ಅಥವಾ

ಒಟ್ಟು 47 ಕಡೆಗಳಲ್ಲಿ , 16 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ! ಹೋ! ಹೋ! ಬಾಲಭಾಷೆಯ ಕೇಳಲಾಗದು. ಅಲ್ಲಲ್ಲ, ಮಾಡಬಹುದು. ಅದೇನು ಕಾರಣ? ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು. ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ, ಮಾಡಬಹುದು, ಮಾಡಬಹುದು. ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ! ಇದು ಕಾರಣ, ಮಹಾಘನಸೋಮೇಶ್ವರಾ, ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ?
--------------
ಅಜಗಣ್ಣ ತಂದೆ
ಲಿಂಗಾರ್ಚನೆಯಿಂದ ಜಂಗಮಾರ್ಚನೆಯದ್ಥಿಕ ನೋಡಾ. ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು. ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು, ಜಂಗಮಾರ್ಚನೆ ಪ್ರಳಯಾತೀತವೆಂದರಿದು ಜಂಗಮವೇ ಪ್ರಾಣವೆಂದು ನಂಬಿ, ಅನಂತಕೋಟಿ ಪ್ರಳಯಂಗಳ ಮೀರಿ, ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ ! ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ, ಶರಣರಿಗೆ ಪ್ರಸಾದವಿಲ್ಲ.
--------------
ಅಲ್ಲಮಪ್ರಭುದೇವರು
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು, ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ, ಆಗಮವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ, ಮಹಾಘನಸೋಮೇಶ್ವರಾ, ನಿಮ್ಮ ಶರಣಂಗೆ.
--------------
ಅಜಗಣ್ಣ ತಂದೆ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಲಿಂಗಾರ್ಚನೆಯ ಮಾಡುವಾಗ ಪಾದಪೂಜೆಯ ಮಾಡುವಾಗ ಪಾದೋದಕ ಪ್ರಸಾದ ಕೊಂಬುವಾಗ ಭವಿಶಬ್ದ ಕುಶಬ್ದ ಹಿಂಸಾಶಬ್ದ ಹೊಲೆಶಬ್ದ ಹುಸಿಶಬ್ದ ಹೇಸಿಕೆಶಬ್ದ ವಾಕರಿಕೆಶಬ್ದ ಇವೆಲ್ಲವ ಪ್ರಸಾದಿಗಳು ವರ್ಜಿಸುವುದು. ವರ್ಜಿಸದಿರ್ದಡೆ, ಲಿಂಗಾರ್ಚನೆ ಪಾದಪೂಜೆ ಪಾದೋದಕ ಪ್ರಸಾದ ನಿಷ್ಫಲ. ಸಾಕ್ಷಿ : 'ಭವಿಶಬ್ದಂ ಕುಶಬ್ದಂ ಚ ಹಿಂಸಾಶಬ್ದಂ ಸತಾಪಕಂ | ಶ್ವಪಚ್ಯಾನೃತಶಬ್ದಂ ಚ ಕರ್ಕಶೋ ಭಾಂಡಿಕೋಪಿ ವಾ | ಬೀಭತ್ಸಕಂ ಮಹಾದೇವಿ ಪ್ರಸಾದಂ ಚ ವಿವರ್ಜಯೇತ್ ||' ಎಂದುದಾಗಿ, ಪ್ರಸಾದ ಮುಗಿಯುವತನಕ ಭೋಜ್ಯ ಭೋಜ್ಯಕ್ಕೆ ಪಂಚಾಕ್ಷರಿಯ ಸ್ಮರಿಸುತ್ತ ಸಲಿಸುವುದು. ಶಿವಸ್ಮರಣೆಯಿಂದ ಸ್ವೀಕರಿಸಿದ್ದು ಮುನ್ನೂರರುವತ್ತು ವ್ಯಾಧಿ ನಿಲ್ಲದೆ ಓಡುವವು. ಹೀಗೆ ನಂಬಿಗೆಯುಳ್ಳಡೆ ಪ್ರಸಾದಸಿದ್ಧಿಯಪ್ಪುದು ನೋಡಾ ! ನಮ್ಮ ಬಿಬ್ಬಬಾಚಯ್ಯನವರು ನಂಬಿದ ಕಾರಣದಿಂದ ಓಗರ ಪ್ರಸಾದವಾಗಿ, ಎಂಜಲವೆಂದ ವಿಪ್ರರ ಮಂಡೆಯಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ ? ಮತ್ತೆ, ಮರುಳಶಂಕರದೇವರು ಪ್ರಸಾದದ ಕುಂಡದೊಳಗೆ ಹನ್ನೆರಡು ವರ್ಷವಿದ್ದು ನಿಜೈಕ್ಯವಾದುದಿಲ್ಲವೆ ? ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು ; ನಂಬಿದವರಿಗಿಂಬಾಗಿಪ್ಪನು ನಮ್ಮ ಶಾಂತಕೂಡಸಂಗಮದೇವ.
--------------
ಗಣದಾಸಿ ವೀರಣ್ಣ
ಮಾಡಬಾರದ ನೇಮವ ಮಾಡಿ ಕೆಡದಿರಾ, ಮನವೆ. ಮಾಡುವ ನೇಮ, ಮಾಡಬಾರದ ನೇಮಂಗಳವು, ಭೂತ ಭವಿಷ್ಯ ವರ್ತಮಾನಂಗಳವು. ಮಾಡುವ ನೇಮಂಗಳು: ನಿತ್ಯ ಲಿಂಗಾರ್ಚನೆ ಜಂಗಮದಾಸೋಹವೆಂದು ಕಪಿಲಸಿದ್ಧಮಲ್ಲಿಕಾರ್ಜುನನ ವಚನ, ಮನವೆ.
--------------
ಸಿದ್ಧರಾಮೇಶ್ವರ
ಶುದ್ಧದಲ್ಲಿ ಪ್ರವೇಶಿಸಿ, ಸಿದ್ಧದಲ್ಲಿ ಪ್ರಕಟಿಸಿ, ಪ್ರಸಿದ್ಧದಲ್ಲಿ ಭೇದಿಸಿಯಿಪ್ಪ ಸಜ್ಜನ ಶುದ್ಧಶಿವಾಚಾರಂಗೆ ನಿತ್ಯ ಲಿಂಗಾರ್ಚನೆ, ನಿತ್ಯ ಜಂಗಮಾರ್ಚನೆ, ನಿತ್ಯ ಕೊಂಬುದು ಪಾದೋದಕ, ನಿತ್ಯ ಕೊಂಬುದು ಪ್ರಸಾದ. ತಾಂ ನಿತ್ಯನಾಗಿ ಅನ್ಯದೈವಕ್ಕೆರಗ, ಅನನ್ಯತವ ಬಗೆಯ, ಪಾದೋದಕಕ್ಕಲ್ಲದೆ ಬಾಯ್ದೆರೆಯ, ಪ್ರಸಾದವನಲ್ಲದೆ ಗ್ರಹಿಸ, ಪಾದೋದಕ ಪ್ರಸಾದವಲ್ಲದೆ ಕೊಂಡಡೆ ಅನಾಚಾರ ಹೊದ್ದೀತೆಂದು ಕಪಿಲಸಿದ್ಧಮಲ್ಲಿಕಾರ್ಜುನನ ಏಕೀಭವಿಸಿದ ಲಿಂಗತ್ರಯದಲ್ಲಿ ನಿತ್ಯ ಪ್ರಸಾದಿ
--------------
ಸಿದ್ಧರಾಮೇಶ್ವರ
ಭಕ್ತಂಗೆ ಭಕ್ತಿಯೆ ಲಿಂಗಾರ್ಚನೆ; ಮಹೇಶಂಗೆ ಜ್ಞಾನ ವೈರಾಗ್ಯವೆ ಲಿಂಗಾರ್ಚನೆ. ಪ್ರಸಾದಿಗೆ ಸಮದೃಷ್ಟಿಯೆ ಲಿಂಗಾರ್ಚನೆ; ಪ್ರಾಣಲಿಂಗಿಗೆ `ಪಂಚಪ್ರಾಣಾಃ' ಎಂಬುದೆ ಲಿಂಗಾರ್ಚನೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎರೆದಡೆ ನನೆಯದು, ಮರೆದಡೆ ಬಾಡದು, ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ; ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆುತ್ತು. 196
--------------
ಬಸವಣ್ಣ
ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ ಮಾದಲಾಂಬಿಕಾನಂದನನು ? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ ಮಾದರಸನ ಮೋಹದ ಮಗನು ? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ ಚಿನ್ನ ?
--------------
ಗಂಗಾಂಬಿಕೆ
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ? ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ? ಶರಣರು ಬಂದು ಬಾಗಿಲಲ್ಲಿ ನಿಂದಿರಲು ತನ್ನ ತಾ ಮರೆದಿಪ್ಪವರ ಕಂಡಡೆ ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?
--------------
ಅಲ್ಲಮಪ್ರಭುದೇವರು
ಗುರುಮಾರ್ಗಾಚಾರ ಷಟ್ಸ್ಥಲಮಾರ್ಗವಿಡಿದ ಪ್ರಸಾದಿಗಳು ಲಘುಶಂಕೆಯ ಮಾಡಿದಡೂ ಸರಿಯೆ, ಭವಿಜನ್ಮಾತ್ಮರ ಕೂಡೆ ಮಾತನಾಡಿದಡೂ ಸರಿಯೆ, ಗುರುಪಾದೋದಕ[ದಿಂದಾದಡೂ ಸರಿಯೆ], ಲಿಂಗಪಾದೋದಕದಿಂದಾದಡೂ ಸರಿಯೆ, ಆರು ವೇಳೆ ಆಚಮನ ಮಾಡುವದು. ಇದ ಮೀರಿ, ಜಿಹ್ವೆಯಲ್ಲಿ ಬರುವ ಸತ್ಯೋದಕದ ಗುಟುಕ ಕೊಳಲಾಗದು. ಬಹಿರ್ಭೂಮಿಗೆ ಹೋದ ಬಳಿಕ, ಸ್ನಾನವಿಲ್ಲದೆ ಲಿಂಗಾರ್ಚನೆ, ಲಿಂಗಾರ್ಪಣಕ್ರಿಯೆಗಳನಾಚರಿಸಲಾಗದು. ಮೀರಿ ಮಾಡಿದಡೆ, ಭೂತಪ್ರಾಣಿಯೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->