ಅಥವಾ

ಒಟ್ಟು 188 ಕಡೆಗಳಲ್ಲಿ , 24 ವಚನಕಾರರು , 161 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು. ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ ಅದು ಪ್ರಸಾದವಲ್ಲ, ಕಿಲ್ಬಿಷ. ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ. ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರಾ 400
--------------
ಬಸವಣ್ಣ
ಪದ್ಮಾಸನದಲ್ಲಿ ಕುಳ್ಳಿರ್ದು ಲಿಂಗಾರ್ಚನೆಯ ಮಾಡುವರ ತೋರಾ ಎನಗೆ. ಸ್ವರೂಪಿನಲ್ಲಿ ನಿಂದು, ಜಂಗಮಕ್ಕೆ ಜಂಗಮದಾಸೋಹವ ಮಾಡುವರ ತೋರಾ ಎನಗೆ. ಮನ ನಿಜರೂಪಿನಲ್ಲಿ ಗುರುಸಿಂಹಾಸನವನೇರಿ ಪರಿಣಾಮವಳವಟ್ಟು, ಪ್ರಸಾದವ ಗ್ರಹಿಸುವರ ತೋರಾ ಎನಗೆ. ಇಂತಪ್ಪವರ ಸಂಗದಲ್ಲಿರಿಸು ಕಲಿದೇವಯ್ಯಾ, ನಾ ನಿನ್ನ ಬಲ್ಲೆ. ನನಗೆಯೂ ನಿನಗೆಯೂ ಇಂತಪ್ಪವರಪೂರ್ವ.
--------------
ಮಡಿವಾಳ ಮಾಚಿದೇವ
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ ಆ ಪುಷ್ಪ ಕರಣದೊಳಗಡಗಿತ್ತಯ್ಯ. ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು. ಪುರುಷ ಪುಷ್ಪದ ಮರನು, ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು. ನಿದ್ರೆಯ ಕಪ್ಪೊತ್ತದು. ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ ಲಿಂಗವೆ ಧರೆಯಾಗಿ ಬೆಳೆಯಿತ್ತು, ಆ ಪುಷ್ಪ ನೋಡಾ ! ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.
--------------
ಅಲ್ಲಮಪ್ರಭುದೇವರು
ಲಿಂಗೈಕ್ಯವಿಲ್ಲದವರನೊಲ್ಲ ಲಿಂಗಧಾರಿ. ಲಿಂಗಾರ್ಚನೆಯ ಕಾಲದಲ್ಲಿ ಪ್ರಸಾದ ಭೋಗದ ಕಾಲದಲ್ಲಿ, ಅಂಗದ ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ. ಪಂಚಮಹಾಪಾತಕವೆಂದುದಾಗಿ ಲಿಂಗೈಕ್ಯಂ ಲಿಂಗಧಾರೀಣಾಂ ಅಂಗಬಾಹ್ಯೇ ವಿಧೀಯತೇ. ಭವೀನಾಂ ಪಾಪದೃಷ್ಟೀನಾಂ ಪ್ರಚ್ಛನ್ನಪಟಮುತ್ತಮಂ ಎಂದುದಾಗಿ-ಭವಿಮಾರ್ಗ ನೇಮಸ್ತಗುಂಟಾಗಿ ಭವಿಯ ಸಂಗವ ಕಳೆದ ಲಿಂಗೈಕ್ಯರನಲ್ಲದೊಲ್ಲ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಇಷ್ಟಲಿಂಗದ ಪೂಜೆಯಾವುದು, ಪ್ರಾಣಲಿಂಗದ ಪೂಜೆಯಾವುದು, ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು, ಅದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಇವು ಮೂರು ಲಿಂಗದ ಅರ್ಚನೆ. ಮೂರು ಲಿಂಗದ ಉಪಚಾರ. ಶಿವಾರ್ಥಿಗಳಾದ ವೀರಶೈವರುಗಳು ಮಾಡುವ ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ, ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ! ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ! ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ! ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪೃಥ್ವಿ ಆಕಾಶದ ಮೇಲೆ ಏಕಾಂತಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಏಕೋಮನೋಹರನೆಂಬ ಪೂಜಾರಿಯು ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ, ಲಿಂಗನಿಷ್ಠಾಪರನಾಗಿ ಲಿಂಗಾರ್ಚನೆಯ ಮಾಡಿ, ಸಕಲಪದಾರ್ಥವ ಲಿಂಗಕ್ಕೆ ಕೊಟ್ಟು, ಲಿಂಗಪ್ರಸಾದವ ಕೊಂಡು, ಲಿಂಗಸುಖ ಸಂಪನ್ನರಾದ ಲಿಂಗಭೋಗೋಪಭೋಗಿಗಳಲ್ಲಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಸದಾ ಸನ್ನಿಹಿತನು.
--------------
ಸ್ವತಂತ್ರ ಸಿದ್ಧಲಿಂಗ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ಲಿಂಗಾರ್ಚನೆಯಂ ಮಾಡಿ, ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ ಸಹಭೋಜನವ ಮಾಡುವ ಸಮಯದಲ್ಲಿ ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆವುದು. ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು ಭೋಗಿಸಿದಡೆ, ಪ್ರಸಾದ ದ್ರೋಹ. ಪ್ರಸಾದವೆಂದು ಅರ್ಪಿತವ ಭೋಗಿಸಿ, ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ. ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ ಉಳುಮೆಯಲಿ ಉಳಿದ ತಾರಕಬ್ರಹ್ಮವಯ್ಯಾ. [ಅದೇನು ಕಾರಣವೆಂದಡೆ:] ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ ! ಆದಿಗೂ ಅನಾದಿಗೂ ನೀನೆ ! ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ ! ಕ್ರೀ ನಿಃ [ಕ್ರೀ ಗೂ ನೀನೇ]. ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ ! ದೇವ, ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ, ಸಾಕಾರ ನಿರಾಕಾರವಾದ. ಏಕ ಬ್ರ[ಹ್ಮ ಸಂ]ಗನ ಬಸವಣ್ಣ ಬಿಬ್ಬಿ ಬಾಚಯ್ಯ ಮರುಳಶಂಕರದೇವರೆಂಬ ಪರಂಜ್ಯೋತಿ ಮಹಾಲಿಂಗದಲ್ಲಿ ಏಕತೆಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತಾರಾಧಾರ ಬಾಹ್ಯವ ಸೋಹಂಭಾವ ಭಾವಾಂತರ ವಾಮಶಕ್ತಿ ಮೋಹಶಕ್ತಿ ಕನ್ಯಾಶಕ್ತಿ ಬಾಲಶಕ್ತಿ ಗಣಶಕ್ತಿ ಮಂದಿರಶಕ್ತಿ ಶಿವದೇವ ಈಶ್ವರ ಮಹಾದೇವ ಪರಾಪರ ಶಿವ ಇಂತಿವೆಲ್ಲವ ಬಸವಣ್ಣ ತಪ್ಪಿಸಿ, ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ, ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ, ನಾಲ್ಕೂ ಪದದತ್ತ ಹೊದ್ದಲೀಯದೆ, ಅಬ್ಥಿನವ ಕೈಲಾಸದತ್ತ ಹೊದ್ದಲೀಯದೆ, ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ, ಜಂಗಮನಿರಾಕಾರವೆಂದು ತೋರಿ, ಆ ಜಂಗಮ ಪ್ರಸಾದವ ಲಿಂಗಕ್ಕಿತ್ತು ಆರೋಗಿಸಿ, ಬಸವಣ್ಣ ತೋರಿದ ಕಾರಣ, ನಿರವಯದ ಹಾದಿಯ ಬಸವಣ್ಣನಿಂದ ಕಂಡೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇರುವೆಯ ಮಸ್ತಕದ ಮೇಲೆ ಇರುತಿಪ್ಪ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಅಘಟಿತಲಿಂಗವಿಪ್ಪುದು ನೋಡಾ. ಆ ಲಿಂಗದ ಕಿರಣದೊಳಗೆ ರಾಜಬೀದಿಯ ಕಂಡೆನಯ್ಯ. ಆ ರಾಜಬೀದಿಯಲ್ಲಿ ಒಬ್ಬ ಪುರುಷನು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ, ಅಘಟಿತ ಲಿಂಗಾರ್ಚನೆಯ ಮಾಡುತಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರ ಶುದ್ಧವಾದ ಭಕ್ತನ ಅಂತರಂಗದಲ್ಲಿ ಶಿವನಿಪ್ಪನು ನೋಡಾ. ಆ ಶಿವನ ಅಂತರಂಗದಲ್ಲಿ ಒಬ್ಬ ಸತಿಯಳು ಹುಟ್ಟಿ ಆರಾರು ಲಿಂಗಾರ್ಚನೆಯ ಮಾಡಿ ಮೂರು ಮೇರುವೆಯ ದಾಂಟಿ ಪರಕೆಪರವನಾಚರಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->