ಅಥವಾ

ಒಟ್ಟು 65 ಕಡೆಗಳಲ್ಲಿ , 13 ವಚನಕಾರರು , 59 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ ? ಆವುದು ಕಿರಿದೆಂಬೆ ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಲೋಕದ ನುಡಿ ತನಗೆ ಡೊಂಕು, ತನ್ನ ನುಡಿ ಲೋಕಕ್ಕೆ ಡೊಂಕು. ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ. ಕಪಾಲದೊಳಗೆ ಉಲುಹಡಗಿದ, ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು.
--------------
ಚನ್ನಬಸವಣ್ಣ
ಹೊಯ್ದ ಭೇರಿಯ ನಾದ ಸಾಗಿತ್ತು ಎಲ್ಲಿಗೆ ? ಅದನಾರು ಬಲ್ಲರು ವೇದ್ಥಿಸಿದ ಠಾವ ? ಗುಡುಗಿನೊಳಗಣ ಗುಲುಗಡಗಿದ ಭೇದವ ? ಅದು ಪೊಡವಿಯೊಳಗೋ, ಅಂಬರದಂಗವೋ ? ಅದರ ಸಂಗವನಾರು ಬಲ್ಲರು ? ಹೊಯ್ದ ಭೇರಿಯ ಕಾಣಬಹುದಲ್ಲದೆ, ನಾದವಡಗಿದ ಠಾವ ಭೇದಿಸಬಹುದೆ ಅಯ್ಯಾ ? ಆ ಶರಣರಿರವು ನಾದಭೇದದಂತೆ, ಗುಡುಗು ಗರ್ಜನೆಯಲ್ಲಿ ಅಡಗಿದಂತೆ, ಇದನೊಡಗೂಡಬಲ್ಲಡೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದೊಳಗಣ ಕಿಚ್ಚು ನನೆಯಿತ್ತು, ಕಿಚ್ಚಿನೊಳಗಣ ತೇಜ ಬೆಂದಿತ್ತು;_ತಿಳಿದು ನೋಡಾ ಅದೇನೊ ಅದೆಂತೊ ? ಸಂಬಂಧಿಗಳು ತಿಳಿಯರು ನೋಡಾ. ಬೆಳಗಿನೊಳಗಣ ಕತ್ತಲೆಯಡಗಿತ್ತು; ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.
--------------
ಅಲ್ಲಮಪ್ರಭುದೇವರು
ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ. ಆ ನಾದದಿಂದ ಆಕಾಶ ಪುಟ್ಟಿತ್ತು . ಆಕಾಶದಿಂದ ವಾಯು ಪುಟ್ಟಿತ್ತು , ವಾಯುವಿನಿಂದ ಅಗ್ನಿ ಪುಟ್ಟಿತ್ತು . ಅಗ್ನಿಯಿಂದ ಅಪ್ಪು ಪುಟ್ಟಿತ್ತು , ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು. ಪೃಥ್ವಿಯಿಂದ ಇರುವೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವಂಗಳು ಪುಟ್ಟಿದವು. ಅದೇನು ಕಾರಣವೆಂದಡೆ, ರಸಗಂಧದಿಂದ ರೂಪಾದವು, ಅಗ್ನಿಕಳೆಯಾಯಿತ್ತು . ವಾಯು ಚೈತನ್ಯವಾಯಿತ್ತು . ಆಕಾಶ ನಾದವಾಯಿತ್ತು. ಇಂತಿದರೊಳಗೆ ನಮ್ಮ ದೇವ ಇವರೊಂದರಂತೆಯೂ ಅಲ್ಲ . ಪಂಚತತ್ವವನಿಳುಹಿ, ಆತ್ಮತತ್ವ ಅನಾತ್ಮನೊಳು ಕೂಡಿ, ಅನಾಮಯಲಿಂಗ ಕಾಣಬಹುದು. ಅನಾಮಯಲಿಂಗವ ಕಂಡ ಬಳಿಕ, ಅದೇ ಲಿಂಗೈಕ್ಯವು. ಇದು ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಬಾಲಕಿ ಹಾಲ ಸವಿದಂತೆ, ಮರುಳಿನ ಮನದ ನೆನಹಿನಂತೆ, ಮೂಗ ಕಂಡ ಕನಸಿನಂತೆ, ಮೈಯರಿಯದ ನೆಳಲಿನಂತೆ, ಬಂಜೆಯ ಮನದ ಸ್ನೇಹದಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಎನಗೆ ಲಿಂಗೈಕ್ಯವು.
--------------
ಹಾವಿನಹಾಳ ಕಲ್ಲಯ್ಯ
ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ, ಅನಲ ನುಂಗಿದ ತಿಲದಂತೆ, ವರುಣನ ಕಿರಣ ಕೊಂಡ ದ್ರವದಂತೆ, ಇನ್ನೇನನುಪಮಿಸುವೆ ? ಇನ್ನಾರಿಗೆ ಹೇಳುವೆ ? ನೋಡುವದಕ್ಕೆ ಕಣ್ಣಿಲ್ಲ, ಕೇಳುವದಕ್ಕೆ ಕಿವಿಯಿಲ್ಲ, ಕೀರ್ತಿಸುವದಕ್ಕೆ ಬಾಯಿಲ್ಲ, ಏನೂ ಎಂಬುದಕ್ಕೆ ತೆರಪಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವು.
--------------
ಮೋಳಿಗೆ ಮಾರಯ್ಯ
ಗುರುವಿಂಗೆ ಗುರುವಾಗಿ ಗುರುಪ್ರಸಾದವ ಕೊಂಬುದು, ಲಿಂಗಕ್ಕೆ ಲಿಂಗವಾಗಿ ಲಿಂಗಪ್ರಸಾದವ ಕೊಂಬುದು, ಜಂಗಮಕ್ಕೆ ಜಂಗಮವಾಗಿ ಜಂಗಮಪ್ರಸಾದವ ಕೊಂಬುದು, ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವನೆ ಕೊಂಬುದು. ಈ ಚತುರ್ವಿಧಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಚಿನ್ನದೊಳಗಣ ಬಣ್ಣದಂತೆ, ಬಣ್ಣ ನುಂಗಿದ ಬಂಗಾರದಂತೆ, ಅನ್ಯ ಭಿನ್ನವಿಲ್ಲದ ಲಿಂಗೈಕ್ಯವು. ಲಿಂಗಾಂಗವಾದಲ್ಲಿ, ಅಂಗ ಲಿಂಗವಾದಲ್ಲಿ ಹಿಂಗದ ಭಾವ ಚಿನ್ನ ಬಣ್ಣದ ತೆರ. ಇದು ಪ್ರಾಣಲಿಂಗಯೋಗ, ಸ್ವಾನುಭಾವ ಸಮ್ಮತ. ಉಭಯ ನಾಶನ ಐಕ್ಯಲೇಪ ನಾರಾಯಣಪ್ರಿಯ ರಾಮನಾಥಾ
--------------
ಗುಪ್ತ ಮಂಚಣ್ಣ
ಈ ಆರು ಸಹಿತ ಆಚಾರ, ಆಚಾರಸಹಿತ ಗುರು, ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ, ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಂಗಳು ತಾನಾಗಬಲ್ಲಡೆ, ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಪ್ರಸಾದ ಮುಖದಲ್ಲಿ ಕಲ್ಪಿತ ಲಿಂಗಮುಖದಲ್ಲಿ ಸಂಕಲ್ಪಿತ. ಜಂಗಮಮುಖದಲ್ಲಿ ಸಂದೇಹಿ ಗುರುಮುಖದಲ್ಲಿ ಸಮಾಪ್ತಿ. ಇಂತೀ ಚತುರ್ವಿಧವನೇಕಾರ್ಥವ ಮಾಡಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಶಿವಶಕ್ತಿಸಂಪುಟವಿಹೀನ ಲಿಂಗ, ಹಾನಿವೃದ್ಧಿಯಿಲ್ಲದುದೆ ಜಂಗಮ. ಜಾಗ್ರದಲ್ಲಿ ಕುರುಹು, ಸ್ವಪ್ನದಲ್ಲಿ ಆಕೃತಿ. ನೆರೆ ಅರಿತ ಅರಿವು, ಹಿರಿದುಕಿರಿದೆನ್ನದ ಸಜ್ಜನ ಶುದ್ಧಶಿವಾಚಾರ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಹೊಳೆಯ ಸುಳಿಯಲ್ಲಿ ಸಿಕ್ಕಿದ ಹುಲ್ಲು, ಬಳಸುವದಲ್ಲದೆ ಅಳಿವುದಿಲ್ಲ, ಮುಳುಗುವುದಿಲ್ಲ. ಭವಸಾಗರದಲ್ಲಿ ಸಿಕ್ಕಿದ ಚಿತ್ತು, ತೆರಪಿಂಗೊಡಲಿಲ್ಲ. ಜಲ ಪಾಷಾಣದಂತೆ, ನೆಲೆ ಬಿಂಬದಂತೆ, ಈ ಸುಲಲಿತ ಬಲುಗೈಯರಿಲ್ಲದ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಆನು ನೀನೆಂಬ ಮೋಹವೆಲ್ಲಿಯದು, ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ! ಮನಲೀಯ ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಇನ್ನಷ್ಟು ... -->