾನರಿಯದಂತೆ ಬೆಲ್ಲ ತನ್ನ ಮಧುರವ ತಾನರಿಯದಂತೆ ಪುಷ್ಪ ತನ್ನ ಪರಿಮಳವ ತಾನರಿಯದಂತೆ ವಾರಿಶಿಲೆ ಅಂಬುವಿನೊಳು ಲೀಯವಾದಂತೆ ಮನವು ಮಹಾಲಿಂಗದಲ್ಲಿ ಲೀಯವಾಗಿ ಮನವಳಿದು ನೆನಹುಳಿದು ನೆನಹು ನಿಃಪತಿಯಾಗಿ ನಾನು ನೀನಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ರಸವಾದಂಗಳ ಕಲಿತಲ್ಲಿ ಲೋಹಸಿದ್ಧಿಯಲ್ಲದೆ ರಸಸಿದ್ಧಿಯಾದುದಿಲ್ಲ. ನಾನಾ ಕಲ್ಪಯೋಗ ಅದೃಶ್ಯಕರಣಂಗಳ ಕಲಿತಲ್ಲಿ ಕಾಯಸಿದ್ಧಿಯಲ್ಲದೆ ಆತ್ಮಸಿದ್ಧಿಯಾದುದುಂಟೆ? ನಾನಾ ವಾಗ್ವಾದಂಗಳಿಂದ ಹೋರಿ ಮಾತಿನ ಮಾಲೆಯಾಯಿತಲ್ಲದೆ ಆತ್ಮನಿಹಿತವಾದುದಿಲ್ಲ. ನೀ ನಾನೆಂದಲ್ಲಿ ನೀನು ನಾನಾದೆಯಲ್ಲದೆ ನಾನು ನೀನಾದುದಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವಾದೆಯಲ್ಲದೆ ಲೀಯವಾಗಿ ಆ ಲಿಂಗನೇ ಆದುದಿಲ್ಲ.
--------------
ಗೋರಕ್ಷ / ಗೋರಖನಾಥ
ಅಂಗೈಯ ನೋಟದೊಳು ಕಂಗಳು ನಟ್ಟು, ಕಂಗಳ ತೇಜ ಲಿಂಗದಲ್ಲರತು, ಲಿಂಗದ ಪ್ರಭೆಯೊಳಗೆ ಅಂಗವೆಲ್ಲ ಲೀಯವಾಗಿ, ಸಂಗನಿಸ್ಸಂಗವೆಂಬ ದಂದುಗ ಹರಿದು, ಹಿಂದು ಮುಂದೆಂಬ ಭಾವವಳಿದು ನಿಂದ, ನಿಜದ ನಿರಾಳದಲ್ಲಿ ಪ್ರಾಣ ಸಮರತಿಯಾಗಿಪ್ಪ ಕಪಿಲಸಿದ್ಧಮಲ್ಲಿನಾಥನಲ್ಲಿ, ಪ್ರಭುದೇವರ ಶ್ರೀಪಾದಕ್ಕೆ `ನಮೋ ನಮೋ' ಎಂದು ಬದುಕಿದೆ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ಮನವು ಮಹದೊಳಗೆ ಲೀಯವಾಗಿ ಘಟವಿಡಿದು ಸುಳಿದಾಡುವ ಮಹಾಮಹಿಮಂಗೆ ಅಹುದಾಗದೆಂಬ ಭ್ರಾಂತೇಕೊ ಹಿಡಿತಹುದು, ಬಾರದಡೆ ಶಿರವನರಿದು ತಹುದು. ಕೂಡಲಸಂಗಮದೇವರು ಬಲ್ಲಂತೆ ಮಾಡಲಿ.
--------------
ಬಸವಣ್ಣ
ಅಂಗ ಸರ್ವಾಂಗಭಾವವ ಮುಟ್ಟುವಲ್ಲಿ, ಆ ಭಾವ ತನ್ನಯ ಕ್ರೀಯ ನಿಬದ್ಧಿಸಿ ಹಿಡಿವಲ್ಲಿ, ಬಾಹ್ಯದ ಕ್ರೀ, ಅಂತರಂಗದ ಅರಿವು, ಉಭಯ ಏಕ ಸನ್ಮತವಾಗಿ, ಸರ್ವವ್ಯವಧಾನಂಗಳಲ್ಲಿ ಸರ್ವವ ಹಿಡಿದುಬಿಡುವಲ್ಲಿ, ತನ್ನ ಕ್ರೀಗೆ ಒಳಗಾದುದ ಒಡಗೂಡುವಲ್ಲಿ, ಸಹಭೋಜನದ ಸಮವನರಿತು, ಭರಿತಾರ್ಪಣವ ಅರ್ಪಿತವನರಿತು, ತಾ ಲಕ್ಷಿಸಿದ ವ್ರತದ ಕಟ್ಟಳೆಯ ಕಂಡು ತನು ಕ್ರೀಯಲ್ಲಿ ಶುದ್ಧವಾಗಿ, ಆತ್ಮ ಅರಿವಿನಲ್ಲಿ ಶುದ್ಧವಾಗಿ, ಅರಿವು ಆಚಾರದಲ್ಲಿ ಲೀಯವಾಗಿ, ಆ ಸದ್ಭಾವವೆ ಏಲೇಶ್ವರಲಿಂಗದ ವ್ರತದ ಸಂಬಂಧ.
--------------
ಏಲೇಶ್ವರ ಕೇತಯ್ಯ
ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣವಿರೋಧಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದನ್ನಕ್ಕ ಎಂತು ಮಾಹೇಶ್ವರನಪ್ಪನಯ್ಯಾ ? ಕೂಡಲಚೆನ್ನಸಂಗಯ್ಯನಲ್ಲಿ, ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ
--------------
ಚನ್ನಬಸವಣ್ಣ
ಎನ್ನ ಸಂಸಾರಸೂತಕವ ತೊಡೆದು, ನಿಜಲಿಂಗದಲ್ಲಿ ನಿರಹಂಕಾರವೆಂಬ ಘನವ ತೋರಿದನಯ್ಯಾ ಒಬ್ಬ ಶರಣನು. ಎನಗಾರು ಇಲ್ಲೆಂದು ಪ್ರಭುದೇವರೆಂಬ ಒಬ್ಬ ಶರಣನ ಎನ್ನ ಕಣ್ಣಮುಂದೆ ಕೃತಾರ್ಥನ ಮಾಡಿ ಸುಳಿಸಿದನಯ್ಯಾ ಆ ಶರಣನು. ಆ ಶರಣನ ಕೃಪೆಯಿಂದ ಪ್ರಭುದೇವರೆಂಬ ಘನವ ಕಂಡು, ಮನ ಮನ ಲೀಯವಾಗಿ ಘನ ಘನ ಒಂದಾದ ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯನೆಂಬ ಮಹಿಮಂಗೆ ನಮೋ ನಮೋ ಎನುತಿರ್ದೆನು.
--------------
ಚನ್ನಬಸವಣ್ಣ
ಲಿಂಗಗಂಭೀರವಾದ ಶರಣ ಅಂಗವಿಕಾರವನರಿಯ, ಲಿಂಗಸನುಮತವಾದ ಶರಣ ಇಂದ್ರಿಯವಿಕಾರವನರಿಯ. ಲಿಂಗಗಂಭೀರವಾಗಿ, ಮನವಲ್ಲಿಯೆ ಲೀಯವಾಗಿ, ಅವಧಾನವನರಿಯ ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಸೀಮೆ ಸಂಗಮದಲ್ಲಿ ಲೀಯವಪ್ಪಾತ ಗುರು. ಆರೂಢದೈಕ್ಯದಲಿ ಲೀಯವಾಗಿ ಆರಾರನತಿಗಳೆದ ಆನಂದಮೂರ್ತಿಯನು ತೋರಬಲ್ಲಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->